ಜಾನುವಾರು ಜಾತ್ರೆ: ರೈತರ ದಂಡು

7

ಜಾನುವಾರು ಜಾತ್ರೆ: ರೈತರ ದಂಡು

Published:
Updated:

ಹಿರೀಸಾವೆ: ಹೋಬಳಿಯ ಬೂಕನಬೆಟ್ಟದ ರಂಗನಾಥಸ್ವಾಮಿಯ 83ನೇ ಜಾತ್ರೆಯಲ್ಲಿ ಕಾಲುಬಾಯಿ ರೋಗದ ಹಿನ್ನೆಲೆಯಲ್ಲಿ ರಾಸುಗಳ ಜಾತ್ರೆಯನ್ನು ತಾಲ್ಲೂಕು ಆಡಳಿತ ರದ್ದು ಪಡಿಸಿತ್ತು. ಆದರೂ, ಜಾತ್ರೆ ಪ್ರಾರಂಭಕ್ಕೂ ಎರಡು ದಿನಗಳ ಮುನ್ನವೆ ರೈತರು ಜಾನುವಾರಗಳನ್ನು ಕಟ್ಟುವ ಮೂಲಕ ಜಾತ್ರೆ ನಡೆಸಲು ಮಂಗಳವಾರ ಸಿದ್ಧರಾಗಿದ್ದರು.ಕೆಲ ರೈತರ ಮನವಿ ಮೇರೆಗೆ ತಹಶೀಲ್ದಾರ್‌ ನಾಗರಾಜ್‌ ಅವರು ರಾಸುಗಳ ಜಾತ್ರೆ ನಡೆಸಲು ಮಂಗಳವಾರ ಅನುಮತಿ ನೀಡಿದ್ದಾರೆ.

ಪಶುಪಾಲನ ಇಲಾಖೆಯ ಅಧಿಕಾರಿಗಳು ನೀಡಿದ ವರದಿ ಮತ್ತು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ರಾಸು ಜಾತ್ರೆಯನ್ನು ತಾಲ್ಲೂಕು ಆಡಳಿತವು ರದ್ದುಪಡಿಸಿತ್ತು. ನಾಟಿ ರಾಸುಗಳಲ್ಲಿ ಈ ರೋಗದ ಲಕ್ಷಣಗಳು ಇಲ್ಲ, ರಾಜ್ಯದ ವಿವಿಧ ಭಾಗಗಳಿಂದ ರೈತರು ಜಾತ್ರೆಯಲ್ಲಿ ಜಾನುವಾರು ಮಾರಲು ಮತ್ತು ಕೊಳ್ಳಲು ಬರುತ್ತಾರೆ. ಯಾವುದೇ ಕಾರಣಕ್ಕೂ ಜಾತ್ರೆಯನ್ನು ನಿಲ್ಲಿಸುವುದಿಲ್ಲ ಎಂದು ಹೋಬಳಿಯ ರೈತರು ಹೇಳಿದ್ದರು. ಅದರಂತೆ ಮಂಗಳವಾರವೇ ರಾಸುಗಳನ್ನು ಜಾತ್ರೆ ಆವರಣಕ್ಕೆ ಹೊಡೆದುಕೊಂಡು ಬಂದಿದ್ದಾರೆ.‘ನೀರು ಸೇರಿದಂತೆ ಯಾವುದೇ ಸೌಲಭ್ಯಗಳನ್ನು ವ್ಯವಸ್ಥೆ ಮಾಡದೆ ಇರುವುದರಿಂದ, ರೈತರು ಜಾತ್ರೆ ಆವರಣದಲ್ಲಿ ನೀರಿಗಾಗಿ ಪರದಾಡಬೇಕಿದೆ’ ಎನ್ನುತ್ತಾರೆ ಮಂಡ್ಯ ಜಿಲ್ಲೆಯ ಮೇಲುಕೋಟೆಯಿಂದ ರಾಸುಗಳೊಂದಿಗೆ ಬಂದಿರುವ ರೈತ ಶಿವಣ್ಣ ಹೇಳಿದರು.ಈ ಮುಂಚೆ ಜಾನುವಾರು ಜಾತ್ರೆ ನಡೆಸಲು ನಿಷೇಧವಿದ್ದರೂ, ರೈತರು ಸ್ವ ಆಸಕ್ತಿಯಿಂದ ಜಾತ್ರೆಗೆ ಬಂದಿದ್ದಾರೆ. ಯಾವುದೇ ತೊಂದರೆಗಳಾದರೂ ಅವರೆ ಹೊಣೆಗಾರರು. ತಾಲ್ಲೂಕು ಆಡಳಿತವನ್ನು ದೂರಬಾರದು.  ಆವರಣದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ, ಅಕ್ರಮ ಮದ್ಯ ಮಾರಾಟ ಮತ್ತು ಜೂಜು ಆಟಗಳನ್ನು ತಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಹಶೀಲ್ದಾರ್ ಡಾ.ಎಚ್.ಎಲ್. ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.ಜಾತ್ರೆ ಪ್ರಾರಂಭದಿಂದ ಇದುವರೆಗೆ ಯಾವ ವರ್ಷವು ಜಾತ್ರೆ ರದ್ದಾಗಿಲ್ಲ. ಈ ಸಲವೂ ರಾಸುಗಳ ಜಾತ್ರೆ ಎಂದಿನಂತೆ ನಡೆಯುವ ಲಕ್ಷಣಗಳು ಜಾತ್ರಾ ಆವರಣದಲ್ಲಿ ಕಾಣಿಸುತ್ತಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry