`ಜಾನುವಾರು-ಮೀನುಗಾರಿಕೆ ಅಭಿವೃದ್ಧಿಗೆ ಗಮನ'

7
ರಾಜ್ಯದ ಪಶುಸಂಗೋಪನೆ- ಮೀನುಗಾರಿಕೆ ಸಚಿವರಿಗೆ ಪವಾರ್ ಕಿವಿಮಾತು

`ಜಾನುವಾರು-ಮೀನುಗಾರಿಕೆ ಅಭಿವೃದ್ಧಿಗೆ ಗಮನ'

Published:
Updated:
`ಜಾನುವಾರು-ಮೀನುಗಾರಿಕೆ ಅಭಿವೃದ್ಧಿಗೆ ಗಮನ'

ನವದೆಹಲಿ(ಪಿಟಿಐ): ಕೇಂದ್ರ ಸರ್ಕಾರದ ಯೋಜನೆಗಳ ಜಾರಿಗಾಗಿ ನೀಡಲಾಗುವ ಅನುದಾನದಲ್ಲಿ ಶೇ 25ರಷ್ಟನ್ನು ರಾಜ್ಯ ಸರ್ಕಾರಗಳು ಜಾನುವಾರು ಮತ್ತು ಮೀನುಗಾರಿಕೆ ಅಭಿವೃದ್ಧಿಗಾಗಿ ವೆಚ್ಚ ಮಾಡಲೇಬೇಕು ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಹೇಳಿದರು.ರಾಜ್ಯಗಳ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿ, 11 ರಾಜ್ಯಗಳು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ(ಆರ್‌ಕೆವಿವೈ)ಯಡಿ ಜಾನುವಾರು, ಮೀನುಗಾರಿಕೆ ಅಭಿವೃದ್ಧಿಗಾಗಿ ಶೇ 15ಕ್ಕೂ ಕಡಿಮೆ ಹಣ ವಿನಿಯೋಗಿಸಿವೆ. ಇದು ಸರಿಯಲ್ಲ. ಜಾನುವಾರು ಮತ್ತು ಮೀನುಗಾರಿಕೆ ವಿಭಾಗ ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ಎರಡೂ ಕ್ಷೇತ್ರಗಳಿಗೆ ಕನಿಷ್ಠ ಶೇ 25ರಷ್ಟು ಅನುದಾನ ಮೀಸಲಿಟ್ಟು ವಿನಿಯೋಗಿಸಲೇಬೇಕು ಎಂದ ಒತ್ತಾಯಿಸಿದರು.11ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಚಾಲನೆ ಪಡೆದ `ಆರ್‌ಕೆವಿವೈ'ನಿಂದಾಗಿ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಕ್ಷೇತ್ರಗಳಿಗೆ ಅಗತ್ಯವಾದ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಿಕೊಡಲು ಸಾಧ್ಯವಾಗಿದೆ. ಇದರಿಂದ ರಾಜ್ಯಗಳ ಅಭಿವೃದ್ಧಿಗೂ ಅನುಕೂಲವಾಗಿದೆ ಎಂದು ಸಚಿವರುಗಳ ಗಮನ ಸೆಳೆದರು.11ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗೆಂದೇ ಎಲ್ಲ ರಾಜ್ಯಗಳಿಗೆ ಒಟ್ಟುರೂ.27,452 ಕೋಟಿಯನ್ನು ನೀಡಲಾಗಿದ್ದಿತು. ಅದರಲ್ಲಿ ಶೇ 18.59ರಷ್ಟನ್ನುರೂ.5,102 ಕೋಟಿ) ಜಾನುವಾರು ಮತ್ತು ಮೀನುಗಾರಿಕೆ ಅಭಿವೃದ್ಧಿಗಾಗಿಯೇ ಮೀಸಲಿಡಲಾಗಿತ್ತು ಎಂದು ಪವಾರ್ ಸ್ಪಷ್ಟಪಡಿಸಿದರು.ಪ್ರಸಕ್ತ ಹಣಕಾಸು ವರ್ಷದಲ್ಲಿ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಗಾಗಿಯೇ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿರೂ.1165 ಕೋಟಿ ಒದಗಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲೇಬೇಕಿದೆ. ಅದಕ್ಕಾಗಿ ಕೇಂದ್ರದ ವಿವಿಧ ಯೋಜನೆಗಳ ಅನುದಾನದಲ್ಲಿ ಸಾಧ್ಯವಿರುವಷ್ಟನ್ನು ಕೃಷಿ ವಲಯದ ಅಭಿವೃದ್ಧಿಗಾಗಿ ರಾಜ್ಯಗಳು ವಿವೇಚನೆಯಿಂದ ಬಳಸಿಕೊಳ್ಳಬೇಕಿದೆ. ಆ ಮೂಲಕ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ(ಜಿಡಿಪಿ) ಗುರಿಯಾದ ಶೇ 4ರಷ್ಟನ್ನು ಮುಟ್ಟಲೇಬೇಕು ಎಂದು ಹೇಳಿದರು.ಬರದಂತಹ ಪ್ರಾಕೃತಿಕ ವಿಕೋಪ ಎದುರಾದ ಸಂದರ್ಭದಲ್ಲಿಯೂ ರೈತ ಸಮುದಾಯಕ್ಕೆ ಭರವಸೆಯ ಬೆಳಕಾಗಿರುವುದು ಪಶುಸಂಗೋಪನೆ ಎಂಬ ಅಂಶದತ್ತ ಗಮನ ಸೆಳೆದ ಸಚಿವರು, ಈ ವರ್ಷ ರಾಷ್ಟ್ರೀಯ ಡೇರಿ ಯೋಜನೆ(ಎನ್‌ಡಿಪಿ) ಉತ್ತಮ ಆರಂಭವನ್ನು ಕಂಡಿಲ್ಲ. ಈ ವಲಯದ ಬೆಳವಣಿಗೆ ಬಹಳ ಮಂದಗತಿಯಲ್ಲಿದೆ. ಈ ಬಗ್ಗೆ ರಾಜ್ಯ ಸರ್ಕಾರಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ ಎಂದು ಹೇಳಿದರು.ಸದ್ಯ ದೇಶದ ವಾರ್ಷಿಕ ಕ್ಷೀರೋತ್ಪಾದನೆ 12.80 ಕೋಟಿ ಟನ್ ಇದೆ. 2021-22ರ ವೇಳೆಗೆ 18 ಕೋಟಿ ಟನ್‌ಗೆ ಮುಟ್ಟಿಸಬೇಕೆಂಬುದು `ಎನ್‌ಡಿಪಿ' ಗುರಿ. ಅಲ್ಲದೆ, ದೇಶದಲ್ಲಿ ಹಾಲಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಅದನ್ನು ಪೂರೈಸುವ ಸಲುವಾಗಿಯಾದರೂ ಮುಂದಿನ 10-12 ವರ್ಷಗಳವರೆಗೆ ವಾರ್ಷಿಕ ಉತ್ಪಾದನೆಯನ್ನು ಸರಾಸರಿ 60 ಲಕ್ಷ ಟನ್ ಪ್ರಮಾಣದಲ್ಲಿ ಹೆಚ್ಚಿಸಬೇಕಿದೆ ಎಂದರು.ಮತ್ಸ್ಯೋದ್ಯಮ

ಇದೇ ವೇಳೆ, ಸಾಗರ ಮತ್ಸ್ಯೋದ್ಯಮ ಬೆಳವಣಿಗೆ ಕಾಣದೆ ನಿಂತ ನೀರಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಪವಾರ್, `ಈ ವಲಯದ ಅಭಿವೃದ್ಧಿಗಾಗಿ ಕೆಲವು ಅಗತ್ಯ ಕ್ರಮಗಳನ್ನು ರಾಜ್ಯ ಸರ್ಕಾರಗಳು ಕೈಗೊಳ್ಳಬೇಕಿದೆ. ಉದ್ಯಮಕ್ಕೆ ಅಗತ್ಯವಾದ ಆರ್ಥಿಕ ನೆರವು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಂದ ಸಮರ್ಪಕವಾಗಿ ಸಿಗುವಂತೆ ಮಾಡಬೇಕಿದೆ. ಮತ್ಸ್ಯ ಸಂತಾನಾಭಿವೃದ್ಧಿಗಾಗಿ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಮೀನಿನ ಮರಿಗಳು ಲಭಿಸುವಂತೆ ನೋಡಿಕೊಳ್ಳಬೇಕು, ವೈಜ್ಞಾನಿಕ ರೀತಿಯ ಮೀನುಗಾರಿಕೆ ಪ್ರೋತ್ಸಾಹಿಸಬೇಕು, ಅಗತ್ಯ ಮೂಲ ಸೌಕರ್ಯಗಳನ್ನೂ ಒದಗಿಸಬೇಕು' ಎಂದು ಸಚಿವರು ಗಮನ ಸೆಳೆದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry