ಜಾಫ್ನಾ ಚುನಾವಣೆಯಲ್ಲಿ ತಮಿಳರ ಜಯ

7
25 ವರ್ಷಗಳ ನಂತರ ಐತಿಹಾಸಿಕ ಮತದಾನ

ಜಾಫ್ನಾ ಚುನಾವಣೆಯಲ್ಲಿ ತಮಿಳರ ಜಯ

Published:
Updated:

ಕೊಲಂಬೊ (ಪಿಟಿಐ): ಜಾಫ್ನಾದ ಉತ್ತರ ಪ್ರಾಂತ್ಯದಲ್ಲಿ ಶನಿವಾರ ನಡೆದ ಐತಿಹಾಸಿಕ ಚುನಾವಣೆಯಲ್ಲಿ ತಮಿಳು ರಾಷ್ಟ್ರೀಯ ಮೈತ್ರಿಕೂಟವು (ಟಿಎನ್ಎ) ಆಡಳಿತಾರೂಢ ಯುಪಿಎಫ್‌ಎ ಮೈತ್ರಿಕೂಟವನ್ನು ಹೀನಾಯವಾಗಿ ಸೋಲಿಸಿದೆ.ಈ ಮೊದಲು ಎಲ್‌ಟಿಟಿಇ ಹಿಡಿತದಲ್ಲಿದ್ದ ಈ ಪ್ರಾಂತ್ಯದಲ್ಲಿ 25 ವರ್ಷಗಳ ನಂತರ ಚುನಾವಣೆ ನಡೆದಿದ್ದು ವಿಶೇಷ.38 ಸ್ಥಾನಗಳ ಪೈಕಿ 30ರಲ್ಲಿ ಟಿಎನ್ಎ ಗೆದ್ದಿದೆ. ಶ್ರೀಲಂಕಾದಲ್ಲಿನ ಅನುಪಾತ ಪ್ರತಿನಿಧಿ ವ್ಯವಸ್ಥೆ ಪ್ರಕಾರ ಗೆದ್ದ ಪಕ್ಷಕ್ಕೆ ಹೆಚ್ಚುವರಿಯಾಗಿ ಎರಡು ಸ್ಥಾನಗಳನ್ನು ಕೊಡುಗೆಯಾಗಿ ನೀಡಲಾಗುತ್ತದೆ.ಅಧ್ಯಕ್ಷ ಮಹೇಂದ್ರ ರಾಜಪಕ್ಸೆ ನೇತೃತ್ವದ ಯುಪಿಎಫ್‌ಎ ಕೇವಲ ಏಳು ಸ್ಥಾನಗಳನ್ನು ಗೆದ್ದಿದೆ. ಇನ್ನು ಶ್ರೀಲಂಕಾ ಮುಸ್ಲಿಂ ಕಾಂಗ್ರೆಸ್‌್ ಒಂದು ಸ್ಥಾನದಲ್ಲಿ ಜಯಗಳಿಸಿದೆ. ಉತ್ತರ ಪ್ರಾಂತ್ಯದ ಎಲ್ಲ ಐದು ಜಿಲ್ಲೆಗಳಲ್ಲಿಯೂ ಟಿಎನ್‌ಎ ಜಯಘೋಷ ಮೊಳಗಿಸಿದೆ.ಜಾಫ್ನಾ, ವಾಯುನಿಯಾ ಹಾಗೂ ಕಿಲಿನೊಚ್ಚಿ ಜಿಲ್ಲೆಗಳಲ್ಲಿ ಟಿಎನ್‌ಎಗೆ ಶೇ 80ಕ್ಕೂ ಹೆಚ್ಚು ಮತಗಳು ದೊರೆತಿವೆ. ಮಲೈತೀವು ಹಾಗೂ ಮನ್ನಾರ್ ಜಿಲ್ಲೆಗಳಲ್ಲಿ ಕ್ರಮವಾಗಿ ಶೇ 78 ಮತ್ತು ಶೇ 61ರಷ್ಟು ಮತಗಳು ಬಿದ್ದಿವೆ.ಲಂಕಾ ತಮಿಳರ ಸಾಂಸ್ಕೃತಿಕ ರಾಜಧಾನಿ ಜಾಫ್ನಾದಲ್ಲಿ ಟಿಎನ್ಎ ಶೇ 86ರಷ್ಟು ಮತಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.

ಉತ್ತರ ಪ್ರಾಂತ್ಯದಲ್ಲಿ ಸ್ಥಳೀಯರು ಹಾಗೂ ವಿದೇಶಿಯರು ಸೇರಿ 2,000ಕ್ಕೂ ಹೆಚ್ಚು ವೀಕ್ಷಕರನ್ನು ನೇಮಿಸಲಾಗಿತ್ತು. ಇವರಲ್ಲಿ ಭಾರತೀಯರೂ ಇದ್ದರು.‘ಉತ್ತರ, ಕೆಂದ್ರ ಹಾಗೂ ವಾಯವ್ಯ ಪ್ರಾಂತ್ಯಗಳಲ್ಲಿ ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಉಳಿ ದಂತೆ ಶಾಂತಿಯುತ ಮತದಾನ ವಾಗಿತ್ತು’ ಎಂದು ಚುನಾವಣಾ ಆಯುಕ್ತ ಮಹಿಂದ ದೇಶಪ್ರಿಯ ಹೇಳಿದ್ದಾರೆ. ಉತ್ತರ ಹಾಗೂ ವಾಯುವ್ಯ ಪ್ರಾಂತ್ಯಗಳ ಎಲ್ಲ ಸ್ಥಾನಗಳು ಆಡಳಿತ ಪಕ್ಷದ ಪಾಲಾಗಿವೆ.ಉತ್ತರ ಪ್ರಾಂತ್ಯದಲ್ಲಿ ಟಿಎನ್‌ಎ ಭರ್ಜರಿ ವಿಜಯಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಶಾಸಕ ಎಂ.ಎ. ಸುಮಂತಿ ರನ್‌, ‘ ಕೊನೆಗೂ ತಮಿಳರು ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು. ‘ಈ ಚುನಾವಣೆಯು ತಮಿಳರ ರಾಜಕೀಯ ನಿಲುವು ಪ್ರಕಟಪಡಿಸಲು ಒಂದು ಅವಕಾಶ ಎಂದು ನಾವು ಹೇಳಿದ್ದೆವು. ಇದು ಹುಸಿಯಾಗಲಿಲ್ಲ’ ಎಂದೂ ಅವರು ಹೇಳಿದರು.‘ಪ್ರತ್ಯೇಕತೆ ಇಲ್ಲದೆಯೇ ರಾಜಕೀಯ ಪರಿಹಾರ  ಬಯಸಿರುವುದಾಗಿ ಉತ್ತರ ಪ್ರಾಂತ್ಯದ ಜನರು ಸರ್ಕಾರಕ್ಕೆ ಕೊಟ್ಟ ದಿಟ್ಟ ಸಂದೇಶ ಇದು’ ಎಂದು ಹಿರಿಯ ಶಾಸಕ ಸುರೇಶ್ ಪ್ರೇಮಚಂದ್ರನ್ ನುಡಿದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry