ಜಾಮೀನು: ನೆತ್ತಿಯ ಮೇಲಿನ ಕತ್ತಿ

7

ಜಾಮೀನು: ನೆತ್ತಿಯ ಮೇಲಿನ ಕತ್ತಿ

Published:
Updated:

ಸರ್ವಜ್ಞನಿಂದ ಹಿಡಿದು ಅನೇಕ ದಿವಾಳಿಯೆದ್ದ ವ್ಯಾಪಾರಿಗಳವರೆಗೆ ಅನೇಕರು ಸಾಲ ಅಪಾಯಕಾರಿಯೆಂದು ಹೇಳುತ್ತಾ ಬಂದಿದ್ದರೂ ಸಾಲ ಇಂದಿನ ವಾಣಿಜ್ಯ ಪ್ರಪಂಚದ  ಅವಿಭಾಜ್ಯ ಅಂಗವಾಗಿದೆ. ಹಾಗಾಗಿಯೇ ಸಾಲ ಕೊಡುವವರ ಮತ್ತು ಸಾಲ ತೆಗೆದುಕೊಳ್ಳುವವರ ಸಂಖ್ಯೆ ಏರುತ್ತಲೇ ಇದೆ.   ಹೆಚ್ಚಿನ ಸಂದರ್ಭಗಳಲ್ಲಿ  ಇವರಿಬ್ಬರ ನಡುವೆ (ಸಾಲ ನೀಡುವವ ಮತ್ತು ಪಡೆಯುವವ) ಸೇತುವೆಯಂತೆ ಇರುವವನೇ ಜಾಮೀನುದಾರ/ಖಾತರಿದಾರ. ನೀವು ಜಾಮೀನುದಾರ (ಗ್ಯಾರಂಟರ್) ಎನ್ನಿ, ಖಾತರಿದಾರ (ಷ್ಯೂರಿಟಿ) ಎನ್ನಿ, ಹೊಣೆಗಾರಿಕೆ ಒಂದೇ ಆಗಿರುತ್ತದೆ. ನಮ್ಮ ನೆಂಟರಿಷ್ಟರ ಪೈಕಿ ಯಾರಿಗಾದರೂ  ಹಣದ ಅಗತ್ಯ ಕಂಡುಬಂದಾಗ ನಮ್ಮಲ್ಲಿ  ಹಣ ಇಲ್ಲದಿರುವುದ ಅಥವಾ ಹಣವಿದ್ದರೂ ನಾವೇ ಅವರಿಗೆ ಸಾಲ ಕೊಟ್ಟರೆ  ನಮಗೆ ಆ ಹಣ ವಾಪಸ್ ಬರುವುದಿಲ್ಲ  ಎನ್ನುವ ಕಾರಣಕ್ಕೆ ಹಣ ಕೊಡುವುದಿಲ್ಲ. ಸಂಬಂಧಿಕರು ಬ್ಯಾಂಕ್ ಮತ್ತಿತರ ಮೂಲಗಳಿಂದ ಸಾಲ ಪಡೆದಾಗ  ಜಾಮೀನು ಕರಾರಿಗೆ  (ಕಾಂಟ್ರ್ಯಾಕ್ಟ್ ಆಫ್ ಗ್ಯಾರಂಟಿ ಆರ್ ಷ್ಯೂರಿಟಿಗೆ) ಸಹಿ ಹಾಕಿಬಿಡುತ್ತೇವೆ. ಆದರೆ, ಆಮೇಲೆ ಆ ಬಲೆಯಲ್ಲಿ  ನಾವೇ ಸಿಲುಕಿಕೊಂಡು ನರಳುತ್ತೇವೆ.  ನಾವು ಹೀಗೆ ಈ ಬಲೆಯಲ್ಲಿ  ಸಿಲುಕಿಕೊಳ್ಳದೇ ಇರಲು ನಾವು ವಹಿಸಬೇಕಾದ ಎಚ್ಚರಿಕೆಗಳೇನು?ಜಾಮೀನು ನಿಲ್ಲುವುದು ಎಂದರೆ...

ಜಾಮೀನು (ಗ್ಯಾರಂಟಿ ಅಥವಾ ಷ್ಯೂರಿಟಿ) ಕೊಡುವುದೆಂದರೆ  ಒಂದು ಕರಾರಿಗೆ ಸಹಿ ಹಾಕುವುದೇ ಆಗಿದೆ.  ಜಾಮೀನಿನಲ್ಲಿ  ನೀವು ಯಾರ ಪರವಾಗಿ ಜಾಮೀನುದಾರರಾಗಿರುತ್ತೀರೋ ಆತ ಒಂದು ನಿರ್ದಿಷ್ಟವಾದ ತನ್ನ ಕರ್ತವ್ಯವನ್ನು ಮಾಡುತ್ತಾನೆ. ಅಥವಾ ಸಾಲ ಪಡೆದ ಮೊಬಲಗನ್ನು  ನಿರ್ದಿಷ್ಟವಾದ ಕರಾರಿಗೆ ಅನುಗುಣವಾಗಿ ಹಿಂತಿರುಗಿಸುತ್ತಾನೆ ಎಂದು ನೀವು ಮೂರನೆಯ ವ್ಯಕ್ತಿಗೆ ವಾಗ್ದಾನ  ಮಾಡಿದಂತೆ. ಒಂದು ವೇಳೆ ನಿಮ್ಮ ಸ್ನೇಹಿತ ಅಥವಾ ಬಂಧು ಹಾಗೆ ನಡೆದುಕೊಳ್ಳದಿದ್ದರೆ ಮೂರನೇ ವ್ಯಕ್ತಿಗಾದ ನಷ್ಟವನ್ನು ನೀವು ತುಂಬಿಕೊಡುವುದು  ಇಲ್ಲವೇ ಕರಾರಿನಲ್ಲಿ  ಒಪ್ಪಿಕೊಂಡಿರುವ ಹಣವನ್ನು ಕೊಡುವುದೇ ಆಗಿರುತ್ತದೆ.    ಜಾಮೀನು ಕರಾರಿನಲ್ಲಿ  ಸಾಲ ಪಡೆದಾತ, ಸಾಲ ಕೊಡುವಾತ ಹಾಗೂ ಜಾಮೀನುದಾರನ ಸಹಮತಿ (concorrence) ಇರಬೇಕಾದುದು ಕಡ್ಡಾಯವಾದರೂ ಸಾಲ ಪಡೆಯುವವ ಹಾಗೂ ಸಾಲ  ಕೊಡುವವನ ಮಧ್ಯೆ ಕರಾರು  ಹಾಗೂ ಜಾಮೀನು ಕರಾರು (contract of guarantee)  ಒಟ್ಟಿಗೇ ಆಗಬೇಕೆಂದೇನೂ ಇಲ್ಲ.  ಜಾಮೀನು ಕರಾರಿನಲ್ಲಿ  ಸಾಲ ಪಡೆಯುವವನ ಕೋರಿಕೆಯ ಮೇರೆಗೆ, ಸಾಲ ಪಡೆದವನು ಹಣ ಹಿಂತಿರುಗಿಸದೆ ತಪ್ಪಿತಸ್ಥನಾದಲ್ಲಿ  ಜಾಮೀನುದಾರ ತಾನು ಆ ಹೊಣೆ ಹೊರುವ ವಾಗ್ದಾನವನ್ನು ಸಾಲ ಕೊಡುವವನಿಗೆ  ನೀಡುತ್ತಾನೆ.  ಅದೇ  ನಷ್ಟ ಭರ್ತಿಮಾಡಿಕೊಡುವ ಕರಾರಿನಲ್ಲಿ (contract of Indemnity) ಸಾಮಾನ್ಯವಾಗಿ ವಾಗ್ದಾನ ಮಾಡಿದವನ (ನಷ್ಟ ಭರ್ತಿಮಾಡಿಕೊಡುವವನ ವಾಗ್ದಾನ) ನಡವಳಿಕೆಯಿಂದ ವಾಗ್ದಾನ ಪಡೆದುಕೊಂಡವನಿಗೆ ಆದ ನಷ್ಟವನ್ನು ವಾಗ್ದಾನ ಮಾಡಿದವನೇ ಭರ್ತಿ ಮಾಡಿಕೊಡಬೇಕಾಗುತ್ತದೆ.  ಅಂದರೆ, ಈ ಕರಾರಿನಲ್ಲಿ  ಸಾಮಾನ್ಯವಾಗಿ ಇಬ್ಬರೇ ಇಬ್ಬರು ಇರುತ್ತಾರೆ. ಮೂರನೇ ವ್ಯಕ್ತಿಯ ನಡವಳಿಕೆಯಿಂದ ಸಾಲ ಕೊಟ್ಟವನಿಗಾದ ನಷ್ಟವನ್ನು ತುಂಬಿಕೊಡುವ ಕರಾರಿಗೆ ಸಹಿ ಹಾಕಿರುವ ಅಪರೂಪದ ಪ್ರಸಂಗಗಳೂ ಉಂಟು. ಹೊಣೆಗಾರಿಕೆ

ಜಾಮೀನುದಾರನ ಹೊಣೆಗಾರಿಕೆಯು ಆತ ಸಹಿ ಹಾಕಿದ ಕರಾರಿನಲ್ಲಿ  ಆತ ಒಪ್ಪಿಕೊಂಡಿರುವಷ್ಟು ಮಾತ್ರ ಇರುತ್ತದೆ. ಈ ಹೊಣೆಯ ಸ್ವರೂಪ ಎಂತಹುದು ಎಂಬುದನ್ನು ತಿಳಿಯಲು ಕೆಲ ಉದಾಹರಣೆಗಳನ್ನು ಗಮನಿಸೋಣ :ಉದಾ 1 :  ನಿಮ್ಮ ಸ್ನೇಹಿತ ಬ್ಯಾಂಕ್‌ನಿಂದ ರೂ1  ಲಕ್ಷ ಸಾಲ ತೆಗೆದುಕೊಂಡಾಗ ಆತ ಆ ಹಣವನ್ನು ಒಂದು ವರ್ಷದೊಳಗೆ ಬ್ಯಾಂಕಿಗೆ ಹಿಂತಿರುಗಿಸದಿದ್ದರೆ  ನೀವೇ ಬಡ್ಡಿ ಸಮೇತ ಆ ಹಣವನ್ನು ಕಟ್ಟುವುದಾಗಿ  ಜಾಮೀನು ಕೊಟ್ಟಿರುತ್ತೀರಿ (ಗ್ಯಾರಂಟಿಗೆ ಸಹಿ ಹಾಕಿರುತ್ತೀರಿ).

ನಿಮ್ಮ ಸ್ನೇಹಿತ ಒಂದು ವರ್ಷದೊಳಗೆ ಹಣ ತೀರಿಸದಿದ್ದರೆ ಬ್ಯಾಂಕ್ ನಿಮ್ಮಿಂದ ಬಾಕಿ ಇರುವ ಹಣ ವಸೂಲಿ ಮಾಡಬಹುದು. ಇಲ್ಲಿ  ನೀವು ಸಾಲ ತೆಗೆದುಕೊಂಡವನ ಬಳಿ ಹಣವಿದೆ ಅವನಿಂದ ವಸೂಲಿ ಮಾಡಿಕೊಳ್ಳಿ ಎಂದು (ಆ ರೀತಿ ಕರಾರು ಮಾಡಿಕೊಳ್ಳದಿದ್ದರೆ) ಬ್ಯಾಂಕಿನವರಿಗೆ ಹೇಳುವಂತಿಲ್ಲ.  ಈ ವಿಷಯದಲ್ಲಿ  ಕಾನೂನೂ  ಸಹ ನಿಮಗೆ ನೆರವಾಗುವುದಿಲ.ಉದಾ 2 : ನಿಮ್ಮ ಬಂಧುವೊಬ್ಬರು ಬ್ಯಾಂಕಿನಲ್ಲಿ  ಓವರ್ ಡ್ರಾಫ್ಟ್ ಖಾತೆಯ  ಸೌಲಭ್ಯ  ಪಡೆಯುವಾಗ ನೀವು ಅವರ ಪರವಾಗಿ ಜಾಮೀನು ಕರಾರಿಗೆ ಸಹಿ ಹಾಕಿರುತ್ತೀರಿ.  ಆ ಖಾತೆ ಚಾಲ್ತಿಯಲ್ಲಿ ಇರುವಷ್ಟು ದಿನವೂ ನಿಮ್ಮ ಬಂಧು ಬ್ಯಾಂಕಿನ ಷರತ್ತನ್ನು ಉಲ್ಲಂಘಿಸಿದಲ್ಲಿ  ನೀವು ಬ್ಯಾಂಕಿಗೆ ನಷ್ಟವನ್ನು ತುಂಬಿಕೊಡಬೇಕಾಗುತ್ತದೆ / ಬಾಕಿ ಹಣವನ್ನು ತೀರಿಸಬೇಕಾಗುತ್ತದೆ.ಇಲ್ಲಿ ಇರುವ ಅಪಾಯ ಏನೆಂದರೆ ಇಂತಹ ಖಾತೆಗಳು ದೀರ್ಘ ಕಾಲ ಚಾಲ್ತಿಯಲ್ಲಿ ಇರುವುದರಿಂದ ನಿಮ್ಮ ಹೊಣೆಯೂ ದೀರ್ಘ ಕಾಲ ಜೀವಂತವಾಗಿದ್ದು  ಕತ್ತಿಯಂತೆ  ನಿಮ್ಮ ನೆತ್ತಿಯ ಮೇಲೆ ನೇತಾಡುತ್ತಿರುತ್ತದೆ.ಜಾಮೀನು:  ನೆತ್ತಿಯ ಮೇಲಿನ ಕತ್ತಿ

ಪ್ರಾರಂಭದಲ್ಲಿ  ನಿಮ್ಮ ಬಂಧುವಿನ ವ್ಯಾಪಾರ ಚೆನ್ನಾಗಿದ್ದರೂ ಆನಂತರ ಅದು ಅನೇಕ ಕಾರಣಗಳಿಗೆ ಕುಸಿಯಬಹುದು.  ನಿಮ್ಮ ಹೊಣೆಗಾರಿಕೆ ನಿಮಗೆ ಉರುಳಾಗಬಾರದೆಂದರೆ  ನಿಮ್ಮ ಬಂಧುವಿನ ವ್ಯವಹಾರ ಚೆನ್ನಾಗಿ ನಡೆಯಬೇಕು.  ಒಂದು ವೇಳೆ ಸಾಲದ ಖಾತೆಯನ್ನು ತೆಗೆಯುವಾಗ ನಿಮ್ಮ ಬಂಧು ಬ್ಯಾಂಕಿಗೆ ಭದ್ರತೆಯಾಗಿ ಕೊಟ್ಟಿರುವ ಸ್ಥಿರಾಸ್ತಿ ಹಾಗೂ ಚರಾಸ್ಥಿ ಬ್ಯಾಂಕಿನ ಬಾಕಿಯನ್ನು ತೀರಿಸಲು ಸಾಲದೇ ಹೋದರೆ  ಉಳಿದ ಹಣಕ್ಕೆ ಬ್ಯಾಂಕಿನವರು ನಿಮಗೆ ತಗಾದೆ ಸಲ್ಲಿಸಹುದು, ನೀವು ಅದರಿಂದ ತಪ್ಪಿಸಿಕೊಳ್ಳುವಂತಿಲ್ಲ.ಉದಾ 3 : ನಿಮ್ಮ ಸ್ನೇಹಿತನೊಬ್ಬ ಕ್ರಿಮಿನಲ್ ಮೊಕದ್ದಮೆಯೊಂದರಲ್ಲಿ  ಆರೋಪಿಯಾಗಿರುತ್ತಾನೆ.  ಅವನನ್ನು ಜಾಮೀನು ಕೊಟ್ಟು  ಬಿಡಿಸಿಕೊಳ್ಳುತ್ತೀರಿ.  ಮುಂದೆ ಆತ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡರೆ  ನೀವು ನಿಮ್ಮ ಜಾಮೀನಿಗೆ ಅನುಗುಣವಾಗಿ ಹಣ ಕಟ್ಟಬೇಕಾಗುತ್ತದೆ.  ನಿಮ್ಮ ಸ್ನೇಹಿತನ ಬಳಿ ಆಗ ಹಣವಿದೆ, ಆಸ್ತಿಯಿದೆ ಎಂಬಿತ್ಯಾದಿ ವಿಷಯಗಳು ಪರಿಗಣನೆಗೆ ಬರುವುದಿಲ್ಲ. ನೀವೇ ದಂಡ ತೆರಬೇಕಾಗುತ್ತದೆ.ಉದಾ 4 : ನಿಮ್ಮ ಆತ್ಮೀಯ  ಸ್ನೇಹಿತನೊಬ್ಬ ಒಂದು ಕಾರ್ಖಾನೆಗೆ  ಕಚ್ಚಾ ವಸ್ತುವನ್ನು ಒದಗಿಸುವ ಕರಾರಿಗೆ ಸಹಿ ಹಾಕಿದ ನಂತರ ಆತ ಆ ಕರಾರಿನಲ್ಲಿನ ಷರತ್ತುಗಳಿಗೆ ಅನುಗುಣವಾಗಿ ತಪ್ಪದೆ ಕಚ್ಚಾ ವಸ್ತುವನ್ನು ಸರಬರಾಜು ಮಾಡುವುದರ ಬಗ್ಗೆ ಖಾತರಿ ನೀಡಿ ಜಾಮೀನು ಕರಾರಿಗೆ ನೀವು ಸಹಿ ಹಾಕಿರುತ್ತೀರಿ.  ನಿಮ್ಮ ಸ್ನೇಹಿತ ಸರಿಯಾಗಿ ಕಚ್ಚಾ ವಸ್ತುವನ್ನು ಸರಬರಾಜು ಮಾಡದೇ ಹೋದರೆ ಇಲ್ಲವೇ ಇತರ ಷರತ್ತುಗಳಿಗೆ ತಪ್ಪಿದಲ್ಲಿ , ಅದಕ್ಕೆ ನೀವೇ ಹೊಣೆಗಾರರಾಗಬೇಕಾಗುತ್ತದೆ. ಇಂತಹ ಸಂದರ್ಭಗಳಲ್ಲಿ  ಬೇರೆ ರೀತಿಯ ಕರಾರು ಇಲ್ಲದಿದ್ದಲ್ಲಿ, ಜಾಮೀನು ಪಡೆದುಕೊಂಡ ವ್ಯಕ್ತಿಯು,  ಜಾಮೀನುದಾರನ ಮೇಲೆ ಅಥವಾ ಸಾಲ ತೆಗೆದುಕೊಂಡವನ ಮೇಲೆ ಅಥವಾ ಇಬ್ಬರ ಮೇಲೂ ಕ್ರಮ ಜರುಗಿಸುವ ಹಕ್ಕನ್ನು ಹೊಂದಿರುತ್ತಾನೆ. ಜಾಮೀನುದಾರರಾದ ನೀವು, ` ಸಾಲ ತೆಗೆದುಕೊಂಡವನ ಮೇಲೆ ಕ್ರಮ ಜರುಗಿಸಿ ನಂತರ ನನ್ನ ಬಳಿಗೆ ಬನ್ನಿ~  ಎಂದು ಹೇಳುವಂತಿಲ್ಲ. ಮೋಸ ಇಲ್ಲವೇ ವಂಚಯಾಗಿದೆ ಎನ್ನುವ ಕಾರಣವನ್ನು ಹೊರತುಪಡಿಸಿದರೆ, ವಾಗ್ದಾನ ಪಡೆದುಕೊಂಡಾತ (promisor) ಜಾಮೀನುದಾರನಿಗೆ ತಗಾದೆ ಸಲಿಸಿದಾಗ, ಕರಾರಿನಲ್ಲಿ ಇಲ್ಲದ ಕಾರಣವೊಡ್ಡಿ ಜಾಮೀನುದಾರನು ತಪ್ಪಿಸಿಕೊಳ್ಳಲಾಗುವುದಿಲ್ಲ.ಒಂದು ಜಾಮೀನು ಕರಾರಿಗೆ ಹಲವರು ವ್ಯಕ್ತಿಗಳು ಜಾಮೀನುದಾರರಾಗಿ (guarantors or sureties)  ಸಹಿ ಹಾಕಿದರೆ ಯಾರ ಹೊಣೆ ಎಷ್ಟೆಂಬುದು ಆ ಕರಾರಿನಲ್ಲಿ  ನಮೂದಿತವಾಗದಿದ್ದರೆ ಅವರೆಲ್ಲರೂ ಸಮಾನ ಹೊಣೆ ಹೊರಬೇಕಾಗುತ್ತದೆ. ಅವರ ಪೈಕಿ ಒಬ್ಬನನ್ನು ಬಿಟ್ಟು ಉಳಿದವರು ತಲೆ ತಪ್ಪಿಸಿಕೊಂಡರೆ ಒಬ್ಬನೇ ಎಲ್ಲ ಹೊಣೆಯನ್ನೂ ಹೊರಬೇಕಾಗುತ್ತದೆ. ಜಾಮೀನು ಕರಾರು ಎಷ್ಟು ಅವಧಿಯಲ್ಲಿ  ಚಾಲ್ತಿಯಲ್ಲಿ ಇರುತ್ತದೆ ಎಂಬುದನ್ನು, ಅರ್ಥಾತ್ ತನ್ನ ಹೊಣೆಗಾರಿಕೆ ಎಷ್ಟು ಸಮಯದವರೆಗೆ ಇರುತ್ತದೆ ಎನ್ನುವುದನ್ನು ಜಾಮೀನುದಾರ ನಿರ್ಧರಿಸಬಹುದಾಗಿದೆ. ಅದನ್ನು ಜಾಮೀನು ಕರಾರಿನಲ್ಲಿ  ಸರಿಯಾಗಿ ನಮೂದಿಸಬೇಕು. 

 (ಮುಂದಿನ ವಾರ: ಜಾಮೀನುದಾರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry