ಶುಕ್ರವಾರ, ನವೆಂಬರ್ 22, 2019
23 °C
215 ಯೋಜನೆಗಳು ನೆನೆಗುದಿಗೆ: ಚಿದಂಬರಂ ಕಳವಳ

ಜಾರಿ ವಿಳಂಬ: ಶೀಘ್ರ `ಸಿಸಿಐ' ಸಭೆ

Published:
Updated:
ಜಾರಿ ವಿಳಂಬ: ಶೀಘ್ರ `ಸಿಸಿಐ' ಸಭೆ

ಮುಂಬೈ (ಪಿಟಿಐ): ಮೂಲಸೌಕರ್ಯ, ತೈಲ, ಅನಿಲ ಸೇರಿದಂತೆ ವಿವಿಧ ವಲಯಗಳ ಒಟ್ಟು 215 ಯೋಜನೆಗಳು ಜಾರಿಯಾಗದೆ ನೆನೆಗುದಿಗೆ ಬಿದ್ದಿವೆ. ಯೋಜನೆ ಜಾರಿಯಲ್ಲಿನ ವಿಳಂಬವನ್ನು ಗಂಭೀರವಾಗಿ ಪರಿಗಣಿಸಿ ತುರ್ತು ಗಮನ ಹರಿಸಲಾಗುವುದು ಹಾಗೂ ಎಲ್ಲ ಅಡೆತಡೆ ನಿವಾರಿಸಲಾಗುವುದು ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.ಭೂಸ್ವಾಧೀನ, ವಿದ್ಯುತ್ ಸಮಸ್ಯೆ, ಕಲ್ಲಿದ್ದಲು, ಅನಿಲ ಪೂರೈಕೆ , ಪರಿಸರ ಪರವಾನಗಿ, ಬ್ಯಾಂಕ್ ಸಾಲದ ಅಡೆತಡೆ ಇತ್ಯಾದಿ ನಾಲ್ಕೈದು ಸಮಸ್ಯೆಗಳಿಂದ ಕೆಲವು ಯೋಜನೆಗಳು ಜಾರಿಯಾಗಲು ವಿಳಂಬವಾಗುತ್ತಿವೆ. ಈ ಕುರಿತು ಬ್ಯಾಂಕುಗಳು ಮತ್ತು ಉದ್ಯಮ ಸಂಸ್ಥೆಗಳ ಜತೆ ಚರ್ಚೆ ನಡೆಸಲಾಗಲಿದೆ. ಸದ್ಯ 126 ಹೊಸ ಯೋಜನೆಗಳು ಸೇರಿದಂತೆ ಒಟ್ಟು 215 ಯೋಜನೆಗಳು ಸ್ಥಗಿತಗೊಂಡಿವೆ. ಈ ಕುರಿತು ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.ಯೋಜನೆ ಜಾರಿ ವಿಳಂಬದ ಕುರಿತು ಪರಿಶೀಲನೆ ನಡೆಸಲು ಉನ್ನತ ಅಧಿಕಾರ ಹೊಂದಿರುವ ಸಚಿವರ ಸಮಿತಿಯನ್ನು (ಸಿಸಿಐ) ಕೇಂದ್ರ ಸರ್ಕಾರ ರಚಿಸಿದೆ.     ಈ ಸಮಿತಿಯು ಶೀಘ್ರವೇ ಸಭೆ ಸೇರಲಿದ್ದು, ತೈಲ ಮತ್ತು ಅನಿಲ ವಲಯಕ್ಕೆ ಸೇರಿದ 31 ಯೋಜನೆಗಳನ್ನು ಇತ್ಯರ್ಥ ಪಡಿಸಲಿದೆ ಎಂದು ಅವರು ಹೇಳಿದರು.ಉದ್ಯಮಿಗಳಾದ ಅನಿಲ್ ಅಂಬಾನಿ, ಎಸ್ಸಾರ್ ಕಂಪೆನಿಯ ಪ್ರಶಾಂತ್ ರುಯಾ, `ಎಚ್‌ಸಿಸಿ'ನ ಅಜಿತ್ ಗುಲಾಬ್‌ಚಂದ್, ಟಾಟಾ ಸನ್ಸ್‌ನ ಮಧು ಕಣ್ಣನ್, ಎಸ್‌ಬಿಐ ಅಧ್ಯಕ್ಷ ಪ್ರತೀಪ್ ಚೌಧರಿ   ಈ ಸಭೆಯಲ್ಲಿ ಭಾಗವಹಿಸಿದ್ದರು. `ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆಗಳ ಕಾರ್ಯದರ್ಶಿ ರಾಜೀವ್ ಟಕ್ರು  ನೇತೃತ್ವದಲ್ಲಿ ಚರ್ಚೆ ನಡೆಯಿತು.ನೆನೆಗುದಿಗೆ ಬಿದ್ದಿರುವ ಪ್ರತಿಯೊಂದು ಯೋಜನೆಗಳನ್ನೂ ಚಿದಂಬರಂ ಗಂಭೀರವಾಗಿ ಪರಿಗಣಿಸಿದ್ದಾರೆ. ಬ್ಯಾಂಕ್ ಸಾಲ ಲಭಿಸಿದರೂ ಯೋಜನೆ ಸ್ಥಗಿತಗೊಳ್ಳಲು ಕಾರಣವೇನು ಎಂದು ಪ್ರತ್ಯೇಕವಾಗಿ ವಿವರಣೆ ಕೇಳಿದ್ದಾರೆ ಎಂದು  ಆದಿತ್ಯಾ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರಮಂಗಳಂ ಬಿರ್ಲಾ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)