ಜಾಲತಾಣ... ಖರೀದಿ ನಲ್ದಾಣ

7

ಜಾಲತಾಣ... ಖರೀದಿ ನಲ್ದಾಣ

Published:
Updated:
ಜಾಲತಾಣ... ಖರೀದಿ ನಲ್ದಾಣ

ಬೆಂಗಳೂರು ಆಧುನಿಕತೆಗೆ ರೆಕ್ಕೆ ಬಿಚ್ಚಿಕೊಂಡು ಬೆಳೆಯುತ್ತಿರುವ ಹಕ್ಕಿ. ಇರುವೆ ಹರಿದಂತೆ ಹರಿಯುತ್ತಲೇ ಇರುವ ವಾಹನಗಳು, ಶಬ್ದಗಳ ಹಗ್ಗಜಗ್ಗಾಟ. ದೂಳುಗಳ ವಿರಸ. ಇವುಗಳ ಮಧ್ಯೆ ಮನೆ ಸೇರಿದರೆ ಸಾಕು ಎಂದುಕೊಳ್ಳುವ ಮನಸ್ಸುಗಳು...ಹೀಗೆ ಜಂಜಾಟಗಳಲ್ಲೇ ದಿನ ದೂಡುವ ಇಲ್ಲಿನ ಮಂದಿಗೆ ತುಸು ಸಮಾಧಾನಕರ ಆಯ್ಕೆ ನೀಡಲೆಂದು ಪರ್ಯಾಯವಾಗಿ ಆನ್‌ಲೈನ್ ಶಾಪಿಂಗ್ ಹುಟ್ಟಿಕೊಂಡಿದೆ. ಒಂದೇ ಕ್ಲಿಕ್‌ಗೆ ಕೇಳಿದ ವಸ್ತು ಮನೆಬಾಗಿಲಿಗೇ ಬಂದು ನಿಲ್ಲುವ ವಿನೂತನ ವ್ಯವಸ್ಥೆ ನಗರಿಗರ ಮನಸ್ಸನ್ನು ಗೆದ್ದಿದೆ.ಕಚೇರಿಯಲ್ಲೂ ಕೆಲಸ. ವಾರಾಂತ್ಯದ ರಜೆಯಲ್ಲಿ ಮಾಲ್, ತರಕಾರಿ ಅಂಗಡಿ ಎಂದು ಸುತ್ತುವ ಗೋಳು ಯಾರಿಗೆ ಬೇಕು. ಪುಟ್ಟ ಮಕ್ಕಳನ್ನು ಹೊತ್ತುಕೊಂಡು ಬಜಾರ್‌ಗಳಲ್ಲಿ ಸುತ್ತುವುದರೊಳಗೆ ಸುಸ್ತಾಗಿ ಬಿಡುತ್ತದೆ. ಹೀಗಾಗಿ ಕಚೇರಿ ಕೆಲಸ ಮನೆಗೆಲಸದಲ್ಲಿ ಸದಾ ಬ್ಯುಸಿ ಇರುವ ಮಂದಿ ಆನ್‌ಲೈನ್ ಶಾಪಿಂಗ್‌ಗೆ ಮೊರೆ ಹೋಗಿದ್ದಾರೆ. ಬಿಡದ ತರಾತುರಿಯ ಕೆಲಸಗಳ ಮಧ್ಯೆ ಒಂದೇ ಕ್ಲಿಕ್‌ಗೆ ಅರ್ಧ ಕೆಲಸ ಪೂರೈಸಿಕೊಳ್ಳಲು ಮುಂದಾಗಿದ್ದಾರೆ. ಸಮಯ ಅಷ್ಟೇ ಅಲ್ಲ, ಪೆಟ್ರೋಲ್ ಖರ್ಚು, ಟ್ರಾಫಿಕ್ ಜಂಜಾಟದಿಂದ ಮುಕ್ತಿ, ಮನಸ್ಸಿಗೆ ನೆಮ್ಮದಿ ಪಡೆದು ಮನೆಯ ಎಲ್ಲ ಆಗುಹೋಗುಗಳನ್ನು ಹೇಗೆ ನಿಭಾಯಿಸುತ್ತೇವೆ ನೋಡಿ ಎಂದೂ ಬೀಗುತ್ತಿದ್ದಾರೆ ಮಹಿಳೆಯರು.www.optomato.com , www.zopnow.com, www.atmydoorstep.com, www.bigbasket.com, www.myntra.com, www.fnp.com (flowers), www.indiasflowers.com, www.snapdeal.com, www.tradus.com, www.homeshop18.comwww.junglee.com, www.us2bangalore.comಹೀಗೆ ಬೆಂಗಳೂರಿನಲ್ಲೇ ಲೆಕ್ಕವಿಲ್ಲದಷ್ಟು ಆನ್‌ಲೈನ್ ಶಾಪಿಂಗ್ ತಾಣಗಳಿವೆ.ತರಕಾರಿ, ಮಕ್ಕಳಿಗೆ, ಮನೆಯ ವಿನ್ಯಾಸಕ್ಕೆ ಬೇಕಾಗುವ ವಸ್ತುಗಳು, ಮೊಬೈಲ್, ಉಡುಗೆ, ಫ್ಯಾಷನ್ ವಸ್ತುಗಳು, ಹೂವು, ಉಡುಗೊರೆಗಳು. ಹೀಗೆ ಯಾವುದೇ ವಸ್ತು ಕೊಂಡುಕೊಳ್ಳಲು ಆನ್‌ಲೈನ್‌ನಲ್ಲಿ ಅವಕಾಶವಿದೆ. ಮಹಿಳೆಯರು ಹಾಗೂ ಪುರುಷರ ಅವಶ್ಯಕತೆಯ ಎಲ್ಲಾ ರೀತಿಯ ವಸ್ತುಗಳನ್ನು ಒದಗಿಸುವ ಮಿಂಟ್ರಾದಂಥ ಕಂಪೆನಿ ಸುಮಾರು 500 ಬ್ರಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಬೇಕಾದ ಗುಣಮಟ್ಟದ ವಸ್ತುಗಳನ್ನು ಪೂರೈಸುತ್ತಿದೆ.`ಬೆಂಗಳೂರು, ಮುಂಬೈ, ದೆಹಲಿಯಂಥ ದೊಡ್ಡ ಪಟ್ಟಣಗಳಲ್ಲಿ ಆನ್‌ಲೈನ್ ಶಾಪಿಂಗ್ ತುಂಬಾ ಕ್ಲಿಕ್ ಆಗಿದೆ. 2011ರ ನಂತರ ಹೆಚ್ಚಿನವರಲ್ಲಿ ಆನ್‌ಲೈನ್‌ನಲ್ಲಿ ಖರೀದಿ ಬಗ್ಗೆ ಒಲವು ಮೂಡಿರುವುದು ಉತ್ತಮ ಬೆಳವಣಿಗೆ. ಡಿಸೆಂಬರ್‌ನಲ್ಲಿ ಗೂಗಲ್‌ನವರು ಆನ್‌ಲೈನ್ ಶಾಪಿಂಗ್ ಫೆಸ್ಟ್ ಮಾಡಿದ್ದರು. ಆ ಒಂದು ದಿನ ಭಾರಿ ಪ್ರಮಾಣದಲ್ಲಿ ರಿಯಾಯಿತಿ ಕೊಡಲಾಯಿತು. ಮಿಂಟ್ರಾ ಸೇರಿದಂತೆ ಹಲವಾರು ಕಂಪೆನಿಗಳು ಭಾಗವಹಿಸಿದ್ದವು. ಆವತ್ತು ಸುಮಾರು 100 ಪಟ್ಟು ವ್ಯಾಪಾರ ಜಾಸ್ತಿ ಆಯ್ತು. ಆಗಿನ ವ್ಯಾಪಾರದಲ್ಲಿ ಸಮಾಧಾನ ಕಂಡವರೆಲ್ಲಾ ಈಗ ಆನ್‌ಲೈನ್ ಕಡೆಗೆ ಮುಖ ಮಾಡಿದ್ದಾರೆ. ರಾತ್ರಿ 10-12 ಗಂಟೆ ಸಂದರ್ಭದಲ್ಲಿ ಅತಿ ಹೆಚ್ಚು ಖರೀದಿ ನಡೆಯುತ್ತದೆ.ಕೆಲಸಗಳನ್ನೆಲ್ಲಾ ಮುಗಿಸಿ ಫ್ರೀ ಆಗಿರುವುದರಿಂದ ಇದೇ ಸಮಯವನ್ನು ಹೆಚ್ಚಿನವರು ಆಯ್ದುಕೊಂಡಿದ್ದಾರೆ. ಆಗತಾನೆ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಟ್ರೆಂಡ್‌ನ ವಸ್ತುಗಳು ಆಗಿಂದಾಗ್ಗೆ ಆನ್‌ಲೈನ್‌ನಲ್ಲಿ ಲಭ್ಯವಿರುವುದು ಒಂದು ಪ್ಲಸ್ ಪಾಯಿಂಟ್' ಎನ್ನುತ್ತಾರೆ ಮಿಂಟ್ರಾದ ಸಹ ಸಂಸ್ಥಾಪಕ ಆಶುತೋಷ್‌ಲವಾಣಿಯಾ.`ಮಿಂಟ್ರಾದಲ್ಲಿ ಅತಿಹೆಚ್ಚು ಖರೀದಿ ಆಗುವುದು ಪಾದರಕ್ಷೆಗಳು. ತಮಗೆ ಬೇಕಾದ ಸೈಜ್‌ಗಳ ಅರಿವಿರುವುದರಿಂದ ಇದರಲ್ಲಿ ಯಾವುದೇ ಗೊಂದಲ ಉಂಟಾಗುವುದಿಲ್ಲ. ಅಲಂಕಾರಿಕ ವಸ್ತುಗಳು, ಬಟ್ಟೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ಅಂದಾಜಿನ ಪ್ರಕಾರ ದಿನಕ್ಕೆ ಸುಮಾರು 10-12 ಸಾವಿರದಷ್ಟು ವ್ಯಾಪಾರ ನಡೆಯುತ್ತದೆ' ಎನ್ನುತ್ತಾರೆ ಅವರು.ಕಿರಾಣಿ ಸಾಮಾನುಗಳನ್ನು ಪೂರೈಸುವಂತಹ ಬಿಗ್‌ಬಾಸ್ಕೆಟ್.ಕಾಮ್, ಟಾಪ್‌ಟೊಮ್ಯಾಟೊ.ಕಾಮ್ ಮುಂತಾದ ಕಂಪೆನಿಗಳು ಶುದ್ಧವಾದ ಹಾಗೂ ತಾಜಾ ಸಾಮಾನುಗಳನ್ನು ಮನೆಬಾಗಿಲಿಗೆ ಮುಟ್ಟಿಸುತ್ತಿವೆ.`ಬೆಂಗಳೂರಿನಲ್ಲಿ ವೇಗದ ಬದುಕು ಸಾಮಾನ್ಯ. ಯಾವುದಾದರೂ ವಸ್ತುಗಳು ಬೇಕು ಎಂದರೆ, ಅಲ್ಲಿಗೆ ತೆರಳುವುದು, ವಾಹನಗಳನ್ನು ಪಾರ್ಕಿಂಗ್ ಮಾಡುವುದು ಪ್ರತಿಯೊಂದು ತ್ರಾಸದಾಯಕವೇ. ಈ ತೊಂದರೆ ನಿವಾರಣೆಗೆ ಆನ್‌ಲೈನ್ ಶಾಪಿಂಗ್ ಉತ್ತಮ ಅವಕಾಶ ಅನಿಸಿತು. ಬೇಡಿಕೆಯೂ ಜಾಸ್ತಿ ಇರುವುದು ಮತ್ತು ಗ್ರಾಹಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ಕಿರಾಣಿ ಸಾಮಾನುಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದೇವೆ.' ಎನ್ನುತ್ತಾರೆ ಬಿಗ್‌ಬಾಸ್ಕೆಟ್‌ನ ಸಹ ಸಂಸ್ಥಾಪಕ ಅಭಿನಯ್ ಚೌಧರಿ.`ಸುಮಾರು 50 ಸಾವಿರ ಗ್ರಾಹಕರು ನಮಗಿದ್ದಾರೆ. ತಿಂಗಳಿಗೆ 10 ಪಟ್ಟು ಗ್ರಾಹಕರ ಸಂಖ್ಯೆ ಏರುತ್ತಿದೆ. ಪ್ರತಿದಿನಕ್ಕೆ ಒಂದು ಸಾವಿರ ಆರ್ಡರ್ ಪಡೆಯುತ್ತೇವೆ, ಪೂರೈಸುತ್ತೇವೆ. ನಗರದ ಟ್ರಾಫಿಕ್, ಶಬ್ದಗಳ ಜೊತೆ ಗುದ್ದಾಡುವ ಬದಲು ಇದು ಸುಲಭ ಮಾರ್ಗ ಎಂಬ ಕಾರಣಕ್ಕೆ ಗ್ರಾಹಕರು ಆನ್‌ಲೈನ್ ಶಾಪಿಂಗ್‌ನತ್ತ ಮನಸ್ಸು ಮಾಡುತ್ತಿದ್ದಾರೆ' ಎನ್ನುವುದು ಅವರ ಅಭಿಪ್ರಾಯ.`ಎಲ್ಲಾ ಬ್ರಾಂಡ್ ಒಂದೇ ಕಡೆ ಸಿಗುತ್ತದೆ. ಖರೀದಿ ಪ್ರಕ್ರಿಯೆಯೂ ಸುಲಭ. ಸಮಯವೂ ಉಳಿತಾಯ. ಆವಶ್ಯಕತೆಗೆ ತಕ್ಕಂತೆ ನಾನು ಖರೀದಿಸುವ ವಸ್ತುವೂ ಬದಲಾಗುತ್ತದೆ. ಜೀನ್ಸ್, ಟಾಪ್, ಕೆಲವೊಮ್ಮೆ ಪಾರ್ಟಿವೇರ್, ಆಭರಣಗಳನ್ನು ಮಿಂಟ್ರಾದಿಂದ ಖರೀದಿಸುತ್ತೇನೆ. ಜಬಂಗ್ ಮತ್ತು ಫ್ಯಾಷನ್ ಅಂಡ್ ಯೂ ವೆಬ್‌ಸೈಟ್‌ಗಳಿಂದಲೂ ನನ್ನ ಖರೀದಿ ನಡೆಯುತ್ತದೆ' ಎನ್ನುತ್ತಾರೆ ವಿಪ್ರೊ ಉದ್ಯೋಗಿ ಸ್ವಾಗತಾ.

ಇಷ್ಟವಾಗದಿದ್ದರೆ ವಾಪಸ್ ಮಾಡುತ್ತೇನೆ`ಉದ್ಯೋಗದಲ್ಲಿರುವ ಮಹಿಳೆಯರಿಗೆ ಆನ್‌ಲೈನ್ ಶಾಪಿಂಗ್ ಉತ್ತಮ ಅವಕಾಶ. ಒಂದೇ ಜಾಗದಲ್ಲಿ 100ಕ್ಕೂ ಹೆಚ್ಚು ಬ್ರಾಂಡ್‌ನ ವಸ್ತುಗಳು ಸಿಗುತ್ತವೆ. ಒಂದು ವೇಳೆ ಕೊಂಡ ವಸ್ತು ಸರಿಹೋಗಿಲ್ಲ ಎಂದರೆ ವಾಪಸ್ ಮಾಡುವ ವಿಧಾನವೂ ಸುಲಭ. ಹೆಚ್ಚಾಗಿ ಎಲ್ಲಾ ವಸ್ತುಗಳನ್ನು ನಾನು ಆನ್‌ಲೈನ್‌ನಲ್ಲೇ ಕಾಯಂ ಆಗಿ ಖರೀದಿಸೋದು' ಎನ್ನುತ್ತಾರೆ ಮಿಂಟ್ರಾದ ಗ್ರಾಹಕಿ ದೇಬಶ್ರೀ.ಆನ್‌ಲೈನ್‌ನಲ್ಲೇ ಕಿರಾಣಿ ಖರೀದಿ

`ನಾನಿರೋದು ವೈಟ್‌ಫೀಲ್ಡ್‌ನಲ್ಲಿ. ಎಲ್ಲಾ ಕಿರಾಣಿ ವಸ್ತುಗಳನ್ನು ಆನ್‌ಲೈನ್‌ನಲ್ಲೇ ಖರೀದಿಸುತ್ತೇನೆ. ಎಲ್ಲಾ ಕೆಲಸಗಳ ಮಧ್ಯೆ ಈ ಅವಕಾಶ ಇರುವುದು ಸಮಾಧಾನ ನೀಡಿದೆ' ಎನ್ನುತ್ತಾರೆ ಬಿಗ್‌ಬಾಸ್ಕೆಟ್.ಕಾಮ್‌ನ ಕಾಯಂ ಗ್ರಾಹಕಿ ಹರಣೀತ್ ಬಜಾಜ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry