ಜಾಹೀರಾತುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಹಣ ಸಂಪಾದನೆ ಆಮಿಷ

7

ಜಾಹೀರಾತುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಹಣ ಸಂಪಾದನೆ ಆಮಿಷ

Published:
Updated:

ಬೆಂಗಳೂರು: ವೆಬ್‌ಸೈಟ್‌ನಲ್ಲಿ ಬರುವ ಜಾಹೀರಾತುಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಹಣ ಸಂಪಾದಿಸುವ ಆಮಿಷವೊಡ್ಡಿದ ಎಸ್.ಎಸ್.ಎಂಟರ್ ಪ್ರೈಸಸ್ ಎಂಬ ಕಂಪೆನಿಯು ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಠೇವಣಿ ಪಡೆದು ವಂಚಿಸಿರುವ ಘಟನೆ ನಗರದಲ್ಲಿ ನಡೆದಿದೆ.ಆ ಕಂಪೆನಿಯಿಂದ ವಂಚನೆಗೊಳಗಾಗಿರುವ ಸಾರ್ವಜನಿಕರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.ಉಮಾ ಬಲರಾಮ್ ಎಂಬುವರು ಕೆಂಗೇರಿಯ ಕೋಟೆ ರಸ್ತೆಯಲ್ಲಿ 2007ರಲ್ಲಿ ಈ ಕಂಪೆನಿಯನ್ನು ಆರಂಭಿಸಿದ್ದರು. ವೆಬ್‌ಸೈಟ್‌ಗಳಲ್ಲಿ ಬರುವ ಜಾಹೀರಾತುಗಳ ಬಗ್ಗೆ ಅಭಿಪ್ರಾಯ ಸೂಚಿಸುವ ಮೂಲಕ ಹಣ ಗಳಿಸಬಹುದೆಂದು ಉಮಾ ಅವರು ಸಾರ್ವಜನಿಕರಿಗೆ ನಂಬಿಸಿ ಅವರಿಂದ ಠೇವಣಿ ರೂಪದಲ್ಲಿ ಕೋಟ್ಯಂತರ ರೂಪಾಯಿ ಹಣ ಪಡೆದು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವಂಚನೆ ಹೇಗೆ?: ಕಂಪೆನಿಯಲ್ಲಿ 32 ಸಾವಿರ ರೂಪಾಯಿ ಠೇವಣಿ ಇಟ್ಟು ಸದಸ್ಯತ್ವ ಪಡೆದರೆ ಸ್ವಂತ ಇ-ಮೇಲ್ ವಿಳಾಸ ಮತ್ತು ಪಾಸ್‌ವರ್ಡ್ ನೀಡಲಾಗುತ್ತದೆ. ನಂತರ ಸದಸ್ಯರು ಆ ಕಂಪೆನಿಯ ವೆಬ್‌ಸೈಟ್ ವಿಳಾಸ (www.click thru. com), ಪಾಸ್‌ವರ್ಡ್ ಮತ್ತು ಇ-ಮೇಲ್ ವಿಳಾಸ ಬಳಸಿ ಜಾಹೀರಾತುಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬೇಕು. ಸದಸ್ಯರು ತಿಂಗಳ ಅವಧಿಯಲ್ಲಿ ಜಾಹೀರಾತುಗಳಿಗೆ ಎಷ್ಟು ಬಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದನ್ನು ಆಧರಿಸಿ ಅವರಿಗೆ ಹಣ ನೀಡಲಾಗುತ್ತದೆ. ಅಲ್ಲದೇ ಠೇವಣಿ ಹಣವನ್ನು 11 ತಿಂಗಳಲ್ಲಿ ಮರು ಪಾವತಿ ಮಾಡಲಾಗುತ್ತದೆ ಎಂದು ಉಮಾ ಅವರು ಸದಸ್ಯರಿಗೆ ಹೇಳಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.‘ಠೇವಣಿ ಪಡೆದ ಉಮಾ ಅವರು ಸದಸ್ಯರಿಗೆ ಯಾವುದೇ ಮಾಹಿತಿ ನೀಡದೆ ಕಂಪೆನಿಯನ್ನು ಮುಚ್ಚಿ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದಾರೆ. ಆ ಕಂಪೆನಿಯಿಂದ ವಂಚನೆಗೊಳಗಾಗಿರುವ ಕೆಂಗೇರಿ ನಿವಾಸಿ ಕುಮಾರ್ ಎಂಬುವರಿಂದ ದೂರು ಪಡೆದು ವಂಚನೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕುಮಾರ್ ಅವರಂತೆಯೇ ಸಾಕಷ್ಟು ಮಂದಿ ದೂರು ಕೊಟ್ಟಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.ಪೊಲೀಸರಿಗೂ ಮೋಸ: ಪೊಲೀಸ್ ಅಧಿಕಾರಿಗಳು, ವಕೀಲರು,ಸರ್ಕಾರಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಕಂಪೆನಿಯಲ್ಲಿ ಠೇವಣಿ ಇಟ್ಟು ಮೋಸ ಹೋಗಿದ್ದಾರೆ  ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ನೇಹಿತರಿಂದಲೂ ಠೇವಣಿ: ‘ಉಮಾ ಅವರ ಮಾತನ್ನು ನಂಬಿ ಕೆಲವರು 10 ಲಕ್ಷ ರೂಪಾಯಿವರೆಗೂ ಠೇವಣಿ ಇಟ್ಟು, ಹೆಚ್ಚಿನ ಸಂಖ್ಯೆಯಲ್ಲಿ ಇ-ಮೇಲ್ ವಿಳಾಸ ಮತ್ತು ಪಾಸ್‌ವರ್ಡ್‌ಗಳನ್ನು ಪಡೆದುಕೊಂಡಿದ್ದರು. ಅಂತೆಯೇ ನಾನು ಎರಡು ಲಕ್ಷ ಠೇವಣಿ ಇಟ್ಟಿದ್ದೆ. ಸ್ನೇಹಿತರಿಂದಲೂ ಲಕ್ಷಾಂತರ ರೂಪಾಯಿ ಠೇವಣಿ ಇಡಿಸಿ ಸದಸ್ಯತ್ವ ಕೂಡಿಸಿದ್ದೆ’ ಎಂದು ಆ ಕಂಪೆನಿಯಿಂದ ವಂಚನೆಗೊಳಗಾಗಿರುವ ಕೆಂಗೇರಿ ನಿವಾಸಿ ಸೆಂಥಿಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry