ಮಂಗಳವಾರ, ಮಾರ್ಚ್ 2, 2021
29 °C

ಜಾಹೀರಾತು ಅಕ್ರಮ ಮುಚ್ಚಿಹಾಕಲು ಯತ್ನ

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಜಾಹೀರಾತು ಅಕ್ರಮ ಮುಚ್ಚಿಹಾಕಲು ಯತ್ನ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಜಾಹೀರಾತು ವಿಭಾಗದಲ್ಲಿ ಮತ್ತೊಂದು ಹಗರಣ ಸದ್ದು ಮಾಡಿದೆ.ಅನಧಿಕೃತ ಜಾಹೀರಾತು ಫಲಕಗಳನ್ನು ದಂಡ ವಸೂಲಿ ಮಾಡದೆ ತೆರವು ಮಾಡುತ್ತಿರುವ ಕಾರಣ ಒಂದೆಡೆ ಬಿಬಿಎಂಪಿಗೆ ₹ 2,000 ಕೋಟಿಯಷ್ಟು ವರಮಾನ ಸೋರಿಕೆಯಾದರೆ, ಇನ್ನೊಂದೆಡೆ ಹೊಸ ಫಲಕ ಹಾಕಲು ಜಾಹೀರಾತು ಮಾಫಿಯಾಕ್ಕೆ ಅಧಿಕೃತ ಅವಕಾಶ ಸಿಕ್ಕಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತು ಪ್ರದರ್ಶನ ನಿಷೇಧಿಸಲು 2008ರ ಜುಲೈ 25ರಂದು ನಿರ್ಣಯ ಕೈಗೊಳ್ಳಲಾಗಿತ್ತು. ಆಗಿನಿಂದಲೇ ಶುಲ್ಕ ವಸೂಲಿ ನಿಲ್ಲಿಸಲಾಗಿತ್ತು. ಫಲಕಗಳನ್ನು ತೆರವು ಮಾಡಬೇಕಿದ್ದ ಜಾಹೀರಾತು ಏಜೆನ್ಸಿಗಳು ಆಗಿನಿಂದಲೂ ಅನಧಿಕೃತವಾಗಿ ಪ್ರದರ್ಶಿಸುತ್ತಲೇ ಬಂದಿವೆ.‘ದಂಡ ವಸೂಲಿ ಮಾಡದೆ ಅನಧಿಕೃತ ಫಲಕಗಳನ್ನು ಸದ್ದಿಲ್ಲದಂತೆ ತೆರವು ಮಾಡಿ ಆಯಾ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರ್ಪಡೆ ಆಗದಂತೆ ರಕ್ಷಿಸಲಾಗುತ್ತಿದೆ. ಹೊಸದಾಗಿ ಫಲಕ ಅಳವಡಿಕೆ ಮಾಡಲಾಗುತ್ತಿದೆ ಎನ್ನುವಂತೆ ದಾಖಲೆ ಸೃಷ್ಟಿಸುವ ಕೆಲಸ ನಡೆದಿದೆ. ಆ ಮೂಲಕ ಕಳೆದ 7–8 ವರ್ಷ ಫಲಕಗಳ ಪ್ರದರ್ಶನ ಮಾಡಿದ್ದಕ್ಕೆ ಶುಲ್ಕ ಆಕರಿಸುವುದನ್ನು ತಪ್ಪಿಸಲಾಗುತ್ತಿದೆ’ ಎಂದು ಜಾಹೀರಾತು ಅಕ್ರಮದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿರುವ ಸಾಮಾಜಿಕ ಕಾರ್ಯಕರ್ತ ಸಾಯಿದತ್‌ ಹೇಳುತ್ತಾರೆ.ಅನಧಿಕೃತ ಜಾಹೀರಾತು ಫಲಕ ತೆರವುಗೊಳಿಸುವ ಮುನ್ನ ಅದರ ಅಳತೆ ಎಷ್ಟಿದೆ, ಎಷ್ಟು ದಿನದಿಂದ ಅದನ್ನು ಪ್ರದರ್ಶನ ಮಾಡಲಾಗುತ್ತಿದೆ ಎಂಬ ವಿವರ ಕಲೆ ಹಾಕಬೇಕಿತ್ತು. ಆದರೆ, ಇಂತಹ ವಿವರವನ್ನು ಸಂಗ್ರಹಿಸದೆ ಬಿಬಿಎಂಪಿ ಅಧಿಕಾರಿಗಳು ರಾತ್ರೋರಾತ್ರಿ ಅವುಗಳನ್ನೆಲ್ಲ ತೆರವು ಮಾಡುತ್ತಿದ್ದಾರೆ. ಅಲ್ಲದೆ, ದಂಡ ವಸೂಲಿಯನ್ನೂ ಮಾಡುತ್ತಿಲ್ಲ. ಇದರಿಂದ ಪಾಲಿಕೆಗೆ ನೂರಾರು ಕೋಟಿ ರೂಪಾಯಿ ವರಮಾನ ಸೋರಿಕೆ ಆಗುತ್ತಿದೆ ಎಂಬ ದೂರು ಕೇಳಿಬಂದಿದೆ.ಜಾಹೀರಾತು ಮೂಲದಿಂದ ನಗರದಲ್ಲಿ ಒಟ್ಟಾರೆ ಎಷ್ಟು ಆದಾಯ ಸಂಗ್ರಹ ಮಾಡಬಹುದು ಎಂಬುದನ್ನು ಇದುವರೆಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಗಿಲ್ಲ. ಈ ಸಂಬಂಧ ಎಲ್ಲ ಎಂಟೂ ವಲಯಗಳ ಜಾಹೀರಾತು ಫಲಕಗಳ ವಿವರವನ್ನು ದಾಖಲೀಕರಣ ಮಾಡಿದರೆ ನಿಖರ ಆದಾಯದ ಮಾಹಿತಿ ಸಿಗಲಿದೆ. ಅದಕ್ಕೆ ತಕ್ಕಂತೆ ನಿಯಮಾವಳಿ ರೂಪಿಸಿ ಶುಲ್ಕ ಆಕರಿಸಿದರೆ ವಾರ್ಷಿಕ ₹ 300 ಕೋಟಿಯಷ್ಟು ವರಮಾನ ಬರಲಿದೆ ಎಂಬುದು ತಜ್ಞರ ಅಭಿಮತವಾಗಿದೆ.ಬಿಬಿಎಂಪಿಯಲ್ಲಿ ಟಿ.ಎಂ.ವಿಜಯಭಾಸ್ಕರ್‌ ಅವರು ಆಡಳಿತಾಧಿಕಾರಿ ಆಗಿದ್ದಾಗ ಶಾಂತಲಾನಗರ ವಾರ್ಡ್‌ನಲ್ಲಿ ಜಾಹೀರಾತು ವರಮಾನಕ್ಕೆ ಸಂಬಂಧಿಸಿದಂತೆ ಸಹಾಯಕ ಆಯುಕ್ತ ಕೆ.ಮಥಾಯಿ ಅವರ ನೇತೃತ್ವದಲ್ಲಿ ವೈಜ್ಞಾನಿಕ ಅಧ್ಯಯನ ನಡೆಸಲಾಗಿತ್ತು.

ಮೊದಲು ಈ ವಾರ್ಡ್‌ನಿಂದ ₹ 15 ಲಕ್ಷದಷ್ಟು ಆದಾಯ ಬರುತ್ತಿತ್ತು.

ಮಥಾಯಿ ಅವರ ತಂಡ ಶಾಂತಲಾನಗರ ವಾರ್ಡ್‌ನ ಜಾಹೀರಾತು ಫಲಕಗಳಿಂದ ₹ 3.96 ಕೋಟಿಯಷ್ಟು ಆದಾಯ ಬರಬೇಕು ಎಂಬ ವರದಿ ನೀಡಿತ್ತು. ಆ ವರದಿಯನ್ವಯ ವಿಶೇಷ ಕಾರ್ಯಾಚರಣೆ ನಡೆಸಿದಾಗ ₹ 3 ಕೋಟಿಯಷ್ಟು ಆದಾಯ ಸಂಗ್ರಹವಾಗಿತ್ತು. ಬಳಿಕ ಕಂದಾಯ ಅಧಿಕಾರಿಗಳ ಅಸಹಕಾರದಿಂದ ಕಾರ್ಯಾಚರಣೆ ಸ್ಥಗಿತಗೊಂಡಿತ್ತು ಎಂಬ ದೂರು ಕೇಳಿಬಂದಿತ್ತು.ಶಾಂತಲಾನಗರ ವಾರ್ಡ್‌ನಲ್ಲಿ ನಡೆಸಿದಂತೆಯೇ ನಗರದ ಉಳಿದ 197 ವಾರ್ಡ್‌ಗಳಲ್ಲೂ ವಾಸ್ತವಿಕ ಅಧ್ಯಯನ ನಡೆಸಬೇಕು. ವಿಡಿಯೊ ಚಿತ್ರೀಕರಣ ಮಾಡಿಸುವುದಲ್ಲದೆ ಫೋಟೊ ತೆಗೆಸುವ ಮೂಲಕ ಜಾಹೀರಾತಿಗೆ ಸಂಬಂಧಿಸಿದ ಪ್ರತಿ ವಿವರವನ್ನು ದಾಖಲೆ ಮಾಡಬೇಕು. ಇದರಿಂದ ಪ್ರತಿಯೊಂದು ವಾರ್ಡ್‌ನಿಂದ ಕೋಟ್ಯಂತರ ಆದಾಯ ತರಲು ಸಾಧ್ಯವಾಗುತ್ತದೆ ಎಂಬ ಸಲಹೆಯನ್ನು ಸಹಾಯಕ ಆಯುಕ್ತರು ನೀಡಿದ್ದರು ಎಂದು ಗೊತ್ತಾಗಿದೆ.ವಾರ್ಡ್‌ ಮಟ್ಟದ ವಿವರ ಕಲೆಹಾಕಲು 2–3 ದಿನಗಳ ಕಾಲಾವಕಾಶ ಸಾಕು. ಪ್ರತಿಯೊಂದು ವಲಯದಲ್ಲಿ ಪ್ರಹರಿ ವಾಹನ, ಎಂಜಿನಿಯರ್‌, ಕಂದಾಯ ನಿರೀಕ್ಷಕ, ಗ್ಯಾಂಗ್‌ಮನ್‌ ಸೇರಿದಂತೆ ಎಲ್ಲ ಬಲ ಇರುವುದರಿಂದ ವಾಸ್ತವಿಕ ಸ್ಥಿತಿ ಕುರಿತ ಅಧ್ಯಯನ ಕಷ್ಟವಲ್ಲ ಎಂಬ ಮಾಹಿತಿಯನ್ನೂ ಅವರು ನೀಡಿದ್ದರು ಎಂದು ತಿಳಿದುಬಂದಿದೆ.ಜಾಹೀರಾತು ಮೂಲದಿಂದ ಹೇಗೆ ಆದಾಯ ತರಬಹುದು ಎಂಬ ವಿಷಯವಾಗಿ ಸಹಾಯಕ ಆಯುಕ್ತರು ಈಗಾಗಲೇ ಐದು ವರದಿ ನೀಡಿದ್ದಾರೆ. ನಗರದ ಬೀದಿ, ಬೀದಿಗಳಲ್ಲಿ ಪ್ರದರ್ಶನ ಮಾಡುತ್ತಿರುವ ಜಾಹೀರಾತು ಫಲಕಗಳಿಂದ ಏಜೆನ್ಸಿಗಳು ಕೋಟ್ಯಂತರ ಆದಾಯ ಪಡೆದರೆ, ಪಾಲಿಕೆಗೆ ಮಾತ್ರ ಯಾವುದೇ ವರಮಾನ ಬರುತ್ತಿಲ್ಲ.ನಗರದ ಬಹುತೇಕ ಅನಧಿಕೃತ ಜಾಹೀರಾತು ಫಲಕಗಳ ನವೀಕರಣ ಮಾಡುವುದು ಸಾಧ್ಯವೇ ಇಲ್ಲ. ಏಕೆಂದರೆ, ಜಾಹೀರಾತು ಬೈಲಾದ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಅವುಗಳನ್ನು  ಪ್ರದರ್ಶಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳೇ ಹೇಳುತ್ತಾರೆ.

ಬಹುತೇಕ ಜಾಹೀರಾತು ಏಜೆನ್ಸಿಗಳು ಫಲಕಗಳಿಗೆ ಬೆಸ್ಕಾಂನಿಂದ ವಿದ್ಯುತ್‌ ಸಂಪರ್ಕವನ್ನು ಪಡೆದಿವೆ. ಏಜೆನ್ಸಿಗಳು ಬೆಸ್ಕಾಂ ಸಂಪರ್ಕ ಪಡೆದ ದಿನಾಂಕದಿಂದ ದಂಡ ವಿಧಿಸಬಹುದು ಎಂಬ ಸಲಹೆ ಕೂಡ ಕೇಳಿಬಂದಿದೆ.ಜಾಹೀರಾತು ಫಲಕಗಳನ್ನು ತೆರವುಗೊಳಿಸುವ ಮುನ್ನ ಹಾಗೂ ನಂತರ ಅಲ್ಲಿನ ಸನ್ನಿವೇಶದ ಚಿತ್ರೀಕರಣ ಮಾಡಬೇಕು. ಇದರಿಂದ ಪ್ರದರ್ಶಿಸಲಾಗಿದ್ದ ಫಲಕದ ಅಳತೆ ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ತೆರವುಗೊಳಿಸಿದ ಫಲಕಗಳ ವಿವರವನ್ನು ಸಮರ್ಪಕವಾಗಿ ದಾಖಲಿಸಿ, ಆ ಫಲಕಗಳನ್ನು ಗೋದಾಮಿನಲ್ಲಿ ಸಂಗ್ರಹಿಸಿ ಇಡಬೇಕು. ದಾಸ್ತಾನು ಮಾಡಲಾದ ಫಲಕಗಳನ್ನು ತಿಂಗಳಿಗೆ ಒಂದು ಸಲದಂತೆ ಹರಾಜು ಮಾಡಬೇಕು. ಆದರೆ, ಸದ್ಯದ ಸನ್ನಿವೇಶದಲ್ಲಿ ಈ ಯಾವ ಕ್ರಮಗಳನ್ನೂ ಅನುಸರಿಸುತ್ತಿಲ್ಲ ಎನ್ನುತ್ತಾರೆ ಸಾಯಿದತ್‌.ಬಿಬಿಎಂಪಿಯಿಂದ ಜಾಹೀರಾತು ಫಲಕ ತೆರವುಗೊಳಿಸುತ್ತಿರುವ ಪ್ರಕ್ರಿಯೆಯಿಂದ ಎಚ್ಚೆತ್ತುಕೊಂಡಿರುವ ಜಾಹೀರಾತು ಏಜೆನ್ಸಿಗಳು, ತಮ್ಮ ಫಲಕಗಳನ್ನು ತೆರವುಗೊಳಿಸಿ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಿದ್ದಾರೆ. ತೆರವುಗೊಳಿಸುವ ಈ ಅಭಿಯಾನ ಮುಗಿಯುತ್ತಿದ್ದಂತೆ ಪುನಃ ಅವುಗಳನ್ನು ಅಳವಡಿಸುತ್ತಾರೆ ಎಂದು ಅವರು ಹೇಳುತ್ತಾರೆ.ಕೆಲವು ಕಡೆಗಳಲ್ಲಿ ತೆರವುಗೊಳಿಸಿದ ಫಲಕಗಳು ಮತ್ತೆ ಪ್ರದರ್ಶನ ಆಗುತ್ತಿವೆ ಎಂದು ದೂರಲಾಗಿದೆ. ವಾರ್ಡ್‌ ಮಟ್ಟದಲ್ಲಿ ವಾಸ್ತವಿಕಸ್ಥಿತಿ ಅಧ್ಯಯನ ಹಾಗೂ ಅನಧಿಕೃತ ಜಾಹೀರಾತು ಫಲಕಗಳ ದಾಖಲೀಕರಣಕ್ಕೆ ಬಿಬಿಎಂಪಿ ಹಿರಿಯ ಅಧಿಕಾರಿಗಳು ಆಸಕ್ತರಾಗಿಲ್ಲ ಎಂದು ಹೇಳಲಾಗಿದೆ.

ಕೊನೆಯ ದಿನ ಪ್ರಸ್ತಾವಕ್ಕೆ ಒಪ್ಪಿಗೆ

ಕಳೆದ ವರ್ಷ ಬಿಬಿಎಂಪಿಯಲ್ಲಿ ಆಡಳಿತಾಧಿಕಾರಿ ಅವರ ಅವಧಿ ಮುಗಿಯುವ ಕೊನೆಯ ದಿನ ಜಾಹೀರಾತು ಫಲಕಗಳಿಗೆ ನೀಡಿದ ಅನುಮತಿ ನವೀಕರಿಸುವ ಮತ್ತು ಹೊಸದಾಗಿ ಅನುಮತಿ ನೀಡುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಆಡಳಿತಾಧಿಕಾರಿ ಅವರು ಕೊನೆಯ ದಿನ ಇಂತಹ ಮಹತ್ವದ ಪ್ರಸ್ತಾವಕ್ಕೆ ಅನುಮೋದನೆ ನೀಡುವ ಅಗತ್ಯವೇನಿತ್ತು ಎಂದು ಸಾಯಿದತ್‌ ಪ್ರಶ್ನಿಸುತ್ತಾರೆ.ಆಡಳಿತಾಧಿಕಾರಿ ಅವರ ಟೇಬಲ್‌ಗೆ ಬರುವ ಮುಂಚೆ ಈ ಪ್ರಸ್ತಾವ ಒಂದೇ ದಿನ 20ಕ್ಕೂ ಹೆಚ್ಚು ಟೇಬಲ್‌ಗಳಿಗೆ ಓಡಾಡಿ ಅನುಮೋದನೆಗೊಂಡು ಬಂದಿತ್ತು. ಬಿಬಿಎಂಪಿ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ ಲೋಕಾಯುಕ್ತರ ಮುಂದೆ ವಿಚಾರಣೆ ನಡೆಯುತ್ತಿದೆ ಎಂಬುದನ್ನೂ ನಿರ್ಲಕ್ಷ್ಯ ಮಾಡಲಾಯಿತು. ಆಗಿನ ಜಾಹೀರಾತು ವಿಭಾಗದ ವಿಶೇಷ ಆಯುಕ್ತರು ಈ ಪ್ರಸ್ತಾವಕ್ಕೆ ಅನುಮತಿ ಪಡೆಯಲು ಹೆಚ್ಚಿನ ಮುತುವರ್ಜಿ ವಹಿಸಿದ್ದರು  ಎಂದು ಹೇಳಲಾಗಿದೆ.

ಲೋಪ ಎತ್ತಿ ತೋರಿದರು!

ಅನಧಿಕೃತ ಫಲಕಗಳ ತೆರವು ಕಾರ್ಯಾಚರಣೆ ಎಲ್ಲಿ ತಪ್ಪಿದೆ ಮತ್ತು ಅದನ್ನು ಹೇಗೆ ಸರಿಪಡಿಸಬೇಕು ಎಂಬ ವಿಷಯವಾಗಿ ಸಹಾಯಕ ಆಯುಕ್ತ ಕೆ.ಮಥಾಯಿ ಅವರು ಹಲವು ಅಂಶಗಳನ್ನು ಒಳಗೊಂಡ ಪತ್ರವನ್ನು ಹಿರಿಯ ಅಧಿಕಾರಿಗಳಿಗೆ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮಥಾಯಿ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.