ಜಾಹೀರಾತು ಎಂಬ ವಿಸ್ಮಯ

7
ಬೋರ್ಡ್ ರೂಮಿನ ಸುತ್ತ ಮುತ್ತ.........

ಜಾಹೀರಾತು ಎಂಬ ವಿಸ್ಮಯ

Published:
Updated:
ಜಾಹೀರಾತು ಎಂಬ ವಿಸ್ಮಯ

ಪರಿಚಯಿಸು ವಸ್ತುವಿನ ರೂಪಗಳ ರೇಖೆಗಳ/

ಗುರುತಿಸಲಿ ಅವರದರ ಒಲ್ಮೆಗೆಲ್ಮೆಗಳ//

ಮಾರಬೇಕೆಂದೆನಲು ನಿನ್ನ ವಸ್ತುವ ಜಗಕೆ/

ಅರಿವು ಮಾಡಿಸಬೇಕು - ನವ್ಯಜೀವಿ//

1969ರ ಆಸುಪಾಸು. ಗುಜರಾತ್ ಸರ್ಕಾರದ ಗಣಿ ಹಾಗೂ ಭೂವಿಜ್ಞಾನ ವಿಭಾಗದಲ್ಲಿ ರಸಾಯನ ಶಾಸ್ತ್ರಜ್ಞರಾಗಿದ್ದ ಕರ್ಸನ್ ಭಾಯಿ ಪಟೇಲ್ ಅವರಿಗೆ ಬರುತ್ತಿದ್ದ ವೇತನದಲ್ಲಿ ಸಂಸಾರ ಸರಿದೂಗಿಸುವುದು ಕಷ್ಟವಾಗಿತ್ತು. ಹೆಚ್ಚು ಹಣ ಗಳಿಕೆಯ ಯಾವುದಾದರೂ ಪರ್ಯಾಯ ಮಾರ್ಗವೊಂದನ್ನು ಅವರ ಮನಸ್ಸು ಸಹಾ ಹುಡುಕುತ್ತಿತ್ತು.ಹೇಗಿದ್ದರೂ ರಸಾಯನಶಾಸ್ತ್ರ ತಮಗೆ ಗೊತ್ತಿದ್ದ ವಿಷಯ. ಅದನ್ನೇ ಬಂಡವಾಳವಾಗಿಸಿಕೊಂಡು ಒಂದು ದಿನ ತಮ್ಮ ಮನೆಯ ಒಂದು ಪುಟ್ಟ ಕೋಣೆಯಲ್ಲೇ ಫಾಸ್ಫೇಟ್ ರಹಿತವಾದ ಬಟ್ಟೆ ಒಗೆವ ಸಾಬೂನಿನ ಪುಡಿಯೊಂದನ್ನು ತಯಾರಿಸಿದರು. ಅದನ್ನು ತಯಾರಿಸುವ ಸಣ್ಣ ಉದ್ಯಮವೊಂದನ್ನು ಶುರು ಮಾಡಿದರು. ದಿನವೂ ಸಂಜೆ ಕಚೇರಿಯಿಂದ ಮನೆಗೆ ಹಿಂತಿರುಗಿದ ನಂತರ ಸುಮಾರು 20 ಕೆ.ಜಿ.ಯಷ್ಟು ಸಾಬೂನು ಪುಡಿಯನ್ನು ತಯಾರಿಸಿ, ಅದನ್ನು ಪ್ಯಾಕೆಟುಗಳಲ್ಲಿ ಹಾಕಿ, ಮರುದಿನ ಬೆಳಿಗ್ಗೆ 15 ಕಿಲೋ ಮೀಟರ್ ದೂರವಿದ್ದ ಕಚೇರಿಗೆ ಹೋಗುವಾಗ ತಮ್ಮ ಸೈಕಲ್ ಮೇಲೆ ಅವೆಲ್ಲವನ್ನೂ ಹೊತ್ತು ಹಾದಿಯಲ್ಲಿನ ಮನೆಗಳಿಗೆ ಮಾರಾಟ ಮಾಡುತ್ತಿದ್ದರು.ಆ ದಿನಗಳಲ್ಲಿ ಅಂತಹ ಸಾಬೂನಿನ ಪುಡಿಯನ್ನು ತಯಾರಿಸುತ್ತಿದ್ದವರೆಲ್ಲ ಬಹುರಾಷ್ಟ್ರೀಯ ಕಂಪೆನಿಗಳಾದ ಹಿಂದೂಸ್ತಾನ್ ಲಿವರ್‌ನಂತಹ ಪ್ರತಿಷ್ಠಿತ ಸಂಸ್ಥೆಗಳೇ ಆಗಿದ್ದವು. ಅವರ ಸಾಬೂನಿನ ಪುಡಿ ಕೆ.ಜಿ. ಒಂದಕ್ಕೆ 15 ರೂಪಾಯಿಗಳಾಗಿದ್ದರೆ ಪಟೇಲರು ತಾವು ತಯಾರಿಸಿದ ಪುಡಿಯನ್ನು ಕೆಜಿ ಒಂದಕ್ಕೆ ಕೇವಲ ನಾಲ್ಕು ರೂಪಾಯಿಗೆ ಮಾರುತ್ತಿದ್ದರು! ಅವರಿದ್ದ ಕೃಷ್ಣಪುರದಲ್ಲಂತೂ ಕೆಲವೇ ವರ್ಷಗಳಲ್ಲಿ ಎಲ್ಲರೂ ಪಟೇಲರ ಗ್ರಾಹಕರಾಗಿಬಿಟ್ಟಿದ್ದರು.ಸಣ್ಣದಾಗಿ ಶುರುವಿಟ್ಟ ಗೃಹ ಉದ್ಯಮ ಬೆಳೆಯುತ್ತಿದ್ದಂತೆಯೇ ಪಟೇಲರು ತಮ್ಮ ನೌಕರಿಗೆ ರಾಜೀನಾಮೆ ನೀಡಿ ಸಾಬೂನು ಪುಡಿ ತಯಾರಿಕೆ ಹಾಗೂ ಮಾರಾಟದಲ್ಲಿಯೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಹತ್ತೇ ವರ್ಷಗಳಲ್ಲಿ ಇವರ ಸಾಬೂನಿನ ಪುಡಿ ಗುಜರಾತಿನ ಮನೆಮನೆಗಳನ್ನು ಸೇರಿ ದೇಶದ ಇತರೆಡೆಯೂ ವ್ಯಾಪಕವಾಗಿ ಹಬ್ಬುತ್ತಿತ್ತು. 1999ರ ಹೊತ್ತಿಗೆ ದೇಶದ ಡಿಟರ್ಜೆಂಟ್ ಮಾರುಕಟ್ಟೆಯಲ್ಲಿ ಇವರ ಪಾಲು ಶೇಕಡಾ ಮೂವತ್ತೆಂಟರಷ್ಟಾಗಿ ಇವರ ಅನೇಕ ತಯಾರಿಕಾ ಘಟಕಗಳು ವರ್ಷಕ್ಕೆ ಎರಡೂವರೆ ದಶಲಕ್ಷ ಟನ್ನುಗಳಷ್ಟು ಪುಡಿಯನ್ನು ತಯಾರಿಸುತ್ತಿದ್ದವು.ದೇಶದಿಂದ ವಿದೇಶದ ಮಾರುಕಟ್ಟೆಗೆ ಹಾಗೂ ಸಾಬೂನಿನ ಪುಡಿಯಿಂದ ಸಾಬೂನಿನ ಇನ್ನಿತರ ಆಯಾಮಗಳಿಗೆ ಹೊರಳುವುದು ಪಟೇಲರ ಕಂಪೆನಿಗೆ ಇಷ್ಟರ ಹೊತ್ತಿಗೆ ಸಲೀಸಾಗಿ ಹೋಗಿತ್ತು. ಮನೆಯಲ್ಲಿ ದಿನಕ್ಕೆ ಎಂಬತ್ತು ರೂಪಾಯಿಯ ವ್ಯವಹಾರದಿಂದ ಶುರುವಾದ ಅವರ ಕಂಪೆನಿ ಮೂರೇ ದಶಕಗಳಲ್ಲಿ ಸುಮಾರು ಮೂರು ಸಾವಿರ ಕೋಟಿಯಷ್ಟು ವಾರ್ಷಿಕ ವರಮಾನಕ್ಕೇರಿ ಬಲಿಷ್ಠವಾದ ಬಹುರಾಷ್ಟ್ರೀಯ ಕಂಪೆನಿಗಳನ್ನು ಅವರದೇ ಆಟದಲ್ಲಿ ಧಿಕ್ಕರಿಸಿ ಬೆಳೆದಿತ್ತು ಎಂದರೆ, ಯಾವುದೇ ದೃಷ್ಟಿಯಲ್ಲಿ ವೀಕ್ಷಿಸಿದರೂ ಇದೊಂದು ಗಣ್ಯವಾದ ಸಾಧನೆಯೇ ಹೌದು. ಹಿಮಾಲಯದ ತುತ್ತತುದಿಯಲ್ಲಿ ಮಂಜಿನ ಚೆಂಡೊಂದು ಹೇಗೆ ಉರುಳುತ್ತ ಉರುಳುತ್ತಾ ಕೆಳಕ್ಕೆ ಬೀಳುವಷ್ಟರಲ್ಲಿ ಅವಲಾಂಚಿಯಾಗಿ ಬಿಡುತ್ತದೆಯೋ ಅಂತೆಯೇ ಇವರ ಯಶೋಗಾಥೆ ಕೂಡ.ವಾಲ್‌ಮಾರ್ಟ್ ನಮ್ಮ ದೇಶಕ್ಕೆ ಬಂದು ಬಿಟ್ಟರೆ ಅದರಿಂದ ದೇಶದ ವಾಣಿಜ್ಯಕ್ಕೆ ತುಂಬಲಾಗದ ನಷ್ಟವಾಗುತ್ತದೆ ಎಂದು ಈ ದಿನಗಳಲ್ಲಿ ವಾದ ಮಾಡುತ್ತಿರುವ ಎಲ್ಲರೂ ಪಟೇಲರಿಂದ ಹೇಗೆ ಬಹುರಾಷ್ಟ್ರೀಯ ಕಂಪೆನಿಯೊಂದನ್ನು ಸ್ಪರ್ಧೆಯಲ್ಲಿ ಎದುರಿಸಬೇಕೆಂಬ ಪಾಠವನ್ನು ಕಲಿತುಕೊಳ್ಳುವುದು ಒಳಿತಾದೀತು!ಮ್ಯಾನೇಜ್‌ಮೆಂಟ್ ವಲಯಗಳಲ್ಲಿ ಇವರ ಯಶೋಗಾಥೆಯನ್ನು ವಿಮರ್ಶಿಸುತ್ತ ಅದಕ್ಕೆ ಅನೇಕ ಕಾರಣಗಳನ್ನು ಕೊಡುತ್ತಾರೆ. `ಹೀಗೆ ಮಾಡಿದ್ದರಿಂದಲೇ, ಹಾಗಾಯಿತು' ಎಂಬ ವೈವಿಧ್ಯಮಯ ವ್ಯಾಖ್ಯಾನಗಳನ್ನು ನೀಡುತ್ತಾರೆ. ಹದಿನೈದು ರೂಪಾಯಿಗೆ ಮಾರಾಟವಾಗುತ್ತಿದ್ದ ಸಾಬೂನಿನ ಪುಡಿಯನ್ನು ಇವರು ನಾಲ್ಕು ರೂಪಾಯಿಗೆ ಇಳಿಸಿದ್ದೇ ಇವರ ಯಶಸ್ಸಿನ ಗುಟ್ಟು ಎಂದೆನ್ನುವವರೇ ಅಧಿಕ.ಬೆಲೆ ಇಳಿಕೆಯಿಂದಲೇ ಇವರು ಮಾರುಕಟ್ಟೆಯಲ್ಲಿ ಸ್ಥಿರವಾಗಿ ನಿಲ್ಲುವುದಕ್ಕೆ ಸಾಧ್ಯವಾಯಿತು ಎಂಬುದು ಸತ್ಯವೇ ಆದರೂ ಅದು ಪೂರ್ಣ ಸತ್ಯವಲ್ಲ. ಬೆಲೆ ಇಳಿಕೆಯೊಂದನ್ನೇ ನಂಬಿ ಯಾರೂ ವಾಣಿಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆದದ್ದಿಲ್ಲ. ಬೆಲೆ ಇಳಿಕೆಯೊಂದಿಗೇ ಪಟೇಲರು ಮುಖ್ಯವಾಗಿ ಇನ್ನೆರಡು ಅಂಶಗಳನ್ನು ಅಳವಡಿಸಿಕೊಂಡರು. ಅವುಗಳೇ ನಾನೀಗಾಗಲೇ ಹಿಂದಿನ ಲೇಖನಗಳಲ್ಲಿ ಉಲ್ಲೇಖಿಸಿರುವ ಕೋಟ್ಲರನ ನಾಲ್ಕು `ಪಿ' ಗಳಲ್ಲಿನ ಕಡೆಯವು - ವಿತರಣಾ ವ್ಯವಸ್ಥೆ ಹಾಗೂ ಪ್ರಚಾರ.ವಿತರಣಾ ವ್ಯವಸ್ಥೆಯ ಮಹತ್ವದ ಬಗ್ಗೆ ಹಿಂದಿನ ಲೇಖನದಲ್ಲಿ ಓದಿದ್ದೇವೆ. ಪಟೇಲರು ಈ ವಿಷಯಕ್ಕೆ ಅದೆಷ್ಟು ಮನ್ನಣೆ ನೀಡಿದ್ದರು ಎಂದರೆ 90ರ ದಶಕದಲ್ಲಿ ಅವರ ಸಾಬೂನಿನ ಪುಡಿಯನ್ನು ದೇಶದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಸಗಟು ವ್ಯಾಪಾರಿಗಳು ಹಾಗೂ ಎರಡು ಲಕ್ಷಕ್ಕೂ ಹೆಚ್ಚು ಚಿಲ್ಲರೆ ವ್ಯಾಪಾರಿಗಳು ಮಾರುತ್ತಿದ್ದರು.ತಮ್ಮ ಲಾಭದ ಬಹುಪಾಲನ್ನು ಈ ವ್ಯಾಪಾರಿಗಳಿಗೆ ರಿಯಾಯಿತಿ ರೂಪದಲ್ಲಿ ನೀಡಿ ಅವರು ತಮ್ಮ ಸಾಬೂನನ್ನೇ ಹೆಚ್ಚು ಹೆಚ್ಚು ಮಾರುವಂತೆ ಪ್ರೋತ್ಸಾಹಿಸುತ್ತಿದ್ದರು. ಅವರ ಈ ವಿತರಣಾ ವ್ಯವಸ್ಥೆಗೆ ಬಲಿಷ್ಠವಾದ ಹಿಂದೂಸ್ತಾನ್ ಲಿವರ್ ಕಂಪೆನಿ ಕೂಡ ತತ್ತರಿಸಿ ಹೋಗಿತ್ತೆಂದರೆ ನಮಗಿದರ ಮಹತ್ವದ ಅರಿವಾಗುತ್ತದೆ. ಆದರೆ ಪಟೇಲರು ನನಗೆ ಇಷ್ಟವಾಗುವುದು ಅವರದೇ ಆದ ಸಂಪೂರ್ಣ ದೇಸೀ ಸ್ಟೈಲಿನ ಪ್ರಚಾರದಿಂದಾಗಿ! ಇದೇ ಅವರ ಯಶಸ್ಸಿನ ನಿಜವಾದ ಅಂಶವೂ ಹೌದು.1982ರ ದೆಹಲಿ ಏಷ್ಯನ್ ಕ್ರೀಡೆಯಿಂದಾಗಿ ಬಹುತೇಕ ಎಲ್ಲ ಭಾರತೀಯ ಮನೆಗಳಲ್ಲೂ ಟಿ.ವಿ.ಯ ಪಾದಾರ್ಪಣೆಯಾಗಿತ್ತು. ನಮ್ಮ ಮನೆಯನ್ನೂ ಟಿ.ವಿ ಹೊಕ್ಕಿದ್ದು ಆ ದಿನಗಳಲ್ಲೆ. ದೂರದರ್ಶನದ ಒಂದೇ ಒಂದು ಚಾನೆಲ್‌ನಿಂದಾಗಿ ನಮ್ಮ ಮನೆಯಲ್ಲಿದ್ದ ಕಪ್ಪು-ಬಿಳುಪು ಟಿ.ವಿ.ಗೆ ರಿಮೋಟ್ ಕೂಡ ಇರಲಿಲ್ಲ. ಅದೂ ಬೇಕೂ ಇರಲಿಲ್ಲ. 84ರ ಹೊತ್ತಿಗೆ `ಹಮ್ ಲೋಗ್' ಹಿಂದಿಯ ಧಾರಾವಾಹಿ ಶುರುವಾಗಿ ದಿನವೂ ರಾತ್ರಿ ಜನ ಟಿ.ವಿ.ಯ ಮುಂದೆ ಜೀವನದ ಒಳಿತೆಲ್ಲವನ್ನೂ ಮರೆತು ಕುಳಿತುಬಿಡುವ ಪರಿಪಾಟವೂ ಜಾರಿಗೆ ಬಂತು!ಆ ದಿನಗಳಲ್ಲಿ ಜನರ ಮನಸ್ಸನ್ನು ಸೂರೆಗೊಂಡ ಒಂದು ಜಾಹೀರಾತನ್ನು ಯಾರೂ ಮರೆಯುವ ಹಾಗಿಲ್ಲ. ಅನೇಕ ಗೃಹಿಣಿಯರು ಹೇಗೆ ಹೊಸತಾದ ಈ ಸಾಬೂನಿನ ಪುಡಿಯಿಂದ ತಮ್ಮ ಮನೆ ಮಂದಿಯವರ ಬಟ್ಟೆಗಳೆಲ್ಲ ಶುಭ್ರವಾಗಿದೆ ಎಂದು ತಮ್ಮದೇ ಅನುಭವಗಳನ್ನು ರಸವತ್ತಾಗಿ ತಿಳಿಸುತ್ತಾರೆ. ಟಿವಿಯ ಪರದೆಯ ಮೇಲೆ ಬಿಳಿಯ ಬಟ್ಟೆಗಳೆಲ್ಲ ಮತ್ತಷ್ಟೂ ಬಿಳಿಯಾಗಿ, ಬಣ್ಣದ ಬಟ್ಟೆಗಳೆಲ್ಲ ಜಗಮಗಿಸುವುದನ್ನು ಕಂಡ ಆ ಕ್ಷಣವೇ ಭಾರತೀಯ ಗೃಹಿಣಿಯರು ಆ ಸಾಬೂನಿನ ಪುಡಿಯ ಚಮತ್ಕಾರಕ್ಕೆ ಮಾರು ಹೋಗಿದ್ದರು.ಅವರಿಗೆಲ್ಲ ಅಲ್ಲಿಯವರೆಗೆ ತಾವು ಬಳಸುತ್ತಿದ್ದ ಪುಡಿಯೇಕೋ ತಕ್ಷಣಕ್ಕೆ ದುಭಾರಿಯಾಗಿಯೂ ಹಾಗೂ ಸಮಾಜದ ಮೇಲಿನ ಸ್ತರದವರ ಸ್ವತ್ತಾಗಿಯೂ ಕಾಣತೊಡಗಿತು. ಜಾಹೀರಾತಿನಲ್ಲಿ ಸಾಬೂನಿನ ಪುಡಿಯನ್ನು ಪ್ರತಿಪಾದಿಸುತ್ತಿರುವವರೆಲ್ಲ ತಮ್ಮಂತೆಯೇ ಸಾಧಾರಣ ಮಧ್ಯಮವರ್ಗದ ಹಾಗೂ ಹಳ್ಳಿಯ ಹೆಂಗಸರು. ಬಟ್ಟೆ ಒಗೆಯುವ ವಿಷಯ ಇವರಿಗಿಂತ ಚೆನ್ನಾಗಿ ಬಲ್ಲವರಾರು? ಅವರೇ ಸಾರುತ್ತಿರುವಾಗ, ನಾವು ಮುಂದಿನ ಸಲ ಅಂಗಡಿಗೆ ಹೋದಾಗ ಇದೇ ಸಾಬೂನಿನ ಪುಡಿಯನ್ನು ತರಬೇಕು ಎಂದು ನಿಶ್ಚಯಿಸಿಬಿಟ್ಟಿದ್ದರು.ಈಗಿನ ಕಾಲದಂತೆ ಆಗ ನಾವು ಜಾಹೀರಾತುಗಳು ಬಂದಾಗ ಚಾನೆಲ್ ಬದಲಾಯಿಸುತ್ತಿರಲಿಲ್ಲ, ಸಾಧ್ಯವೂ ಇರಲಿಲ್ಲ. ಬಂದ ಎಲ್ಲ ಜಾಹೀರಾತುಗಳನ್ನು ಮತ್ತೆ ಮತ್ತೆ ನೋಡುತ್ತಿದ್ದೆವು. ಕೆಲವೊಮ್ಮೆ ಜಾಹೀರಾತುಗಳೇ ಮಿಕ್ಕು ಕಾರ್ಯಕ್ರಮಗಳಿಗಿಂತಲೂ ರಂಜನೆ ನೀಡುತ್ತಿದ್ದವು ಎಂದರೆ ತಪ್ಪಿಲ್ಲ. ಅಂತಹ ಅತ್ಯಂತ ರಂಜನೆಯ ಜಾಹೀರಾತುಗಳಲ್ಲಿ ಪಟೇಲರ ಈ ಜಾಹೀರಾತು ಸಹ ಮೇಲ್ಪಂಕ್ತಿಯಲ್ಲಿತ್ತು.ಪಟೇಲರ ಸಾಬೂನಿನ ಪುಡಿಯ ಯಶಸ್ಸಿಗೆ ವಸ್ತು, ಸೂಕ್ತ ಬೆಲೆ ಹಾಗೂ ವಿತರಣಾ ವ್ಯವಸ್ಥೆಯಷ್ಟೇ ಮುಖ್ಯವಾಗಿರಲಿಲ್ಲ. ಇವುಗಳಿಗೂ ಮಿಗಿಲಾಗಿ ಪರಿಣಾಮಕಾರಿಯಾಗಿ ಮೂಡಿಬಂದದ್ದು ಅವರ ಪ್ರಚಾರ ಹಾಗೂ ಜಾಹೀರಾತು. ಮನೆಯಿಂದ ಬೀದಿಗೆ ಬಂದು, ಕೃಷ್ಣಪುರದಿಂದ ಗುಜರಾತಿನ ಕೆಲವೆಡೆ ಮಾತ್ರ ವ್ಯಾಪಾರವಾಗುತ್ತಿದ್ದ ಸಾಬೂನಿನ ಪುಡಿಯನ್ನು ದೇಶದ ಮನೆಮನೆಗಳಿಗೂ ಮುಟ್ಟಿಸುವುದಕ್ಕೆ ಪೂರಕವಾಗಿದ್ದು ಅವರ ಜಾಹೀರಾತುಗಳು ಹಾಗೂ ಪ್ರಚಾರ ತಂತ್ರಗಳು.ಅವುಗಳಲ್ಲೆಲ್ಲ ಅವರು ಭಾರತದ ಸಾಧಾರಣ ಕುಟುಂಬವೊಂದರ ಸ್ತ್ರೀ ಶಕ್ತಿಯನ್ನು ಬಳಸಿಕೊಂಡು ನೀಡುತ್ತಿದ್ದ ಸಂದೇಶಗಳು. ಇವೆಲ್ಲವನ್ನೂ ಪಟೇಲರು ಹಿಂದೂಸ್ತಾನ್ ಲಿವರಿನಂತೆ ವರಮಾನದ ಶೇಕಡಾ ಎಂಟರಷ್ಟನ್ನು ಜಾಹೀರಾತುಗಳಿಗೆ ಬಳಸದೆ ತಮ್ಮ ವರಮಾನದ ಶೇಖಡಾ ಎರಡರಲ್ಲೇ ಪರಿಣಾಮಕಾರಿಯಾಗಿ ರೂಪಿಸಿಕೊಂಡರು ಎಂಬುದನ್ನು ನಾವಿಲ್ಲಿ ಗಮನಿಸಬೇಕು.ಕರ್ಸನ್ ಭಾಯಿ ಪಟೇಲರ ಈ ಕತೆ ಅತ್ಯಂತ ರಮಣೀಯವಾದದ್ದು. ಎಲ್ಲ ಸೌಕರ್ಯಗಳಿದ್ದೂ ಸಣ್ಣದೊಂದನ್ನು ಸಾಧಿಸುವುದಕ್ಕೂ ಗೊಣಗಾಡುವ ಬೋರ್ಡ್‌ರೂಮಿನ ಸುತ್ತಮುತ್ತಲಿನ ಮಂದಿಗೆ ಏನೊಂದೂ ಇಲ್ಲದಿದ್ದರೂ ಎಲ್ಲವನ್ನು ಸಾಧಿಸಿಕೊಂಡ ಪಟೇಲರ ಮಾರಾಟ ಪ್ರಜ್ಞೆ ಮಾದರಿಯಾಗಬೇಕು. ಮಾರಾಟ ವಿಭಾಗದ ಈ ನಾಲ್ದೆಸೆಗಳು ಹೇಗೆ ಉದ್ಯಮವೊಂದರ ಸಾರ ಎಂಬುದು ಮನದಟ್ಟಾಬೇಕು. ಈ ಯಾವುದನ್ನೂ ಪಟೇಲರು ಮ್ಯಾನೇಜ್‌ಮೆಂಟ್ ಶಾಲೆಯೊಂದರಲ್ಲಿ ಕುಳಿತು ಕಲಿಯಲಿಲ್ಲ. ಆದರೂ ಇವುಗಳನ್ನೆಲ್ಲ ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಂಡು ನಮ್ಮೆಲ್ಲರಿಗೂ ದಾರಿ ದೀಪವಾದರಲ್ಲ - ಅದು ಅದ್ಭುತ.ಮನೆಯ ಗೇಟಿನ ಬಳಿ ನಿಂತು ಗೆಳೆಯನೊಂದಿಗೆ ಮಾತನಾಡುತ್ತಿದ್ದೆ. ಒಳಗೆ ಟಿವಿ ಮುಂದೆ ಕುಳಿತಿದ್ದ ನನ್ನಕ್ಕ, ಉಷಾ ಜೋರಾಗಿ `ರಾಜು, ನಿನ್ನ ಜಾಹೀರಾತು ಬಂತು' ಎಂದದ್ದೇ ತಡ ಗೆಳೆಯನನ್ನು ಅಲ್ಲೇ ಬಿಟ್ಟು ಒಳಕ್ಕೆ ಓಡಿ ಬಂದಿದ್ದೆ.ಟಿ.ವಿ ಪರದೆ ಮೇಲೆ ಪುಟ್ಟ ಬಾಲಕಿಯ ಚಿತ್ರ. ಶುಭ್ರವಾದ ಬಿಳಿಯ ಲಂಗ ತೊಟ್ಟಿದ್ದಾಳೆ. ಅಂದವಾಗಿ ತಿರುಗುತ್ತಿದ್ದಾಳೆ. ಅವಳ ಲಯಕ್ಕೆ ತಕ್ಕಂತೆ ಕೊಳೆ ಕಳೆದುಕೊಂಡಿದ್ದ ಅವಳ ವಸ್ತ್ರವೂ ಗಾಳಿಯಲ್ಲಿ ಕ್ರಮಬದ್ಧವಾಗಿ ಹಾರುತ್ತಿದೆ. ಅದೆಷ್ಟೇ ಬಾರಿ ಕೇಳಿದರೂ ಬೋರ್ ಆಗದ ಅದೇ ಹಾಡು ಕೇಳಿ ಬರುತ್ತಿದೆ - `ವಾಶಿಂಗ್ ಪೌಡರ್ ನಿರ್ಮಾ! ವಾಶಿಂಗ್ ಪೌಡರ್ ನಿರ್ಮಾ! ಹಾಲಿಗಿಂತ ಬಿಳುಪು, ನಿರ್ಮಾದಿಂದ ಬಂತು! ಬಣ್ಣಾದ ಬಟ್ಟೆಗಳ ಫಳಫಳಿಸುವುದು ನಿರ್ಮಾ! ಎಲ್ಲಾರ ಮೆಚ್ಚಿನ ನಿರ್ಮಾ....

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry