ಮಂಗಳವಾರ, ಜೂನ್ 15, 2021
27 °C
ಲೋಕಸಭಾ ಚುನಾವಣೆ; ಆಯೋಗ ಸೂಚನೆ

ಜಾಹೀರಾತು ಪ್ರಸಾರಕ್ಕೆ ಎಂಸಿಎಂಸಿ ಅನುಮತಿ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ಟಿ.ವಿ ವಾಹಿನಿಗಳು ಸೇರಿದಂತೆ ಸ್ಥಳೀಯ ಕೇಬಲ್ ಟಿ.ವಿ. ಯಲ್ಲಿ ಚುನಾವಣಾ ಸಂಬಂಧಿಸಿದ ಜಾಹೀರಾತನ್ನು ಪ್ರಕಟಿಸಲು ಜಿಲ್ಲಾ ಎಂಸಿಎಂಸಿ ಸಂಸ್ಥೆಯಿಂದ ಕಡ್ಡಾಯವಾಗಿ ಪೂರ್ವ ಅನುಮತಿ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಹಾಗೂ ಎಂಸಿಎಂಸಿ ಅಧ್ಯಕ್ಷ ವಿ.ಪಿ.ಇಕ್ಕೇರಿ ತಿಳಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಮಾಧ್ಯಮ ದೃಢೀಕರಣ ಹಾಗೂ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ‘ಚುನಾವಣೆಗೆ  ಸಂಬಂಧಿಸಿದ ಯಾವುದೇ ಜಾಹೀರಾತನ್ನು ವಾಹಿನಿಗಳಲ್ಲಿ,  ಕೇಬಲ್‌ಗಳಲ್ಲಿ ಪ್ರಕಟಿಸುವ ಮುನ್ನ ಈ ಸಮಿತಿಗೆ ಪ್ರಚಾರದ ವಿವರವನ್ನು ನಿಗದಿತ ನಮೂನೆಯಲ್ಲಿ ಸಲ್ಲಿಸಿ, ಸಮಿತಿಯಿಂದ ಅನುಮತಿ ಪಡೆಯಬೇಕು. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ  ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು.‘ಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲು ಎಂಸಿಎಂಸಿಯ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಆದರೆ ಅಂಥ ಜಾಹೀರಾತು ವೆಚ್ಚವನ್ನು ಸಂಬಂಧಿಸಿದ ಅಭ್ಯರ್ಥಿಯ ವೆಚ್ಚಕ್ಕೆ ಸೇರಿಸಲಾಗುತ್ತದೆ. ಆದರೆ ಜಾಹೀರಾತು ಪ್ರಕಟಿಸದೆ ಸುದ್ದಿಯಾಗಿ ಪ್ರಕಟ ಮಾಡಿದಲ್ಲಿ ಇದನ್ನೂ ಕಾನೂನು ಉಲ್ಲಂಘನೆ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುತ್ತದೆ’ ಎಂದು ವಿವರಿಸಿದರು.‘ವಾಹಿನಿ, ಕೇಬಲ್ ಟಿವಿಗಳಲ್ಲಿ ಪ್ರಕಟವಾಗುವ ಜಾಹೀರಾತು ವೀಕ್ಷಣೆಗೆ ಜಿಲ್ಲಾ ಮಟ್ಟದಲ್ಲಿ ಮಾಧ್ಯಮ ಕೇಂದ್ರವನ್ನು ತೆರೆಯಲಾಗಿದ್ದು ಇದು ದಿನದ ೨೪ ಗಂಟೆ ಕಾರ್ಯ ನಿರ್ವಹಿಸುತ್ತದೆ. ಈ ತಂಡವು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿ ಚುನಾವಣೆಗೆ ಸಂಬಂಧಿಸಿದ ವಿಷಯಗಳ ಮಾಹಿತಿ ಸಂಗ್ರಹಿಸಲು ತೀವ್ರ ನಿಗಾವಹಿಸಲು ಸೂಚನೆ ನೀಡಲಾಗಿದೆ’ ಎಂದರು.‘ಚುನಾವಣಾ ಕರಪತ್ರ, ಪೋಸ್ಟರ್ ಸೇರಿದಂತೆ ಇತರ ಪ್ರಚಾರ ಸಾಮಗ್ರಿ ಮುದ್ರಿಸುವ ಮುನ್ನ ಮತ್ತು ನಂತರ ಮುದ್ರಣ ಮಾಲೀಕರು ಸಂಪೂರ್ಣ ವಿವರವನ್ನು ಜಿಲ್ಲಾ ಚುನಾವಣಾ ಧಿಕಾರಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಮುದ್ರಣ ಮಾಡುವಾಗ ನಿಯಮಾವಳಿಗಳ ಪಾಲನೆ ಕಡ್ಡಾಯವಾಗಿ ಮಾಡಬೇಕು. ಇಲ್ಲದಿದ್ದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.ಸಾರ್ವಜನಿಕರು ಕೂಡ ಎಂಸಿಎಂಸಿಗೆ ಸಂಬಂಧಿಸಿದ ದೂರು ನೀಡಲು ಅವಕಾಶವಿದೆ. ಅಂಥ ಸಂದರ್ಭದಲ್ಲಿ ಮಾಧ್ಯಮ ಕೇಂದ್ರದ ಸಹಾಯವಾಣಿ: ೦೮೧೯೪-೨೨೨೫೩೫ ಅಥವಾ ವಾರ್ತಾ ಇಲಾಖೆಯ ೦೮೧೯೪-೨೨೨೪೫೪ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ವಿವರಿಸಿದರು.ಜಿಲ್ಲಾಮಟ್ಟದ ಮಾಧ್ಯಮ ದೃಢೀಕರಣ ಹಾಗೂ ಮೇಲ್ವಿಚಾರಣಾ ಸಮಿತಿಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುತ್ತಾರೆ. ಜಿಲ್ಲಾ ವಾರ್ತಾಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ.ಸಭೆಯಲ್ಲಿ ಮಾಧ್ಯಮ ಸಮಿತಿಯ ಸದಸ್ಯರಾದ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಉಷಾಲತಾ, ಜಿಲ್ಲಾ ಪಂಚಾಯ್ತಿ ಮುಖ್ಯ ಲೆಕ್ಕಾಧಿಕಾರಿ ಮಲ್ಲಯ್ಯ ಹಾಗೂ ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ ಸಭೆಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.