ಸೋಮವಾರ, ನವೆಂಬರ್ 18, 2019
23 °C

ಜಾಹೀರಾತು ಫಲಕ ತೆರವಿಗೆ ಆದೇಶ

Published:
Updated:

ಬೆಂಗಳೂರು: ಅತ್ಯಂತ ತರಾತುರಿಯಲ್ಲಿ 525  ದೊಡ್ಡ ವಾಣಿಜ್ಯ ಜಾಹೀರಾತು ಫಲಕಗಳ ಅಳವಡಿಕೆಗೆ ಅನುಮತಿ ನೀಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾಮಾನ್ಯ ಸಭೆ ಕೈಗೊಂಡಿದ್ದ ನಿರ್ಣಯವನ್ನು ರದ್ದುಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿರುವ ಆಯುಕ್ತ ಸಿದ್ದಯ್ಯ, ಆ ಎಲ್ಲ ಫಲಕ ತೆಗೆದುಹಾಕುವಂತೆ ಆದೇಶ ಹೊರಡಿಸಿದ್ದಾರೆ.ಬಿಬಿಎಂಪಿಗೆ ಯಾವುದೇ ತೆರಿಗೆ ತುಂಬದೆ ಫಲಕ ಅಳವಡಿಕೆ ಮಾಡಿದ್ದರಿಂದ ಕೋಟ್ಯಂತರ ರೂಪಾಯಿ ವರಮಾನ ನಷ್ಟವಾಗಿದ್ದು, ಅವುಗಳನ್ನು ತಕ್ಷಣ ತೆಗೆದು ಹಾಕಬೇಕು. ಮೂರು ದಿನಗಳಲ್ಲಿ ಕ್ರಮ ಕೈಗೊಂಡ ವರದಿ ನೀಡಬೇಕು ಎಂದು ಎಲ್ಲ ವಲಯಗಳ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.`ಈ ಫಲಕಗಳ ಅಳವಡಿಕೆಗೆ 2012ರ ಸೆಪ್ಟೆಂಬರ್ 29ರಂದು ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು. ನಿರ್ಣಯವನ್ನು ಅನುಷ್ಠಾನಕ್ಕೆ ತರಲು ಸರ್ಕಾರದ ಒಪ್ಪಿಗೆ ಪಡೆದಿಲ್ಲ. ಅಲ್ಲದೆ, ಸರ್ಕಾರಕ್ಕೆ ಪ್ರಸ್ತಾವ ಕಳುಹಿಸುವಂತೆ ಮೇಯರ್ ಕಚೇರಿಯಿಂದ ಆಯುಕ್ತರಿಗೆ ಪತ್ರವೂ ಬಂದಿರಲಿಲ್ಲ' ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.ಸರ್ಕಾರದ ಅನುಮತಿಯೇ ಇಲ್ಲದೆ ಖಾಸಗಿ ಸಂಸ್ಥೆಗಳಿಗೆ ಬಿಬಿಎಂಪಿ ಹೋರ್ಡಿಂಗ್‌ಗಳಲ್ಲಿ ಜಾಹೀರಾತು ಫಲಕ ಹಾಕಲು ಅವಕಾಶ ಮಾಡಿಕೊಡಲಾಗಿದೆ. ಕೆಲವು ಜನ ಬಿಬಿಎಂಪಿ ಸದಸ್ಯರೇ ಈ ಫಲಕಗಳನ್ನು ಹಾಕಲು ಅವಕಾಶ ಒದಗಿಸಿಕೊಟ್ಟಿದ್ದಾರೆ ಎಂಬ ದೂರುಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂತಹ 525 ಜಾಹೀರಾತುಗಳು ಇರುವುದು ಕಂಡುಬಂದಿದೆ. ಎಲ್ಲವನ್ನೂ ತೆಗೆದು ಹಾಕುವಂತೆ ಆಯುಕ್ತರು ಆದೇಶಿಸಿದ್ದಾರೆ.`ರಾಜಕೀಯ ನಾಯಕರ ಜತೆ ಸೇರಿಕೊಂಡು ಆಟವಾಡಲು ಹೊರಟ ಜಾಹೀರಾತು ಮಾಫಿಯಾಕ್ಕೆ ಆಯುಕ್ತರು ತಕ್ಕ ಪಾಠ ಕಲಿಸಿದ್ದಾರೆ. ಬಿಬಿಎಂಪಿಗೆ ಸಲ್ಲಬೇಕಾಗಿದ್ದ ವರಮಾನ ತಪ್ಪಿಸಿ, ಬೇರೆಡೆ ಕೋಟ್ಯಂತರ ಹಣ ವ್ಯಯಿಸಿ ಹಾಕಿದ್ದ ಫಲಕಗಳು ಎತ್ತಂಗಡಿ ಆಗುತ್ತಿವೆ. ಹಣವೂ ಹೋಯಿತು, ಫಲಕಗಳು ಹೋದವು ಎನ್ನುವ ಸ್ಥಿತಿಯಲ್ಲಿ ಅವರಿದ್ದಾರೆ' ಎಂದು ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.`ಜಾಹೀರಾತು ವಿಭಾಗವನ್ನು ಎಷ್ಟೇ ಸುವ್ಯವಸ್ಥೆಗೆ ತರಲು ಯತ್ನಿಸಿದರೂ ಒಂದಿಲ್ಲೊಂದು ಎಡವಟ್ಟುಗಳು ಆಗುತ್ತಲೇ ಇವೆ. ವಿಭಾಗದ ಒಳಗೆ ಮತ್ತು ಹೊರಗೆ ಹಲವು ಅಡೆತಡೆಗಳಿವೆ. ಸ್ವಹಿತಾಸಕ್ತಿಗಳ ರಾಜ್ಯಭಾರ ಅತಿಯಾಗಿದ್ದು, ಬಿಬಿಎಂಪಿಗೆ ಸಿಗಬೇಕಿದ್ದ ದೊಡ್ಡ ಪ್ರಮಾಣದ ಆದಾಯ ಪರರ ಪಾಲಾಗುತ್ತಿದೆ' ಎಂದು ಆಯುಕ್ತರು ಸರ್ಕಾರಕ್ಕೆ ಕಳುಹಿಸಿರುವ ಟಿಪ್ಪಣಿಯಲ್ಲಿ ಕಿಡಿಕಾರಿದ್ದಾರೆ.`ಜಾಹೀರಾತು ವಿಭಾಗಕ್ಕೆ ಸಾಮಾನ್ಯವಾಗಿ ಇತರ ಇಲಾಖೆಗಳಿಂದ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗುತ್ತದೆ. ಆದರೆ, ಅಲ್ಲಿ ಹುದ್ದೆ ಗಿಟ್ಟಿಸಿದವರು ಬಿಬಿಎಂಪಿ ಹಿತಾಸಕ್ತಿಗೆ ದುಡಿಯದೆ ಪರರಿಗೆ ಲಾಭ ಮಾಡಿಕೊಡಲು ಯತ್ನಿಸುತ್ತಾರೆ. ಅಂಥವರಿಗೆ ಇದುವರೆಗೆ ಯಾವುದೇ ಶಿಕ್ಷೆ ಆಗಿಲ್ಲ' ಎಂದು ಅಸಮಾಧಾನ ಹೊರಹಾಕಿದ್ದಾರೆ.`ಮೇಯರ್ ಅವರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರನ್ನು ತೀವ್ರವಾದ ಭ್ರಷ್ಟಾಚಾರದ ಆರೋಪದ ಮೇಲೆ ಅಲ್ಲಿಂದ ಎತ್ತಂಗಡಿ ಮಾಡಲಾಗಿತ್ತು. ಅದೇ ಅಧಿಕಾರಿ ಪ್ರಬಲವಾದ ರಾಜಕೀಯ ಒತ್ತಡ ತಂದು ಜಾಹೀರಾತು ವಿಭಾಗಕ್ಕೆ ವರ್ಗಾವಣೆ ಪಡೆದರು. ಇದು ಇಲಾಖೆಯನ್ನು ಸುಸ್ಥಿತಿಗೆ ತರುವ ಪ್ರಯತ್ನಗಳಲ್ಲಿ ಇಂತಹ ಸನ್ನಿವೇಶಗಳು ಹಿನ್ನಡೆಯಾಗಿದೆ' ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.`ಬಿಬಿಎಂಪಿ ವ್ಯಾಪ್ತಿಗೆ ಸೇರಿದ ಎಲ್ಲ ಹೋರ್ಡಿಂಗ್‌ಗಳನ್ನು ಇನ್ನುಮುಂದೆ ಸಾರ್ವಜನಿಕ ಹರಾಜು ಪ್ರಕ್ರಿಯೆ ಮೂಲಕ ನೀಡಲಾಗುವುದು' ಎಂದು ಸ್ಪಷ್ಟಪಡಿಸಿರುವ ಅವರು, `ಬಸ್ ತಂಗುದಾಣಗಳೂ ಸೇರಿದಂತೆ ಎಲ್ಲೆಡೆ ಹಾಕಿರುವ ಸರ್ಕಾರಿ ಜಾಹೀರಾತುಗಳಿಗೆ ಆಯಾ ಇಲಾಖೆಗಳಿಂದ ಬರಬೇಕಾದ ಬಾಕಿಯನ್ನು ತಕ್ಷಣ ವಸೂಲಿ ಮಾಡಬೇಕು' ಎಂದು ಆದೇಶ ಹೊರಡಿಸಿದ್ದಾರೆ.`ಪ್ರತಿ ವಲಯದಲ್ಲಿ ಎಷ್ಟು ಜಾಹೀರಾತು ಫಲಕಗಳಿವೆ, ಯಾವ ಅಳತೆಯ ಫಲಕಗಳು ಇವೆ, ಯಾವ ಉದ್ದೇಶಕ್ಕೆ ಅವುಗಳನ್ನು ಬಳಕೆ ಮಾಡಲಾಗಿದೆ, ದೀಪದ ವ್ಯವಸ್ಥೆ ಇದೆಯೊ, ಇಲ್ಲವೊ, ಅಧಿಕೃತ ಅನುಮತಿ ಪಡೆಯಲಾಗಿದೆಯೇ ಎನ್ನುವ ಮಾಹಿತಿಯನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಮಾದರಿಯಲ್ಲಿ ಸಿದ್ಧಪಡಿಸಿ ಕೊಡಬೇಕು' ಎಂದು ಸೂಚಿಸಿದ್ದಾರೆ.

`ಅನಧಿಕೃತ ಫಲಕ ಹಾಕಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು' ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)