ಜಿಂಕೆ ದಾಳಿಗೆ ಹೆಸರು ಬೆಳೆ ಹಾಳು

ಭಾನುವಾರ, ಜೂಲೈ 21, 2019
27 °C

ಜಿಂಕೆ ದಾಳಿಗೆ ಹೆಸರು ಬೆಳೆ ಹಾಳು

Published:
Updated:

ಲಕ್ಷ್ಮೇಶ್ವರ: ಅರಣ್ಯ ಪ್ರದೇಶಗಳಲ್ಲಿ ಆನೆಗಳ ದಾಳಿಗೆ ರೈತರ ಬೆಳೆ ನಷ್ಟವಾಗುತ್ತಿದ್ದರೆ ಬಯಲು ಸೀಮೆಯಲ್ಲಿ ಜಿಂಕೆಗಳ ಹಾವಳಿಗೆ ರೈತನ ಫಸಲು ಹಾಳಾಗುತ್ತಿದೆ. ಸಮೀಪದ ಅಡರಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಡರಕಟ್ಟಿ, ಹರದಗಟ್ಟಿ, ಕೊಂಡಿಕೊಪ್ಪ ಗ್ರಾಮಗಳಲ್ಲಿ ಜಿಂಕೆಗಳ ಹಾವಳಿ ವಿಪರೀತವಾಗಿದ್ದು ಇದೀಗ ಹೆಸರು ಬೆಳೆ ಜಿಂಕೆ ದಾಳಿಗೆ ತುತ್ತಾಗುತ್ತಿದ್ದು ರೈತರನ್ನು ಕಂಗೆಡಿಸಿದೆ.ಈ ಭಾಗದಲ್ಲಿ ಜಿಂಕೆಗಳು ಹಿಂಡು ಹಿಂಡಾಗಿ ಅಡ್ಡಾಡುವುದು  ಸಾಮಾನ್ಯ. ಬೆಳಿಗ್ಗೆ ರೈತರು ಹೊಲಕ್ಕೆ ಹೋಗುವ ಮುನ್ನ ಹಾಗೂ ಅವರು ಮನೆಗೆ ಬಂದ ನಂತರ ಹೊಲಗಳಿಗೆ ಜಿಂಕೆಗಳ ಹಿಂಡು ದಾಳಿ ಇಡುತ್ತಿದ್ದು ಇನ್ನೇನು ಕಾಳು ಕಟ್ಟುವ ಹಂತದಲ್ಲಿರುವ ಹೆಸರು ಬೇಳೆಯ ಎಳೆ ಕಾಯಿಗಳನ್ನು ಉದುರಿಸುತ್ತಿವೆ.ಗೊಂಚಲು ಗೊಂಚಲಾಗಿರುವ ಎಳೆ ಕಾಯಿಗಳು ಜಿಂಕೆಗಳ ಕಾಲುಗಳಿಗೆ ಸಿಲುಕಿ ಉದುರಿ ಬೀಳುತ್ತಿವೆ. ಹೀಗಾಗಿ ಕಾಳುಕಟ್ಟುವ ಮೊದಲೇ ಹೆಸರು ಕಾಯಿಗಳು ನೆಲದ ಪಾಲಾಗುತ್ತಿದ್ದು ಇಳುವರಿಯಲ್ಲಿ ಭಾರಿ ಕುಂಠಿತವಾಗುವ ಭಯದಿಂದ ರೈತರನ್ನು ಚಿಂತೆಗೀಡು ಮಾಡಿದೆ. ಒಂದೆಡೆ ರಸ ಹೀರುವ ಕೀಟ ರೋಗದಿಂದ ಹೆಸರು ಬೆಳೆ ಹಾಳಾಗುತ್ತಿದ್ದರೆ ಮತ್ತೊಂದೆಡೆ ಜಿಂಕೆಗಳ ಕಾಟಕ್ಕೆ ಬೆಳೆ ನಷ್ಟವಾಗುತ್ತಿದ್ದು ಇದರಿಂದಾಗಿ ಹೆಸರು ಬಿತ್ತನೆ ಮಾಡಿರುವ ರೈತರು ನಲುಗುತ್ತಿದ್ದಾರೆ.`ಈ ವರ್ಷ ಮದ್ಲ ಮಳಿ ಇಲ್ದ ಬೆಳಿ ಸರಿಯಾಗಿಲ್ಲ. ಇಂಥದ್ದರಾಗ ಈಗ ಹೆಸರು ಕಾಯಿಗಳನ್ನು ಚಿಗರಿಗಳು ಹಾಳು ಮಾಡುತ್ತಿದ್ದು ಹೊಲ್ದಾನ ಅರ್ಧ ಹೆಸರ ಕಾಯಿ ಉದುರಿ ಬಿದ್ದಾವು' ಎಂದು ಅಡರಕಟ್ಟಿ ಗ್ರಾಮದ ರೈತ ಪ್ರಕಾಶ ಶಿರಹಟ್ಟಿ ನೋವಿನಿಂದ ಹೇಳುತ್ತಾರೆ. ಕೇವಲ ಜಿಂಕೆಗಳಷ್ಟೆ ಅಲ್ಲದೆ ಈ ಭಾಗದಲ್ಲಿ ಮಂಗಗಳ ಕಾಟವೂ ಬಹಳವಾಗಿದ್ದು ಕನಿಷ್ಠ 100-200 ಮಂಗಗಳು ಹೊಲಕ್ಕೆ ಬಂದು ಬೆಳೆಯನ್ನು ನಾಶ ಮಾಡುತ್ತಿವೆ ಎಂದು ಶಿರಹಟ್ಟಿ ರೈತರು ಹೇಳುತ್ತಾರೆ.ಸಾಲ ಸೋಲ ಮಾಡಿ ಸಾವಿರಾರು ರೂಪಾಯಿ ಖರ್ಚಿನಲ್ಲಿ ಕಷ್ಟಪಟ್ಟು ಬೆಳೆ ಬೆಳೆದಿರುವ ರೈತರು ಜಿಂಕೆಗಳ ಹಾವಳಿಗೆ ತತ್ತರಿಸಿದ್ದಾರೆ. ಅರಣ್ಯ ಇಲಾಖೆ ಜಿಂಕೆಗಳ ಹಾವಳಿ ತಪ್ಪಿಸಲು ರೈತರಿಗೆ ಸೂಕ್ತ ಸಲಹೆ ನೀಡುವ ಅಗತ್ಯ ಇದ್ದು ಈ ನಿಟ್ಟಿನಲ್ಲಿ ಅರಣ್ಯಾಧಿಕಾರಿಗಳು ಕ್ರಮಕೈಗೊಳ್ಳುವ ಅವಶ್ಯಕತೆ ಇದೆ.

-ನಾಗರಾಜ ಹಣಗಿ .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry