ಮಂಗಳವಾರ, ನವೆಂಬರ್ 12, 2019
27 °C

ಜಿಂಕೆ ಸಾವು: ಆರೋಪಿ ಬಂಧನ

Published:
Updated:

ಕೊಳ್ಳೇಗಾಲ: ಯೂರಿಯಾ ಬೆರೆಸಿದ್ದ ಕೆರೆಯ ನೀರನ್ನು ಕುಡಿದ ಪರಿಣಾಮ ಜಿಂಕೆಯೊಂದು ಸಾವಿಗೀಡಾದ ಘಟನೆ ತಾಲ್ಲೂಕಿನ ಕೆಂಚಯ್ಯನದೊಡ್ಡಿ ಕೆರೆಯಲ್ಲಿ ಗುರುವಾರ ರಾತ್ರಿ ನಡೆದಿದೆ.ಕೆಂಚಯ್ಯನದೊಡ್ಡಿ ತೋಟದ ಮನೆವಾಸಿ ರಾಮಚಂದ್ರ ನರಸಿಂಹ ಅವರನ್ನು ಜಿಂಕೆ ಕೊಂದ ಆರೋಪದಡಿ ಬಂಧಿಸಲಾಗಿದೆ. ತಾಲ್ಲೂಕಿನ ಕೆಂಚಯ್ಯನದೊಡ್ಡಿ  ಗ್ರಾಮದ ಅರಣ್ಯದಂಚಿನಲ್ಲಿರುವ ಕೆರೆಗೆ ಜಿಂಕೆಗಳು ನೀರು ಕುಡಿಯಲು ಬರುವುದನ್ನು ತಿಳಿದ ದುಷ್ಕರ್ಮಿಗಳ ತಂಡವೊಂದು ಕೆರೆಗೆ ಯೂರಿಯಾ ಸುರಿದಿದೆ. ಈ ನೀರನ್ನು ಕುಡಿದ ಜಿಂಕೆ ಸಾವನ್ನಪ್ಪಿದೆ.ಗ್ರಾಮದ ವನಪಾಲಕ ಈ ದುಷ್ಕೃತ್ಯದ ಬಗ್ಗೆ ಅನುಮಾನಗೊಂಡು ಆರೋಪಿಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಎಸಿಎಫ್ ರವಿಶಂಕರ್, ಆರ್‌ಎಫ್‌ಒ ಲಕ್ಷ್ಮಿಕಾಂತ್ ಹಾಗೂ ವನಪಾಲಕ ರವಿಕುಮಾರ್ ಅವರು ಶುಕ್ರವಾರ ಮೃತ ಜಿಂಕೆಯ ಪಂಚನಾಮೆ ನಡೆಸಿದರು.ಈ ಸಂಬಂಧ ಆರೋಪಿಯನ್ನು ತನಿಖೆಗೆ ಒಳಪಡಿಸಿದಾಗ ಮತ್ತಿಬ್ಬರ ಜೊತೆ ಸೇರಿ ಈ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಈ ಸಂಬಂಧ ದೂರು ದಾಖಲಿಸಿಕೊಂಡಿದ್ದಾರೆ.

ಗ್ರಾಮದ ಬಳಿ ಕಾಡಾನೆ ಹಿಂಡು: ಆತಂಕ

ಕೊಳ್ಳೇಗಾಲ: ತಾಲ್ಲೂಕಿನ ಚಿಕ್ಕಲ್ಲೂರು ಲಿಂಗಮ್ಮನಕೆರೆ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ರೈತರು ಆತಂಕಕ್ಕೀಡಾಗಿದ್ದಾರೆ.

ಕಳೆದ 3 ದಿನಗಳಿಂದ 6 ಆನೆಗಳ ಹಿಂಡು ಚಿಕ್ಕಲ್ಲೂರು ಸುತ್ತಮುತ್ತ ಜಮೀನುಗಳಲ್ಲಿ ಬೀಡುಬಿಟ್ಟಿರುವುದರಿಂದ ಜನತೆ ಭಯಬೀತರಾಗಿದ್ದಾರೆ.ಡಿಎಫ್‌ಒ ಜಾವಿದ್ ಮಮ್ತಾಜ್ ಮಾತನಾಡಿ, ಈಗಾಗಲೇ ಆನೆಗಳು ಗ್ರಾಮಗಳ ಒಳಗೆ ಪ್ರವೇಶಿಸದಂತೆ ತಡೆಯಲು ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಆನೆಗಳನ್ನು ಅರಣ್ಯಕ್ಕೆ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)