ಬುಧವಾರ, ಮೇ 12, 2021
26 °C

ಜಿಂದಾಲ್- ಬಿಎಸ್‌ವೈ ವ್ಯವಹಾರ: ಮಾಹಿತಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಸದಸ್ಯರ ಸಂಸ್ಥೆಗಳು ಮತ್ತು ಜಿಂದಾಲ್ ಸಮೂಹದ ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ ನಡುವೆ ನಡೆದಿರುವ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿಗಳನ್ನು ಮಂಗಳವಾರ ಸಂಜೆಯೊಳಗೆ ಸಲ್ಲಿಸುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಿದೆ.ಧಾರವಾಡದ ಸಮಾಜ ಪರಿವರ್ತನ ಸಮುದಾಯದ (ಎಸ್‌ಪಿಎಸ್) ಹಿರಿಯ ಸಲಹೆಗಾರ ಎಸ್.ಆರ್.ಹಿರೇಮಠ ಅವರು ಸಲ್ಲಿಸಿರುವ ಮಧ್ಯಂತರ ಅರ್ಜಿಯ ಹಿನ್ನೆಲೆಯಲ್ಲಿ ಸಿಇಸಿ ಸದಸ್ಯ ಕಾರ್ಯದರ್ಶಿ ಎಂ.ಕೆ.ಜೀವರಜ್ಕ ಅವರು ಶುಕ್ರವಾರ (ಏಪ್ರಿಲ್ 13) ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅವರಿಗೆ ಪತ್ರ ಬರೆದಿದ್ದಾರೆ.ಐದು ಪ್ರಮುಖ ಪ್ರಶ್ನೆಗಳನ್ನು ಪತ್ರದಲ್ಲಿ ಪ್ರಸ್ತಾಪಿಸಿರುವ ಅವರು, ಅವುಗಳಿಗೆ ಉತ್ತರ ಮತ್ತು ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ನಿರ್ದೇಶನ ನೀಡಿದ್ದಾರೆ.ಕೃಷ್ಣರಾಜಪುರ ಹೋಬಳಿಯ ರಾಚೇನಹಳ್ಳಿಯ 1.02 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡ ನಿರ್ಣಯ ಮತ್ತು ಈ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟ ಅವಧಿಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಹುದ್ದೆಯಲ್ಲಿ ಯಾರಿದ್ದರು ಎಂಬ ಪ್ರಶ್ನೆಯನ್ನು ಸಿಇಸಿ ಸರ್ಕಾರದ ಮುಂದಿಟ್ಟಿದೆ.ಈ ಭೂಮಿಯನ್ನು ನಂತರ ಮೂಲ ಮಾಲೀಕರಿಂದ ಯಾರು ಖರೀದಿಸಿದರು? ಅವರು ಯಾರಿಗೆ ಮಾರಿದರು? ಯಾವ ಅವಧಿಯಲ್ಲಿ ಭೂ ಪರಿವರ್ತನೆ ಆದೇಶ ಹೊರಡಿಸಲಾಯಿತು? ಎಂಬ ಪ್ರಶ್ನೆಗಳೂ ಪತ್ರದಲ್ಲಿವೆ.ರಾಚೇನಹಳ್ಳಿಯ ಭೂಮಿಯನ್ನು ಮೂಲ ಮಾಲೀಕರು ಯಾವ ದರಕ್ಕೆ ಮಾರಾಟ ಮಾಡಿದರು? ಅದನ್ನು ಖರೀದಿಸಿದವರು ಯಾವ ದರಕ್ಕೆ ಬೇರೊಬ್ಬರಿಗೆ ಮಾರಿದರು? ಈ ಎಲ್ಲ ಸಂದರ್ಭಗಳಲ್ಲಿ ಭೂಮಿಯ ಮಾರ್ಗದರ್ಶಿ ದರ ಎಷ್ಟಿತ್ತು? ಾರಾಟ ಮತ್ತು ಖರೀದಿ ಪ್ರಕ್ರಿಯೆಗಳು ನಡೆಯುವಾಗ ಭೂಮಿಯ ಮಾಲೀಕತ್ವ ಯಾರ ಬಳಿ ಇತ್ತು ಎಂದೂ ಸಿಇಸಿ ಸರ್ಕಾರವನ್ನು ಕೇಳಿದೆ ಎಂದು ಮೂಲಗಳು ತಿಳಿಸಿವೆ.`ಮೂಲ ಮಾಲೀಕರಿಂದ ಕೇವಲ  20 ಲಕ್ಷ ರೂಪಾಯಿಗೆ 1.02 ಎಕರೆ ಭೂಮಿಯನ್ನು ಖರೀದಿಸಿದ ಯಡಿಯೂರಪ್ಪ ಅವರ ಪುತ್ರರು ಮತ್ತು ಅಳಿಯ ಅದನ್ನು ಸೌತ್ ವೆಸ್ಟ್ ಕಂಪೆನಿಗೆ 20 ಕೋಟಿ ರೂಪಾಯಿಗೆ ಮಾರಿದ್ದರು.ಜಿಂದಾಲ್ ಗಣಿ ಕಂಪೆನಿಗೆ ಅನುಕೂಲ ಮಾಡಿಕೊಡುವ ಸಂಬಂಧ ದೊಡ್ಡ ಮೊತ್ತದ ಹಣವನ್ನು ಭೂ ವ್ಯವಹಾರದ ನೆಪದಲ್ಲಿ ಪಡೆಯಲಾಗಿತ್ತು~ ಎಂದು ಹಿರೇಮಠ ದೂರಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವಂತೆಯೂ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.ಈ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಸಿಇಸಿಗೆ ಆದೇಶಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.