ಶನಿವಾರ, ಮೇ 28, 2022
26 °C
ಕ್ರಿಕೆಟ್: ಜುಲೈ 24ರಿಂದ ಏಕದಿನ ಸರಣಿ

ಜಿಂಬಾಬ್ವೆಗೆ ತೆರಳಿದ ಭಾರತ ತಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ ಸರಣಿ ಆಡಲು 15 ಆಟಗಾರರನ್ನು ಒಳಗೊಂಡ ಭಾರತ ತಂಡ ಭಾನುವಾರ ಜಿಂಬಾಬ್ವೆ ಪ್ರವಾಸ ಬೆಳೆಸಿದೆ. ಜುಲೈ 24 ರಿಂದ ಆಗಸ್ಟ್ ಮೂರರವರೆಗೆ ನಡೆಯಲಿರುವ ಐದು ಪಂದ್ಯಗಳ ಸರಣಿಯಲ್ಲಿ, ಭಾರತ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ.ಭಾರತ ತಂಡ ಮೂರು ವರ್ಷಗಳ ಬಳಿಕ ಈ ದೇಶದ ಪ್ರವಾಸಕೈಗೊಂಡಿದ್ದು, ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ಬಿಸಿಸಿಐ ಆಯ್ಕೆ ಮಂಡಳಿ ವಿಶ್ರಾಂತಿ ನೀಡಿದೆ. ದೋನಿ ಮಾತ್ರವಲ್ಲದೇ ವೇಗಿಗಳಾದ ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್ ಹಾಗೂ ಉಮೇಶ್ ಯಾದವ್ ಮತ್ತು ಆಫ್ ಸ್ಪಿನ್ನರ್ ಆರ್. ಅಶ್ವಿನ್ ಅವರಿಗೂ ವಿಶ್ರಾಂತಿ ನೀಡಲಾಗಿದೆ.2010ರಲ್ಲಿ ಸುರೇಶ್ ರೈನಾ ನೇತೃತ್ವದ ಭಾರತ ತಂಡ ಜಿಂಬಾಬ್ವೆಯಲ್ಲಿ ತ್ರಿಕೋನ ಏಕದಿನ ಸರಣಿ ಆಡಿತ್ತು. ಆದರೆ ಫೈನಲ್‌ಗೆ ತಲುಪುವಲ್ಲಿ ಎಡವಿತ್ತು. ರೈನಾ ಸೇರಿದಂತೆ ಆ ತಂಡದಲ್ಲಿದ್ದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ರೋಹಿತ್ ಶರ್ಮ ಹಾಗೂ ಆರ್.ವಿನಯ್ ಕುಮಾರ್ ಪ್ರಸಕ್ತ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ.ತಂಡ ಹೀಗಿದೆ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ರೋಹಿತ್ ಶರ್ಮ, ದಿನೇಶ್ ಕಾರ್ತಿಕ್, ಚೇತೇಶ್ವರ ಪೂಜಾರ, ಸುರೇಶ್ ರೈನಾ, ಅಂಬಟಿ ರಾಯುಡು, ಅಜಿಂಕ್ಯಾ ರಹಾನೆ, ರವೀಂದ್ರ ಜಡೇಜ, ಅಮಿತ್ ಮಿಶ್ರಾ, ಪರ್ವೇಜ್ ರಸೂಲ್, ಮೊಹಮ್ಮದ್ ಶಮಿ, ಆರ್.ವಿನಯ್ ಕುಮಾರ್, ಜೈದೇವ್ ಉನಾದ್ಕತ್ ಹಾಗೂ ಮೋಹಿತ್ ಶರ್ಮ.ಪಂದ್ಯಗಳ ವೇಳಾ ಪಟ್ಟಿ ಇಂತಿದೆ: ಮೊದಲ ಮೂರು ಪಂದ್ಯಗಳು (ಜುಲೈ 24, 26 ಹಾಗೂ 28) ಹರಾರೆಯಲ್ಲಿ ಹಾಗೂ ಉಳಿದೆರಡು ಪಂದ್ಯಗಳು (ಜುಲೈ 31 ಹಾಗೂ ಆಗಸ್ಟ್ 3) ಬುಲವಾಯೊದಲ್ಲಿ ನಡೆಯಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.