ಜಿಎಂಆರ್ ಪರ ತೀರ್ಪಿಗೆ ಆಕ್ಷೇಪ

7
ಭಾರತದ ಕಂಪೆನಿಗೆ ಮಾಲೆ ವಿಮಾನ ನಿಲ್ದಾಣ ನವೀಕರಣ ಕಾಮಗಾರಿ

ಜಿಎಂಆರ್ ಪರ ತೀರ್ಪಿಗೆ ಆಕ್ಷೇಪ

Published:
Updated:

ಸಿಂಗಪುರ/ ಮಾಲೆ (ಪಿಟಿಐ): ಭಾರತ ಮೂಲದ ನಿರ್ಮಾಣ ಕಂಪೆನಿ `ಜಿಎಂಆರ್'ಗೆ ಮಂಜೂರಾಗಿದ್ದ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣದ ಗುತ್ತಿಗೆ ರದ್ದು ಮಾಡಿದ ಮಾಲ್ಡೀವ್ಸ್ ಸರ್ಕಾರದ ಆದೇಶಕ್ಕೆ ಸಿಂಗಪುರದ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

ಆದರೆ ಸಿಂಗಪುರ ಕೋರ್ಟ್ ತೀರ್ಪನ್ನು ಗೌರವಿಸಲು ಮಾಲ್ಡೀವ್ಸ್ ಸರ್ಕಾರ ನಿರಾಕರಿಸಿದ ಕಾರಣ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸಿದೆ. ಮಾಲ್ಡೀವ್ಸ್‌ನ ಹಟಮಾರಿ ಧೋರಣೆಯನ್ನು ಭಾರತ ಸರ್ಕಾರ ತೀವ್ರವಾಗಿ ಪರಿಗಣಿಸಿದೆ. ಆ ದೇಶಕ್ಕೆ ನೀಡುವ ನೆರವು ಸ್ಥಗಿತಗೊಳಿಸಲು ಆಲೋಚಿಸುತ್ತಿದೆ.

ಮಾಲ್ಡೀವ್ಸ್ ಸರ್ಕಾರದ ನಿರ್ಧಾರದ ಹಿಂದೆ `ಚೀನದ ಬಗ್ಗೆ ಸಹಾನುಭೂತಿ ಹೊಂದಿರುವ ಶಕ್ತಿಗಳ ಕೈವಾಡವಿದೆ' ಎಂಬ ಅನುಮಾನಗಳು ಕೇಳಿಬಂದಿವೆ.  ಮಾಲ್ಡೀವ್ಸ್‌ನ ರಾಜಧಾನಿ ಮಾಲೆಯಲ್ಲಿರುವ `ಇಬ್ರಾಹಿಂ ನಾಸೀರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ'ದ ನವೀಕರಣದ ಗುತ್ತಿಗೆಯನ್ನು 2010ರಲ್ಲಿ (ಈಗ ಪದಚ್ಯುತರಾಗಿರುವ ಅಧ್ಯಕ್ಷ ಮೊಹಮದ್ ನಸೀದ್ ಅವರ ಸರ್ಕಾರ) ಭಾರತದ ನಿರ್ಮಾಣ ವಲಯದ ಬಹುದೊಡ್ಡ ಕಂಪೆನಿ `ಜಿಎಂಆರ್' ಪಡೆದಿತ್ತು.ಇದರಲ್ಲಿ ಹೂಡಲಾಗುತ್ತಿರುವ ಬಂಡವಾಳದ ಮೊತ್ತ 50 ಕೋಟಿ ಡಾಲರ್ (ಸುಮಾರು ರೂ 2750 ಕೋಟಿ).

`ಜಿಎಂಆರ್- ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರೈವೇಟ್ ಲಿಮಿಟೆಡ್ (ಜಿಎಂಐಎಎಲ್) ಹೆಸರಿನಲ್ಲಿ ಕಾಮಗಾರಿ ಆರಂಭಿಸಿತ್ತು. ವಿವಾದಾತ್ಮಕವಾದ ಈ ಯೋಜನೆಯನ್ನು ಆಂತರಿಕ ರಾಜಕೀಯ ಒತ್ತಡದ ಕಾರಣ ಮಾಲ್ಡೀವ್ಸ್ ಸರ್ಕಾರ ಏಕಪಕ್ಷೀಯವಾಗಿ ರದ್ದು ಮಾಡಿತ್ತು. ಇದನ್ನು `ಜಿಎಂಐಎಎಲ್' ಸಿಂಗಪುರದ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಭಿನ್ನಾಭಿಪ್ರಾಯ ಉಂಟಾದರೆ ಅದನ್ನು ಸಿಂಗಪುರ ಇಲ್ಲವೇ ಬ್ರಿಟನ್ನಿನ ಕಾನೂನಿನಂತೆ ಬಗೆಹರಿಸಿಕೊಳ್ಳಬೇಕು ಎಂಬ ಕರಾರು ಗುತ್ತಿಗೆಯಲ್ಲಿ ಇದೆ. ಈ ಕಾರಣದಿಂದ `ಜಿಎಂಐಎಎಲ್' ಸಿಂಗಪುರ ಕೋರ್ಟ್‌ಗೆ ಮೊರೆ ಹೋಗಿತ್ತು.

ಕಾಮಗಾರಿ ಅಬಾಧಿತ: `ಹಣಕಾಸು ಮತ್ತು ಖಜಾನೆ ಇಲಾಖೆ ಹೊರಡಿಸಿದ್ದ ಆದೇಶದಂತೆ ಮಾಲ್ಡೀವ್ಸ್ ವಿಮಾನ ನಿಲ್ದಾಣ ಕಂಪೆನಿ ಲಿಮಿಟೆಡ್ (ಎಂಎಸಿಎಲ್) ನವೆಂಬರ್ 27ರಂದು ಗುತ್ತಿಗೆಯನ್ನು ರದ್ದು ಪಡಿಸಿತ್ತು. ಇದಕ್ಕೆ  ಹೈಕೋರ್ಟ್ ಈಗ ತಡೆ ನೀಡಿದೆ. ಇದರಿಂದ ಯೋಜನೆಯ ಕಾಮಗಾರಿ ಮುಂದುವರಿಸಲು ಯಾವುದೇ ತೊಂದರೆ ಇಲ್ಲ' ಎಂದು `ಜಿಎಂಆರ್' ಮುಖ್ಯಕಾರ್ಯನಿರ್ವಹಣಾಧಿಕಾರಿ (ಸಿಇಒ) ಆ್ಯಂಡ್ರೊ ಹ್ಯಾರಿಸನ್ ಹೇಳಿದ್ದಾರೆ.

ಒಪ್ಪುವುದಿಲ್ಲ: ಆದರೆ `ಸಾರ್ವಭೌಮ ರಾಷ್ಟ್ರಕ್ಕೆ ಇಂತಹ ತಡೆಯಾಜ್ಞೆ ನೀಡಲಾಗದು. ಗುತ್ತಿಗೆ ರದ್ದತಿ ಆದೇಶವನ್ನು ಹಿಂಪಡೆಯಲಾಗದು ಮತ್ತು ಈ ವಿಚಾರದಲ್ಲಿ ಯಾವುದೇ ಮಾತುಕತೆ ಕೂಡ ಸಾಧ್ಯವಿಲ್ಲ' ಎಂದು ಮಾಲ್ಡೀವ್ಸ್ ಸರ್ಕಾರ ಪ್ರತಿಕ್ರಿಯಿಸಿದೆ.

`ಜಿಎಂಆರ್'ಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಮಧ್ಯಸ್ಥಿಕೆದಾರರ ಮೂಲಕ ಮಾಲ್ಡೀವ್ಸ್ ಸರ್ಕಾರ ಆರಂಭಿಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry