`ಜಿಎಎಆರ್' ಜಾರಿ 2ವರ್ಷ ಮುಂದಕ್ಕೆ

7
ತೆರಿಗೆ ವಂಚನೆ ತಡೆಗೆ ನಿಬಂಧನೆ ಅಗತ್ಯ; ಚಿದಂಬರಂ ಸಮರ್ಥನೆ

`ಜಿಎಎಆರ್' ಜಾರಿ 2ವರ್ಷ ಮುಂದಕ್ಕೆ

Published:
Updated:
`ಜಿಎಎಆರ್' ಜಾರಿ 2ವರ್ಷ ಮುಂದಕ್ಕೆ

ನವದೆಹಲಿ (ಪಿಟಿಐ): ವಿವಾದಿತ `ತೆರಿಗೆ ತಪ್ಪಿಸುವ ಪ್ರವೃತ್ತಿ ತಡೆ ಸಾಮಾನ್ಯ ನಿಯಮ'(ಜಿಎಎಆರ್) ಜಾರಿಯನ್ನು ಕೇಂದ್ರ ಸರ್ಕಾರ ಎರಡು ವರ್ಷಗಳ ಅವಧಿಗೆ ಮುಂದೂಡಿದೆ.2016ರ ಏಪ್ರಿಲ್ 1ರವರೆಗೆ `ಜಿಎಎಆರ್' ಜಾರಿ ಮುಂದೂಡಲಾಗಿದೆ ಎಂದು ಹಣಕಾಸು ಸಚಿವಾಲಯ ಸೋಮವಾರ ಸ್ಪಷ್ಟಪಡಿಸಿದೆ.

`ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಿದ ಬಳಿಕ ಆದಾಯ ತೆರಿಗೆ ಕಾಯ್ದೆ 10ಎ ಪರಿಚ್ಛೇದದ ನಿಬಂಧನೆಗಳ(ಜಿಎಎಆರ್) ಜಾರಿಯನ್ನು 2014ರ ಏ. 1ರಿಂದ 2016ರ ಏ. 1ಕ್ಕೆ ಮುಂದೂಡಿದ್ದೇವೆ' ಎಂದು ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಸೋಮವಾರ ಇಲ್ಲಿ ವರದಿಗಾರರಿಗೆ ತಿಳಿಸಿದರು.ಹಣಕಾಸು ಸಚಿವರಾಗಿದ್ದ ಪ್ರಣವ್ ಮುಖರ್ಜಿ 2012-13ನೇ ಸಾಲಿನ ಬಜೆಟ್‌ನಲ್ಲಿ `ಜಿಎಎಆರ್' ಜಾರಿ  ಪ್ರಕಟಿಸಿದ್ದರು. ಆ ಮೂಲಕ ಮಾರಿಷಸ್ ಸೇರಿದಂತೆ ವಿದೇಶಗಳಿಂದ ತೆರಿಗೆ ವಂಚಿಸಿ ದೇಶದ ಷೇರುಪೇಟೆಗೆ ಹರಿದು ಬರುವ ಬಂಡವಾಳವನ್ನು ನಿಯಂತ್ರಿಸುವುದಾಗಿ ಹೇಳಿದ್ದರು. ಆದರೆ, `ಜಿಎಎಆರ್' ಬಳಸಿ ತೆರಿಗೆ ಅಧಿಕಾರಿಗಳು ವಹಿವಾಟಿಗೆ ಅನಗತ್ಯ ತೊಂದರೆ ಕೊಡುತ್ತಾರೆ ಎಂದು ಹೂಡಿಕೆದಾರರು ತೀವ್ರವಾಗಿ ವಿರೋಧಿಸಿದ್ದರು. ಇದರಿಂದ ವಿದೇಶಿ ಸಾಂಸ್ಥಿಕ ಹೂಡಿಕೆ (ಎಫ್‌ಐಐ) ಕೂಡ ಗಣನೀಯವಾಗಿ ತಗ್ಗಲಿದೆ ಎಂಬ ಆತಂಕವನ್ನೂ ಮಾರುಕಟ್ಟೆ ತಜ್ಞರು ವ್ಯಕ್ತಪಡಿಸಿದ್ದರು. ಈಗ `ಜಿಎಎಆರ್' ಜಾರಿ ಮುಂದೂಡಿರುವ ಸರ್ಕಾರ, ಸಾಗರೋತ್ತರ ಹೂಡಿಕೆದಾರರಿಗೆ ದೊಡ್ಡ ಮಟ್ಟದಲ್ಲಿಯೇ ಸಮಾಧಾನ ಹೇಳಿದೆ.`ಜಿಎಎಆರ್' ಜಾರಿಗೆ ಸಂಬಂಧಿಸಿಹೂಡಿಕೆದಾರರ ಅಭಿಪ್ರಾಯ ಸಂಗ್ರಹಿಸಲು ಪ್ರಧಾನಿ ಮನಮೋಹನ್ ಸಿಂಗ್ ಜುಲೈನಲ್ಲಿ ತೆರಿಗೆ ತಜ್ಞ ಪಾರ್ಥಸಾರಥಿ ಶೋಮೆ ಅವರ ಅಧ್ಯಕ್ಷತೆಯಲ್ಲಿ  ಮೂವರು ತಜ್ಞರ ಸಮಿತಿ ರಚಿಸಿದ್ದರು.  ಸಮಿತಿ ವರದಿ ಅಧರಿಸಿ, `ಜಿಎಎಆರ್' ಜಾರಿ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಚಿದಂಬರಂ ಹೇಳಿದ್ದಾರೆ.ಹೂಡಿಕೆದಾರರ ಹಿತಾಸಕ್ತಿ ಮತ್ತು ವರಮಾನದ ನಡುವೆ ಸಮತೋಲನ ಕಾಯ್ದುಕೊಂಡು, ಯಾವುದೇ ಪಕ್ಷಪಾತವಿಲ್ಲದೆ, ಶೋಮೆ ಸಮಿತಿ ವರದಿಯಲ್ಲಿ ಕೆಲವು ತಿದ್ದುಪಡಿಗಳನ್ನು ಸರ್ಕಾರ ಮಾಡಿದೆ. ಇದಕ್ಕೆ ಮೂರು ತಿಂಗಳು 14 ದಿನ ತೆಗೆದುಕೊಳ್ಳಲಾಗಿದೆ. ಈಗಾಗಲೇ ಜಾರಿಗೊಂಡಿರುವ ಎರಡೂ ಬದಿಯಿಂದ ತೆರಿಗೆ ವಿಧಿಸುವುದನ್ನು ತಪ್ಪಿಸುವ ಒಪ್ಪಂದದ(ಡಿಟಿಎಎ) ನೈಜ ಫಲ ಲಭಿಸಬೇಕಾದರೆ `ಜಿಎಎಆರ್' ಜಾರಿ ಅಗತ್ಯ ಎಂದೂ ಚಿದಂಬರಂ ಸಮರ್ಥಿಸಿಕೊಂಡಿದ್ದಾರೆ.`ಜಿಎಎಆರ್' ಆತಂಕ ಬೇಡ

`ಜಿಎಎಆರ್' ಜಾರಿಯಿಂದ ದೇಶದ ಷೇರುಪೇಟೆಗೆ ಹರಿದು ಬರುತ್ತಿರುವ ಸಾಗರೋತ್ತರ ಹೂಡಿಕೆ ತಗ್ಗಲಿದೆ ಎಂಬ ಯಾವುದೇ ಆತಂಕ ಬೇಡ. ತೆರಿಗೆ ವಂಚಿಸುವ `ಎಫ್‌ಐಐ' ಪ್ರಕರಣಗಳನ್ನು ಮಾತ್ರ ಇದರ ವ್ಯಾಪ್ತಿಗೆ ತರಲಾಗುವುದು. ಅನಿವಾಸಿ ಭಾರತೀಯರು (ಎನ್‌ಆರ್‌ಐ) `ಜಿಎಎಆರ್' ನಿಬಂಧನಗಳಿಗೆ ಒಳಪಡುವುದಿಲ್ಲ.ಜತೆಗೆ 2010ರ ಆಗಸ್ಟ್ 30ಕ್ಕೂ ಮೊದಲು ಮಾಡಿರುವ ಹೂಡಿಕೆಗಳಿಗೆ ಈ ನಿಯಮಗಳು ಅನ್ವಯವಾಗುವುದಿಲ್ಲ. `ಜಿಎಎಆರ್' ಜಾರಿಯಿಂದ ಸರ್ಕಾರಕ್ಕೆರೂ.3,000 ಕೋಟಿತೆರಿಗೆ ವರಮಾನ ಬರಲಿದೆ. ಒಟ್ಟಾರೆ ಷೇರುಪೇಟೆ  ವಹಿವಾಟಿನಲ್ಲಿಯೂ ಪಾರದರ್ಶಕತೆ ತರಲು ಈ ನಿಬಂಧನೆಗಳ ಜಾರಿ ಅಗತ್ಯ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಪಾರ್ಥಸಾರಥಿ ಶೋಮೆ ಸಮಿತಿ `ಜಿಎಎಆರ್' ಜಾರಿಯನ್ನು ಕನಿಷ್ಠ ಮೂರು ವರ್ಷ ಮುಂದೂಡಬೇಕು ಎಂದು ಕೇಂದ್ರಕ್ಕೆ ಶಿಫಾರಸು ಮಾಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry