ಸೋಮವಾರ, ಮಾರ್ಚ್ 8, 2021
24 °C

ಜಿ.ಕೃಷ್ಣಪ್ಪಗೆ ‘ಉದಯಭಾನು ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿ.ಕೃಷ್ಣಪ್ಪಗೆ ‘ಉದಯಭಾನು ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ

ಬೆಂಗಳೂರು: ಉದಯಭಾನು ಕಲಾಸಂಘವು ನಗರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಮರ್ಶಕ ಡಾ.ಜಿ.ಕೃಷ್ಣಪ್ಪ ಅವರಿಗೆ ‘ಉದಯಭಾನು ಸಾಹಿತ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಜತೆಗೆ ಅವರ  ಪ್ರಬಂಧಗಳ ಸಂಕಲನ ‘ಕಾವ್ಯಶೋಧಕ’ ಕೃತಿಯನ್ನು ಬಿಡುಗಡೆ ಮಾಡಲಾಯಿತು.ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್‌.ಕೃಷ್ಣಯ್ಯ ಮಾತನಾಡಿ ‘ಮಾನಸಿಕವಾಗಿ, ಬೌದ್ಧಿಕ­ವಾಗಿ ಎತ್ತರದ ಆಕೃತಿ ಮತ್ತು ವ್ಯಕ್ತಿತ್ವ ಜಿ.ಕೃಷ್ಣಪ್ಪ. ಬೇಂದ್ರೆ ಕೃಷ್ಣಪ್ಪರೆಂದು ಜನರು ಪ್ರೀತಿಯಿಂದ ಕರೆಯುತ್ತಾರೆ. ಆ ಹೆಸರು ಅವರಿಗೆ ಅನ್ವರ್ಥವಾಗಿದೆ. ಬೇಂದ್ರೆ ಅವರ ಪ್ರತಿ ಪದಗಳಿಗೂ ಅರ್ಥವನ್ನು ಹೇಳಿದವರು’ ಎಂದರು.ವಿಮರ್ಶಕ ಬಸವರಾಜ ಕಲ್ಗುಡಿ ಮಾತನಾಡಿ, ‘ಜಿ.ಕೃಷ್ಣಪ್ಪ ಅವರು ತಮ್ಮ ಬದುಕಿನಲ್ಲಿ ಬೇಂದ್ರೆ ಅವರನ್ನು ಕಂಡುಕೊಂಡ ಬಗೆ ಅದ್ಭುತವಾಗಿದೆ. ಬೇಂದ್ರೆ ಅವರ ಸಮರಸವೇ ಜೀವನ ಎಂಬ ಮಾತಿನಂತೆ, ಕಷ್ಟ ಕಾರ್ಪಣ್ಯಗಳನ್ನು ನೀಗಿ ಬದುಕುವ ಕಲೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ’ ಎಂದರು.ಉದಯಭಾನು ಕಲಾ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಎಂ.ನರಸಿಂಹ, ‘ಬೇಂದ್ರೆಯವರ ಜೀವನ ಅಧ್ಯಯನ ಕೈಗೊಂಡು ಬೇಂದ್ರೆಯವರ ಕಾವ್ಯಗಳ ಪ್ರತಿ ಪದಗಳಿಗೆ ಅರ್ಥವನ್ನು ಹುಡುಕಿದ್ದಾರೆ’ ಎಂದರು.ಲೇಖಕ ಕೆ.ಸತ್ಯನಾರಾಯಣ, ‘ರಾಜ್ಯದ ಉದ್ದಗಲಕ್ಕೆ ನಾನಾ ಸ್ತರಗಳಲ್ಲಿ ಬೇಂದ್ರೆ ಅವರ ಪರಿಚಯ ಮಾಡಿಕೊಟ್ಟಿದ್ದಾರೆ. ಅವರಿಗೆ ಅವರೇ ಸ್ಫೂರ್ತಿಯುತವಾಗಿ, ಯಾವುದೇ ಸಾಂಸ್ಥಿಕ ಶಕ್ತಿಯಿಲ್ಲದೆ, ವೈಯಕ್ತಿಕವಾಗಿ ಮಾಡಿರುವ ಕೆಲಸವಿದು’ ಎಂದು ಹೇಳಿದರು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಜಿ.ಕೃಷ್ಣಪ್ಪ ಅವರು, ‘ಬೇಂದ್ರೆ ದೇಶೀಯ ಸೊಗಡಿನ ವರಕವಿ. ಅವರ ಕಾವ್ಯದ ಚಿಂತನೆಗೆ ಒಳಗಾಗಿದ್ದು ನನಗೆ ಒಲಿದು ಬಂದ ಭಾಗ್ಯವಾಗಿದೆ. ಅವರ ಕಾವ್ಯ­ಗಳನ್ನು ಓದುತ್ತ ಹೋದಂತೆ, ಅವುಗಳು ನನ್ನನ್ನು ಆವರಿಸುತ್ತ ಸಾಗಿದವು’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.