ಜಿಟಿಜಿಟಿ ಮಳೆ: ಜನಜೀವನ ಅಸ್ತವ್ಯಸ್ತ

ಶುಕ್ರವಾರ, ಜೂಲೈ 19, 2019
28 °C

ಜಿಟಿಜಿಟಿ ಮಳೆ: ಜನಜೀವನ ಅಸ್ತವ್ಯಸ್ತ

Published:
Updated:

ಸಿಂಧನೂರು: ಕೆಸರು ಗದ್ದೆಯಂತಾದ ರಸ್ತೆ, ಹೋಯ್ದಾಡಿಕೊಂಡು ಓಡಾಡುವ ವಾಹನಗಳು, ಸುಲಭ ಸಂಚಾರ ಸಾಧ್ಯವಾಗದೆ ಜಿಗಿದು-ಜಿಗಿದು ಗಟ್ಟಿನೆಲಕ್ಕೆ ಕಾಲಿಡುವ ಪಾದಚಾರಿ, ರಸ್ತೆ ಮಧ್ಯೆ ಬಿದ್ದ ಆಳದ ಕಂದಕಗಳು, ನಗರಸಭೆ, ಜನಪ್ರತಿನಿಧಿಗಳ ಹೆಸರಲ್ಲಿ ಕ್ಷಣ- ಕ್ಷಣಕ್ಕೂ ಗೋಳಿಡುವ ಜನ. ಇದು ಕಳೆದ ನಾಲ್ಕು ದಿನಗಳಿಂದ ನಗರದಲ್ಲಿ ಸುರಿಯುತ್ತಿರುವ ತುಂತುರು ಮಳೆಯ ಎಫೆಕ್ಟ್.ಗಂಗಾನಗರ, ಬಸವೇಶ್ವರ ನಗರ, ಎ.ಕೆ.ಗೋಪಾಲನಗರ, ಮಹೆಬೂಬ ಕಾಲೊನಿ, ಜನತಾ ಕಾಲೊನಿ, ಶರಣಬಸವೇಶ್ವರ ಕಾಲೊನಿ ಸೇರಿದಂತೆ ಎಲ್ಲ ವಾರ್ಡ್‌ಗಳಿಗೆ ಹೋಗುವ ರಸ್ತೆಗಳಲ್ಲಿ ಹಾಳಾಗಿದೆ. ಶಾಲಾ ಮಕ್ಕಳು ಶಾಲೆಗೆ ಹೋಗಲು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿ-   ವಿದ್ಯಾರ್ಥಿನಿಯರು ಶುಕ್ರವಾರ ಕಾಲೇಜಿಗೆ ಬಾರದಿರುವುದರಿಂದ ಪ್ರತಿಯೊಂದು ಕಾಲೇಜಿನಲ್ಲಿ ಹಾಜರಾತಿಯ ಪ್ರಮಾಣ ಶೇ.20ರಷ್ಟು ಮಾತ್ರ ಇತ್ತು ಎಂದು ಆಯಾ ಕಾಲೇಜು ಪ್ರಾಚಾರ್ಯರನ್ನು ಸಂಪರ್ಕಿಸಿದಾಗ ತಿಳಿದು ಬಂದಿದೆ.ತಾಲ್ಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿಯೂ ಸಿ.ಸಿ. ರಸ್ತೆಗಳಿವೆ. ಆದರೆ ನಗರದ ಹಳೆ ಬಡಾವಣೆಗಳಲ್ಲಿ ಹಾಸು ಬಂಡೆ, ಒಂದೆರಡು ವಾರ್ಡ್‌ಗಳಲ್ಲಿ ಕಾಂಕ್ರೀಟ್ ರಸ್ತೆ ಹೊರತುಪಡಿಸಿದರೆ ಯಾವುದೇ ಬಡಾವಣೆಗಳಲ್ಲಿ ಸಿಸಿ, ಮೆಟಲ್  ರಸ್ತೆಗಳಿಲ್ಲ. ಮಣ್ಣಿನ ರಸ್ತೆಗಳು ಜಿಟಿ-ಜಿಟಿ ಮಳೆಗೆ ಭಾಗಶಃ ಬತ್ತ ನಾಟಿಗೆ ಹದ ಮಾಡಿದ ಗದ್ದೆಗಳಂತಾಗಿವೆ.ಪ್ರತಿವರ್ಷ ಮಳೆಗಾಲದಲ್ಲಿ ಇದೇ ರೀತಿ ಜನರು ನರಕಯಾತನೆ ಅನುಭವಿಸುತ್ತಿದ್ದರೂ ನಗರಸಭೆ ಆಡಳಿತ ಮಂಡಳಿಯಾಗಲಿ, ಕ್ಷೇತ್ರದ ಶಾಸಕರಾಗಲಿ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿವಿಧ ವಾರ್ಡ್‌ಗಳ ನಿವಾಸಿಗಳಾದ ಜಾವೇದ್, ಜಹೀರುಲ್ಲಾ ಹಸನ್, ಶ್ರೀನಿವಾಸ, ಮಾಬುಸಾಬ, ಶರಣಪ್ಪ ಕೆಸರಟ್ಟಿ, ಶರಣಪ್ಪ ಮೆದಿಕನಾಳ ಮತ್ತಿತರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಿಂಧನೂರಿಗೆ ಕುಡಿಯುವ ನೀರು, ವಿದ್ಯುತ್ ದೀಪ, ಒಳರಸ್ತೆಗಳ ಸುಧಾರಣೆ, ಆಗಾಗ್ಗೆ ಚರಂಡಿ ಸ್ವಚ್ಛತೆ ಇವಿಷ್ಟು ಕೆಲಸ ಮಾಡಿದರೆ ಸಾಕು ಎನ್ನುತ್ತಾರೆ   ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry