ಶುಕ್ರವಾರ, ನವೆಂಬರ್ 15, 2019
23 °C

ಜಿಡಿಪಿ ಶೇ 6 `ಎಡಿಬಿ' ಭವಿಷ್ಯ

Published:
Updated:

ನವದೆಹಲಿ (ಪಿಟಿಐ): ಭಾರತದ ಆರ್ಥಿಕತೆಯು 2013-14ನೇ ಸಾಲಿನಲ್ಲಿ ಶೇ 6ರಷ್ಟು ಮತ್ತು 2014-15ನೇ ಸಾಲಿನಲ್ಲಿ ಶೇ 6.5ರಷ್ಟು ಪ್ರಗತಿ ದಾಖಲಿಸಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಹೇಳಿದೆ.ಇತ್ತೀಚಿನ ಆರ್ಥಿಕ ಸುಧಾರಣಾ ಕ್ರಮಗಳಿಂದ ಭಾರತದ ಒಟ್ಟಾರೆ ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಚೇತರಿಕೆ ಕಾಣುತ್ತಿದೆ. ರಫ್ತು ಚೇತರಿಸಿಕೊಂಡಿರುವುದರಿಂದ ವಿದೇಶಿ ವಿನಿಮಯ ಹರಿವು ಹೆಚ್ಚಿದ್ದು, ಚಾಲ್ತಿ ಖಾತೆ ಕೊರತೆ (ಸಿಎಡಿ) ಇಳಿಕೆಯಾಗಲಿದೆ. ಬಹುಬ್ರಾಂಡ್ ಚಿಲ್ಲರೆ ವಹಿವಾಟಿನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚುತ್ತಿದೆ. ಮೂಲಸೌಕರ್ಯ ವಲಯದ ಬೃಹತ್ ಯೋಜನೆಗಳು ಶೀಘ್ರವಾಗಿ ಇತ್ಯರ್ಥಗೊಳ್ಳಲು ಸರ್ಕಾರ ಕ್ರಮ ಕೈಗೊಂಡಿದೆ. ಈ ಸುಧಾರಣೆಗಳು ಆರ್ಥಿಕತೆಗೆ ಬಲ ತುಂಬಿವೆ ಎಂದು `ಎಡಿಬಿ ಆರ್ಥಿಕ ಮುನ್ನೋಟ' ವರದಿಯಲ್ಲಿ ಹೇಳಿದೆ.ಭಾರತದ ಆರ್ಥಿಕ ಮುನ್ನೋಟ ಸ್ಥಿರವಾಗಿದೆ. ಆದರೆ, ಮುಂಗಾರು, ವಿತ್ತೀಯ ಸೇರ್ಪಡೆ ಸಮಸ್ಯೆ, ಜಾಗತಿಕ ಅರ್ಥ ವ್ಯವಸ್ಥೆಯಲ್ಲಿನ ಅಸ್ಥಿರತೆ ವೃದ್ಧಿ ದರದ ಮೇಲೆ ಪ್ರಭಾವ ಬೀರಬಹುದು ಎಂದು ವಿಶ್ಲೇಷಿಸಿದೆ.2012-13ನೇ ಸಾಲಿನ `ಜಿಡಿಪಿ' ಅಂಕಿ ಅಂಶಗಳು ಇನ್ನೇನು ಪ್ರಕಟಗೊಳ್ಳಬೇಕಿದೆ.  ಕೃಷಿ ವಲಯದ ಕುಸಿತ, ಹಣದುಬ್ಬರ, ಬಡ್ಡಿ ದರ ಏರಿಕೆ ಮತ್ತು ತಯಾರಿಕಾ ವಲಯದ ಕಳಪೆ ಸಾಧನೆಯಿಂದ ಇದು ಕಳೆದ ಒಂದು ದಶಕದಲ್ಲೇ ಕನಿಷ್ಠ ಮಟ್ಟವಾದ    ಶೇ 5ಕ್ಕೆ  ಇಳಿಯಬಹುದು ಎಂದು `ಎಡಿಬಿ' ಅಂದಾಜು ಮಾಡಿದೆ.ಕೃಷಿ ಮತ್ತು ಕೈಗಾರಿಕಾ ಪ್ರಗತಿ ಕುಸಿದಿರುವುದೇ  ಭಾರತದ `ಜಿಡಿಪಿ' ಕುಸಿಯಲು ಪ್ರಮುಖ ಕಾರಣ. ಆರ್ಥಿಕ ನೀತಿ ನಿರೂಪಕರು ತಯಾರಿಕಾ ವಲಯಕ್ಕೆ ಉತ್ತೇಜನ ನೀಡುವ ಹೊಸ ಹೂಡಿಕೆಗಳನ್ನು ಆಕರ್ಷಿಸಬೇಕಿದೆ ಎಂದು `ಎಡಿಬಿ' ದೇಶೀಯ ಸಹಾಯಕ ನಿರ್ದೇಶಕ ನರಹರಿ ರಾವ್ ಅಭಿಪ್ರಾಯಪಟ್ಟಿದ್ದಾರೆ.ಸಹಜ ಮುಂಗಾರು ಲಭಿಸಿದರೆ ಮುಂದಿನ ಎರಡು ಹಣಕಾಸು ವರ್ಷಗಳಲ್ಲಿ ಭಾರತ ಉತ್ತಮ `ಜಿಡಿಪಿ' ದಾಖಲಿಸಲಿದೆ ಎಂದೂ `ಎಡಿಬಿ' ಹೇಳಿದೆ.ಹಣದುಬ್ಬರ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸರಕುಗಳ ಬೆಲೆ ಇಳಿಕೆಯಾದರೆ ಸಗಟು ಸೂಚ್ಯಂಕ ಆಧರಿಸಿದ ಹಣದುಬ್ಬರ ದರ (ಡಬ್ಲ್ಯುಪಿಐ) ಹಿತಕರ ಮಟ್ಟಕ್ಕೆ ತಗ್ಗಲಿದೆ ಎಂದು `ಎಡಿಬಿ' ವರದಿ ಹೇಳಿದೆ.2013-14ನೇ ಸಾಲಿನಲ್ಲಿ ಶೇ 7.2ರಷ್ಟು ಮತ್ತು 2014-15ನೇ ಸಾಲಿನಲ್ಲಿ      ಶೇ 6.8ರಷ್ಟು `ಡಬ್ಲ್ಯುಪಿಐ' ದಾಖಲಾಗುವ ನಿರೀಕ್ಷೆ ಇದೆ.  ಕೇಂದ್ರ ಸರ್ಕಾರ ವಿತ್ತೀಯ ಕೊರತೆ ಅಂತರವನ್ನು `ಜಿಡಿಪಿ'ಯ ಶೇ 4.8ಕ್ಕೆ ತಗ್ಗಿಸುವ ಗುರಿ ನಿಗದಿಪಡಿಸಿದೆ ಇದು ಉತ್ತಮ ಕ್ರಮ. ಸಬ್ಸಿಡಿ ಮತ್ತು ವಿತ್ತೀಯ ಕೊರತೆ ಇಳಿಕೆಯಾದರೆ, ದೇಶೀಯ ಉಳಿತಾಯ ಹೆಚ್ಚಲಿದೆ ಎಂದು ವರದಿ ವಿಶ್ಲೇಷಿಸಿದೆ.

ಪ್ರತಿಕ್ರಿಯಿಸಿ (+)