ಶುಕ್ರವಾರ, ಮಾರ್ಚ್ 5, 2021
17 °C
ನಗರ ಸಂಚಾರ: ವೇಣುಗೋಪಾಲಸ್ವಾಮಿ ಪುಷ್ಕರಣಿಗೆ ಮರುಜೀವ ಎಂದಿಗೆ?

ಜಿನುಗುವ ನೀರು, ತೆವಳುವ ಕಾಮಗಾರಿ

ಕೆ.ನರಸಿಂಹಮೂರ್ತಿ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿನುಗುವ ನೀರು, ತೆವಳುವ ಕಾಮಗಾರಿ

ಕೋಲಾರ: ಎಷ್ಟು ತೆಗೆದರೂ ನೀರು ಜಿನುಗುತ್ತಲೇ ಇದೆ. ಎಷ್ಟು ಅಗೆದರೂ ಮಣ್ಣು ಕಡಿಮೆಯಾಗುತ್ತಿಲ್ಲ.. ಈ ಸನ್ನಿವೇಶದಲ್ಲಿ ಪುಷ್ಕರಣಿಯನ್ನು ಹೇಗೆ ಅಭಿವೃದ್ಧಿಪಡಿಸು­ವುದೋ ಗೊತ್ತಾಗುತ್ತಿಲ್ಲ. ಒಂದು ಹಂತದವರೆಗೆ ಮಣ್ಣು ತೆಗೆದ ಬಳಿಕವಷ್ಟೇ ಸ್ಪಷ್ಟ ಚಿತ್ರ ದೊರಕಬಹುದು....–ನಗರದ ಟೇಕಲ್ ರಸ್ತೆಯಲ್ಲಿರುವ ವೇಣುಗೋಪಾಲ ಸ್ವಾಮಿ ಪುಷ್ಕರಣಿಗೆ ಮರುಜೀವ ನೀಡುವ ಕಾಮಗಾರಿಯ ಸದ್ಯದ ಸ್ಥಿತಿ ಕುರಿತು ಗುತ್ತಿಗೆದಾರರ ಸ್ಪಾಟ್ ಎಂಜಿನಿಯರ್‍ ಹೇಳುವ ಮಾತು ಇದು.ನಗರಸಭೆ ವತಿಯಿಂದ ₨ 30 ಲಕ್ಷ ವೆಚ್ಚದಲ್ಲಿ ಪುಷ್ಕರಣಿ ಅಭಿವೃದ್ಧಿಪಡಿಸುವ ಕಾಮಗಾರಿಯು ಜನವರಿ ಕೊನೆಯ ವಾರದಿಂದ ಶುರುವಾಗಿದೆ. ಹಲವು ವರ್ಷಗಳಿಂದ ತುಂಬಿರುವ ಕಸದೊಳಗೆ ತನ್ನ ನಿಜೂಪವನ್ನು ಕಳೆದುಕೊಂಡಿರುವ ಪುಷ್ಕರಣಿಯನ್ನು ಅಭಿವೃದ್ಧಿಪಡಿಸಲು ₨ 30 ಲಕ್ಷ ವೆಚ್ಚದ ಕಾಮಗಾರಿ ನಡೆಯುತ್ತಿದ್ದರೂ ಮುಂದೇನು ಎಂಬುದೇ ಗೊತ್ತಿಲ್ಲದ ಸ್ಥಿತಿಯಲ್ಲಿ ನಗರಸಭೆ ಮತ್ತು ಗುತ್ತಿಗೆದಾರರಿದ್ದಾರೆ!

ಪುಷ್ಕರಣಿಯನ್ನು ಈಗ ಇರುವ ರೀತಿಯಲ್ಲೇ ಅಭಿವೃದ್ಧಿಪಡಿಸಲು ನಿಗದಿಯಾಗಿರುವ ಹಣ ಸಾಕು. ಇನ್ನೂ ಅಭಿವೃದ್ಧಿಪಡಿಸಬೇಕೆಂದರೆ ಸುಮಾರು ₨ 75 ಲಕ್ಷ ಬೇಕಾಗುತ್ತದೆ ಎಂದು ನಗರಸಭೆ ಪೌರಾಯುಕ್ತ ಕೆ.ಎನ್.ಜಗದೀಶ್‍ ಹೇಳುತ್ತಾರೆ. ಅದೇ ಮಾತನ್ನು ಗುತ್ತಿಗೆದಾರ ಸಿಬ್ಬಂದಿಯೂ ಹೇಳುತ್ತಾರೆ. ಹಾಗಾದರೆ, ಈಗ ಮಾಡುತ್ತಿರುವುದೇನು ಎಂದು ಕೇಳಿದರೆ ಈ ಇಬ್ಬರಲ್ಲೂ ಸ್ಪಷ್ಟ ಉತ್ತರವಿಲ್ಲ.ಹೂಳು–ಕಸದಿಂದ ಪುಷ್ಕರಣಿಯೊಂದನ್ನು ಅಭಿವೃದ್ಧಿಪಡಿಸುವ ಸಂದರ್ಭದಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗೆ ಇರಬೇಕಾದ ಸ್ಪಷ್ಟತೆ ಮತ್ತು ದೂರದೃಷ್ಟಿ ಕೊರತೆ ಕಡೆಗೂ ಈ ಅಂಶ ಗಮನ ಸೆಳೆಯುತ್ತಿದೆ. ಪುಷ್ಕರಣಿ ‘ಸಮಗ್ರ ಅಭಿವೃದ್ಧಿ’ ಕುರಿತ ಕ್ರಿಯಾ ಯೋಜನೆಯೂ ಸಿದ್ಧಗೊಂಡಿಲ್ಲ. ಈಗ ಇರುವ ಕ್ರಿಯಾಯೋಜನೆ ಪುಷ್ಕರಣಿಯ ಸ್ವರೂಪವು ಬಯಲಾಗುತ್ತಾ ಹೋದಂತೆಯೇ ಬದಲಾಗುವ ಸಾಧ್ಯತೆಯೂ ಇದೆ.ವಿಳಂಬ: ಜಿಲ್ಲೆಯ ನೂರಾರು ಕಲ್ಯಾಣಿಗಳಿಗೆ ಪುನಶ್ಚೇತನ ಭಾಗ್ಯ ಬಂದಿರುವ ಹೊತ್ತಿನಲ್ಲೇ ನಗರದ ಪ್ರಮುಖ ವೇಣುಗೋಪಾಲ ಸ್ವಾಮಿ ಪುಷ್ಕರಣಿ ಪುನಶ್ಚೇತನ ಎಂಬುದು ಹೀಗೆ ಅತಂತ್ರ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ. ಅದರಲ್ಲೂ ಆಮೆ ವೇಗದಲ್ಲಿ ಎಂಬುದನ್ನು ಈ ಸಂದರ್ಭದಲ್ಲಿ ಗಮನಿಸಬೇಕಾಗಿದೆ.ಡಿ.ಎಸ್‍.ವಿಶ್ವನಾಥ್ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಈ ಪುಷ್ಕರಣಿಯನ್ನು ಅಭಿವೃದ್ಧಿಪಡಿಸುವ ಭರವಸೆಯನ್ನು ನೀಡಿದ್ದರು. ಆದರೆ ಅದು ಕೂಡಲೇ ಜಾರಿಗೆ ಬರಲಿಲ್ಲ. ಕಳೆದ ವರ್ಷ ಅಕ್ಟೋಬರ್‍ ಕೊನೆ ವೇಳೆಯಲ್ಲಿ ಈ ಪುಷ್ಕರಣಿಯಲ್ಲಿರುವ ನೀರನ್ನು ಹೊರತೆಗೆಯುವ ಕೆಲಸವಷ್ಟೇ ಶುರುವಾಗಿತ್ತು. (ಅದಕ್ಕೂ ಕೆಲವು ತಿಂಗಳ ಮುನ್ನ ನೀರು ತೆಗೆಯುವ ಪ್ರಯತ್ನ ಒಮ್ಮೆ ನಡೆದಿತ್ತು) ಆದರೆ ಅದನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸುವ ಪ್ರಯತ್ನ ಮಾತ್ರ ನಡೆದಿರಲಿಲ್ಲ.  ಅದಾಗಿ ಸುಮಾರು ಮೂರು ತಿಂಗಳಾದ ಬಳಿಕ ಕಲ್ಯಾಣಿಯಲ್ಲಿ ಮಣ್ಣು ತೆಗೆಯುವ ಕೆಲಸವಷ್ಟೇ ಶುರುವಾಗಿದೆ. ಅದೂ ನಿರಂತರವಾಗಿ ನಡೆಯುತ್ತಿಲ್ಲ.

ಪ್ರಮುಖವಾದ ಕಾಮಗಾರಿಯೊಂದು ನಡೆಯುತ್ತಿದೆ ಎಂಬ ಯಾವ ಸ್ಪಷ್ಟ ಸೂಚನೆಯೂ ಸ್ಥಳದಲ್ಲಿ ಇಲ್ಲದಿರುವುದರಿಂದ ಈಗಲೂ ದಾರಿಹೋಕರು ಈ ಪುಷ್ಕರಣಿಯ ಆಸುಪಾಸಿನಲ್ಲೇ ನಿಂತು ಮೂತ್ರ ವಿಸರ್ಜಿಸುವುದು, ಕಸವನ್ನು ಸುರಿಯುವುದು ನಡೆಯುತ್ತಲೇ ಇದೆ. ಕಾಮಗಾರಿ ಶುರುವಾದ ಬಳಿಕವಾದರೂ ಪುಷ್ಕರಣಿ ಪ್ರದೇಶವನ್ನು ಸಂರಕ್ಷಿಸುವ ಪ್ರಯತ್ನವೂ ನಡೆದಿಲ್ಲ. ಸುತ್ತಲೂ ಕನಿಷ್ಠ ಒಂದು ಕೆಂಪು ಪಟ್ಟಿ ಮತ್ತು ತಂತಿ ಬೇಲಿಯನ್ನಾದರೂ ಅಳವಡಿಸಿ ಕಾಮಗಾರಿ ನಡೆಸಬೇಕು ಎನ್ನುತ್ತಾರೆ ಟೇಕಲ್ ರಸ್ತೆ ನಿವಾಸಿಗಳಾದ ಗೋಪಾಲಕೃಷ್ಣ, ಚಂದ್ರು, ಮಂಜುನಾಥ್.

ಚರಂಡಿ ನೀರು: ಪುಷ್ಕರಣಿಗೆ ಮರುಜೀವ ಕೊಡುವ ಕಾಮಗಾರಿ ನಡೆಸುತ್ತಿರುವ ಈ ಸಂದರ್ಭದಲ್ಲೇ ವಿವಿಧ ಮೂಲಗಳಿಂದ ಪುಷ್ಕ­ರಣಿಗೆ ಬರುತ್ತಿರುವ ಚರಂಡಿ ನೀರಿಗೆ ತಡೆ ಒಡ್ಡುವ ಕೆಲಸವಾಗಿದೆಯೇ ಎಂಬುದಕ್ಕೂ ಸ್ಪಷ್ಟತೆ ಇಲ್ಲ.ಕಠಾರಿಪಾಳ್ಯ, ರೈಲ್ವೆ ಹಳಿಯುದ್ದಕ್ಕೂ ಇರುವ ವಿವಿಧ ಚರಂಡಿಗಳ ನೀರು ಪುಷ್ಕರಣಿಗೇ ಬಂದು ಸೇರುತ್ತಿದೆ. ಮೊದಲು ಅದನ್ನು ನಿಲ್ಲಿಸಬೇಕು ಎಂಬ ಆಗ್ರಹವೂ ಹಲವು ವರ್ಷಗಳಿಂದ ಹಾಗೇ ಉಳಿದಿದೆ. ಚರಂಡಿ ನೀರಿಗೆ ತಡೆ ಒಡ್ಡದೆ ಪುಷ್ಕರಣಿಗೆ ಮರುಜೀವ ಕೊಡುವುದು ಸಮಂಜಸವಾದ ಕೆಲಸವಲ್ಲ ಎಂಬುದು ಹಲವರ ಅನಿಸಿಕೆ.ಭೌತಿಕ ಸ್ವರೂಪ ಮಾತ್ರವೇ?: ಯಾವುದೇ ಕಲ್ಯಾಣಿ ಅಥವಾ ಪುಷ್ಕರಣಿಗೆ ಮರುಜೀವ ಕೊಡುವುದು ಎಂದರೆ ಅದರ ಭೌತಿಕವಾದ ಸ್ವರೂಪವನ್ನು ಮರುಸ್ಥಾಪಿಸುವುದು ಮಾತ್ರವೇ ಎಂಬ ಪ್ರಶ್ನೆಯೂ ಇದೇ ವೇಳೆ ಮೂಡುತ್ತದೆ.ಪುಷ್ಕರಣಿ ಮೆಟ್ಟಿಲುಗಳು, ಒಳಬಾವಿ, ಹೊರ ಆವರಣವನ್ನು ಉತ್ಖನನ ಮಾದರಿಯಲ್ಲಿ ಬಹಿರಂಗಗೊಳಿಸಿ ನೋಡಲು ಅಂದವಾಗಿ ಕಾಣುವಂತೆ ಮಾಡಿದರೆ ಸಾಕು ಎಂಬ ನಿಲುವೇ ಪ್ರಧಾನವಾಗಿ ಪ್ರಭಾವಿಸಿರುವುದರಿಂದ, ಪುಷ್ಕರಣಿ ಜಲಮೂಲವನ್ನು ಒಪ್ಪಗೊಳಿಸುವ ಮಾತನ್ನು ನಗರಸಭೆಯಾಗಲೀ, ಗುತ್ತಿಗೆದಾರರಾಗಲಿ ಆಡುತ್ತಿಲ್ಲ.ಇನ್ನೂ ಹೆಚ್ಚೆಂದರೆ, ಪುಷ್ಕರಣಿ ಸುತ್ತ ಕಾಂಪೌಂಡ್ ನಿರ್ಮಾಣ, ಉದ್ಯಾನ ನಿರ್ಮಾಣದಂಥ ಪ್ರಸ್ತಾವಗಳನ್ನು ಮಂಡಿಸುವ ಮೂಲಕ ಮರುಜೀವ ಕಾಮಗಾರಿ ವೆಚ್ಚ ಹೆಚ್ಚಾಗುತ್ತದೆ ಎಂದೂ ಹೇಳಲಾಗುತ್ತದೆ. ಜಿಲ್ಲೆಯ ಜಲಪರಂಪರೆಯ ಜೀವಂತ ನಿದರ್ಶನವನ್ನಾಗಿ, ಜನಜೀವನದ ಜೊತೆಗೆ ಇದ್ದ ಜೀವಂತ ಸಂಬಂಧದ ರೂಪಕವಾಗಿ ಪುಷ್ಕರಣಿಯನ್ನು ರೂಪಿಸುವುದಕ್ಕಿಂತಲೂ ಅದನ್ನು ಒಂದು ಜಡ ಪ್ರದರ್ಶನದ ವಸ್ತು ಸಂಗತಿಯನ್ನಾಗಿಯಷ್ಟೇ ಉಳಿಸುವ ಪ್ರಯತ್ನದಿಂದ ಏನು ಪ್ರಯೋಜನ ಎಂಬ ಪ್ರಶ್ನೆಯೂ ಇದೇ ವೇಳೆ ಮೂಡುತ್ತದೆ.

ಸಂರಕ್ಷಣೆ, ವೃತ್ತಿಪರತೆ ಎಲ್ಲಿ?

ಪುಷ್ಕರಣಿ ಪುನರುಜ್ಜೀವನದ ಸಂದರ್ಭ ಜಲಸಂಪನ್ಮೂಲಗಳ ಸಂರಕ್ಷಣೆ ವೃತ್ತಿಪರತೆ ಕಡೆಗೂ ಗಮನ ಸೆಳೆಯುತ್ತದೆ.  ಪುಷ್ಕರಣಿ ಅಥವಾ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ­ಗಳನ್ನು, ಸಿವಿಲ್‍ ಕಾಮಗಾರಿಗಳನ್ನು ನಡೆಸುವ ಗುತ್ತಿಗೆದಾರರಿಗೆ ನೀಡುವುದರಿಂದ ಉದ್ದೇಶ ಈಡೇರುತ್ತದೆಯೇ ಎಂಬ ಪ್ರಶ್ನೆಯೂ ಇದೇ ವೇಳೆ ಮೂಡಿದೆ.ಜಲಸಂಪನ್ಮೂಲಗಳ ಸಂರಕ್ಷಣೆಯಲ್ಲಿ ಹೆಸರು ಮಾಡಿರುವ ಅರ್ಘ್ಯಂ ಸಂಸ್ಥೆ ಮುಳಬಾಗಲು ಪಟ್ಟಣದಲ್ಲಿ ಮೂರು ವರ್ಷದ ಹಿಂದೆ ಪ್ರಸಿದ್ಧ ಆಂಜನೇಯ ಸ್ವಾಮಿ ದೇಗುಲದ ಎದುರಿನ ಕಲ್ಯಾಣಿಯನ್ನು ಪುನರುಜ್ಜೀವನಗೊಳಿಸಿದೆ. ಅದನ್ನೊಂದು ಮಾದರಿಯಾಗಿ ಪರಿಗಣಿಸಿ, ಕಲ್ಯಾಣಿಗಳ ಪುನಶ್ಚೇತನ ಕಾಮಗಾರಿಗಳನ್ನು ವೃತ್ತಿಪರ ಸಂಸ್ಥೆಗಳಿಗೆ ವಹಿಸಬಾರದೇಕೆ ಎಂಬ ಕಡೆಗೂ ಜಿಲ್ಲಾಡಳಿತವು ಗಮನ ಹರಿಸಬೇಕಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.