ಗುರುವಾರ , ಮೇ 6, 2021
27 °C

ಜಿನ್ನಾ ನೆಲೆಸಿದ್ದ ಬಂಗಲೆ ಉಗ್ರರಿಂದ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್(ಪಿಟಿಐ): ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರು ಕೊನೆಯ ದಿನಗಳಲ್ಲಿ ನೆಲೆಸಿದ್ದ 121 ವರ್ಷದ ಹಳೆಯ ಪಾರಂಪರಿಕ ಕಟ್ಟಡವನ್ನು ಭಯೋತ್ಪಾದಕರು ಶನಿವಾರ ಬಾಂಬ್ ಸ್ಫೋಟಿಸಿ ನಾಶಪಡಿಸಿದ್ದಾರೆ. ಜೊತೆಗೆ ಗುಂಡಿನ ದಾಳಿ ನಡೆಸಿ ಒಬ್ಬ ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಾರೆ.ನೈರುತ್ಯ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಜಿಯಾರತ್‌ನಲ್ಲಿ ಖೈದ್-ಎ-ಆಜಂ ಹೆಸರಿನ ಕಟ್ಟಡಕ್ಕೆ ಭಯೋತ್ಪಾದಕರು ಮಧ್ಯಾಹ್ನ 1.15ಕ್ಕೆ ಬಾಂಬ್ ದಾಳಿ ನಡೆಸಿದ್ದಾರೆ. ಈ ಕಟ್ಟಡವು ಇಸ್ಲಾಮಾಬಾದ್‌ನಿಂದ 120 ಕಿ.ಮೀ. ದೂರದಲ್ಲಿದೆ. ಭಯೋತ್ಪಾದಕರು ಮೊದಲು ಕಟ್ಟಡದ ಮೇಲೆ ನಾಲ್ಕು ಬಾಂಬ್‌ಗಳನ್ನು ಎಸೆದು, ನಂತರ ಗುಂಡು ಹಾರಿಸಿದ್ದಾರೆ. ಈ ಸ್ಫೋಟದಿಂದ ಉಂಟಾದ ಅಗ್ನಿಯ ಜ್ವಾಲೆಯನ್ನು ನಾಲ್ಕು ಗಂಟೆಯ ಸತತ ಪರಿಶ್ರಮದೊಂದಿಗೆ ನಂದಿಸಲಾಯಿತು.ಬೆಂಕಿಯಿಂದಾಗಿ ಕಟ್ಟಡದ ಕಟ್ಟಿಗೆಯ ಭಾಗಗಳು, ಪೀಠೋಪಕರಣಗಳು ಮತ್ತು ಜಿನ್ನಾ ಅವರ ಚಿರಸ್ಮರಣೀಯ ವಸ್ತುಗಳು ನಾಶಗೊಂಡಿವೆ. ಸ್ಫೋಟದಿಂದ ಕಟ್ಟಡ ಸಂಪೂರ್ಣ ಕುಸಿದಿದ್ದು, ಕೇವಲ ಇಟ್ಟಿಗೆ ಗೋಡೆ ಮಾತ್ರ ಇರುವ ದೃಶ್ಯಗಳನ್ನು ಇಲ್ಲಿನ ಸ್ಥಳೀಯ ಟಿ.ವಿ.ಗಳು ಪ್ರಸಾರ ಮಾಡಿದವು.ಬಾಂಬ್ ನಿಷ್ಕ್ರಿಯ ಘಟಕದ ಸಿಬ್ಬಂದಿ ಆರು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ. ಒಂದೊಂದು ಬಾಂಬ್‌ನಲ್ಲಿ ಮೂರು ಕೆ.ಜಿ. ಸ್ಫೋಟಕಗಳಿದ್ದವು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜ್ಗರ್ ಅಲಿ ತಿಳಿಸಿದ್ದಾರೆ.ಘಟನಾ ಸ್ಥಳದ ಸುತ್ತಲೂ ರಕ್ಷಣಾ ಪಡೆಯವರು ಪಹರೆ ಹಾಕಿದ್ದು, ಸ್ಫೋಟ ಮಾಡಿದವರನ್ನು ಹುಡುಕಾಡುತ್ತಿದ್ದಾರೆ. ಈ ಕಟ್ಟಡವನ್ನು 1892ರಲ್ಲಿ ಕಟ್ಟಲಾಗಿತ್ತು. ಇದನ್ನು ಬ್ರಿಟಿಷ್ ಗವರ್ನರ್‌ರವರ ಪ್ರತಿನಿಧಿಗಳು ಬೇಸಿಗೆ ಕಳೆಯಲು ಬಳಸುತ್ತಿದ್ದರು. ಜಿನ್ನಾ ಕ್ಷಯದಿಂದ ಬಳಲುತ್ತಿದ್ದಾಗ ಕೊನೆಯ ದಿನಗಳನ್ನು ಈ ಕಟ್ಟಡದಲ್ಲಿಯೇ ಕಳೆದಿದ್ದರು. ನಂತರದ ದಿನಗಳಲ್ಲಿ ಇದನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾರ್ಪಡಿಸಲಾಗಿತ್ತು.

14 ವಿದ್ಯಾರ್ಥಿನಿಯರ ಬಲಿ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಕ್ವೆಟ್ಟಾ ನಗರದ ಮಹಿಳಾ ವಿಶ್ವವಿದ್ಯಾಲಯದ ಬಸ್ಸು ಮತ್ತು ಸ್ಥಳೀಯ ಆಸ್ಪತ್ರೆಯ ಮೇಲೆ ಉಗ್ರರು ಬಾಂಬ್ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ 14 ವಿದ್ಯಾರ್ಥಿನಿಯರು ಮತ್ತು ನಾಲ್ವರು ಉಗ್ರರು ಸೇರಿದಂತೆ 23 ಮಂದಿ ಮೃತಪಟ್ಟಿದ್ದು, ಸುಮಾರು 35 ಮಂದಿ ಗಾಯಗೊಂಡಿದ್ದಾರೆ.ಬ್ರೆವರಿ ರಸ್ತೆಯಲ್ಲಿರುವ ಸರ್ದಾರ್ ಬಹಾದ್ದೂರ್ ಖಾನ್ ಮಹಿಳಾ ವಿಶ್ವವಿದ್ಯಾಲಯದ ಆವರಣದೊಳಗೆ ಈ ಘಟನೆ ನಡೆದಿದೆ. ಗಾಯಗೊಂಡವರಲ್ಲಿ ಅನೇಕರು ವಿದ್ಯಾರ್ಥಿನಿಯರೇ ಆಗಿದ್ದು, ಅವರನ್ನು ಸ್ಥಳೀಯ ಬೊಲನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.ದಾಳಿ ನಡೆದ ಒಂದು ಗಂಟೆಯ ನಂತರ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ವೇಳೆಯಲ್ಲಿಯೇ ಆಸ್ಪತ್ರೆ ಒಳಗೆ ಮತ್ತೊಂದು ಸ್ಫೋಟ ನಡೆದಿದೆ. ಅನೇಕ ಶಸ್ತ್ರಸಜ್ಜಿತ ಉಗ್ರರು ಆಸ್ಪತ್ರೆ ಒಳಗಿದ್ದುಕೊಂಡೇ ಗುಂಡಿನ ಸುರಿಮಳೆ ಗರೆದಿದ್ದಾರೆ. ಬಲೂಚಿಸ್ತಾನ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಅನೇಕ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಆಸ್ಪತ್ರೆ ಒಳಗಿದ್ದು, ಗುಂಡಿನ ದಾಳಿಯಲ್ಲಿ ಕ್ವೆಟ್ಟಾದ ಜಿಲ್ಲಾಧಿಕಾರಿ ಅಬ್ದುಲ್ ಮನಸೂರ್ ಕಾಕರ್ ಅಸುನೀಗಿದ್ದಾರೆ ಎಂದು ಪಾಕ್ ಆಂತರಿಕ ಭದ್ರತಾ ಸಚಿವ ಚೌಧರಿ ನಿಸಾರ್ ಅಲಿ ಖಾನ್ ತಿಳಿಸಿದ್ದಾರೆ.ಮೊಹಮ್ಮದ್ ಅಲಿ ಜಿನ್ನಾ ತಮ್ಮ ಕೊನೆ ದಿನಗಳಲ್ಲಿ ಬಳಸುತ್ತಿದ್ದ ಐತಿಹಾಸಿಕ ಕಟ್ಟಡದ ಮೇಲೆ ಉಗ್ರರು ದಾಳಿ ನಡೆಸಿದ ಕೆಲವೇ ತಾಸುಗಳಲ್ಲಿ ಈ ದಾಳಿ ನಡೆದಿದ್ದು, ಈ ಎರಡು ದಾಳಿಗೆ ನಿಷೇಧಿತ ಲಷ್ಕರ್-ಎ-ಜಂಗ್ವಿ ಉಗ್ರಗಾಮಿ ಸಂಘಟನೆ ಹೊಣೆ ಹೊತ್ತುಕೊಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.