ಜಿ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಮಾತನವರ ಬಗ್ಗೆ ಒಲವು

7

ಜಿ.ಪಂ.ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಮಾತನವರ ಬಗ್ಗೆ ಒಲವು

Published:
Updated:

ಹಾವೇರಿ: ಜಿಲ್ಲಾ ಪಂಚಾಯಿತಿ ಎರಡನೇ ಅವಧಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಅ. 4 ರಂದು ಜಿ.ಪಂ. ಸಭಾಭವನದಲ್ಲಿ ನಡೆಯಲಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಗಾದಿ ಏರಲು ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಹಿಂದೂಳಿದ `ಅ~ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 32 ಜನ ಸದಸ್ಯ ಬಲದ ಜಿ.ಪಂ.ನಲ್ಲಿ 27 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಆಡಳಿತರೂಢ ಪಕ್ಷವಾಗಿದ್ದು, ಅದೇ ಪಕ್ಷದ ಸದಸ್ಯರಲ್ಲಿ ಹಿಂದುಳಿದ `ಅ~ ವರ್ಗಕ್ಕೆ ಸೇರಿರುವ ಮೂವರು ಸದಸ್ಯರಿದ್ದಾರೆ.ಅವರಲ್ಲಿ ಹಾವೇರಿ ತಾಲ್ಲೂಕಿನ ಕಬ್ಬೂರ ಜಿ.ಪಂ.ಕ್ಷೇತ್ರದ ರಾಜೇಂದ್ರ ಹಾವೇರಣ್ಣನವರ, ಬ್ಯಾಡಗಿ ತಾಲ್ಲೂಕಿನ ಶಿಡೇನೂರ ಶಂಕ್ರಣ್ಣ ಮಾತನವರ ಹಾಗೂ ಸವಣೂರು ತಾಲ್ಲೂಕಿನ ಕೃಷ್ಣಪ್ಪ ಸುಣಗಾರ ಇವರ ನಡುವೆ ಸ್ಪರ್ಧೆ ಏರ್ಪಟ್ಟಿದೆ.ಮೂವರು ಆಕಾಂಕ್ಷಿಗಳಲ್ಲಿ ರಾಜೇಂದ್ರ ಹಾವೇರಣ್ಣನವರ, ಶಂಕ್ರಣ್ಣ ಮಾತನವರ ಕುರುಬ ಜನಾಂಗಕ್ಕೆ ಸೇರಿದವರಾಗಿದ್ದರೆ, ಕೃಷ್ಣಪ್ಪ ಸುಣಗಾರ ಅವರು ಅಂಬಿಗೇರ ಜನಾಂಗಕ್ಕೆ ಸೇರಿದವರಾಗಿದ್ದಾರೆ.ಯಾವುದೇ ಕಾರಣಕ್ಕೂ ಬಂದ ಅವಕಾಶವನ್ನು ಕಳೆದುಕೊಳ್ಳಬಾರದೆಂಬ ಆಶಯದೊಂದಿಗೆ ತಮ್ಮ ತಮ್ಮ ಸಮುದಾಯವನ್ನು ಮುಂದು ಮಾಡಿಕೊಂಡು ಆಯಾ ಕ್ಷೇತ್ರದ ಶಾಸಕರ, ಜಿಲ್ಲೆಯ ಸಚಿವರ ಹಾಗೂ ಪಕ್ಷದ ಮುಖಂಡರ ಮೇಲೆ ತಮ್ಮ ಶಕ್ತಾನುಸಾರ ಪ್ರಭಾವ ಬೀರಲೆತ್ನಿಸುತ್ತಿದ್ದಾರೆ.ಪಕ್ಷದ ಮುಖಂಡರು ಕೂಡಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಯಾವ ರೀತಿ ಅನುಕೂಲವಾಗಲಿದೆ ಎಂಬುದನ್ನು ನೋಡಿಕೊಂಡು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಲೆಕ್ಕಾಚಾರದಲ್ಲಿ ತೊಡಗ್ದ್ದಿದರಿಂದ ಕೊನೆಗಳಿಗೆಯಲ್ಲಿ ಮೂವರು ಆಕಾಂಕ್ಷಿಗಳ ಪೈಕಿ ಯಾರಿಗೆ ಅಧ್ಯಕ್ಷ ಗಾದಿ ದೊರೆಯಲಿದೆ ಎಂಬುದು ಇನ್ನೂ ನಿಗೂಢವಾಗಿದೆ.ಆದರೆ, ಮೊದಲ ಅವಧಿಯಲ್ಲಿ 10 ತಿಂಗಳಿಗೆ ಮಿತಿ ನಿಗದಿ ಮಾಡಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳನ್ನು ಹಂಚಿಕೆ ಮಾಡಿ ಆಕಾಂಕ್ಷಿಗಳನ್ನು ಸಮಾಧಾನ ಪಡಿಸಿದಂತೆ ಈಗಲೂ ಅದೇ ತಂತ್ರವನ್ನು ಅನುಸರಿಸಲು ಪಕ್ಷದ ವರಿಷ್ಠರು ನಿರ್ಧರಿಸಿದರೂ ಮೂವರು ಆಕಾಂಕ್ಷಿಗಳು ಇರುವುದರಿಂದ ಈ ಸೂತ್ರವು ಇನ್ನೊಬ್ಬ ಆಕಾಂಕ್ಷಿಯ ಹಾಗೂ ಆ ಕ್ಷೇತ್ರದ ಶಾಸಕರ ಅಸಮಾಧಾನಕ್ಕೆ ಕಾರಣವಾಗಬಹುದೆಂಬ ಭಯವೂ ಮುಖಂಡರನ್ನು ಕಾಡುತ್ತಿದೆ.ಅದು ಅಲ್ಲದೇ ಅಧ್ಯಕ್ಷ ಪದವಿ ಆಕಾಂಕ್ಷಿಗಳ ಸಮುದಾಯದ ಸ್ವಾಮಿಗಳೊಬ್ಬರು ಯಾವುದೇ ಕಾರಣಕ್ಕೂ 10 ತಿಂಗಳ ಅವಧಿಯ ಅಧಿಕಾರ ಹಂಚಿಕೆ ಮಾಡದೇ ಒಬ್ಬರನ್ನೇ ಪೂರ್ಣಾವಧಿಗೆ ಮುಂದುವರೆಸುವಂತೆ ಸಲಹೆ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಇದು ಕೂಡಾ ಪಕ್ಷದ ಮುಖಂಡರಿಗೆ ನುಂಗಲಾರದ ತುತ್ತಾಗಿದೆ.ಇನ್ನೂ ಸಾಮಾನ್ಯ ಮಹಿಳಾ ಸ್ಥಾನಕ್ಕೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷ ಸ್ಥಾನಕ್ಕಿಂತ ಹೆಚ್ಚಿನ ಆಕಾಂಕ್ಷಿಗಳಿದ್ದು, ಪೈಪೋಟಿ ಕೂಡಾ ಸಹಜವಾಗಿ ಹೆಚ್ಚಾಗಿದೆ. ಸದ್ಯ ಸಾಮಾನ್ಯ ಮಹಿಳಾ ಸದಸ್ಯರಾಗಿರುವ ಗೀತಾ ಅಂಕಸಖಾನಿ, ಯಲ್ಲವ್ವ ಚಪ್ಪರದ, ವೀರೇಶ್ವರಿ ಸುಳ್ಳಳ್ಳಿ, ಶೋಭಾ ನಿಸ್ಸಿಮಗೌಡ್ರ, ಬಸಮ್ಮ ಅಬಲೂರ ಹೆಸರು ಉಪಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ. ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ರಾಜಕೀಯ ಚಿತ್ರಣದಲ್ಲಿ ಬಹಳಷ್ಟು ಬದಲಾವಣೆಯಾಗುವ ನಿರೀಕ್ಷೆ ಇರುವುದರಿಂದ ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯನ್ನು ಸಚಿವರು, ಶಾಸಕರೇ ವಹಿಸಿಕೊಂಡಿದ್ದು, ಜಿಲ್ಲಾ ಬಿಜೆಪಿ ಈ ಪ್ರಕ್ರಿಯೆಯಿಂದ ದೂರವೇ ಉಳಿದಿದೆ.ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರ ಪಾತ್ರವೂ ಬಹುಮುಖ್ಯವಾಗಿರುವುದರಿಂದ ವರಿಷ್ಠರು ಅಳೆದು ತೂಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸದಸ್ಯರನ್ನು ಆಯ್ಕೆ ಮಾಡಲು ಕಸರತ್ತು ಆರಂಭಿಸಿದ್ದಾರೆ.ಯಾವುದೇ ಗೊಂದಲಕ್ಕೆ ಅವಕಾಶ ಮಾಡಿಕೊಡದೇ ಸರ್ವಸಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ, ಜಿಲ್ಲೆಯ ಜಿ.ಪಂ.ಸದಸ್ಯರ ಮೇಲಿರುವ ಹಿಡಿತವನ್ನು ಮುಂದಿನ ಚುನಾವಣೆವರೆಗೆ ಕಾಯ್ದುಕೊಳ್ಳುವ ಉದ್ದೇಶದಿಂದ ಏಕ ಪಕ್ಷೀಯವಾಗಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡದೇ ಜಿ.ಪಂ.ಸದಸ್ಯರ ವೈಯಕ್ತಿಕ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.ಬುಧವಾರ ಮಧ್ಯಾಹ್ನ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ, ಶಾಸಕರಾದ ಸುರೇಶಗೌಡ ಪಾಟೀಲ, ನೆಹರೂ ಓಲೇಕಾರ, ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ನೇತೃತ್ವದಲ್ಲಿ ಜಿ.ಪಂ.ಸದಸ್ಯರ ಸಭೆ ನಡೆದಿದ್ದು, ಅಲ್ಲಿಯೂ ಕೂಡಾ ಯಾವುದೇ ಅಭ್ಯರ್ಥಿಯ ಹೆಸರು ಅಂತಿಮಗೊಳಿಸದೇ ಕೇವಲ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಗುರುವಾರ ನಾಮಪತ್ರ ಸಲ್ಲಿಸುವ ವೇಳೆಗೆ ಅಭ್ಯರ್ಥಿ ಹೆಸರು ಬಹಿರಂಗಗೊಳಿಸುವುದಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಅಧ್ಯಕ್ಷರಿಗೆ ಮಾಹಿತಿ ಇಲ್ಲ

32 ಸದಸ್ಯರಲ್ಲಿ 27 ಬಿಜೆಪಿ ಸದಸ್ಯರನ್ನು ಹೊಂದಿರುವ ಜಿಲ್ಲಾ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಿಗೆ ಮಾಹಿತಿ ಇಲ್ಲದಿರುವುದು ಪಕ್ಷದಲ್ಲಿ ಎರಡು ಗುಂಪುಗಳಿರುವುದು ಸ್ಪಷ್ಟವಾಗುತ್ತದೆ.ತಮಗೆ ಜಿ.ಪಂ.ಅಧ್ಯಕ್ಷರ ಆಯ್ಕೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಯಾವುದೇ ಸಭೆಗೆ ಆಹ್ವಾನವೂ ಇಲ್ಲದ್ದರಿಂದ ತಮಗೆ ಅದರ ಬಗ್ಗೆ ಏನೂ ಗೊತ್ತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮಣ್ಣಬೇವಿನಮರದ ಸ್ಪಷ್ಟಪಡಿಸಿದ್ದಾರೆ.ಜಿಲ್ಲೆಯಲ್ಲಿ ಪಕ್ಷದ ಮುಖಂಡರು ಇದ್ದಾರೆ. ಅವರೇ ಈ ಬಗ್ಗೆ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂದ ಅವರು, ಅದರ ಬಗ್ಗೆ ತಮಗೆ ಯಾವುದೇ ಬೇಸರವಿಲ್ಲ ಎಂದು ಹೇಳಿದ್ದಾರೆ.ಅದೇ ರೀತಿ ಜಿ.ಪಂ. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಕುರಿತು ಚರ್ಚಿಸಲು ಪಕ್ಷದ ಎಲ್ಲ ಸದಸ್ಯರಿಗೆ ಆಹ್ವಾನ ನೀಡಿದ್ದರೂ ತಮಗೆ ಯಾರಿಂದಲೂ ಆಹ್ವಾನ ಬಂದಿಲ್ಲ. ಹೀಗಾಗಿ ಆ ಸಭೆಯಲ್ಲಿ ತಾವು ಭಾಗವಹಿಸುತ್ತಿಲ್ಲ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಮಂಜುನಾಥ ಓಲೇಕಾರ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry