ಬುಧವಾರ, ಜನವರಿ 29, 2020
24 °C
ಅಧಿಕಾರ ವಿಕೇಂದ್ರಿಕರಣಕ್ಕೆ ಜಿಲ್ಲಾ ಪಂಚಾಯ್ತಿ ಸದಸ್ಯರ ಆಗ್ರಹ

ಜಿ.ಪಂ.ಗೆ ಕೀಲಿ ಹಾಕಲು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಅಧಿಕಾರ ವಿಕೇಂದ್ರಿ­ಕರಣಕ್ಕೆ ಆಗ್ರಹಿಸಿ ಶೀಘ್ರ­ದಲ್ಲೇ ಜಿಲ್ಲಾ ಪಂಚಾಯ್ತಿಗೆ ಕೀಲಿ ಹಾಕಲು ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಒಕ್ಕೊರಲ ನಿರ್ಧಾರ ಕೈಗೊಂಡರು.ನವನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷೆ ಶಾಂತವ್ವ ಭೂಷಣ್ಣನ­ವರ ಅಧ್ಯಕ್ಷತೆಯಲ್ಲಿ ಶುಕ್ರ­ವಾರ ನಡೆದ ಸಾಮಾನ್ಯ ಸಭೆಯಲ್ಲಿ, ಜಿಲ್ಲಾ ಪಂಚಾಯ್ತಿ ಅಧಿಕಾರ ಮೊಟಕು ವಿರುದ್ಧ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯ್ತಿ ವಿರೋಧ ಪಕ್ಷದ ನಾಯಕ ಬಸವಂತಪ್ಪ ಮೇಟಿ ಮಾತನಾಡಿ, ಜಿ.ಪಂ. ಅಧಿಕಾರವನ್ನು ಸಂಪೂರ್ಣ ಕಿತ್ತು ಶಾಸಕರ ಕೈಗೆ ನೀಡಿರುವುದರಿಂದ ಜಿಲ್ಲಾ ಪಂಚಾಯ್ತಿ ವತಿಯಿಂದ ಯಾವೊಂದು ಅಭಿವೃದ್ಧಿ ಕಾರ್ಯ ಕೈಗೊಳ್ಳದ ಸ್ಥಿತಿ ನಿರ್ಮಾಣ­ವಾಗಿದೆ, ಯಾವುದೇ ಯೋಜನೆಗೆ ಫಲಾನುಭವಿ­ಗಳನ್ನು ಆಯ್ಕೆ ಮಾಡುವ ಹಕ್ಕು ಜಿ.ಪಂ.ಸದಸ್ಯರಿಗೆ ಇಲ್ಲವಾಗಿದೆ.ಎಲ್ಲವೂ ಬೆಂಗಳೂರಿನಲ್ಲೇ ನಡೆಯು­ವಂತಾಗಿದೆ. ಕಾರಣ ಅಧಿಕಾರ ವಿಕೇಂದ್ರಿ­ಕರಣಕ್ಕೆ ಆಗ್ರಹಿಸಿ ಜಿಲ್ಲಾ ಪಂಚಾಯ್ತಿಗೆ ಕೀಲಿ ಹಾಕಿ ಪ್ರತಿಭಟಿಸೋಣ, ಸರ್ಕಾರದ ಗಮನ ಸೆಳೆಯೋಣ ಎಂಬ ಪ್ರಸ್ತಾವ ಸಭೆಯ ಮುಂದಿಟ್ಟರು.ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಎಲ್ಲ ಸದಸ್ಯರು ಬಸವಂತಪ್ಪ ಮೇಟಿ ಅವರ ಪ್ರಸ್ತಾವಕ್ಕೆ ಬೆಂಬಲ ವ್ಯಕ್ತಪಡಿಸಿದರು. ಜಿ.ಪಂ.ಗೆ ಕೀಲಿ ಹಾಕುವ ದಿನಾಂಕವನ್ನು ಶೀಘ್ರ­ದಲ್ಲೇ ತಿಳಿಸುವುದಾಗಿ ಅಧ್ಯಕ್ಷರು ತಿಳಿಸಿದರು.ವಾಗ್ವಾದ:

ಜಿಲ್ಲಾ ಪಂಚಾಯ್ತಿಗೆ ಕೀಲಿ ಹಾಕುವ ವಿರೋಧ ಪಕ್ಷದ ವಿಷಯ ಪ್ರಸ್ತಾವಕ್ಕೆ ಆಡಳಿತಾರೂಢ ಬಿಜೆಪಿ ಸದಸ್ಯರು ಏಕಾಏಕಿ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಆಶ್ವರ್ಯ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯರು, ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರ ವಿಕೇಂದ್ರಿಕರಣಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರು (ದಿವಂಗತ ವಿಠಲ ಚೌರಿ) ಹಲವು ಭಾರಿ ವಿಷಯ ಪ್ರಸ್ತಾವ ಮಾಡಿದರೂ ಬಿಜೆಪಿ ಸದಸ್ಯರು ಮೌನವಾಗಿದ್ದರು.ಇದೀಗ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವುದರಿಂದ ಜಿ.ಪಂ.ಗೆ ಕೀಲಿ ಹಾಕುವ ಪ್ರಸ್ತಾವಕ್ಕೆ ಬೆಂಬಲ ನೀಡುತ್ತಿರುವುದರ ಹಿನ್ನೆಲೆ ಎಲ್ಲರಿಗೂ ಗೊತ್ತು, ಈ ಬೆಂಬಲ ಅಂದು ಏಕೆ ವ್ಯಕ್ತವಾಗಲಿಲ್ಲ ಎಂದು ಅಣಕಿಸಿದರು. ಈಗಲಾದರೂ ಬಿಜೆಪಿ ಸದಸ್ಯರಿಗೆ ಬುದ್ಧಿ ಬಂತಲ್ಲ ಎಂದು ಕಿಚಾಯಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಕೆಲಹೊತ್ತು ರಾಜಕೀಯ ವಾಗ್ವಾದ ನಡೆಯಿತು.

ಡಿಎಫ್‌ಒ ವಿರುದ್ಧ ಕ್ರಮಕ್ಕೆ ಆಗ್ರಹ: ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಬಾಗಲಕೋಟೆ ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಸದಸ್ಯ ಬಸವಂತಪ್ಪ ಮೇಟಿ ಆಗ್ರಹಿಸಿ­ದರು.ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಎಸ್‌.ಜಿ. ಪಾಟೀಲ, ಲೈಂಗಿಕ ಕಿರುಕುಳ ನೀಡಿದ ಡಿಎಫ್‌ಒ ಕ್ಲಾಸ್‌ 1 ಅಧಿಕಾರಿ ಆಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನನಗಿಲ್ಲ, ಈ ಸಂಬಂಧ ಸಾಮಾಜಿಕ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದರು.ಡಿಎಫ್‌ಒ ದೀರ್ಘ ರಜೆ ಕೇಳಿ ಹಾಗೂ ಬೇರೆಡೆಗೆ ವರ್ಗಾವಣೆ ಮಾಡು­ವಂತೆ ಕೋರಿ ನನಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.ಬರಗಾಲ ವರದಿಗೆ ಸೂಚನೆ: ಜಮಖಂಡಿ ತಾಲ್ಲೂಕಿನ ಸಾವಳಗಿ ಹಾಗೂ ಹುನಗುಂದ ತಾಲ್ಲೂಕಿನಲ್ಲಿ ಈ ವರ್ಷ ಮಳೆಯಾಗದೇ ಬರದ ಛಾಯೆ ಇದೆ. ಕುಡಿಯುವ ನೀರಿಗೂ ಸಮಸ್ಯೆ ತಲೆದೋರಿದೆ. ರೈತರು ಸಮಸ್ಯೆಗೆ ಒಳಗಾಗಿದ್ದಾರೆ. ಆದರೂ ಬರಪೀಡಿತ ಪಟ್ಟಿಗೆ ಸೇರ್ಪಡೆ ಮಾಡದಿರುವುದು ಏಕೆ ಎಂದು ಸದಸ್ಯ ಅರ್ಜುನ ದಳವಾಯಿ ಆಕ್ಷೇಪ ವ್ಯಕ್ತಪಡಿಸಿದರು.ಜಿಲ್ಲೆಯ ಬರ ಪೀಡಿತ ಪ್ರದೇಶಗಳ ಬಗ್ಗೆ ವಿಶೇಷ ವರದಿಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸುವಂತೆ ಕೃಷಿ ಇಲಾಖೆ ಅಧಿಕಾರಿಗೆ ಸಿಇಒ ಎಸ್‌.ಜಿ. ಪಾಟೀಲ ಸೂಚಿಸಿದರು.ಪೋಲಾಗುತ್ತಿರುವ ಹಣ: ಜಿಲ್ಲೆಯಲ್ಲಿ ಜಲ ಸಂವರ್ಧನೆ ಯೋಜನೆಯಡಿ ಅಧಿಕಾರಿಗಳು 10 ತಿಂಗಳಲ್ಲಿ ಲಕ್ಷಾಂತರ ರೂಪಾಯಿ ಹಣ ವ್ಯಯ ಮಾಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಕೆಲಸ­ವಾಗಿಲ್ಲ. ಸರ್ಕಾರದ ಹಣ ಅನಗತ್ಯವಾಗಿ ಪೋಲಾಗಿ ಹೋಗುತ್ತಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ, ಇಲ್ಲವೇ ಕುರ್ಚಿ ಬಿಟ್ಟು ಕೆಳಗಿಳಿಯಿರಿ ಎಂದು ಸದಸ್ಯ ಎಂ.ಜಿ.ಕಿತ್ತಲಿ ಒತ್ತಾಯಿಸಿದರು.ಸದಸ್ಯರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಇಒ ಎಸ್‌.ಜಿ. ಪಾಟೀಲ, ಜಲ­ಸಂವರ್ಧನಾ ಯೋಜನೆಗೆ ಜಿಲ್ಲಾಧಿಕಾರಿ ಅಧ್ಯಕ್ಷರಾಗಿದ್ದು, ಈ ವಿಷಯ ಜಿ.ಪಂ. ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೇಳಿದರು.ಕೆರೆಗಳಿಗೆ ನೀರು ತುಂಬಿಸಲು ಆಗ್ರಹ: ಜಿಲ್ಲೆಯಲ್ಲಿ ಖಾಲಿ ಇರುವ ಕೆರೆಗಳಿಗೆ ನೀರು ತುಂಬಿಸಲು ಕ್ರಮಕೈಗೊಳ್ಳುವಂತೆ ಸದಸ್ಯರಾದ ಹೂವಪ್ಪ ರಾಠೋಡ, ಹನುಮಂತ ನಿರಾಣಿ, ಎಂ.ಜಿ.ಕಿತ್ತಲಿ ಮತ್ತಿತರ ಸದಸ್ಯರು ಆಗ್ರಹಿಸಿದರು.ಕೆರೆಗೆ ನೀರು ತುಂಬಿಸುವ ಯೋಜನೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರುವು­ದಿಲ್ಲ, ಅನುದಾನ ಒದಗಿಸಿದರೆ ಕ್ರಮ ಕೈಗೊಳ್ಳಬಹುದು ಎಂದರು. ಈ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರುವಂತೆ ಪಿಆರ್‌ಇಡಿ ಮುಖ್ಯ ಎಂಜಿನಿಯರ್‌ ಮನೋಹರ ಮಂದೋಲಿ ಸದಸ್ಯರಿಗೆ ಸಲಹೆ ನೀಡಿದರು.ಕೊಳವೆಬಾವಿ ವಿಳಂಬ: ಗಂಗಾ ಕಲ್ಯಾಣ ಯೋಜನೆಯಡಿ ಅರ್ಹ ಫಲಾ­ನು­ಭವಿ­ಗಳಿಗೆ ಮೂರು ವರ್ಷಗಳಿಂದ ಮಂಜೂರಾಗಿರುವ ಕೊಳವೆಬಾವಿ ಇದುವರೆಗೂ ಕೊರೆಸದೇ ಇರುವ ಬಗ್ಗೆ ಸದಸ್ಯ ಹನುಮಂತ ನಿರಾಣಿ ಮತ್ತು ಹೂವಪ್ಪ ರಾಠೋಡ ಸಭೆಯ ಗಮನಕ್ಕೆ ತಂದರು.ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧಿಕಾರಿ, ಮುಂದಿನ ವರ್ಷದ ಮೇ ಒಳಗಾಗಿ ಎಲ್ಲ ಕೊಳವೆಬಾವಿಗಳನ್ನು ಕೊರೆಸಲಾಗುವುದು ಎಂದು ಭರವಸೆ ನೀಡಿದರು.ಸಂತಾಪ: ಇತ್ತೀಚೆಗೆ ನಿಧನರಾದ ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್‌ ಮಂಡೇಲಾ ಮತ್ತು ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹ­ರಾಜ ಒಡೆಯರ್‌ ಅವರಿಗೆ ಸಭೆಯ ಆರಂಭದಲ್ಲಿ ಸಂತಾಪ ವ್ಯಕ್ತಪಡಿಸ­ಲಾಯಿತು.ಸನ್ಮಾನ: ಸದಸ್ಯರ ನಿಧನದಿಂದ ತೆರವಾದ ಮುಷ್ಠಿಗೇರಿ ಮತ್ತು ತೊದಲ­ಬಾಗಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ನೂತನವಾಗಿ ಆಯ್ಕೆಯಾದ ಇಬ್ಬರು ಮಹಿಳಾ ಸದಸ್ಯರನ್ನು ಅಧ್ಯಕ್ಷೆ ಶಾಂತವ್ವ ಭೂಷಣ್ಣನವರ, ಉಪಾಧ್ಯಕ್ಷ ಕೃಷ್ಣಾ ಓಗೆಣ್ಣನವರ, ಸಿಇಒ ಎಸ್‌.ಜಿ. ಪಾಟೀಲ ಸನ್ಮಾನಿಸಿದರು.

ಪ್ರತಿಕ್ರಿಯಿಸಿ (+)