ಜಿ.ಪಂ. ಅಧ್ಯಕ್ಷಗಾದಿ: ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ

7

ಜಿ.ಪಂ. ಅಧ್ಯಕ್ಷಗಾದಿ: ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ

Published:
Updated:

ರಾಮನಗರ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಗುರುವಾರ ನಡೆಯಲಿದ್ದು ಅಧ್ಯಕ್ಷ ಸ್ಥಾನಕ್ಕೇರಲು ಜೆಡಿಎಸ್‌ನಲ್ಲಿ ತೀವ್ರ ಪೈಪೋಟಿ ಆರಂಭವಾಗಿದೆ.ಬಯಸದೆ ಬಂದ ಭಾಗ್ಯ ಎಂಬಂತೆ ಉಪಾಧ್ಯಕ್ಷ ಸ್ಥಾನವನ್ನು ಅನಾಯಾಸವಾಗಿ ಪಡೆದುಕೊಂಡಂತಿರುವ ಕಾಂಗ್ರೆಸ್ ಪಕ್ಷವೂ ಜೆಡಿಎಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಂತಿಮ ಕ್ಷಣದವರೆಗೂ ಕಾದು ನೋಡುವ ತಂತ್ರ ಅನುಸರಿಸಿದೆ.ಒಟ್ಟಾರೆ 22 ಸದಸ್ಯರಿಂದ ಕೂಡಿರುವ ಜಿ.ಪಂನಲ್ಲಿ ಜೆಡಿಎಸ್ 12 ಹಾಗೂ ಕಾಂಗ್ರೆಸ್ 10 ಸದಸ್ಯರ ಬಲವನ್ನು ಹೊಂದಿದೆ.12 ಸದಸ್ಯರನ್ನು ಹೊಂದಿರುವ ಜೆಡಿಎಸ್ ಅಧ್ಯಕ್ಷ ಸ್ಥಾನ ಅಲಂಕರಿಸುವಷ್ಟು ಬಲ ಹೊಂದಿದೆ.ಈ ಸಂಬಂಧ ಪಕ್ಷದಲ್ಲಿ ಆಕಾಂಕ್ಷಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ.20 ತಿಂಗಳ ಆಡಳಿತಕ್ಕೆ ಸಂಬಂಧಿಸಿದಂತೆ ಜಿ.ಪಂ ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗದ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡದ (ಎಸ್.ಟಿ) ಮಹಿಳೆಗೆ ಮೀಸಲಾಗಿದೆ.ಸಾಮಾನ್ಯ ವರ್ಗದಡಿ ಜಿಡಿಎಸ್‌ನಲ್ಲಿ ಮೂವರು ಮಹಿಳೆಯರು ಆಯ್ಕೆಯಾಗಿದ್ದು, ಅದರಲ್ಲಿ ಇಬ್ಬರು ಚನ್ನಪಟ್ಟಣ ಹಾಗೂ ಒಬ್ಬರು ಮಾಗಡಿ ತಾಲ್ಲೂಕಿನವರಾಗಿದ್ದಾರೆ.ಈ ಮೂವರ ನಡುವೆ ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯುತ್ತದೆ ಎಂಬುದು ಅಂತಿಮ ಕ್ಷಣದಲ್ಲಿ ನಿರ್ಧಾರವಾಗುತ್ತದೆ ಎಂದು ಜೆಡಿಎಸ್ ನಾಯಕರು ಹೇಳುತ್ತಾರೆ.ಚನ್ನಪಟ್ಟಣಕ್ಕೆ ಅಧ್ಯಕ್ಷ ಸ್ಥಾನ-ಎಚ್‌ಡಿಕೆ: ‘ಈ ಬಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ಚನ್ನಪಟ್ಟಣದವರಿಗೆ ವಹಿಸಲು ನಿರ್ಧರಿಸಲಾಗಿದೆ. ಅಕ್ಕೂರು ಕ್ಷೇತ್ರದ ಕಲ್ಪನಾ ಮಲ್ಲಿಕಾರ್ಜುನಗೌಡ, ಮಳೂರು ಕ್ಷೇತ್ರದ ಯು.ಪಿ.ನಾಗೇಶ್ವರಿ ಅವರು ಆಕಾಂಕ್ಷಿಗಳಾಗಿದ್ದಾರೆ. ಈ ಎರಡೂ ಆಕಾಂಕ್ಷಿಗಳು ಹಾಗೂ ಪಕ್ಷದ ಸ್ಥಳೀಯ ಮುಖಂಡರ ಜತೆ ಚರ್ಚೆ ನಡೆಯುತ್ತಿದ್ದು, ಗುರುವಾರ ಬೆಳಗ್ಗಿನ ಜಾವದೊಳಗೆ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗುವುದು’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ಬುಧವಾರ ಪ್ರತಿಕ್ರಿಯಿಸಿದರು.ಚನ್ನಪಟ್ಟಣದ ಜೆಡಿಎಸ್ ಶಾಸಕರಾಗಿದ್ದ ಅಶ್ವತ್ಥ್ ಅವರು ಆಪರೇಷನ್ ಕಮಲಕ್ಕೆ ತುತ್ತಾಗಿ ಬಿಜೆಪಿ ಸೇರಿದ್ದರಿಂದ ಈ ಭಾಗದಲ್ಲಿ ಜೆಡಿಎಸ್‌ಗೆ ತೀವ್ರ ಮುಜುಗರ ಉಂಟಾಗಿತ್ತು. ಬಿಜೆಪಿಯ ಸಿ.ಪಿ.ಯೋಗೇಶ್ವರ್ ಹಾಗೂ ಅಶ್ವತ್ಥ್ ಅವರ ಬಿಗಿ ಹೋರಾಟದ ನಡುವೆಯೂ ಚನ್ನಪಟ್ಟಣದ ಜನತೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಪ್ರಚಂಡ ಜಯ ತಂದು ಕೊಟ್ಟಿದ್ದಾರೆ. ಹಾಗಾಗಿ ಈ ಬಾರಿ ಚನ್ನಪಟ್ಟಣದಿಂದ ಆಯ್ಕೆಯಾಗಿರುವವರಿಗೆ ಅಧ್ಯಕ್ಷ ಸ್ಥಾನ ನೀಡಲು ರಾಜ್ಯ ಮುಖಂಡರು ನಿರ್ಧರಿಸಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.ಕಳೆದ ಬಾರಿಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ನಡೆದ ಕೆಲ ನಾಟಕೀಯ ಘಟನೆಗಳು ಪುನರಾವರ್ತನೆ ಆಗದಂತೆ ನೋಡಿಕೊಳ್ಳಲು ಈ ಬಾರಿ ಜೆಡಿಎಸ್ ಕೂಡ ತಂತ್ರಗಳನ್ನು ರೂಪಿಸಿದೆ.ಕಾಲ ಬಂದಾಗ ಈ ತಂತ್ರಗಳನ್ನು ಬಳಸಿಕೊಳ್ಳುವುದಾಗಿ ಮುಖಂಡರೊಬ್ಬರು ತಿಳಿಸಿದರು.ಕಾಂಗ್ರೆಸ್‌ನಿಂದಲೂ ಸ್ಪರ್ಧೆ ಸಾಧ್ಯತೆ: ಜಿಲ್ಲಾ ಪಂಚಾಯಿತಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಕೂಡ ಅಧ್ಯಕ್ಷರ ಆಯ್ಕೆಗೆ ಉಮೇದುವಾರಿಕೆ ಸಲ್ಲಿಸುವ ಸಾಧ್ಯತೆ ಇದೆ.ಅಂತಿಮ ಕ್ಷಣದಲ್ಲಿ ಜೆಡಿಎಸ್ ಪಕ್ಷದಲ್ಲಿ ಗೊಂದಲಗಳು ಉಂಟಾಗಿ, ಬಿರುಕೇನಾದರೂ ಸೃಷ್ಟಿಯಾದರೆ, ಅದರ ಸಂಪೂರ್ಣ ಲಾಭ ಪಡೆಯುವ ಲೆಕ್ಕಚಾರವನ್ನು ಕಾಂಗ್ರೆಸ್ ಮಾಡಿದೆ ಎಂದು ತಿಳದು ಬಂದಿದೆ. ಆದರೆ ಉಮೇದುವಾರಿಕೆ ಯಾರು ಸಲ್ಲಿಸುತ್ತಾರೆ ಎಂಬ ವಿಚಾರವನ್ನು ಕಾಂಗ್ರೆಸ ಗೌಪ್ಯವಾಗಿಟ್ಟಿದ್ದು, ಅಂತಿಮ ಕ್ಷಣದಲ್ಲಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.ಜೆಡಿಎಸ್‌ನಿಂದ ‘ವಿಪ್’ ಜಾರಿ- ಸಾಧ್ಯತೆ: ಅಧ್ಯಕ್ಷ ಸ್ಥಾನ ಅಲಂಕರಿಸಲು ಅಗತ್ಯವಿರುವಷ್ಟು ಬಲ ಜೆಡಿಎಸ್‌ನಲ್ಲಿ ಇದ್ದರೂ, ಅಲ್ಲಿ ಒಂದು ಚೂರು ಒಡಕು ಕಂಡು ಬಂದರೂ ಅದರ ಎಲ್ಲ ಲಾಭವನ್ನು ಕಬಳಿಸಲು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದೆ.ಹಾಗಾಗಿ ಜೆಡಿಎಸ್ ತಮ್ಮ ಪಕ್ಷದ ಸದಸ್ಯರಿಗೆ ‘ವಿಪ್’ ಜಾರಿ ಮಾಡುವ ಸಾಧ್ಯತೆ ಇದೆ.ಒಂದು ವೇಳೆ ಯಾವುದೇ ಸದಸ್ಯರೂ ‘ವಿಪ್’ ಉಲ್ಲಂಘಿಸಿದರೆ ಅವರು ಅವರ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry