ಜಿ.ಪಂ: ಈರಪ್ಪ ಅಧ್ಯಕ್ಷ, ಸುನೀತಾ ಉಪಾಧ್ಯಕ್ಷೆ

7

ಜಿ.ಪಂ: ಈರಪ್ಪ ಅಧ್ಯಕ್ಷ, ಸುನೀತಾ ಉಪಾಧ್ಯಕ್ಷೆ

Published:
Updated:

ಬೆಳಗಾವಿ: ರಾಜ್ಯದಲ್ಲೇ ಅತಿದೊಡ್ಡದಾದ ಬೆಳಗಾವಿ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರಾಗಿ ಬಿಜೆಪಿಯ ಈರಪ್ಪ ಕಡಾಡಿ, ಉಪಾಧ್ಯಕ್ಷರಾಗಿ ಸುನೀತಾ ಶಿರಗಾಂವೆ ಆಯ್ಕೆಯಾದರು.ಮಂಗಳವಾರ ನಡೆದ ಚುನಾವಣೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಲ್ಲೋಳಿ ಕ್ಷೇತ್ರದ ಕಡಾಡಿ ಅವರು 66 ಮತಗಳನ್ನು ಪಡೆದು ಆಯ್ಕೆಯಾದರು. 14 ಸದಸ್ಯರು ತಟಸ್ಥರಾದರೆ, ಐವರು ಸದಸ್ಯರು ಚುನಾವಣೆ ಬಹಿಷ್ಕರಿಸಿ ಹೊರನಡೆದರು.ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಕ್ಷೇತರ ಅಭ್ಯರ್ಥಿ ಯಲ್ಲಪ್ಪ ಕಾಂಬಳೆ ಅವರು, ‘ಮರಾಠಿ ಭಾಷೆಯಲ್ಲಿ ಚುನಾವಣೆ ಪ್ರಕ್ರಿಯೆ ತಿಳಿಸುತ್ತಿಲ್ಲ’ ಎಂದು ಆರೋಪಿಸಿ ತಮ್ಮ ನಾಲ್ವರು ಬೆಂಬಲಿಗರ ಜತೆ ಹೊರಹೋದರು.ಪರಿಶಿಷ್ಟ ಪಂಗಡ ಮಹಿಳಾ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಗವಾಡ ಕ್ಷೇತ್ರದ ಅಭ್ಯರ್ಥಿ ಸುನೀತಾ ಶಿರಗಾಂವೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಪ್ರಾದೇಶಿಕ ಆಯುಕ್ತ ಸಿ.ಎಂ. ಶಿರೋಳ ತಿಳಿಸಿದರು.ಜಿಲ್ಲಾಧಿಕಾರಿ ಏಕರೂಪ್ ಕೌರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಎಸ್. ಮಲ್ಲಾಪುರ ಉಪಸ್ಥಿತರಿದ್ದರು.ಜಿಲ್ಲಾ ಪಂಚಾಯಿತಿಯಲ್ಲಿ ಪಕ್ಷೇತರ ಸದಸ್ಯರೊಬ್ಬರ ಬೆಂಬಲದೊಂದಿಗೆ 64 ಸದಸ್ಯ ಬಲವನ್ನು ಬಿಜೆಪಿ ಹೊಂದಿದ್ದು, ಆದರೆ ಅಧ್ಯಕ್ಷರು ಹೆಚ್ಚುವರಿಯಾಗಿ ಎರಡು ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದರು. ಕಾಂಗ್ರೆಸ್ಸಿನಿಂದ ಆಯ್ಕೆಯಾಗಿರುವ ಇಬ್ಬರು ಸದಸ್ಯರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ.ವಿಜಯೋತ್ಸವ” ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಈರಪ್ಪ ಕಡಾಡಿ, ಉಪಾಧ್ಯಕ್ಷರಾಗಿ ಸುನೀತಾ ಶಿರಗಾಂವೆ ಅವರು ಆಯ್ಕೆಘೋಷಣೆಯಾಗುತ್ತಿದ್ದಂತೆ ಹೊರಗಡೆ ನೆರೆದಿದ್ದ ಬೆಂಬಲಿಗರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು.ಪರಸ್ಪರ ಗುಲಾಲು ಹಾಕಿಕೊಂಡು ಕುಣಿದಾಡಿದ ಕಾರ್ಯಕರ್ತರು, ಘೋಷಣೆಗಳನ್ನೂ ಕೂಗಿದರು. ಅಧ್ಯಕ್ಷ ಕಡಾಡಿ ಅವರನ್ನು ಮೆರವಣಿಗೆಯಲ್ಲಿ ಕರೆದೊಯ್ಯದರು. ‘ಮೂಲಸೌಕರ್ಯಕ್ಕೆ ಆದ್ಯತೆ’

ಗ್ರಾಮೀಣ ರಸ್ತೆ, ಕುಡಿಯುವ ನೀರು ಹಾಗೂ ಮೂಲಸೌಕರ್ಯ ಒದಗಿಸಲು ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಜಿ.ಪಂ. ನೂತನ ಅಧ್ಯಕ್ಷ ಈರಪ್ಪ ಕಡಾಡಿ ತಿಳಿಸಿದ್ದಾರೆ.ಮಂಗಳವಾರ ನಡೆದ ಚುನಾವಣೆಯಲ್ಲಿ ಜಿ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಅವುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು ಎಂದರು.‘ಜಿಲ್ಲಾ ಪಂಚಾಯಿತಿಗೆ ವಿಶೇಷ ಅನುದಾನ ತರಲು ಪ್ರಯತ್ನ ಮಾಡಲಾಗುವುದು. 22 ವರ್ಷದಿಂದ ಕಾರ್ಯಕರ್ತನಾಗಿ ದುಡಿದ ನನ್ನನ್ನು ಪಕ್ಷ ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಹರ್ಷವಾಗಿದೆ’ ಎಂದು ಹೇಳಿದರು.‘ಮುಂಬರುವ ದಿನಗಳಲ್ಲಿ ಎಲ್ಲರ ಜಿಲ್ಲಾ ಪಂಚಾಯಿತಿ ಸದಸ್ಯರ, ಸಚಿವರ, ಸಂಸದರ ಹಾಗೂ ಶಾಸಕರ ಸಹಕಾರದೊಂದಿಗೆ ಅಭಿವೃದ್ಧಿಪರ ಆಡಳಿತ ನೀಡುತ್ತೇನೆ. ಆಯ್ಕೆಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry