ಜಿ.ಪಂ. ನಾಲ್ವರು ಸಿಬ್ಬಂದಿ ಅಮಾನತು

7

ಜಿ.ಪಂ. ನಾಲ್ವರು ಸಿಬ್ಬಂದಿ ಅಮಾನತು

Published:
Updated:

ಬಳ್ಳಾರಿ: ಇತಿಹಾಸ ಪ್ರಸಿದ್ಧ ಹಂಪಿಯಲ್ಲಿ ನಡೆದಿದ್ದ ಶ್ರೀಕೃಷ್ಣದೇವರಾಯನ ಪಟ್ಟಾಭಿಷೇಕ ಮಹೋತ್ಸವದ 500ನೇ ವರ್ಷಾಚರಣೆ ಸಮಾರಂಭಕ್ಕಾಗಿ ಟೆಂಡರ್ ಕರೆಯದೆ, ಸಂಚಾರಿ ಶೌಚಾಲಯ ಸೌಲಭ್ಯ ಕಲ್ಪಿಸಿದ ಅಕ್ರಮಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿಯ ಮೂವರು ಎಂಜಿನಿಯರ್‌ಗಳೂ ಸೇರಿದಂತೆ ಒಟ್ಟು ನಾಲ್ವರು ಸಿಬ್ಬಂದಿಯನ್ನು ಸರ್ಕಾರ ಅಮಾನತು ಮಾಡಿದೆ.ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಕಾರ್ಯಾನಿರ್ವಾಹಕ ಎಂಜಿನಿಯರ್ ವೆಂಕಟರಮಣ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೆಂಕಟರಾಜು,  ಸಹಾಯಕ ಎಂಜಿನಿಯರ್ ಪರುಶುರಾಮ್ ಹಾಗೂ ಮುಖ್ಯ ಲೆಕ್ಕಾಧಿಕಾರಿ ಪಂಪಯ್ಯ ಅವರೇ ಅಮಾನತುಗೊಂಡಿರುವ ಸಿಬ್ಬಂದಿ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತಿರಾಜ್ ಇಲಾಖೆ ಕಾಯದರ್ಶಿ ಈ ನಾಲ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.2010ರ ಜನವರಿಯಲ್ಲಿ ಮೂರು ದಿನಗಳ ಕಾಲ ನಡೆದಿದ್ದ ಈ ಸಮಾರಂಭಕ್ಕೆ ಆಗಮಿಸಿದ್ದ ಜನರಿಗೆ ಅನುಕೂಲ ಕಲ್ಪಿಸಲು ಬೆಂಗಳೂರಿನ ಸಾರಾ ಪ್ಲಾಸ್ಟ್ ಎಂಬ ಕಂಪೆನಿಗೆ ಒಟ್ಟು ರೂ 24 ಲಕ್ಷ ಬಾಡಿಗೆ ನೀಡಿ ಈ ಸಂಚಾರಿ ಶೌಚಾಲಯ ತರಿಸಲಾಗಿತ್ತು.ಆದರೆ, ಒಂದು ಲಕ್ಷ ರೂಪಾಯಿಗಿಂತ ಅಧಿಕ ವೆಚ್ಚದ ಸಾಮಗ್ರಿ ಖರೀದಿ ಅಥವಾ ಬಾಡಿಗೆಗೆ ಕಡ್ಡಾಯವಾಗಿ ಟೆಂಡರ್ ಕರೆಯಬೇಕು ಎಂಬ ನಿಮಮವಿದ್ದು, ಅದನ್ನು  ಉಲ್ಲಂಘಿಸಿ, ಒಟ್ಟು 80 ಸಂಚಾರಿ ಶೌಚಾಲಯ ಅಳವಡಿಸಿದ್ದಲ್ಲದೆ ನಂತರ ಹಣವನ್ನೂ ಬಿಡುಗಡೆ ಮಾಡಲಾಗಿದೆ.

ಈ ಕುರಿತು ತನಿಖೆ ನಡೆಸಿದ್ದ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಅವರು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಗೆ ಸಲ್ಲಿಸಿದ್ದ ವರದಿ  ಮೇರೆಗೆ ನಾಲ್ವರು ಅಧಿಕಾರಿಗಳನ್ನು ಅಮಾನತು ಮಾಡಿ ಇಲಾಖಾ ವಿಚಾರಣೆ ಬಾಕಿ ಇರಿಸಲಾಗಿದೆ.

ಕೇಂದ್ರ ಸರ್ಕಾರದ ಸ್ವಚ್ಛತಾ ಯೋಜನೆ ಅಡಿ ನೀಡುವ ಅನುದಾನದ ಹಣವನ್ನು ಕೆಲವು ತಿಂಗಳುಗಳ ನಂತರ ಬಿಡುಗಡೆ ಮಾಡಲಾಗಿತ್ತು. 24 ಲಕ್ಷ ರೂಪಾಯಿ ವೆಚ್ಚದಲ್ಲಿ ಸಂಚಾರಿ ಶೌಚಾಲಯಗಳನ್ನು ಸ್ವಂತಕ್ಕೇ ಖರೀದಿಸಬಹುದಿತ್ತು ಎಂದೂ ಜಿಲ್ಲಾ ಪಂಚಾಯಿತಿಯ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿದ್ದ ಜಿಲ್ಲಾಧಿಕಾರಿಯವರು ವರದಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry