ಸೋಮವಾರ, ಮೇ 17, 2021
23 °C

ಜಿ.ಪಂ. ನಿಷ್ಕ್ರಿಯಗೊಳಿಸಿದ ಸರ್ಕಾರ: ಭೀಮಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: `ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗೆ ಬರುವ ಅನುದಾನಗಳನ್ನು ಶಾಸಕರಿಗೆ ನೀಡುವ ಮೂಲಕ ಬಿಜೆಪಿ ಸರ್ಕಾರ ಜಿಲ್ಲಾ ಪಂಚಾಯಿತಿ ವ್ಯವಸ್ಥೆಯನ್ನೇ ನಿಷ್ಕ್ರಿಯ ಮಾಡಿದೆ~ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ದೂರಿದರು.ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಪಂ. ತಾ.ಪಂ. ಮತ್ತು ಗ್ರಾಮ ಪಂಚಾಯಿತಿಗಳನ್ನು ವಿಲೀನಗೊಳಿಸಿ ಶಾಸಕರ ಅಧೀನಕ್ಕೆ ಒಪ್ಪಿಸುವುದು ಒಳಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.`ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಈ ಸಮಸ್ಯೆ ಬಗೆಹರಿಸುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ಇಬ್ಬರು ಸಚಿವರು. ನಾಲ್ಕು ನಿಗಮ ಮಂಡಳಿಗಳ ಅಧ್ಯಕ್ಷರಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಎಲ್ಲರೂ ತಮ್ಮ ಕುರ್ಚಿ ಭದ್ರಪಡಿಸಿಕೊಳ್ಳಲು ಸ್ವಾರ್ಥದ ರಾಜಕಾರಣದಲ್ಲಿ ತೊಡಗಿದ್ದಾರೆ~ ಎಂದು ನಾಯ್ಕ ಹರಿಹಾಯ್ದರು.ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಒತ್ತಟ್ಟಿಗಿರಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಲ್ಲ. ಈ ಸಮಸ್ಯೆಗಳ ಕುರಿತು ಅಧಿಕಾರಿಗಳನ್ನು ಕೇಳಿದರೆ ಹಣ ಎಲ್ಲ ಎಂದು ಹೇಳುತ್ತಿದ್ದಾರೆ. ಹೀಗಾದರೆ ಜನ ಹೇಗೆ ಜೀವನ ನಡೆಸಬೇಕು ಎಂದು ಅವರು ಪ್ರಶ್ನಿಸಿದರು.`ನೀರಿನ ಸಮಸ್ಯೆ ನೀಗಿಸಲು ಕೆರೆ, ಕಟ್ಟೆ, ಕೊಳವೆ ಬಾವಿ ಮತ್ತು ತೆರೆದ ಬಾವಿಗಳನ್ನು ನಿರ್ಮಿಸಲು ಸದಸ್ಯರಿಗೆ ಅನುದಾನವಿಲ್ಲ. ಹಿಂದಿನ ಜಿಲ್ಲಾ ಪಂಚಾಯಿತಿ ವ್ಯವಸ್ಥೆಯಲ್ಲಿ ಒಬ್ಬೊಬ್ಬ ಸದಸ್ಯರ ಕ್ಷೇತ್ರದಲ್ಲಿ ಕನಿಷ್ಟ ಪಕ್ಷ 10 ಬಾವಿ ನಿರ್ಮಿಸಲಾಗಿತ್ತು.

 ಈಗ ಇಡೀ ಜಿಲ್ಲೆಯಲ್ಲಿ 10 ಬಾವಿ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಶಾಸಕರಿಗೆ ರೂ. 30ರಿಂದ 40 ಲಕ್ಷ ಅನುದಾನ  ನೀಡಿದೆ. ಈ ಅನುದಾನವನ್ನು ಎಲ್ಲಿ ಖರ್ಚು ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ~ ಎಂದರು.ಉದ್ಯೋಗ ಖಾತ್ರಿಯಲ್ಲಿ ದುಡಿದ ಕಾರ್ಮಿಕರಿಗೆ ಹಣ ಕೊಡಲೂ ಅನುದಾನವಿಲ್ಲ ಎಂದ ಅವರು, ಸಿಎಂ ಸದಾನಂದ ಗೌಡ ಅವರು ಮಂಡಿಸಿದ ಲಕ್ಷ ಕೋಟಿ ಬಜೆಟ್‌ನಿಂದ ರೈತರು ಮತ್ತು ಯುವಕರಿಗೆ ಯಾವುದೇ ರೀತಿಯ ಉಪಯೋಗವಾಗಿಲ್ಲ ಎಂದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಉದಯನಾಯ್ಕ ಮಾತನಾಡಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ತುರ್ತಾಗಿ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಯಾವುದೇ ರೀತಿಯ ಅನುದಾನಗಳನ್ನು ನೀಡುತ್ತಿಲ್ಲ.ಟಾಸ್ಕ್‌ಫೋರ್ಸ್‌ಗೆ ರೂ. 20 ಲಕ್ಷ ನೀಡಲಾಗಿದೆ. ಇದನ್ನು ಆರು ಕ್ಷೇತ್ರಗಳಿಗೆ ಹಂಚಬೇಕು. ಜಿಲ್ಲೆಯಾದ್ಯಂತ ಗುಂಡಿ ಮುಚ್ಚಲು ರೂ. 18 ಕೋಟಿ ಪ್ರಸ್ತಾವ ಸಲ್ಲಿಸಲಾಗಿತ್ತು. ಸರ್ಕಾರ ಕೇವಲ ಒಂದು ಕೋಟಿ ರೂಪಾಯಿ ನೀಡಿದೆ ಎಂದರು.ನೀರಿನ ಬರ ನೀಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ನರಸಿಂಹಮೂರ್ತಿ ಮನವಿ ಸ್ವೀಕರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.