ಶುಕ್ರವಾರ, ಮೇ 7, 2021
19 °C

ಜಿಪಂ ಸದಸ್ಯರ ಹೊಣೆಗೇಡಿತನ: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೆ ಶುಕ್ರವಾರ ಸದಸ್ಯರು ಹಾಜರಾಗದೆ ಬೇಜವಾಬ್ದಾರಿಯನ್ನು ಪ್ರದರ್ಶಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ಮುಂಗಾರು ಬಿತ್ತನೆಗೆ ಬೀಜ, ಗೊಬ್ಬರ ಪೂರೈಕೆ ಇನ್ನಿತರ ಗಂಭೀರ ಸಮಸ್ಯೆಗಳನ್ನು ಚರ್ಚೆಸದೆ ದೂರ ಉಳಿದ್ದಿದ್ದು ನಾಚಿಗೇಡು ಸಂಗತಿಎಂದು ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.ಸ್ವಪ್ರತಿಷ್ಠೆಯನ್ನು ಬದಿಗೊತ್ತಿ ಸಾರ್ವಜನಿಕರ ಸಮಸ್ಯೆಗಳತ್ತ ಗಮನಹರಿಸಿ ಇಲ್ಲವೇ ರಾಜೀನಾಮೆ ಬಿಸಾಕಿ ಹೊರಕ್ಕೆ ಬನ್ನಿ ಎಂದು ಬಿಜೆಪಿ ರೈತಮೋರ್ಚಾ, ತಾಲ್ಲೂಕು ಪ್ರಾಂತ ರೈತ ಸಂಘ, ಕರ್ನಾಟಕ ಕಿಸಾನ ಸಂಘ, ತಾಲ್ಲೂಕು ಸಿಪಿಐ(ಎಂ), ಕೃಷಿಕೂಲಿಕಾರ ಸಂಘ, ಕೃಷ್ಣಾ ಹಿತರಕ್ಷಣಾ ಸಮಿತಿ, ಭೂಮಿ ಉಳಿಸಿ ಹೋರಾಟ ಸಂಘದ ಕಾರ್ಯಕರ್ತರು ಆಗ್ರಹಿಸಿದ್ದಾರೆ.ಚುನಾವಣೆ ನೀತಿ ಸಂಹಿತೆ ಜಾರಿಯಿಂದ ಆರು ತಿಂಗಳಿಂದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆದಿರಲಿಲ್ಲ. ಬೇಸಿಗೆ ಪ್ರಖರತೆಯಿಂದ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ ಜನತೆ ತೀವ್ರವಾದ ತೊಂದರೆಯನ್ನು ಅನುಭವಿಸುತ್ತಾ ಕಾಲ ಕಳೆಯುವಂತಾಯಿತು. ಮುಂಗಾರು ಮಳೆ ನಿರೀಕ್ಷೆಯೊಂದಿಗೆ ಬಿತ್ತನೆ ಬೀಜಕ್ಕಾಗಿ ರೈತರು ಪರಿತಪಿಸುತ್ತಿದ್ದಾರೆ ಇಂತಹ ಹತ್ತಾರು ಸಮಸ್ಯೆಗಳ ಬಗ್ಗೆ ಚಿಂತನೆ ಮಾಡದೆ ಸದಸ್ಯರು ರಾಜಕೀಯ ಸ್ವಾರ್ಥಕ್ಕಾಗಿ ಸಾಮಾನ್ಯ ಸಭೆಯ ಸಮಯದಲ್ಲಿ ಹೊರಗಡೆ ಹಾಜರಿದ್ದು  ಸಭೆಯಲ್ಲಿ ಭಾಗವಹಿಸದೆ ಕಾಲಹರಣ ಮಾಡುತ್ತಾ ಕುಳಿತುಕೊಳ್ಳುವುದು ಖಂಡನಾರ್ಯವೆಂದು ಬಿಜೆಪಿಯ ರೈತ ಮೋರ್ಚಾದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಜಿಲ್ಲಾ ಪಂಚಾಯಿತಿ ಕೂಡಾ ಕಾಂಗ್ರೆಸ್‌ಮಯವಾಗಿದೆ. ಹಲವಾರು ಜನಪರ ಯೋಜನೆಗಳ ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸದಸ್ಯರು ಮಾತ್ರ ಜನರ ಸಮಸ್ಯೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಸದಸ್ಯರಿಗೆ ಮೂಗುದಾರ ಹಾಕಬೇಕು. ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಇಚ್ಛಾಶಕ್ತಿ ಸದಸ್ಯರಲ್ಲಿ ಇರದಿದ್ದರೆ ಸದಸ್ಯತ್ವಕ್ಕೆ  ರಾಜೀನಾಮೆ ಬಿಸಾಕಿ ಹೊರ ಬನ್ನಿ ಎಂದು ತಾಲ್ಲೂಕು ಕೃಷಿಕೂಲಿಕಾರ ಸಂಘದ ಕಾರ್ಯದರ್ಶಿ ಮಲ್ಲಯ್ಯ ಪೊಲಂಪಲ್ಲಿ ಸಲಹೆ ಮಾಡಿದ್ದಾರೆ.ನಿಜವಾಗಿ ಜನಪರ ಕಾಳಜಿಯುಳ್ಳ ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚಕಾರ ಎತ್ತಲಿಲ್ಲ. ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಳ್ಳದಲ್ಲಿ ಒರತಿ ತೆಗೆದು ಅದನ್ನೇ ಕುಡಿದು ಮೌನವಹಿಸಿದ ಕುರಿತು ಮಾಧ್ಯಮಗಳಲ್ಲಿ ವರದಿ ಬಂದರೂ ಕನಿಷ್ಠ ಸೌಜನ್ಯಕ್ಕಾದರೂ ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಯ ಆಲಿಸದೆ, ಸಾಮಾನ್ಯ ಸಭೆಗೂ ಹಾಜರಾಗದೆ ಬರಖಾಸ್ತುಗೊಳಿಸುವುದು ಅತ್ಯಂತ ಲಜ್ಜೆಗೆಟ್ಟ ವರ್ತನೆಯಾಗಿದೆ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಕಾರ್ಯದರ್ಶಿ ಸಿದ್ದಯ್ಯ ಹಿರೇಮಠ ಹೇಳಿದ್ದಾರೆ.ಬೇಸಿಗೆ ಕಾಲದ ಸಂದರ್ಭದಲ್ಲಿ ಕುಡಿಯುವ ನೀರಿಗಾಗಿ ಕೋಟ್ಯಂತರ ರೂ. ಹಣ ದುರ್ಬಳಕೆಯಾಗಿದ್ದು ಸಾಮಾನ್ಯ ಸಭೆಯಲ್ಲಿ ಸಮಗ್ರ ಚರ್ಚೆ ನಡೆಸಿ ಸದಸ್ಯರು ತಮ್ಮ ಬದ್ಧತೆಯನ್ನು ತೋರಿಸಬೇಕೆಂದು ಎಸ್.ಎಂ.ಸಾಗರ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.