ಜಿ.ಪಂ. ಸಭೆಯಲ್ಲಿ ಸದಸ್ಯರ ಒಕ್ಕೊರಲ ಅಳಲು

7

ಜಿ.ಪಂ. ಸಭೆಯಲ್ಲಿ ಸದಸ್ಯರ ಒಕ್ಕೊರಲ ಅಳಲು

Published:
Updated:
ಜಿ.ಪಂ. ಸಭೆಯಲ್ಲಿ ಸದಸ್ಯರ ಒಕ್ಕೊರಲ ಅಳಲು

ಬಳ್ಳಾರಿ: `ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಕಾರ್ಯಕ್ರಮಗಳಿಗೆ ಜಿ.ಪಂ. ಸದಸ್ಯರನ್ನು ಕರೆಯುವುದೇ ಇಲ್ಲ. ಮರ್ಯಾದೆಯೇ ಇಲ್ಲ, ಗೌರವವೂ ಇಲ್ಲ. ವಿವಿಧ ರೀತಿಯ ಯೋಜನೆಗಳ ಬಗ್ಗೆ ಮಾಹಿತಿ ಕೇಳಿದರೆ ಸೂಕ್ತ ರೀತಿಯಲ್ಲಿ ಸ್ಪಂದಿಸುವುದೇ ಇಲ್ಲ. ನಮಗೆ ಒಂದು ಫೋನ್ ಕೂಡ ಮಾಡುವುದಿಲ್ಲ~.

ಜಿಲ್ಲಾ ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಬಗೆ ಇದು.ಸಭಾತ್ಯಾಗ: ಬೆಳಿಗ್ಗೆ 11.30ಕ್ಕೆ ಸಭೆ ಆರಂಭ ಆಗುತ್ತಿದ್ದಂತೆಯೇ ಹಗರಿ ಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ ಕ್ಷೇತ್ರದ ಬಿಜೆಪಿ ಸದಸ್ಯೆ ರತ್ನಮ್ಮ ಕರಿಬಸವನಗೌಡರ್ ಅವರು ಇತ್ತೀಚೆಗೆ ತಾಲ್ಲೂಕಿನ ಮಾಲವಿ ಮತ್ತು ನಂದಿಪುರ ಗ್ರಾಮಗಳಲ್ಲಿ ನಡೆದ ಯಾತ್ರಿನಿವಾಸ ಹಾಗೂ ಪ್ರವಾಸಿ ಕೇಂದ್ರದ ಶಂಕುಸ್ಥಾಪನೆ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಿಯೇ ಇಲ್ಲ ಎಂದು ದೂರುವ ಮೂಲಕ ಚರ್ಚೆಗೆ ನಾಂದಿ ಹಾಡಿದರು.`ಅಡಿಗಲ್ಲು ಸಮಾರಂಭಕ್ಕೆಂದೇ ಕೆತ್ತಲಾದ ಕಲ್ಲಿನಲ್ಲಿ ನನ್ನ ಹೆಸರನ್ನೂ ಸೇರಿಸಿಲ್ಲ. ಇದೇ ರೀತಿ ಆದರೆ ನಾನು ಅಧಿಕಾರದಲ್ಲಿ ಇರುವುದಾದರೂ ಏಕೆ? ಈ ಕುರಿತು ಸ್ಪಷ್ಟನೆ ನೀಡದಿದ್ದರೆ ಮುಂದಿನ ಸಭೆಯಲ್ಲಿ ರಾಜೀನಾಮೆ ಸಲ್ಲಿಸಿ ಮನೆಯಲ್ಲಿ ಕುಳಿತುಕೊಳ್ಳುತ್ತೇನೆ~ ಎಂದ ಅವರು, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ ಅವರಿಗೆ ಈ ಕುರಿತ ದೂರು ಸಲ್ಲಿಸಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.ಸಭೆ ತ್ಯಜಿಸಿ ಹೊರ ನಡೆಯುವುದು ಬೇಡ ಎಂದು ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ಕೆಲವು ಸದಸ್ಯರು ರತ್ನಮ್ಮ ಅವರಲ್ಲಿ ಮನವಿ ಮಾಡಿದ ರಾದರೂ, ಅವರು ಮನವಿ ತಿರಸ್ಕರಿಸಿ ಸಭಾತ್ಯಾಗ ಮಾಡಿಯೇ ಬಿಟ್ಟರು.`ಆಡಳಿತಾರೂಢ ಪಕ್ಷದ ಸದಸ್ಯರಿಗೇ ಈ ರೀತಿಯ ಸಮಸ್ಯೆಗಳಿವೆ ಎಂದಾದರೆ, ವಿರೋಧ ಪಕ್ಷದ ಸದಸ್ಯರ ಪರಿಸ್ಥಿತಿ ಏನಿರಬಹುದು ಎಂಬುದನ್ನು ನೀವೇ ಲೆಕ್ಕಹಾಕಿ~ ಎಂದು ಕಾಂಗ್ರೆಸ್ ಸದಸ್ಯರು ತಗಾದೆ ತೆಗೆದರಲ್ಲದೆ, ಅಧಿಕಾರಿಗಳು ಜಿ.ಪಂ. ಸದಸ್ಯರಿಗೆ ಗೌರವ ನೀಡುವುದೇ ಇಲ್ಲ. ಜನರ ಸಮಸ್ಯೆಗಳ ಬಗ್ಗೆ ತಿಳಿಸಿದರೂ ಸ್ಪಂದಿಸುವುದಿಲ್ಲ. ಮಾಹಿತಿ ಕೇಳಿದರೂ ನೀಡುವುದಿಲ್ಲ ಎಂದು ಆರೋಪಿಸಿದರು.ಸಾಮಾನ್ಯ ಸಭೆಯ ಕುರಿತ ಅನು ಪಾಲನಾ ವರದಿಯನ್ನೂ ಸದಸ್ಯರಿಗೆ ಮುಂಚಿತವಾಗಿ ಮುಟ್ಟಿಸಲಾಗುವುದಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಕಸ ಗುಡಿಸುವ ಕೆಲಸ ಮಾಡುವವರ ಕೈಲಿ ಅನುಪಾಲನಾ ವರದಿಯ ಪ್ರತಿಯನ್ನು ಕಳುಹಿಸಲಾಗಿದೆ. ಈ ಕುರಿತು ದೂರವಾಣಿ ಕರೆ ಮಾಡಿಯೂ ತಿಳಿಸುವ ಸೌಜನ್ಯ ತೋರುವುದಿಲ್ಲ ಎಂದು ಅವರು ಆರೋಪಿಸಿದರು.ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆದರೂ ಜಿ.ಪಂ. ಸದಸ್ಯರನ್ನು ಆಹ್ವಾನಿಸಿಲ್ಲ ಎಂದು ಹೊಳಲು ಕ್ಷೇತ್ರದ ಸದಸ್ಯೆ ಬೆಂಡಿಗೇರಿ ಶೋಭಾ ದೂರಿದರು.ಗ್ರಾಮ ಸಭೆಗಳ ಬಗ್ಗೆ ಮಾಹಿತಿ ನೀಡುವುದಿಲ್ಲ. ತಾಲ್ಲೂಕಿನಲ್ಲಿರುವ ಕೆಲವು ಸದಸ್ಯರನ್ನು ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಅಥವಾ ಉದ್ಘಾಟನೆಯ ಸಂದರ್ಭ ಆಹ್ವಾನಿಸುವುದಿಲ್ಲ ಎಂದು ಅವರು ಹರಿಹಾಯ್ದರು.ಸಿಐಡಿ ನೇಮಿಸಿ: `ಅಧಿಕಾರಕ್ಕೆ ಬಂದು ಒಂದು ವರ್ಷವೇ ಕಳೆದಿದೆ. ನಾವು ಮತದಾರರಿಗೆ ಹೆಮ್ಮೆಯಿಂದ ಯಾವುದಾದರೂ ಕೆಲಸ ಮಾಡಿರುವ ಬಗ್ಗೆ ಹೇಳಿಕೊಳ್ಳುವಂತಹ ಸಾಧನೆಗಳೇ ಇಲ್ಲ. ಒಬ್ಬ ಬಡವರಿಗೂ ಮನೆ ನೀಡಲು ಸಾಧ್ಯವಾಗಿಲ್ಲ~ ಎಂದು ಹೇಳಿದ ಕರೂರು ಸದಸ್ಯೆ ಮಲ್ಲಮ್ಮ, ನಾವೇನಾದರೂ ಕೆಲಸ ಮಾಡಿದ್ದೇವೆಯೇ ಎಂದು ಸಿಐಡಿ ಅವರನ್ನು ನೇಮಿಸಿ ತಿಳಿದುಕೊಳ್ಳಿ~ ಎಂದು ಸಲಹೆ ನೀಡಿದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.ಬಹುತೇಕ ಸದಸ್ಯರು ಇದನ್ನು ಪುರಸ್ಕರಿಸಿ ಮೇಜು ಕುಟ್ಟಿ ಅಭಿನಂದನೆ ಸಲ್ಲಿಸಿದರು.

`ಸಮುದ್ರದಲ್ಲಿ ಈಜಬಹುದು. ಆದರೆ, ರಾಜಕೀಯ ಎಂಬ ದೊಡ್ಡ ಸಮುದ್ರದಲ್ಲಿ ಜನಸೇವೆ ಮಾಡದಿದ್ದರೆ ಈಜುವುದು ಕಷ್ಟ. ಜನ ನಮ್ಮ ಕೆಲಸ- ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸು ತ್ತಾರೆ~ ಎಂದು ಅವರು ಮಾರ್ಮಿಕವಾಗಿ ನುಡಿದರು.ಪ್ರತಿ ಗ್ರಾಮಕ್ಕೆ 60, 70 ಆಶ್ರಯ ಮನೆಗಳನ್ನು ಮಂಜೂರು ಮಾಡ ಲಾಗಿದೆ ಎಂದು ಅಧಿಕಾರಿಗಳು ವಿವರ ನೀಡಿದರಾದರೂ, ಸಂತೃಪ್ತರಾಗದ ಮಲ್ಲಮ್ಮ, ಅಂಗವಿಕಲರಿಗೆ ಮಾತ್ರ ಮನೆ ನೀಡಲಾಗಿದೆ. ಎಲ್ಲ ವರ್ಗದ ಬಡ ಜನರಿಗೆ ಮನೆ ಮಂಜೂರು ಮಾಡ ಲಾಗಿಲ್ಲ. ಇದೀಗ ಮನೆ ನೀಡಿರುವುದು ಐದಾರು ವರ್ಷಗಳ ಹಿಂದೆ ಇದ್ದ ಸದಸ್ಯರ ಸಾಧನೆಯ ಫಲ ಎಂದು ಹರಿಹಾಯ್ದರು.ಪೋಷಕರಲ್ಲದವರಿಗೆ ಸದಸ್ಯತ್ವ: ಸಂಡೂರು ತಾಲ್ಲೂಕಿನ ಕೆಲವು ಪ್ರಾಥಮಿಕ ಶಾಲೆಗಳ ಎಸ್‌ಡಿಎಂಸಿ ಪದಾಧಿಕಾರಿಗಳನ್ನು ನೇಮಿಸುವ  ಸಂದರ್ಭ ಪಾಲಕ- ಪೋಷಕರಲ್ಲದ ವರಿಗೂ ಸದಸ್ಯತ್ವ ನೀಡಿ, ಸಮಿತಿ ರಚಿಸಲಾಗಿದೆ. ವಿದ್ಯಾರ್ಥಿಗಳ ಪಾಲಕರು ಅಥವಾ ಪೋಷಕರಿಗೆ ಮಾತ್ರ ಸದಸ್ಯತ್ವ ನೀಡಬೇಕು ಎಂಬ ನಿಯಮವನ್ನು ಗಾಳಿಗೆ ತೂರಲಾಗಿದೆ ಎಂದು ತೋರಣ ಗಲ್ ಕ್ಷೇತ್ರದ ಸದಸ್ಯ ಶರಣಪ್ಪ ಕೊಟಗಿನಹಾಳ್ ಆಕ್ರೋಶ ವ್ಯಕ್ತಪಡಿಸಿದರು.ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಅವರಿಗೆ ವಿಷಯ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಶಾಸಕರೊಂದಿಗೆ ಚರ್ಚಿಸಿ, ಪಾಲಕರಲ್ಲದವರ ಸದಸ್ಯತ್ವ ರದ್ದು ಮಾಡುವುದಾಗಿ ಎರಡು ತಿಂಗಳ ಹಿಂದೆಯೇ ಹೇಳಿದರೂ ಈವರೆಗೆ ಕ್ರಮ ಕೈಗೊಂಡಿಲ್ಲ. ನಿರ್ಲಕ್ಷ್ಯ ತಾಂಡವ ಆಡುತ್ತಿದೆ ಎಂದು ಅವರು ದೂರಿದರು.ಶಾಸಕರು ವಿಧಾನಸಭೆ ಅಧಿವೇಶನಕ್ಕೆ ತೆರಳಿದ್ದರಿಂದ ಅವರನ್ನು ಭೇಟಿ ಮಾಡುವುದು ಸಾಧ್ಯವಾಗಿಲ್ಲ. ಅವರನ್ನು ಭೇಟಿ ಮಾಡಿ ಚರ್ಚಿಸಿ, ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯವರು ಸಭೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry