ಗುರುವಾರ , ಮೇ 13, 2021
16 °C
371 ನೇ ಕಲಂ ಜಾರಿ ಆಗುವವರೆಗೆ ಶಿಕ್ಷಕರ ವರ್ಗಾವಣೆ ಬೇಡ

ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಕುಸಿದಿದೆ. ಈಗಾಗಲೇ ಸಾಕಷ್ಟು ಶಿಕ್ಷಕರ ಕೊರತೆ ಎದುರಾಗಿದ್ದು, ಈ ಬಾರಿಯೂ ವರ್ಗಾವಣೆ ಆದಲ್ಲಿ ಶಿಕ್ಷಕರೇ ಇಲ್ಲದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂವಿಧಾನದ 371 ನೇ ಕಲಂ ತಿದ್ದುಪಡಿ ಮಸೂದೆ ಜಾರಿಗೆ ಬರುವವರೆಗೆ ಜಿಲ್ಲೆಯ ಶಿಕ್ಷಕರ ವರ್ಗಾವಣೆ ಮಾಡದೇ ಇರುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯ ಅಂಗೀಕರಿಸಲಾಯಿತು.ಮಂಗಳವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ದೇವರಾಜ ನಾಯಕ, ಜಿಲ್ಲೆಯಾದ್ಯಂತ ಶಿಕ್ಷಕರ ಕೊರತೆಯಿಂದ ಮಕ್ಕಳ ಪಾಠ, ಪ್ರವಚನಗಳ ಮೇಲೆ ಪರಿಣಾಮ ಬೀರುತ್ತಿದೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿ ಇದೆ. ಇಂತಹ ಸಂದರ್ಭದಲ್ಲಿ ಇದೀಗ ಶಿಕ್ಷಕರ ವರ್ಗಾವಣೆ ಮಾಡಿದಲ್ಲಿ, ಮತ್ತಷ್ಟು ಶಿಕ್ಷಕರ ಕೊರತೆ ಉಂಟಾಗುತ್ತದೆ. ಕೂಡಲೇ ಶಿಕ್ಷಕರ ವರ್ಗಾವಣೆ ತಡೆ ಹಿಡಿಯಬೇಕು ಎಂದು ಹೇಳಿದರು.371 ಜೆ ಕಲಂ ಜಾರಿಗೆ ಬರುವ ತನಕ ಜಿಲ್ಲೆಯಿಂದ ಯಾವ ಅಧಿಕಾರಿಯನ್ನು ವರ್ಗ ಮಾಡಬಾರದು. ಒಂದು ವೇಳೆ ವರ್ಗವಾಗಿದ್ದರೆ ಅದನ್ನು ತಡೆಯಬೇಕು. ಈಗಾಗಲೇ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇವೆ. ಈಗ ವರ್ಗವಾಗುವ ಶಿಕ್ಷಕರನ್ನು 371 ಕಲಂ ನೇ ಕಲಂ ತಿದ್ದುಪಡಿ ಮಸೂದೆ ಜಾರಿಗೆ ಬರುವವರೆಗೆ ವರ್ಗಾವಣೆ ಮಾಡದಂತೆ ನಿರ್ಣಯ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಇದಕ್ಕೆ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಧ್ವನಿಗೂಡಿಸಿದ ಹಿನ್ನೆಲೆಯಲ್ಲಿ ಕೇವಲ ಶಿಕ್ಷಣ ಇಲಾಖೆ ಮಾತ್ರವಲ್ಲ, ಬೇರೆ ಯಾವುದೇ ಇಲಾಖೆಯಲ್ಲೂ ವರ್ಗವಾದ ಸಿಬ್ಬಂಂದಿಯನ್ನು ಬಿಡುಗಡೆ ಮಾಡದಂತೆ ನಿರ್ಣಯ ಅಂಗೀಕರಿಸಿ, ಸರ್ಕಾರಕ್ಕೆ ಕಳುಹಿಸುವುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಎ. ಜಿಲಾನಿ ತಿಳಿಸಿದರು.ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇಲಾಖೆಗಳ ಅಧಿಕಾರಿಗಳು ರಜೆಯ ಮೇಲೆ ಹೋಗುವ ಮುನ್ನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಪರವಾನಿಗೆ ಪಡೆಯಬೇಕು ಎಂದು ಸೂಚನೆ ನೀಡಿದರು. ಪ್ರಾರಂಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಎಚ್.ಸಿ. ಪಾಟೀಲ್, ಜಿಲ್ಲಾ ಪಂಚಾಯಿತಿ ಇರುವ ಬಗ್ಗೆ ಜನತೆಯಲ್ಲಿ ಅನುಮಾನ ಮೂಡಿದೆ. ಹೊಸ ಹಾಣಕಾಸಿನ ವರ್ಷ ಪ್ರಾರಂಭವಾಗಿ ಮೂರು ತಿಂಗಳಗಳು ಕಳೆದರೂ ಒಂದು ಕ್ರಿಯಾ ಯೋಜನೆ ಮಂಜೂರಿಯಾಗಿಲ್ಲ. ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಇದರಿಂದ ಜನಪ್ರತಿನಿಧಿಗಳ ಬಗ್ಗೆ ಜನರಲ್ಲಿ ಅನುಮಾನ ಮೂಡುವಂತಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.ಹಿಂದಿನ ಸರಕಾರದ ಅವಧಿಯಲ್ಲಿ ನಡೆದ ವಸತಿ ಯೋಜನೆಯಡಿ ನಿರ್ಮಾಣಗೊಂಡ ಮನೆಗಳಿಗೆ ನೋಡೆಲ್ ಅಧಿಕಾರಿಗಳು ಬಿಲ್ ಪಾವತಿಸುತ್ತಿಲ್ಲ. ಕೂಡಲೇ ಬಿಲ್ ಪಾವತಿಸಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ಬಗ್ಗೆ ಕೂಡ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಪುಸ್ತಕಗಳಿಲ್ಲ:

ಶಾಲೆಗಳು ಪ್ರಾರಂಭವಾದರೂ ಇನ್ನೂ ಅನೇಕ ಮಕ್ಕಳಿಗೆ ಪುಸ್ತಕಗಳು ವಿತರಣೆಯಾಗಿಲ್ಲ. ಎಸ್ಸೆಸ್ಸೆಲ್ಸಿಯ ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಪುಸ್ತಕಗಳು ಬಂದಿಲ್ಲ. ಅವುಗಳನ್ನು ಪೂರೈಸುವಂತೆ ಸದಸ್ಯ ಹನುಮೇಗೌಡ ಮರಕಲ್ ಒತ್ತಾಯಿಸಿದರು.ಜಿಲ್ಲೆಯಲ್ಲಿ ಶೇ.90 ರಷ್ಟು ಪುಸ್ತಕಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಶೇ.10 ರಷ್ಟು ಪುಸ್ತಕಗಳು ಬರಬೇಕಿದ್ದು, ವಿವಿಧ 36 ವಿಷಯಗಳ ಪುಸ್ತಕಗಳ ಪೂರೈಕೆ ಆಗಬೇಕಿದೆ ಎಂದು ಡಿಡಿಪಿಐ ರಾಮಾಂಜನೇಯ ಮಾಹಿತಿ ನೀಡಿದರು.ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಭೀಮರಾಯ ಕಂದಕೂರು, ಕಳಪೆ ಮಟ್ಟದ ಸಮವಸ್ತ್ರಗಳನ್ನು ಹಂಚಲಾಗಿದೆ. ಅದಕ್ಕಾಗಿ ಇವುಗಳನ್ನು ವಾಪಸ್ ಪಡೆಯಬೇಕು ಎಂದು ಅಗ್ರಹಿಸಿದರು.ಇದು ರಾಜ್ಯ ಮಟ್ಟದ ಏಜೆನ್ಸಿಯಿಂದ ಸರಬರಾಜು ಆಗಿದ್ದು, ಎಸ್‌ಡಿಎಂಸಿಯವರು ಹಣ ಪಾವತಿ ಮಾಡುತ್ತಾರೆ. ಹೀಗಾಗಿ ಇದು ನಮ್ ವ್ಯಾಪ್ತಿಗೆ ಬರುವುದಿಲ್ಲ ಎಂದು ಡಿಡಿಪಿಐ ತಿಳಿಸಿದರು.ಆದಾಗ್ಯೂ ಹಣ ಪಾವತಿಸದಂತೆ ಎಸ್‌ಡಿಎಂಸಿಗಳಿಗೆ ಕೂಡಲೇ ಆದೇಶ ಹೊರಡಿಸುವಂತೆ ಸದಸ್ಯರು ಆಗ್ರಹಿಸಿದರು. ಇದಕ್ಕೆ ಸಮ್ಮತಿ ಸೂಚಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಣ ಪಾವತಿ ಮಾಡದಂತೆ ಆದೇಶಿಸುವುದಾಗಿ ತಿಳಿಸಿದರು.`ಕಿರದಳ್ಳಿಗೆ ಶುದ್ಧ ನೀರು'

ಯಾದಗಿರಿ: ಸುರಪುರ ತಾಲ್ಲೂಕಿನ ಕಿರದಳ್ಳಿ ತಾಂಡಾದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು.ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅಧಿಕಾರಿಗಳು, ತಾಂಡಾದಲ್ಲಿ ಅರ್ಸೇನಿಕ್‌ಯುಕ್ತ ನೀರು ಇದೆ. ಕಳೆದ ಕೆಲ ದಿನಗಳಿಂದ ನೀರು ಶುದ್ಧೀಕರಣ ಘಟಕ ಸ್ಥಗಿತಗೊಂಡಿತ್ತು. ಇದೀಗ ದುರಸ್ತಿ ಮಾಡಿ, ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.ಕಿರದಳ್ಳಿ ತಾಂಡಾದಲ್ಲಿ ಅರ್ಸೇನಿಕ್‌ಯುಕ್ತ ನೀರಿನಿಂದ ಕ್ಯಾನ್ಸರ್ ಬರುತ್ತಿದೆ. ಹೀಗಾಗಿ ಗ್ರಾಮವನ್ನೇ ಸ್ಥಳಾಂತರಿಸುವ ಕುರಿತು ವಿವರವಾದ ವರದಿಯನ್ನು ಸಲ್ಲಿಸುವಂತೆ ಸಿಇಒ ಜಿಲಾನಿ, ಅಧಿಕಾರಿಗಳಿಗೆ ಅವರು ಸೂಚಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.