ಜಿಪಿಎ ಆಸ್ತಿ ವ್ಯವಹಾರ ಕಾನೂನು ಬಾಹಿರ: ಸುಪ್ರೀಂಕೋರ್ಟ್‌

7

ಜಿಪಿಎ ಆಸ್ತಿ ವ್ಯವಹಾರ ಕಾನೂನು ಬಾಹಿರ: ಸುಪ್ರೀಂಕೋರ್ಟ್‌

Published:
Updated:

ನವದೆಹಲಿ: ಜನರಲ್ ಪವರ್ ಆಫ್ ಅಟಾರ್ನಿಯ (ಜಿಪಿಎ) ಮೂಲಕ ನಡೆಯುವ ಆಸ್ತಿ ಮಾರಾಟ ಪ್ರಕ್ರಿಯೆಗೆ ಕಾನೂನಿನ ಮಾನ್ಯತೆ ಇರುವುದಿಲ್ಲ, ಎಲ್ಲ ಸ್ಥಿರಾಸ್ತಿ ಮಾರಾಟ ಅಥವಾ ವರ್ಗಾವಣೆಯೂ ನೋಂದಣಿ ಮೂಲಕವೇ ನಡೆಯಬೇಕು ಎಂಬ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಗುರುವಾರ ನೀಡಿದೆ.ನಿಜವಾದ ಮೌಲ್ಯವನ್ನು ಮರೆಮಾಚಿ ಕಡಿಮೆ ಬೆಲೆಗೆ ಆಸ್ತಿ ನೋಂದಾಯಿಸುವುದನ್ನು ಮತ್ತು ಪಟ್ಟಭದ್ರರು ಕಪ್ಪುಹಣವನ್ನು ವಿದೇಶಿ ಬ್ಯಾಂಕುಗಳಲ್ಲಿ ಇಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರಗಳು ಸ್ಟಾಂಪ್ ಶುಲ್ಕ ಕಡಿಮೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ.ಮೂವರು ನ್ಯಾಯಮೂರ್ತಿಗಳಾದ ಆರ್.ವಿ.ರವೀಂದ್ರನ್, ಎ.ಕೆ.ಪಟ್ನಾಯಕ್ ಮತ್ತು ಎಚ್.ಎಲ್.ಗೋಖಲೆ ಅವರನ್ನು ಒಳಗೊಂಡ ನ್ಯಾಯಪೀಠ, ಸ್ಟಾಂಪ್ ಶುಲ್ಕ ದುಬಾರಿಯಾಗಿರುವುದರಿಂದ ಜನರಲ್ ಪವರ್ ಆಫ್ ಅಟಾರ್ನಿ, ಮಾರಾಟ ಒಪ್ಪಂದ ಮತ್ತು ಉಯಿಲುಗಳ ದುರ್ಬಳಕೆ ಜೋರಾಗಿದೆ, ಇದರಿಂದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುತ್ತದೆ ಎಂದು ತಿಳಿಸಿದೆ. ಇಂತಹ ನಷ್ಟವನ್ನು ತಡೆಯುವುದೇ ಈ ತೀರ್ಪಿನ ಉದ್ದೇಶ ಎಂದು ಸ್ಪಷ್ಟಪಡಿಸಿದೆ.

 

ಜಿಪಿಎ ಮೂಲಕ ನಡೆಯುವ ಯಾವುದೇ ಆಸ್ತಿ ಮಾರಾಟ ವ್ಯವಹಾರ, ಮಾರಾಟ ಒಪ್ಪಂದ ಮತ್ತು ಉಯಿಲು ವರ್ಗಾವಣೆಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಇಂತಹ ವ್ಯವಹಾರಗಳಿಗೆ ನ್ಯಾಯಲಯಗಳು ಮಾನ್ಯತೆ ನೀಡುವುದಿಲ್ಲ. ಅಲ್ಲದೆ ಇವನ್ನು ಪೌರಾಡಳಿತ ಸಂಸ್ಥೆಗಳು ಮತ್ತು ಕಂದಾಯ ಕಚೇರಿಗಳು ದಾಖಲೆಗೆ ಸೇರಿಸಬಾರದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.ಆಸ್ತಿ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಹರಿಯಾಣ ಸರ್ಕಾರದ ಕೆಲವು ಕ್ರಮಗಳನ್ನು ಪ್ರಶ್ನಿಸಿ ಸೂರಜ್ ಲ್ಯಾಂಪ್ ಅಂಡ್ ಇಂಡಸ್ಟ್ರೀಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಲೇವಾರಿ ಮಾಡಿದ ಪೀಠ, ವ್ಯಾಪಕ ಪರಿಣಾಮ ಬೀರುವ ಈ ತೀರ್ಪನ್ನು ನೀಡಿದೆ. ಜಿಪಿಎ ಮೂಲಕ ನಡೆಯುವ ವ್ಯವಹಾರಗಳಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ ಎಂದು ಕೇಂದ್ರ ಸರ್ಕಾರ, ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರ್ಕಾರಗಳು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದವು.ಪೂರ್ವಾನ್ವಯವಲ್ಲ: ಈ ತೀರ್ಪು ನೀಡುವ ಮೊದಲು ಜಿಪಿಎ ಮೂಲಕ ನಡೆದಿರುವ ನೋಂದಣಿ, ಆಸ್ತಿ ವರ್ಗಾವಣೆ ಮತ್ತು ಉಯಿಲು ಬದಲಾವಣೆಯಂತಹ ಪ್ರಕ್ರಿಯೆಗಳಿಗೆ ಕಾನೂನಿನ ಮಾನ್ಯತೆ ಇರುತ್ತದೆ ಎಂದು ತೀರ್ಪು ಸ್ಪಷ್ಟಪಡಿಸಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry