ಜಿಮ್ಖಾನಾ ಮೈದಾನ: ಜಂಟಿ ಪರಿಶೀಲನೆಗೆ ಒಪ್ಪಿಗೆ

7
ಪಾಲಿಕೆ ಕಚೇರಿ ಎದುರು ಪ್ರತಿಭಟನೆ; ಆಯುಕ್ತರ ವಾಹನಕ್ಕೆ ಘೇರಾವ್‌

ಜಿಮ್ಖಾನಾ ಮೈದಾನ: ಜಂಟಿ ಪರಿಶೀಲನೆಗೆ ಒಪ್ಪಿಗೆ

Published:
Updated:

ಹುಬ್ಬಳ್ಳಿ: ದೇಶಪಾಂಡೆ ನಗರದಲ್ಲಿರುವ ಹುಬ್ಬಳ್ಳಿ ಜಿಮ್ಖಾನಾ ಮೈದಾನದಲ್ಲಿ ಕಟ್ಟಿರುವ ಕಟ್ಟಡ ಹಾಗೂ ಆವರಣ ಗೋಡೆಯ ಎತ್ತರವನ್ನು  ಪಾಲಿಕೆ ಅಧಿಕಾರಿಗಳು ಹಾಗೂ ಹುಬ್ಬಳ್ಳಿ ಸ್ಪೋರ್ಟ್ಸ್‌ ಗ್ರೌಂಡ್‌ ಬಚಾವೋ ಸಮಿತಿ ಜಂಟಿ ಸಹಯೋಗದಲ್ಲಿ ಪರಿಶೀಲನೆ ನಡೆಸಲು ಆಯುಕ್ತ ರಮಣದೀಪ್‌ ಚೌಧರಿ ಒಪ್ಪಿಗೆ ನೀಡಿದರು.ಹುಬ್ಬಳ್ಳಿ ಸ್ಪೋರ್ಟ್ಸ್‌ ಗ್ರೌಂಡ್‌ ಬಚಾವೋ ಸಮಿತಿ ಹಾಗೂ ಇತರ ಸಂಘಟನೆಗಳ ವತಿಯಿಂದ ಬುಧವಾರ ಮಹಾನಗರ ಪಾಲಿಕೆ ಕಚೇರಿ ಎದುರು ಅವರಿಗೆ ಮನವಿ ಸಲ್ಲಿಸಿ ಸಂದರ್ಭದಲ್ಲಿ ಶೀಘ್ರವೇ ಪರಿಶೀಲಿಸೋಣ ಎನ್ನುವ ಭರವಸೆಯನ್ನು ಅವರು ನೀಡಿದರು.ಜಿಮ್ಖಾನಾ ಮೈದಾನದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಕಟ್ಟಡಕ್ಕೆ ಅನುಮತಿ ಪಡೆಯಲಾಗಿದೆ. ಹೀಗಾಗಿ ಅದನ್ನು ತಾವು ಪರಿಶೀಲನೆ ಮಾಡಲು ಹೋಗಿಲ್ಲ. ಆದರೆ ಬದಲಿಗೆ ಆವರಣ ಗೋಡೆಯ ಎತ್ತರದ ಬಗ್ಗೆ ತಕರಾರು ಬಂದಿರುವ ಹಿನ್ನೆಲೆಯಲ್ಲಿ ಅದನ್ನು ಪಾಲಿಕೆಯ ಎಂಜಿನಿಯರ್‌ ಪರಿಶೀಲನೆ ಮಾಡಿದ್ದಾರೆ. ಅದರಂತೆ ಕೆಲವೆಡೆ 1.50 ಮೀಟರ್‌ನಿಂದ 2.20 ಮೀಟರ್‌ಗೆ ಹೆಚ್ಚಿಸಿರುವುದು ಕಂಡು ಬಂದಿದೆ. ಹೀಗಾಗಿ ಜಿಮ್ಖಾನಾ ಸಮಿತಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದ್ದು ಒಂದು ವಾರದಲ್ಲಿ ಅವರಿಂದ ಈ ಬಗ್ಗೆ ಉತ್ತರ ನಿರೀಕ್ಷಿಸಲಾಗಿದೆ. ಆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.ಇದರಿಂದ ಅಸಮಾಧಾನಗೊಂಡ ಪ್ರತಿ­ಭಟನಾ­ಕಾರರು, ಅಧಿಕಾರಿಗಳು ತಮ್ಮನ್ನು ತಪ್ಪುದಾರಿಗೆಳೆದಿದ್ದಾರೆ. ಕೇವಲ ಆವರಣ ಗೋಡೆಯನ್ನು ಮಾತ್ರ ಅಳೆದಿರುವುದು ಸರಿ­ಯಲ್ಲ. ಬದಲಿಗೆ ಅಲ್ಲಿನ ಕಟ್ಟಡ ಕೂಡ ಅಕ್ರಮ­ವಾಗಿದ್ದು ಅದನ್ನೂ ಕೂಡ ಅಳತೆ ಮಾಡಬೇಕು, ತಾವು ಯಾರದೋ ಒತ್ತಡಕ್ಕೆ ಸಿಲುಕಿ ಈ ಕೆಲಸ ಮಾಡಿದಂತಿದ್ದು ಕೂಡಲೇ ಸಮಗ್ರವಾಗಿ ಪರಿಶೀಲನೆ ಮಾಡಬೇಕು, ಕಾಮಗಾರಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.ಇದನ್ನು ಒಪ್ಪದ ಆಯುಕ್ತರು, ತಾವು ಯಾರ ಒತ್ತಡಕ್ಕೂ ಸಿಲುಕಿಲ್ಲ. ಕಾನೂನು ಪ್ರಕಾರ ಯಾವ ರೀತಿ ಕ್ರಮ ಕೈಗೊಳ್ಳಲು ಸಾಧ್ಯವೋ ಅದನ್ನು ಮಾಡುವ ಭರವಸೆ ನೀಡಿದರು. ಜತೆಗೆ ಈಗಾ­ಗಲೇ ನೀಡಿರುವ ನೋಟಿಸ್‌ಗೆ ಅಲ್ಲಿಂದ ಉತ್ತರ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗು­ವುದು ಎಂದು ಪುನರುಚ್ಛರಿಸಿದರು.ಆದರೆ ಇಷ್ಟರಿಂದ ಸಮಾಧಾನಗೊಳ್ಳದ ಪ್ರತಿಭಟನಾಕಾರರು ಆಯುಕ್ತರ ವಿರುದ್ಧ ಘೋಷಣೆ ಕೂಗಿದರು. ಕೂಡಲೇ ಅಲ್ಲಿಂದ ಆಯುಕ್ತರು ತೆರಳಿದಾಗ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆಸಿದಾಗ ಪೊಲೀಸರು ಅವರನ್ನು ತಡೆದರು. ಹೀಗಾಗಿ ಆಯುಕ್ತರ ವಾಹನವನ್ನು ಘೇರಾವ್‌ ಮಾಡಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಅಲ್ಲಿಂದ ಪಾಲಿಕೆಯ ಪ್ರವೇಶದ್ವಾರದ ಬಳಿ ಬಂದು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸ್ಪೋರ್ಟ್ಸ್‌ ಗ್ರೌಂಡ್‌ ಬಚಾವೋ ಸಮಿತಿ ಅಧ್ಯಕ್ಷ ಸಿ.ಬಿ.ಎಲ್‌. ಹೆಗಡೆ, ಆಯುಕ್ತರನ್ನು ಅಧಿಕಾರಿಗಳು ತಪ್ಪುದಾರಿಗೆಳೆದಿದ್ದಾರೆ. ಕೇವಲ ಮೈದಾನದ ಆವರಣ ಗೋಡೆಯ ಎತ್ತರವನ್ನು ಮಾತ್ರ ಅಳೆದರೆ ಸಾಲದು ಬದಲಿಗೆ ರಿಕ್ರಿಯೇಶನ್‌ ಕ್ಲಬ್‌ಗಾಗಿ ಕಟ್ಟಿರುವ ಇಡೀ ಕಟ್ಟಡವೇ ಅಕ್ರಮವಾಗಿದ್ದು ಅದನ್ನು ಕೂಡ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯ ಸಂದರ್ಭದಲ್ಲಿ ವೆಂಕಟೇಶ್‌ ಸವದತ್ತಿ, ಮನೋಜ ಹಾನಗಲ್‌, ಕಾಡಯ್ಯ ಹಿರೇಮಠ, ಅಮೃತ್‌ ಇಜಾರಿ, ವಿನಾಯಕ ಶಿರಾಳಕರ, ಅರವಿಂದ ಮೇಟಿ, ಶೈಲೇಂದ್ರ ಪಾಟೀಲ, ಶರದ್‌ ಭಗತ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry