ಜಿಮ್: ಘೋಷಣೆ-ವಾಸ್ತವ

7

ಜಿಮ್: ಘೋಷಣೆ-ವಾಸ್ತವ

Published:
Updated:
ಜಿಮ್: ಘೋಷಣೆ-ವಾಸ್ತವ

ರಾಜ್ಯದಲ್ಲಿ ಮತ್ತೆ `ಜಾಗತಿಕ ಹೂಡಿಕೆದಾರರ ಸಮಾವೇಶ~(ಜಿಮ್) ಸಂಭ್ರಮ. ಬಿಜೆಪಿ ನೇತೃತ್ವದ ಸರ್ಕಾರ ಪ್ರಾಯೋಜಿತ 2010ರ ಜಿಮ್ ನಂತರ 2ನೇ ಸಮಾವೇಶ ಇದೇ 7-8ರಂದು ಬೆಂಗಳೂರಿನಲ್ಲಿ ನಡೆಯಲಿದೆ.ಅಂತಿಮ ಹಂತದ ಸಿದ್ಧತೆಗಳಾಗುತ್ತಿರುವಾಗಲೇ 2010ರಲ್ಲಿ ಆದ ಒಡಂಬಡಿಕೆಗಳ ಸ್ಥಿತಿ ಏನಾಗಿದೆ ಎಂಬುದು ಈ ಕ್ಷಣದ ಕುತೂಹಲ.2010ರಲ್ಲಿ ಒಟ್ಟು 389 ಯೋಜನೆಗಳಿಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಇದರಿಂದ ರೂ 3.92 ಲಕ್ಷ ಕೋಟಿ ಬಂಡವಾಳ ಹರಿದುಬರಲಿದೆ, ರೂ7.31 ಲಕ್ಷ ಉದ್ಯೋಗ ಸೃಷ್ಟಿಯಾಗುತ್ತವೆ ಎಂಬ ನಿರೀಕ್ಷೆಯೂ ಇದ್ದಿತು. ಈ ಯೋಜನೆಗಳ ಸಲುವಾಗಿ ಒಟ್ಟು 77,500 ಎಕರೆ ಭೂಮಿ ಬೇಕಾಗುತ್ತದೆ ಎನ್ನುವ ಅಂದಾಜು ಕೂಡ ಮಾಡಲಾಗಿತ್ತು.ಆದರೆ, ನಿರೀಕ್ಷೆ ಪ್ರಕಾರ ಬಂಡವಾಳವೂ ಹರಿದುಬರಲಿಲ್ಲ; ಅದಕ್ಕೆ ಪೂರಕವಾಗಿ ಮೂಲಸೌಲಭ್ಯವೂ ಕಲ್ಪಿಸಲಿಲ್ಲ. ಇಂದಿಗೂ ಉದ್ದಿಮೆದಾರರು ಜಮೀನು ಪಡೆಯುವುದು ಹರಸಾಹಸವಾಗಿಯೇ ಉಳಿದಿದೆ. 
`389ರಲ್ಲಿ 39 ಯೋಜನೆ ಜಾರಿ~

`ಜಿಮ್~-1~ರ ಒಡಂಬಡಿಕೆಗಳಲ್ಲಿ ಶೇ 62ರಷ್ಟು ಯೋಜನೆ ಅನುಷ್ಠಾನದ ವಿವಿಧ ಹಂತದಲ್ಲಿವೆ. 39 ಯೋಜನೆ ಕಾರ್ಯರೂಪಕ್ಕೆ ಬಂದಿವೆ.

- ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಪ್ರಕಾರ 2010ರ `ಜಿಮ್~ನಲ್ಲಾದ ಒಡಂಬಡಿಕೆಗಳಲ್ಲಿ ಶೇ 62ರಷ್ಟು ಯೋಜನೆಗಳು ಅನುಷ್ಠಾನದ ವಿವಿಧ ಹಂತದಲ್ಲಿವೆ. 39 ಯೋಜನೆ ಕಾರ್ಯರೂಪಕ್ಕೆ ಬಂದಿದ್ದು, ರೂ 5,380 ಕೋಟಿ ಬಂಡವಾಳ ಹೂಡಿಕೆಯಾಗಿದೆ. 23,525 ಮಂದಿಗೆ ಉದ್ಯೋಗವೂ ಸಿಕ್ಕಿದೆ. ಇನ್ನೂ 38 ಯೋಜನೆಗಳು (ರೂ21,046 ಕೋಟಿ, 19,525 ಉದ್ಯೋಗ ಸೃಷ್ಟಿ) ನಿರ್ಮಾಣ ಹಂತದಲ್ಲಿವೆ. ಉಳಿದಂತೆ 277 ಯೋಜನೆಗಳು ಯೋಜನಾ ಹಂತದಲ್ಲಿವೆ. ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದ್ದರೆ ಕೆಲವೆಡೆ ಭೂಸ್ವಾಧೀನ ಪೂರ್ಣಗೊಂಡು, ಉತ್ಪಾದನೆಗೆ ಬೇಕಾಗುವ ಮೂಲಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲಸಗಳು ಸಾಗಿವೆ. ಇವು ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಲು ಇನ್ನೂ 2ರಿಂದ 3 ವರ್ಷ ಹಿಡಿಯಬಹುದು ಎನ್ನುತ್ತಾರೆ ಸಚಿವರು.ಆದ್ಯತೆ ಯಾವುದಾಗಿತ್ತು?


2010ರಲ್ಲಿ ಬಂಡವಾಳ ಹೂಡಿಕೆಯ ಭರವಸೆ ಹೆಚ್ಚಾಗಿ ಸಿಕ್ಕಿದ್ದು ಕಬ್ಬಿಣ ಮತ್ತು ಉಕ್ಕು ಉದ್ಯಮ ವಲಯದಿಂದ. ಒಟ್ಟು ರೂ3.92 ಕೋಟಿ ಬಂಡವಾಳದಲ್ಲಿ ಉಕ್ಕು ಉದ್ಯಮದಿಂದಲೇ ರೂ2.56 ಲಕ್ಷ ಕೋಟಿ ನಿರೀಕ್ಷೆ ಮಾಡಲಾಗಿತ್ತು. ಈ ವಲಯದ ಒಟ್ಟು 53 ಯೋಜನೆಗಳಲ್ಲಿ 5 ಮಾತ್ರ ಅನುಷ್ಠಾನಗೊಂಡಿವೆ.38 ಯೋಜನೆಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ. 6 ಸಂಸ್ಥೆಗಳು ಒಪ್ಪಂದದ ನಂತರ ಇತ್ತ ತಿರುಗಿಯೂ ನೋಡಿಲ್ಲ. 4 ಸಂಸ್ಥೆಗಳು ಉದ್ದೇಶಿತ ಯೋಜನೆಗಳನ್ನು ಕೈಬಿಟ್ಟಿರುವುದಾಗಿ ತಿಳಿಸಿವೆ. ಸೂರ್ಯ ರೋಷಿಣಿ ಉಕ್ಕು ಸಂಸ್ಥೆ ಬಾಗಲಕೋಟೆಯಲ್ಲಿ ರೂ20 ಸಾವಿರ ಕೋಟಿ ಬಂಡವಾಳ ಹೂಡಿ, ಪ್ರತಿ ವರ್ಷ ಐದು ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ಹೊಂದಿತ್ತು.ಆದರೆ, ಸದ್ದಿಲ್ಲದೆ ಅದು ಯೋಜನೆಯನ್ನೇ ಕೈಬಿಟ್ಟು ಹೊರ ನಡೆದಿದೆ. ಉಳಿದಂತೆ ಜಿಮ್‌ನಲ್ಲಿ ಒಪ್ಪಂದಕ್ಕೆ ಸಹಿ ಮಾಡಿದ್ದ ಆರ್ಸೆಲರ್ ಮಿತ್ತಲ್, ಪೋಸ್ಕೊ, ಬ್ರಹ್ಮಿಣಿ.. ಇನ್ನೂ ಕೆಲವು ಅನುಷ್ಠಾನದ ಹಂತದಲ್ಲಿವೆ. ಆರ್ಸೆಲರ್ ಮಿತ್ತಲ್ ರೂ30 ಸಾವಿರ ಕೋಟಿ ಹೂಡಲು ಆಸಕ್ತಿ ತೋರಿದೆ. 1800 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ. ಪೋಸ್ಕೊ ಯೋಜನೆ ಅನುಷ್ಠಾನಕ್ಕೆ ಗದಗ ಜಿಲ್ಲೆ ಹಳ್ಳಿಗುಡಿ ಸುತ್ತಲಿನ ಪ್ರದೇಶದಲ್ಲಿ ರೈತರಿಂದಲೇ ತೀವ್ರ ವಿರೋಧ ಎದುರಾದ ಕಾರಣಕ್ಕೆ ಅದನ್ನು ಅಲ್ಲಿಗೇ ಕೈಬಿಡಲಾಯಿತು.

 

`ಗದಗ ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರುವುದಿಲ್ಲ. ಆದರೆ, ರಾಜ್ಯದ ಇತರ ಯಾವ ಭಾಗದಲ್ಲಿ ಸ್ಥಾಪಿಸಬೇಕು ಎಂಬ ಬಗ್ಗೆ ಚಿಂತನೆ ನಡೆದಿದೆ~ ಎಂದು ವಿವರಿಸುತ್ತಾರೆ ಸಚಿವ ನಿರಾಣಿ.ಬ್ರಹ್ಮಿಣಿ ಸೇಲ್...!

2010ರ ಜಿಮ್‌ನಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದ ಜಿ.ಜನಾರ್ದನ ರೆಡ್ಡಿ ಒಡೆತನದ ಬ್ರಹ್ಮಿಣಿ ಸ್ಟೀಲ್ಸ್ ರೂ36 ಸಾವಿರ ಕೋಟಿ ಬಂಡವಾಳ ಹೂಡುವುದಾಗಿ ಹೇಳಿ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡಿತ್ತು. ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಅವರೇ ಸ್ವತಃ ಜಿಮ್‌ನಲ್ಲಿ ಪಾಲ್ಗೊಂಡು, ಉಕ್ಕು ಉದ್ಯಮ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಒಡಂಬಡಿಕೆಗೆ ಸಹಿ ಹಾಕಿದ್ದರು. ಆದರೆ, ಒಂದು ವರ್ಷದಲ್ಲಿಯೇ `ಯೋಜನೆ~ಯನ್ನು ಸದ್ದಿಲ್ಲದೆ `ಉತ್ತಮ್ ಗಾಲ್ವ~ ಕಂಪೆನಿಗೆ ಮಾರಾಟ ಮಾಡಲಾಯಿತು!ಉಕ್ಕು ಉದ್ಯಮಕ್ಕೆ ಭಾರಿ ಬಂಡವಾಳ ಹರಿದುಬರುವ ಮುನ್ಸೂಚನೆ ಇದ್ದರೂ ಪ್ರಮುಖ ಕಚ್ಚಾವಸ್ತುವಾದ ಅದಿರಿನ ಲಿಂಕೇಜ್ ಯಾವ ಸಂಸ್ಥೆಗೂ ಸಿಗಲಿಲ್ಲ. ಅಕ್ರಮ ಗಣಿಗಾರಿಕೆ ಹಿನ್ನೆಲೆಯಲ್ಲಿ ಹೊಸದಾಗಿ ಪರವಾನಗಿ ನೀಡಲಾಗುತ್ತಿಲ್ಲ. ಹೀಗಾಗಿ ಎಲ್ಲರೂ ಹೊಸ ಉದ್ಯಮ ಸ್ಥಾಪಿಸುವುದಕ್ಕೆ ಹಿಂದೇಟು ಹಾಕುತ್ತಿದ್ದು, ಕೇಂದ್ರದ ಒಪ್ಪಿಗೆ ಸಿಕ್ಕ ನಂತರವೇ ಮುಂದಿನ ಕ್ರಮ ಎನ್ನುವ ನಿಲುವು ತಳೆದಿದ್ದಾರೆ. ಸಿಮೆಂಟ್ ವಲಯಕ್ಕೆ ರೂ36,991 ಕೋಟಿ ಹಾಗೂ ಇಂಧನ ಕ್ಷೇತ್ರಕ್ಕೆ ರೂ25,214 ಕೋಟಿ ಬಂಡವಾಳ ನಿರೀಕ್ಷೆ ಮಾಡಲಾಗಿತ್ತು. ಆದಿತ್ಯ ಬಿರ್ಲಾ ಗ್ರೂಪ್ ಬೆಳಗಾವಿ/ ಬಾಗಲಕೋಟೆ ಭಾಗದಲ್ಲಿ ಈಗಾಗಲೇ ರೂ5000 ಕೋಟಿ ಬಂಡವಾಳ ಹೂಡಿದ್ದು, ಹೊಸದಾಗಿ ರೂ8500 ಕೋಟಿ ಮೊತ್ತದ ವಿಸ್ತರಣಾ ಯೋಜನೆ ಹಮ್ಮಿಕೊಳ್ಳಲು ಜಿಮ್‌ನಲ್ಲಿ ಒಪ್ಪಂದ ಮಾಡಿಕೊಂಡಿತು. ಅದು ಕೂಡ ಈಗ ಜಾರಿ ಹಂತದಲ್ಲಿದೆ.ತಲೆನೋವಾದ ಭೂಸ್ವಾಧೀನ

ಕೇವಲ ಶೇ 62ರಷ್ಟು ಪ್ರಗತಿ ಏಕೆ? ಶೇ 100ರಷ್ಟು ಬಂಡವಾಳ ಏಕೆ ಹರಿದುಬರಲಿಲ್ಲ? ಈ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ನಿರೀಕ್ಷೆ ಪ್ರಕಾರ ಹೂಡಿಕೆದಾರರಿಗೆ ಮೂಲಸೌಲಭ್ಯ ಕಲ್ಪಿಸುವ ವಿಚಾರದಲ್ಲೂ ಸರ್ಕಾರ ಎಡವಿದೆ. ಭೂಸ್ವಾಧೀನಕ್ಕೆ ಅಡ್ಡಿ ಆತಂಕ ಎದುರಾಗಿವೆ. ಕೆಲವೆಡೆ ರೈತರು ಒಪ್ಪಿದರೂ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ; ಕೆಲವೆಡೆ ಹೆಚ್ಚಿನ ಪರಿಹಾರಕ್ಕಾಗಿ ರೈತರು ಪಟ್ಟುಹಿಡಿದ ಪರಿಣಾಮ ಯೋಜನೆಗಳು ನಿಗದಿತ ಅವಧಿಯಲ್ಲಿ ಕಾರ್ಯಗತವಾಗುತ್ತಿಲ್ಲ.`ಸರ್ಕಾರದಿಂದ ಈ ಹಿಂದೆ ಮಂಜೂರಾಗಿದ್ದ ಜಮೀನು ಸ್ವಾಧೀನವೇ ದೊಡ್ಡ ತಲೆನೋವಾಗಿದೆ. ಅದರ ಮಾಲೀಕತ್ವ ಯಾರ‌್ಯಾರಿಗೊ ವರ್ಗಾವಣೆ ಆಗಿ ಮೂಲ ಮಾಲೀಕರನ್ನು ಹಿಡಿಯುವುದೇ ದೊಡ್ಡ ಸಾಹಸ. ಅದರ ನಂತರ ಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು. ಅಲ್ಲಿಯೂ ಸಾಕಷ್ಟು ತಕರಾರು. ಹೀಗಾಗಿ ಭೂಮಿ ಹಸ್ತಾಂತರ ವಿಷಯದಲ್ಲಿ ಸಮಸ್ಯೆ ಇದೆ. ಅದನ್ನು ಕ್ರಮೇಣ ಕಡಿಮೆ ಮಾಡುತ್ತೇವೆ~ ಎಂಬುದು ಕೈಗಾರಿಕಾ ಅಭಿವೃದ್ಧಿ ಆಯುಕ್ತ ಮಹೇಶ್ವರ ರಾವ್ ಅವರ ಭರವಸೆಯ ಮಾತು.ದೇವನಹಳ್ಳಿ ಸಮೀಪ 249 ಎಕರೆಯಲ್ಲಿ `ವೈಮಾನಿಕ ತಾಣ~ (ಏರೋಸ್ಪೇಸ್ ಪಾರ್ಕ್) ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ 16 ಯೋಜನೆಗಳ ಅನುಷ್ಠಾನ ಸಾಧ್ಯತೆ ಇದ್ದು, ಪಾರ್ಕ್ ನಿರ್ಮಾಣ ಪ್ರಗತಿಯಲ್ಲಿದೆ. ಡಾಬಸ್‌ಪೇಟೆ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಮೊತ್ತ ನಿಗದಿಯಾಗಿದೆ. ದೇವನಹಳ್ಳಿಯ ಹಾರ್ಡ್‌ವೇರ್ ಪಾರ್ಕ್ ಅಭಿವೃದ್ಧಿಗೂ ಸಣ್ಣ ಗೊಂದಲ ಹೊರತು ಬಹುತೇಕ ಭೂಸ್ವಾಧೀನ ಪೂರ್ಣಗೊಂಡಿದೆ.ಅನಿಲ ಆಧಾರಿತ ವಿದ್ಯುತ್

ದಾಭೋಲ್-ಬಿಡದಿ 745 ಕಿ.ಮೀ. ಅನಿಲ ಕೊಳವೆ ಮಾರ್ಗ ಯೋಜನೆ 2010ರ ಜಿಮ್ ಒಡಂಬಡಿಕೆ. ರೂ 4500 ಕೋಟಿಯ ಈ ಯೋಜನೆ ನಿರ್ಮಾಣ ಹಂತದಲ್ಲಿದ್ದು, ಸೆಪ್ಟೆಂಬರ್‌ಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮಾರ್ಚ್- ಏಪ್ರಿಲ್‌ಗೆ ಮುಗಿಯ ಬೇಕಿತ್ತಾದರೂ ಭೂಸ್ವಾಧೀನ ಸಮಸ್ಯೆಯಿಂದ ವಿಳಂಬವಾಯಿತು ಎಂಬುದು ಭಾರತೀಯ ಅನಿಲ ಪ್ರಾಧಿಕಾರದ ಅಧಿಕಾರಿಗಳ ಅಭಿಪ್ರಾಯ.1400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಹಾಗೂ ಅನಿಲ ಮಾರ್ಗ ಹಾದು ಹೋಗುವ ನಗರ ಮತ್ತು ಪಟ್ಟಣಗಳಿಗೆ ಅಡುಗೆ ಅನಿಲ ಸರಬರಾಜು ಮಾಡುವ ಉದ್ದೇಶ ಕೂಡ ಈ ಯೋಜನೆ ಹೊಂದಿದೆ. ಪೈಪುಗಳ ಮೂಲಕ ಮನೆ ಮನೆಗೇ ನೇರವಾಗಿ ಅಡುಗೆ ಅನಿಲ ಸರಬರಾಜು ಮಾಡುವ ಯೋಜನೆ ಕೂಡ ಇದರ ವ್ಯಾಪ್ತಿಯಲ್ಲೇ ಬರುತ್ತದೆ. 

ಭೂ ಬ್ಯಾಂಕ್‌ನಲ್ಲಿ ಎಷ್ಟಿದೆ ಜಮೀನು?

ರಾಜ್ಯದಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ಒಟ್ಟು 1,18,975 ಎಕರೆ ಜಮೀನು ಗುರುತಿಸಲಾಗಿದೆ. ಇದರಲ್ಲಿ 29,583 ಎಕರೆ ಸ್ವಾಧೀನಕ್ಕಾಗಿ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 56,987 ಎಕರೆ ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, ಅದು ಕೂಡ ಅಂತಿಮ ಹಂತದಲ್ಲಿದೆ.ಉದ್ದಿಮೆದಾರರಿಗೆ ಅಗತ್ಯ ಇರುವಷ್ಟು ಭೂಮಿ ತಡಮಾಡದೆ ಒದಗಿಸುವ ಉದ್ದೇಶದಿಂದ ಭೂಬ್ಯಾಂಕ್ ಸ್ಥಾಪಿಸಲಾಗಿದೆ. 2010ರ ಜಿಮ್‌ಲ್ಲಿ ಆದ ಒಪ್ಪಂದಗಳ ಪ್ರಕಾರವೂ ಜಮೀನು ಒದಗಿಸಲಾಗುತ್ತಿದೆ. 2012ರ ಜಿಮ್ ನಲ್ಲಿ ಆಗುವ ಒಪ್ಪಂದಗಳ ಪ್ರಕಾರ ಹೂಡಿಕೆ ಮಾಡಲು ಮುಂದಾಗುವ ಸಂಸ್ಥೆಗಳಿಗೂ ಜಮೀನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಸಚಿವ ಮುರುಗೇಶ ನಿರಾಣಿ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry