ಜಿಯೋಸೀಡ್ ವಿರುದ್ಧ ಕ್ರಮಕ್ಕೆ ಆಗ್ರಹ

7

ಜಿಯೋಸೀಡ್ ವಿರುದ್ಧ ಕ್ರಮಕ್ಕೆ ಆಗ್ರಹ

Published:
Updated:

ಬ್ಯಾಡಗಿ: ಕೃಷಿ ಇಲಾಖೆ ವತಿಯಿಂದ ತಾಲ್ಲೂಕಿನ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಿದ ಜಿಯೋಸೀಡ್ ಕಂಪೆನಿಯ ಗೋವಿನಜೋಳದ ಬೀಜ ಬಿತ್ತನೆಯಿಂದ ರೈತರಿಗೆ ನಷ್ಟವಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ, `ರೈತ ಸಂಪರ್ಕದಲ್ಲಿ ಖರೀದಿಸಿದ ಜಿಯೋಸೀಡ್ ಕಂಪೆನಿಯ ಗೋವಿನ ಜೊಳದ ಬೀಜ ಸಂಪೂರ್ಣ ಕಳಪೆಯಾಗಿದ್ದು, ರೈತರಿಗೆ ತೀವ್ರ ಹಾನಿಯಾಗಿದೆ. ಹಾನಿಗೀಡಾದ ರೈತರಿಗೆ ಸಮರ್ಪಕ ಪರಿಹಾರ ಒದಗಿಸಬೇಕು ಎಂದು ಹಲವಾರು ಬಾರಿ ಆಗ್ರಹಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ಆರೋಪಿಸಿದರು.`ಕೃಷಿ ಇಲಾಖೆ ಪೂರೈಸಿದ ಬೀಜವೇ ಈ ರೀತಿಯಾದರೆ ರೈತ ಬೇರೆ ಎಲ್ಲಿ ಬೀಜ ಖರೀದಿಸಿ ಬಿತ್ತನೆ ಮಾಡಬೇಕು' ಎಂದು ಪ್ರಶ್ನಿಸಿದ ಅವರು, ಬೀಜ ಪೂರೈಕೆ ಮಾಡಿದ ಕಂಪೆನಿ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು' ಎಂದು ಆಗ್ರಹಿಸಿದರು.ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ ಮಾತನಾಡಿ, `ಈಗಾಗಲೇ ಬರದಿಂದ ತತ್ತರಿಸಿರುವ ರೈತರಿಗೆ ಕಳಪೆ ಬೀಜ ಪೂರೈಕೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ. ಇದೇ 6ರಂದು ರೈತರಿಗೆ ಪರಿಹಾರ ನೀಡದೆ ಹೋದಲ್ಲಿ ಉಗ್ರ ಹೋರಾಟ ನಡೆಸಲಾಗುವುದು' ಎಂದು ಎಚ್ಚರಿಸಿದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಗಂಗಣ್ಣ ಎಲಿ, ಚಿಕ್ಕಪ್ಪ ಛತ್ರದ, ಅಶೋಕ ಮಾಳೇನಹಳ್ಳಿ, ಶಶಿಧರ ದೊಡ್ಮನಿ, ಮಲ್ಲೇಶಪ್ಪ ಬಿದರಗಡ್ಡಿ, ಮಲ್ಲೇಶ ಕರ್ಜಗಿ, ಶಂಕ್ರಪ್ಪ ಮಟ್ಟಿಮನಿ, ಮಂಜುನಾಥ ಬಾರ್ಕಿ, ರಾಮನಗೌಡ ಪಾಟೀಲ, ಹನುಮಂತಪ್ಪ ಮಾಳಗೇರ, ಅಶೋಕ ಕಲ್ಲಾಪುರ, ಪರಮೇಶಪ್ಪ ಮತ್ತೂರ, ಬಸನಗೌಡ ಪಾಟೀಲ, ಶಿವುದೊಡ್ಮನಿ, ಈಶ್ವರ ದೊಡ್ಮನಿ, ಪರಮೇಶ ದೊಡ್ಮನಿ, ರಮೇಶ ಮಲ್ಲಾಡದ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry