ಸೋಮವಾರ, ಜೂನ್ 21, 2021
29 °C

ಜಿಲೆಟಿನ್ ಸ್ಫೋಟ: ಯುವಕನ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲೆಟಿನ್ ಸ್ಫೋಟ: ಯುವಕನ ಸಾವು

ವಿಜಾಪುರ: ಕಲ್ಲು ಗಣಿಗಾರಿಕೆಗೆ ಬಳಸುವ ಸಲುವಾಗಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಜಿಲೆಟಿನ್ ಮತ್ತಿತರ ಸ್ಫೋಟಕ ವಸ್ತುಗಳು ಸ್ಫೋಟಿಸಿದ ಪರಿಣಾಮ ಯುವಕನೊಬ್ಬ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ತಾಲ್ಲೂಕಿನ ಬಬಲೇಶ್ವರದಲ್ಲಿ ಬುಧವಾರ ಮುಂಜಾನೆ ನಡೆದಿದೆ.ಬಬಲೇಶ್ವರ ಗ್ರಾಮದ ರಮೇಶ ಭೀಮಪ್ಪ ಉಳ್ಳಾಗಡ್ಡಿ (35) ಮೃತಪಟ್ಟಿದ್ದು, ಮನೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಜಯಶ್ರೀ ಮಲ್ಲಪ್ಪ ಕನ್ನೂರ (13), ಅಕ್ಷತಾ ಅಶೋಕ ಘೆಂಡೆ (13) ಅವರನ್ನು ರಕ್ಷಿಸಲಾಗಿದೆ. ಈ ಘಟನೆಯಲ್ಲಿ ಸಿದ್ಧವ್ವ ಹನುಮಂತ ಕನ್ನೂರ, ಮುತ್ತವ್ವ ಮಲ್ಲಪ್ಪ ಗುಣದಾಳ ಗಾಯಗೊಂಡಿದ್ದು, ಈ ನಾಲ್ವರನ್ನು ಇಲ್ಲಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ರಮೇಶನ ದೇಹ ಛಿದ್ರ ಛಿದ್ರವಾಗಿದ್ದು, ಮನೆ ನೆಲಸಮವಾಗಿದೆ. ಅಲ್ಲದೇ  ಪಕ್ಕದ ಮನೆಯೂ ಬಿರುಕು ಬಿಟ್ಟಿದೆ.

`ಬಾವಿ ತೋಡಿಸಲಿಕ್ಕಾಗಿ ರಮೇಶ ತಾನು ಬಾಡಿಗೆಗೆ ಇದ್ದ ಈ ಕೊಠಡಿಯಲ್ಲಿ ಸ್ಫೋಟಕ ಸಂಗ್ರಹಿಸಿಟ್ಟಿದ್ದ. ಸ್ಫೋಟಕ್ಕೆ ನಿಖರ ಕಾರಣ ತನಿಖೆಯಿಂದ ಬೆಳಕಿಗೆ ಬರಬೇಕಿದೆ~ ಎಂದು ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ತಿಳಿಸಿದ್ದಾರೆ.

ಸ್ಫೋಟದ ಕಾರಣ ನಿಗೂಢಸ್ಫೋಟ ಸಂಭವಿಸಿದ ಕೊಠಡಿಯಲ್ಲಿ ಎಷ್ಟು ಪ್ರಮಾಣದ ಸ್ಫೋಟಕ ಸಂಗ್ರಹಿಸಿಡಲಾಗಿತ್ತು. ಅದನ್ನು ಯಾತಕ್ಕಾಗಿ ಸಂಗ್ರಹಿಸಲಾಗಿತ್ತು. ಏಕಾಏಕಿ ಈ ಸ್ಫೋಟಕ್ಕೆ ಕಾರಣವೇನು? ಬಬಲೇಶ್ವರದ ಮನೆಯೊಂದರದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರೂ ಸೇರಿದಂತೆ ಆ ಗ್ರಾಮದ ಜನತೆಯನ್ನು ಕಾಡುತ್ತಿರುವ ಪ್ರಶ್ನೆಗಳಿವು.`ಇದಕ್ಕೆಲ್ಲ ಉತ್ತರಿಸಬೇಕಾಗಿದ್ದ ರಮೇಶ ಸ್ಫೋಟದಲ್ಲಿ ಬಲಿಯಾಗಿದ್ದಾನೆ. ಈಗಿರುವುದೆಲ್ಲ ಅಂತೆ-ಕಂತೆಗಳೇ. ಸ್ಫೋಟಕ ತಜ್ಞರು ಬಂದು ತನಿಖೆ ನಡೆಸಿದ ನಂತರವೇ ನಿಜವಾದ ಮಾಹಿತಿ ಲಭ್ಯವಾಗಲಿದೆ~ ಎಂಬುದು ಪ್ರಭಾರ ಎಸ್ಪಿ ಎಫ್. ಎ. ಟ್ರಾಸ್ಗರ್ ಅವರ ಹೇಳಿಕೆ.ಸ್ಫೋಟದಲ್ಲಿ ರಮೇಶನ ದೇಹ ಸಂಪೂರ್ಣ ಛಿದ್ರ ಛಿದ್ರವಾಗಿದ್ದು, ಆತನ ದೇಹದ ಭಾಗಗಳು 200 ಅಡಿ ದೂರ ಸಿಡಿದು ಬಿದ್ದಿದ್ದವು. ಇದು ಸ್ಫೋಟದ ತೀವ್ರತೆಗೆ ಸಾಕ್ಷಿ. ಸ್ಫೋಟಕಗಳ ಜೊತೆಗೆ ಗ್ಯಾಸ್ ಸಿಲಿಂಡರ್ ಸಹ ಸ್ಫೋಟಗೊಂಡಿದೆ ಎಂಬುದನ್ನು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.ಈ ಘಟನೆಯಿಂದ ಇಡೀ ಬಬಲೇಶ್ವರ ಜನತೆ ಬೆಚ್ಚಿ ಬಿದ್ದಿತ್ತು. ಅಲ್ಲಿ ಜನಜಂಗುಳಿಯೇ ನೆರೆದಿತ್ತು.ಘಟನೆಯ ವಿವರ

ಬಬಲೇಶ್ವರ ಗ್ರಾಮದ ಬಸ್ ನಿಲ್ದಾಣದ ಸಮೀಪದಲ್ಲಿರುವ ಅಂಬಲಿ ಮುತ್ತಪ್ಪ ಗುಡಿಯ ಹತ್ತಿರ ಮಲ್ಲಪ್ಪ ಗುರಪಾದಪ್ಪ ಕನ್ನೂರ (ಹಾದಿಮನಿ) ಎಂಬಾತ ಆರು ವರ್ಷಗಳ ಹಿಂದೆ ಎರಡು ಕೊಠಡಿಗಳ ಮನೆ ನಿರ್ಮಿಸಿದ್ದು, ಅದರಲ್ಲಿ ಒಂದು ಕೊಠಡಿಯಲ್ಲಿ ತನ್ನ ಕುಟುಂಬದವ ರೊಂದಿಗೆ ವಾಸವಾಗಿದ್ದಾನೆ.  ಮನೆಯ ಮುಂದೆ 6ಗಿ4 ಅಡಿ ಅಳತೆಯ ಪತ್ರಾಸ ಶೆಡ್ ನಿರ್ಮಿಸಿದ್ದು, ಅದನ್ನು ಬಬಲೇಶ್ವರ ಗ್ರಾಮದ ರಮೇಶ ಭೀಮಪ್ಪ ಉಳ್ಳಾಗಡ್ಡಿಗೆ ಕೊಟ್ಟಿದ್ದ. 

`ಬಾವಿ ತೆಗೆಯುವುದುಕ್ಕೋಸ್ಕರ ಸ್ಫೋಟಕ ವಸ್ತುಗಳಾದ ಜಿಲೆಟಿನ್ ಮತ್ತಿತರ ಸ್ಫೋಟಕ ವಸ್ತುಗಳನ್ನು ರಮೇಶ ಆ ಶೆಡ್‌ನಲ್ಲಿ ಇಟ್ಟಿದ್ದ. ಬುಧವಾರ ಬೆಳ್ಳಿಗೆ 11.10 ರಿಂದ 11.15ರ ಅವಧಿಯಲ್ಲಿ ಈ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗಲು ರಮೇಶ ಬಂದಾಗ ಅಲ್ಲಿ ಸ್ಫೋಟ ಸಂಭವಿಸಿದೆ~ ಎಂದು ಪ್ರಭಾರ ಎಸ್ಪಿ ಎಫ್.ಎ. ಟ್ರಾಸ್ಗರ್ ಹೇಳಿದ್ದಾರೆ.ಸ್ಫೋಟದ ರಭಸಕ್ಕೆ ಮನೆಯ ಆರ್.ಸಿ.ಸಿ. ಛಾವಣಿ ಕೆಳಗೆ ಬಿದ್ದಿದ್ದು,  ಅಕ್ಕಪಕ್ಕದ ಮನೆಗಳಿಗೂ ಧಕ್ಕೆಯಾಗಿದೆ. ಛಾವಣಿ ಕುಸಿದ ಮನೆಯಲ್ಲಿ ಜಯಶ್ರಿ ಮತ್ತು ಅವಳ ಗೆಳತಿ ಅಕ್ಷತಾ ) ಸಿಕ್ಕಿಹಾಕಿಕೊಂಡಿದ್ದರು. ಪೊಲೀಸರು, ಅಗ್ನಿಶಾಮಕ ದಳದವರು ಮೂರು ಜೆ.ಸಿ.ಬಿ. ಯಂತ್ರಗಳನ್ನು ಬಳಸಿ ಮನೆಯ ಅವಶೇಷಗಳನ್ನು ತೆರವುಗೊಳಿಸಿ ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಬಾಲೆಯರನ್ನು ರಕ್ಷಿಸಿದರು.ಈ ಸಂದರ್ಭದಲ್ಲಿ ಮನೆಯ ಒಡೆಯ ಮಲ್ಲಪ್ಪ ಕನ್ನೂರ ಮನೆಯಲ್ಲಿ ಇರಲಿಲ್ಲ. ಆತ ಬೆಳಿಗ್ಗೆ ಕನ್ನೂರ ಗ್ರಾಮಕ್ಕೆ ತೆರಳಿದ್ದ. 12 ಗಂಟೆಗೆ ಆರಂಭವಾಗಲಿದ್ದ ಶಾಲೆಗೆ ಹೋಗಲು ಈ ಇಬ್ಬರು ವಿದ್ಯಾರ್ಥಿನಿಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು ಎಂಬುದು ಪೊಲೀಸರ ವಿವರಣೆ. ಮನೆಯ ಹೊರಗಡೆ ನಿಂತಿದ್ದ ಸಿದ್ದವ್ವ ಹಣಮಂತ ಕನ್ನೂರ, ಮುತ್ತವ್ವ ಮಲ್ಲಪ್ಪ ಗುಣದಾಳ ಅವರಿಗೆ ಕೆಲವಸ್ತುಗಳು ಬಡಿದು ಚಿಕ್ಕಪುಟ್ಟ ಗಾಯಗಳಾಗಿವೆ.`ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಫೋಟಕ ವಸ್ತುಗಳನ್ನು ಹಾಗೂ ಸ್ಫೋಟದಲ್ಲಿ ಮೃತಪಟ್ಟ ವ್ಯಕ್ತಿಯ ದೇಹದ ಛಿದ್ರಗೊಂಡ ಭಾಗಗಳನ್ನು ಸಂಗ್ರಹಿಸಲಾಗಿದೆ. ಸ್ಫೋಟಕ ತಜ್ಞರನ್ನು ಕರೆಯಿಸಿ ತನಿಖೆ ನಡೆಸಲಾ ಗುವುದು~ ಎಂದು ಘಟನಾ ಸ್ಥಳದಲ್ಲಿದ್ದು ಪರಿಹಾರ ಕಾರ್ಯದ ಉಸ್ತುವಾರಿ ವಹಿಸಿದ್ದ ಟ್ರಾಸ್ಗರ್ ಹೇಳಿದರು.

ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.