ಜಿಲ್ಲಾಡಳಿತದಿಂದಲೇ ಸ್ಮಾರಕಗಳಿಗೆ ಹಾನಿ?

7
ಹಂಪಿ ಉತ್ಸವಕ್ಕೆ ಸಿದ್ಧತೆಯ ನೆಪ: ಸಂರಕ್ಷಿತ ಪ್ರದೇಶದಲ್ಲಿ ಜೆಸಿಬಿ ಯಂತ್ರ ಬಳಕೆ

ಜಿಲ್ಲಾಡಳಿತದಿಂದಲೇ ಸ್ಮಾರಕಗಳಿಗೆ ಹಾನಿ?

Published:
Updated:

ಹೊಸಪೇಟೆ: ಹಂಪಿಯಲ್ಲಿ ಇದೇ 10ರಿಂದ ಮೂರು ದಿನ ನಡೆಯಲಿರುವ ಉತ್ಸವಕ್ಕಾಗಿ ಭರದ ಸಿದ್ಧತೆ ನಡೆದಿರುವ ಬೆನ್ನಲ್ಲೇ ಜಿಲ್ಲಾಡಳಿತ­ದಿಂದಲೇ ಸ್ಮಾರಕಗಳಿಗೆ ಹಾನಿಯಾಗುತ್ತಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಆಕ್ಷೇಪ ವ್ಯಕ್ತಪಡಿಸಿದೆ.ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಂಪಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಯಾವುದೇ ನಿರ್ಮಾಣ ಚಟುವಟಿಕೆ ನಡೆಸುವಂತಿಲ್ಲ. ಅಲ್ಲದೆ, ಹೊಸ ಕಟ್ಟಡ ನಿರ್ಮಾಣ ಅಥವಾ ಹಳೆಯ ಕಟ್ಟಡಗಳ ದುರಸ್ತಿಯನ್ನೂ ಮಾಡುವಂತಿಲ್ಲ. ಒಂದು ವೇಳೆ ದುರಸ್ತಿ  ಅಗತ್ಯ ಎನಿಸಿದರೆ ಮೊದಲೇ ಎಎಸ್‌ಐ ಅಧಿಕಾರಿ ಗಳಿಂದ ಅನುಮತಿ ಪಡೆಯಬೇಕು.ಆದರೆ, ಜಿಲ್ಲಾಡಳಿತವು ಅನುಮತಿ ಪಡೆಯದೆ ಉತ್ಸವದ ಸಿದ್ಧತೆಗಾಗಿ ಜೆಸಿಬಿ ಯಂತ್ರಗಳನ್ನು ಬಳಸಿ ಕಾಮಗಾರಿ ಕೈಗೊಳ್ಳು ತ್ತಿದೆ. ರಾಣಿ ಸ್ನಾನ­ಗೃಹದ ಸಮೀಪದಲ್ಲಿ ಗುರುವಾರ ಒಳಚರಂಡಿ ಕಾಮಗಾರಿ ಕೈಗೊಂಡಿದ್ದಾಗ ಭೂಮಿಯ ಅಡಿ ಮಡಕೆ ಚೂರುಗಳು ಪತ್ತೆಯಾ-­ಗಿವೆ. ಹಂಪಿಯ ಬಹುತೇಕ ಪ್ರದೇಶ ಉತ್ಖನನಕ್ಕೆ ಒಳಪಡು­ವುದ­ರಿಂದ ಯಂತ್ರಗಳ ಉಪಯೋಗವನ್ನು ಈ ಪ್ರದೇಶ­ದಲ್ಲಿ ನಿಷೇಧಿಸಿದ್ದರೂ ಜಿಲ್ಲಾಡಳಿತದ ಈ ಕ್ರಮಕ್ಕೆ ಅಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಉತ್ಸವದ ವೇದಿಕೆ ನಿರ್ಮಾಣ ಕಾರ್ಯವನ್ನು ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿದ್ದು, ಸಂರಕ್ಷಿತ ಪ್ರದೇಶದಲ್ಲಿರುವ ಬೆಟ್ಟ– ಗುಡ್ಡಗಳನ್ನು ಅಗೆಯಲಾಗುತ್ತಿದೆ. ಒಂದು ವಾರದಿಂದ ಡಣಾನಾಯಕನಹಳ್ಳಿ–82, ಸಿಂಗನಾಥನ­ಹಳ್ಳಿಯ ಗುಡ್ಡದಿಂದ ಮಣ್ಣು ತೆಗೆದು ವೇದಿಕೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಶಾಮಿಯಾನ ಸರಬರಾಜು ಮಾಡುವ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕೃಷ್ಣ ದೇವಸ್ಥಾನದ ಎದುರಿನ ಸಾಲು ಮಂಟಪದ ಎರಡು ಭಾಗ ಧರೆ­ಗುರುಳಿದೆ. ಆದರೆ, ಈ ಕುರಿತು ಮುಂಜಾ­ಗ್ರತಾ ಕ್ರಮ ಕೈಗೊಳ್ಳದ ಅಧಿಕಾರಿಗಳು ಲಾರಿ ಚಾಲಕನ ವಿರುದ್ಧ ದೂರು ದಾಖಲಿಸಿ ಸುಮ್ಮನಾ­ಗಿ­ದ್ದಾರೆ ಎಂದು ಎಎಸ್‌ಐ ಅಧಿಕಾರಿಗಳು ದೂರುತ್ತಾರೆ.ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತ­ನಾ­ಡಿದ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸರ್ವೇ ಅಧಿಕಾರಿ ಎನ್‌.ಸಿ. ಪ್ರಕಾಶ ನಯಕಂದ, ‘ಹಂಪಿ ಪ್ರದೇಶದಲ್ಲಿ ಯಂತ್ರಗಳನ್ನು ಉಪಯೋ­ಗಿಸಿ \ ಕಾಮಗಾರಿ ಕೈಗೊಳ್ಳುವಂತಿಲ್ಲ. ಆದರೆ ಜಿಲ್ಲಾಡಳಿತ ಮತ್ತು ಉತ್ಸವ ಸಮಿತಿ ಇದನ್ನು ಉಲ್ಲಂಘಿಸಿದೆ. ಹಂಪಿಯ ಎಲ್ಲ ಪ್ರದೇಶವೂ ಉತ್ಖನನಕ್ಕೆ ಒಳಪಡುವುದರಿಂದ ಇಲ್ಲಿನ ಸಣ್ಣ ಕಲ್ಲೂ ಅಷ್ಟೇ ಮಹತ್ವ ಪಡೆದುಕೊಂಡಿರುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry