ಸೋಮವಾರ, ಏಪ್ರಿಲ್ 19, 2021
32 °C

ಜಿಲ್ಲಾಡಳಿತ ಭವನ ಇಂದು ಸಮರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲಾಡಳಿತ ಭವನ ಇಂದು ಸಮರ್ಪಣೆ

ದಾವಣಗೆರೆ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಇಲ್ಲಿನ ಕರೂರು ಕ್ರಾಸ್ ಬಳಿ ಮೈದಳೆದಿರುವ ನೂತನ ಜಿಲ್ಲಾಡಳಿತ ಭವನ ನ. 17ರಂದು ಬೆಳಿಗ್ಗೆ 10.30ಕ್ಕೆ ಸಮರ್ಪಣೆಗೊಳ್ಳಲಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಭವನ ಉದ್ಘಾಟಿಸುವರು.



ಚಿತ್ರದುರ್ಗ ಜಿಲ್ಲೆಯ ಭಾಗವಾಗಿದ್ದ ದಾವಣಗೆರೆ ಕೇಂದ್ರವಾಗಿಸಿಕೊಂಡು ಚಿತ್ರದುರ್ಗ ಜಿಲ್ಲೆಯ ದಾವಣಗೆರೆ, ಹರಿಹರ, ಜಗಳೂರು ಹಾಗೂ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಶಿವಮೊಗ್ಗ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳನ್ನು ಸೇರಿಸಿ ನೂತನ ದಾವಣಗೆರೆ ಜಿಲ್ಲೆಯನ್ನು 1997ರ ಆ. 4ರಂದು ರಚಿಸಲಾಯಿತು.



1997ರ ಆ. 15ರಂದು ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಜಿಲ್ಲೆಯನ್ನು ಅಧಿಕೃತವಾಗಿ ಘೋಷಿಸಿದರು. ಜಿಲ್ಲೆಯ ಆಡಳಿತ ನಿರ್ವಹಣೆಗೆ ಇದೀಗ ಆಡಳಿತ ಭವನ ಸಜ್ಜುಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಮೊದಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.



ಕರೂರು ಪ್ರದೇಶದಲ್ಲಿ 10.5 ಎಕರೆ ಜಮೀನಿನಲ್ಲಿ ಸುಸಜ್ಜಿತವಾಗಿ ಭವನ ನಿರ್ಮಿಸಲಾಗಿದೆ. ನಿರ್ಮಾಣದ ಭೂಮಿಪೂಜೆಯನ್ನು 2009ರ ಮೇ 27ರಂದು ಕೃಷಿ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಎಸ್.ಎ. ರವೀಂದ್ರನಾಥ್ ಭೂಮಿಪೂಜೆ ನೆರವೇರಿಸಿದ್ದರು. ಕರ್ನಾಟಕ ಗೃಹ ಮಂಡಳಿಗೆ ನಿರ್ಮಾಣದ ಹೊಣೆ ನೀಡಲಾಗಿತ್ತು. ಇದುವರೆಗೆ ರೂ 22.75 ಕೋಟಿ ವೆಚ್ಚವಾಗಿದೆ. ಒಂದೇ ಸೂರಿನಲ್ಲಿ ಹಲವು ಕಚೇರಿಗಳಿರುತ್ತವೆ ಎಂದು ಮಾಹಿತಿ ನೀಡಿದರು.



ಅತ್ಯುತ್ತಮ ವಾಸ್ತುಶಿಲ್ಪ ರೂಪವುಳ್ಳ ಬೃಹತ್ ಕಟ್ಟಡವು, 2 ಬ್ಲಾಕ್ ಹಾಗೂ 3 ಹಂತಗಳನ್ನು ಒಳಗೊಂಡಿದೆ. ಸಭಾಂಗಣ, ವಿಶಾಲ ಕಾರಿಡಾರ್ ಇದೆ. ಕಟ್ಟಡದ ಹೊರಮೈ ವಿನ್ಯಾಸಕ್ಕೆ ನಿರ್ಮಿಸಿರುವ ಆಕರ್ಷಕ ಕಂಬಗಳು ಮತ್ತು ಮೇಲ್ಭಾಗದ ಗೋಪುರಗಳು ಇಡೀ ಕಟ್ಟಡವನ್ನು ಒಂದು ಪುರಾತನ ರೋಮ್‌ನ ಶಿಲ್ಪದಂತೆ ಗೋಚರಿಸುತ್ತದೆ ಎಂದು ಬಣ್ಣಿಸಿದರು.



1.18 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಡ ಮೈದಳೆದಿದೆ. 61 ಕೊಠಡಿಗಳಿದ್ದು, 30 ಇಲಾಖೆಗಳು ಹಾಗೂ ಕಚೇರಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಬಾಡಿಗೆ ಕಟ್ಟಡಗಳಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸಲಾಗಿದೆ. ಆದರೂ, ಸ್ವಲ್ಪ ಕೊರತೆ ಇದೆ. ಗ್ರಂಥಾಲಯಕ್ಕೆ ಅವಕಾಶ ಕಲ್ಪಿಸಲಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.



ಕಾರ್ಯಕ್ರಮದಲ್ಲಿ ನೂತನ ಸಭಾಂಗಣ ಉದ್ಘಾಟಿಸಲಾಗುವುದು. ಜಿಲ್ಲಾ  ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ಅಧ್ಯಕ್ಷತೆ ವಹಿಸುವರು. ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಚಿವರಾದ ಎಂ.ಪಿ. ರೇಣುಕಾಚಾರ್ಯ, ವಿ. ಸೋಮಣ್ಣ, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮ ಮಂಡಳಿಗಳ ಅಧ್ಯಕ್ಷರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.



ಜಿಎಂಐಟಿ ಹೆಲಿಪ್ಯಾಡ್‌ಗೆ ಬೆಳಿಗ್ಗೆ 10ಕ್ಕೆ ಆಗಮಿಸುವ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಚಿಗಟೇರಿ ಆಸ್ಪತ್ರೆಯನ್ನು 50 ವರ್ಷಗಳ ಹಿಂದೆ ಸಮರ್ಪಿಸಿದ ದಿ.ಧರ್ಮಪ್ರಕಾಶ ಚಿಗಟೇರಿ ಮುರಿಗೆಪ್ಪ ಅವರ ಪುತ್ಥಳಿಯನ್ನು ಸುವರ್ಣ ಮಹೋತ್ಸವದ ಸವಿನೆನಪಿಗೆ ಆಸ್ಪತ್ರೆಯ ಆವರಣದಲ್ಲಿ ಅನಾವರಣಗೊಳಿಸುವರು ಎಂದು ತಿಳಿಸಿದರು.



ವಿವಿಧ ಕಾಮಗಾರಿ ಉದ್ಘಾಟನೆ ಇಂದು


ಮುಖ್ಯಮಂತ್ರಿ ಜಗದೀಶ ಶೆಟ್ಟರ್ ನ. 17ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸುವರು ಹಾಗೂ ಶಂಕುಸ್ಥಾಪನೆ  ನೆರವೇರಿಸುವರು.



ಜಿಲ್ಲಾಡಳಿತ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ, ನಗರದ ಪಿ.ಜೆ. ಬಡಾವಣೆಯಲ್ಲಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗೆ ನಿರ್ಮಿಸಿರುವ 18 ಬೋಧನ ಕೊಠಡಿಗಳು ಹಾಗೂ 3 ಶೌಚಾಲಯ ಘಟಕವನ್ನು ಉದ್ಘಾಟಿಸುವರು. ಈ ಕೊಠಡಿಗಳಿಗೆ, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ತಮ್ಮ ಅನುದಾನದಲ್ಲಿರೂ.6 ಲಕ್ಷ, ಉಸ್ತುವಾರಿ ಸಚಿವ ಎಸ್.ಎ. ರವೀಂದ್ರನಾಥ್ ್ಙ  10 ಲಕ್ಷ, ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿರೂ.6 ಲಕ್ಷ, ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿರೂ.5 ಲಕ್ಷ, ಕಾಲೇಜು ಅಭಿವೃದ್ಧಿ ಸಮಿತಿ ರೂ.25.70 ಲಕ್ಷ, ಶಾಲಾ ಅಭಿವೃದ್ಧಿ ಸಮಿತಿರೂ.36.69 ಲಕ್ಷ,  ಪಂಚಸೌಲಭ್ಯ ಯೋಜನೆಯ ಅಡಿರೂ.10.05 ಲಕ್ಷ ಸೇರಿ ಒಟ್ಟುರೂ.11,42,295,00 ವೆಚ್ಚ ಮಾಡಲಾಗಿದೆ. ನಿರ್ಮಿತಿ ಕೇಂದ್ರ ನಿರ್ಮಿಸಿದೆ.



ನಗರದಲ್ಲಿರೂ.58.25 ಲಕ್ಷ ಅಂದಾಜು ಮೊತ್ತದ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರ ಉದ್ಘಾಟಿಸಲಾಗುವುದು. 3 ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.



ಮಧ್ಯಾಹ್ನ 12ಕ್ಕೆ ನ್ಯಾಮತಿ ಪಟ್ಟಣದಲ್ಲಿ, ಅಂದಾಜು ಮೊತ್ತರೂ.481.19 ಲಕ್ಷ ವೆಚ್ಚದಲ್ಲಿ ವಿವಿಧ 12 ಕಾಮಗಾರಿಗಳನ್ನು ಉದ್ಘಾಟಿಸಲಾಗುವುದು.ರೂ.1,340.90 ಲಕ್ಷ ಅಂದಾಜು ಮೊತ್ತದ 7 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ವಿವಿಧ ಯೋಜನೆಯ ಅಡಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಗುವುದು ಎಂದು ತಿಳಿಸಿದರು.



ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಚ್. ವಿಜಯಕುಮಾರ್, ಜಿಲ್ಲಾ ಪಂಚಾಯ್ತಿ ಸಿಇಒ ಎ.ಬಿ. ಹೇಮಚಂದ್ರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.



ಭವನದಲ್ಲಿ ಯಾವ್ಯಾವ ಕಚೇರಿಗಳಿರುತ್ತವೆ?

ಜಿಲ್ಲಾಧಿಕಾರಿ ಕಚೇರಿ, ಕಂದಾಯ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರು, ಡಿಎಚ್‌ಒ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಕರ್ನಾಟಕ ಗೃಹ ಮಂಡಳಿ ಎಇಇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ, ಜಿಲ್ಲಾ ಬಾಲಕಾರ್ಮಿಕರ ಕಚೇರಿ ಯೋಜನಾ ನಿರ್ದೇಶಕ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಬಿಎಸ್‌ಎನ್‌ಎಲ್ ಮತ್ತು ನೆಟ್‌ವರ್ಕ್ ಕಚೇರಿ, ಅಂಚೆ ಕಚೇರಿ, ಕೆನರಾ ಬ್ಯಾಂಕ್, ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾ ಖಜಾನೆ ಇಲಾಖೆ ಜಿಲ್ಲಾ ಖಜಾನಾಧಿಕಾರಿ, ಪೊಲೀಸ್ ಔಟ್‌ಪೋಸ್ಟ್, ಸಂಸತ್ ಸದಸ್ಯರ ಕಚೇರಿ, ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ, ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ಜಿಲ್ಲಾ ನೋಂದಣಾಧಿಕಾರಿ, ಉದ್ಯೋಗ ಮತ್ತು ತರಬೇತಿ ಇಲಾಖೆ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ ಉಪ ನಿಬಂಧಕರು, ಜಲಾನಯನ ಇಲಾಖೆ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲದ ಸಹಾಯಕ ನಿಯಂತ್ರಕರು, ನಗರ ಮಾಪನ ಕಚೇರಿ, ಸಹಾಯಕ  ಕಾರ್ಮಿಕ ಆಯುಕ್ತರು, ಜಿಲ್ಲಾ ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ಇಲಾಖೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.