ಜಿಲ್ಲಾದ್ಯಂತ ಸಂವಿಧಾನ ಶಿಲ್ಪಿ ಗುಣಗಾನ

7

ಜಿಲ್ಲಾದ್ಯಂತ ಸಂವಿಧಾನ ಶಿಲ್ಪಿ ಗುಣಗಾನ

Published:
Updated:
ಜಿಲ್ಲಾದ್ಯಂತ ಸಂವಿಧಾನ ಶಿಲ್ಪಿ ಗುಣಗಾನ

ದೇವನಹಳ್ಳಿ: ಜಾತಿ ವ್ಯವಸ್ಥೆ 21ನೇ ಶತಮಾನದಲ್ಲಿಯೂ ಮುಂದುವರಿದಿರುವುದಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ವಿಷಾದಿಸಿದರು. ಇಲ್ಲಿನ ಅಂಬೇಡ್ಕರ್ ಭವನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿವತಿಯಿಂದ ನಡೆದ  ಡಾ.ಬಿ.ಆರ್.ಅಂಬೇಡ್ಕರ್ ಅವರ 120ನೇ ಜನ್ಮದಿನಾಚರಣೆ ಮತ್ತು ಬಾಬು ಜಗಜೀವನರಾಂ ಅವರ 104ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪ್ರಜಾಪ್ರಭುತ್ವದ ಯಶಸ್ಸಿಗೆ ಅಸಮಾನತೆ ಅಳಿಯಬೇಕು. ಜಾತಿ ಜಾತಿಗಳ ನಡುವೆ ವೈಮನಸ್ಸು ಇದ್ದಲ್ಲಿ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಶ್ರಮಿಕರು, ಶೋಷಿತರನ್ನು ಒಗ್ಗೂಡಿಸಿ ಜಾಗೃತಿ ಮೂಡಿಸಿದವರು ಅಂಬೇಡ್ಕರ್. ಹೋರಾಟಗಾರರ, ಚಿಂತಕರ ಆದರ್ಶಗಳು ಅಮಲಾಗಬಾರದು ಅರಿವಾಗಬೇಕು ಎಂದು ತಿಳಿಸಿದರು. ಸಮಾಜವನ್ನು ಉತ್ತಮ ಮಾರ್ಗಕ್ಕೆ ಕರೆದೊಯ್ಯಬೇಕಾದ ಮಠಾಧೀಶರು ರಾಜಕೀಯ ಪಕ್ಷಗಳನ್ನು ಬೆಂಬಲಿಸುತ್ತಿರುವುದು ಸರಿಯಲ್ಲ. ಸರ್ಕಾರಗಳು ಕೃಷಿ ಪ್ರಧಾನ ದೇಶವನ್ನು ಯಾಂತ್ರೀಕರಣ ದೇಶವನ್ನಾಗಿ ಮಾಡುತ್ತಿವೆ. ಬಡವರ ಹಸಿವಿನ ಭಾಷೆ ಆಡಳಿತ ನಡೆಸುವ ನಾಯಕರಿಗೆ ಅರ್ಥವಾಗಬೇಕು. 2007 ಸಮೀಕ್ಷೆಯಂತೆ ದೇಶದಲ್ಲಿ 45ಕೋಟಿ ಜನರು ಒಂದು ಹೊತ್ತು ಮಾತ್ರ ಊಟ ಮಾಡುತ್ತಿದ್ದಾರೆ. 21ನೇ ಶತಮಾನ ಶರಣಾಗತಿಯ ಶತಮಾನವಾಗುತ್ತಿದೆ. ಕಟ್ಟಿಹಾಕಿರುವ ದೋಣಿಗೆ ಹುಟ್ಟುಹಾಕುವ ನಾಯಕರಿರುವರೆಗೂ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಭಾರತೀಯ ಸಾಮಜಿಕ ಪರಿವರ್ತನಾ ಚಳುವಳಿ ರಾಜ್ಯ ಘಟಕದ ಅಧ್ಯಕ್ಷ ಆರ್.ಲೋಕೇಶ್ ಮಾತನಾಡಿ, ಹಸಿರು ಕ್ರಾಂತಿ ನೇತಾರನಾಗಿ ಸಮಗ್ರ ಕೃಷಿ ಆಂದೊಲನಕ್ಕೆ ಜೀವ ತುಂಬಿದವರು ಬಾಬು ಜಗಜೀವನರಾಂ. ದೂರ ದೃಷ್ಟಿಯಿಂದ ಭವಿಷ್ಯ ನಿಧಿ, ಜೀವವಿಮೆ ಯೋಜನೆ, ವಿಮಾನಯಾನ ರಾಷ್ಟ್ರೀಕರಣ, ರೈಲ್ವೆ ಸಿಬ್ಬಂದಿಗೆ ಪಿಂಚಣೆ ವ್ಯವಸ್ಥೆ ಮೊದಲಾದ ಉತ್ತಮ ಯೋಜನೆಗಳನ್ನು ಜಾರಿಗೆ ತಂದ ಹೆಗ್ಗಳಿಗೆ ಬಾಬು ಜಗಜೀವನ ರಾಂ ಅವರಿಗೆ ಸಲ್ಲುತ್ತದೆ ಎಂದರು.ಕರ್ನಾಟಕ ಜನಜಾಗೃತಿ ಸಂಘರ್ಷ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಹೂಡಿ ವೆಂಕಟೇಶ್, ಶಾಸಕ ಕೆ.ವೆಂಕಟಸ್ವಾಮಿ, ಮಾಜಿ ಶಾಸಕ ಜಿ.ಚಂದ್ರಣ್ಣ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಜಿ.ಪಂ ಸದಸ್ಯ ಬಿ.ರಾಜಣ್ಣ, ಕಿಮ್ಸ್ ಅಧ್ಯಕ್ಷ ಬಿ.ಮುನೇಗೌಡ, ತಾ.ಪಂ ಅಧ್ಯಕ್ಷ ಬಿ.ಕೆ.ಶಿವಣ್ಣ ಮಾತನಾಡಿದರು. ಎಸ್.ರಾಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಚ್ಚೇಗೌಡ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಎ.ಸಿ.ಗುರುಸ್ವಾಮಿ, ಪುರಸಭೆ ಅಧ್ಯಕ್ಷೆ ರತ್ನಮ್ಮ, ಬಿಜೆಪಿ.ತಾಲ್ಲೂಕು ಅಧ್ಯಕ್ಷ ಹನುಮಂತರಾಯಪ್ಪ, ಮಾದಿಗ ದಂಡೋರ ಸಮಿತಿ ರಾಜ್ಯ ಘಟಕದ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಶ್ರಿನಿವಾಸ್, ತಾ.ಪಂ.ಸದಸ್ಯರಾದ ಬಿ.ಎಂ.ಬೀರಪ್ಪ, ಸವಿತಾ, ನಳಿನಾ ಹಾಜರಿದ್ದರು. ಕಾರ್ಯಕ್ರಮದಲ್ಲಿ ಬರಗೂರು ರಾಮಚಂದ್ರಪ್ಪ, ಅರಕ್ಷಕ ಉಪನಿರೀಕ್ಷಕ ಮಾದು ಮುದ್ದಯ್ಯ, ರಂಗಕಲಾವಿದ ಶಾಮಣ್ಣ, ಎಸ್ ಗುರಪ್ಪ ಅವರನ್ನು ಸನ್ಮಾನಿಸಲಾಯಿತು.‘ಸಮರ್ಪಕ ಜಾರಿಯಾಗಿಲ್ಲ’ 

ದೊಡ್ಡಬಳ್ಳಾಪುರ: ಜಾತ್ಯತೀತವಾಗಿ ನಡೆದುಕೊಳ್ಳದ ಜನಪ್ರತಿನಿಧಿಗಳಿಂದಾಗಿ ಜಾತ್ಯತೀತ ತತ್ವದ ಮೇಲೆ ನಿರ್ಮಿತವಾಗಿರುವ ನಮ್ಮ ಸಂವಿಧಾನ ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಮಾಜಿ ವಿಧಾನಪರಿಷತ್ ಸದಸ್ಯ, ಸಾಹಿತಿ ಡಾ.ಎಲ್.ಹನುಮಂತಯ್ಯ ವಿಷಾದಿಸಿದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕಿನ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ನಗರದ ಭಗತ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 120ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನವನ್ನು ರೂಪಿಸಿಕೊಟ್ಟ ಭಾರತರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ ಜಾತ್ಯತೀತ ಚಿಂತನೆಗಳನ್ನು ಇಂದು ಅನುಸರಣೆ ಮಾಡುತ್ತಿದ್ದೇವೆಯೇ ಎನ್ನುವ ಆತ್ಮಾಲೋಕನದೊಂದಿಗೆ, ಅಂಬೇಡ್ಕರ್ ದೂರದೃಷ್ಟಿಯ ವಿಚಾರಗಳ ಮಂಥನ ನಡೆಯಬೇಕು. ಆಗ ಮಾತ್ರ ಅಂಬೇಡ್ಕರ್ ಜಯಂತಿ ಹೆಚ್ಚು ಅರ್ಥಪೂರ್ಣವಾಗುತ್ತದೆ ಎಂದರು. ಇಡೀ ವಿಶ್ವದಲ್ಲೇ ಪ್ರಥಮ ಬಾರಿಗೆ ಮಹಿಳೆಯರಿಗೂ ಆಸ್ತಿ ಹಕ್ಕು ದೊರಕಬೇಕು ಎಂದು ಪ್ರತಿಪಾದಿಸಿದವರು ಅಂಬೇಡ್ಕರ್. ಎಲ್ಲಾ ವರ್ಗದ ಮಹಿಳೆಯರಿಗೂ ಸಮಾನವಾದ ಅವಕಾಶ ಇರಬೇಕು ಎನ್ನುವ ಅಂಬೇಡ್ಕರ್ ಕಂಡ ಕನಸಿನ ಫಲವೇ ಇವತ್ತು ರಾಷ್ಟ್ರದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಯಿಂದ ಎಲ್ಲಾ ಸ್ಥಾನಗಳಲ್ಲಿ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರು ಭಾಗವಹಿಸುವಂತೆ ಆಗಿದೆ. ನಮ್ಮ ಸಂವಿಧಾನಕ್ಕೆ 380 ಬಾರಿ ತಿದ್ದುಪಡಿಗಳು ಆಗಿದ್ದರೂ ಸಂವಿಧಾನದ ಮೂಲ ಆಶಯ ಉಳಿದುಕೊಂಡು ಬಂದಿದ್ದು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆ. ಸಂವಿಧಾನ ಆಶಯದಂತೆ ದೊರೆತ ಮೀಸಲಾತಿಯಿಂದಾಗಿ ತುಳಿತಕ್ಕೆ ಒಳಗಾಗಿದ್ದ ಬಹುತೇಕ ಜನ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಲು ಸಾಧ್ಯವಾಗಿದೆ ಎಂದರು.ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಮಾತನಾಡಿ,ಅಂಬೇಡ್ಕರ್ ಜಯಂತಿ ಆಚರಿಸಿ ನಂತರ ಶಾಲೆಗಳಿಗೆ ರಜೆ ಘೋಷಿಸಬೇಕು. ಡಾ.ಬಿ.ಆರ್.ಅಂಬೇಡ್ಕರ್‌ರವರ ಆದರ್ಶಗಳನ್ನು ಇಂದಿನ ಪೀಳಿಗೆ ಅರಿಯಬೇಕು. ಸಂವಿಧಾನದ ತತ್ವ, ಆಶಯಗಳನ್ನು ಅನುಷ್ಠಾನಕ್ಕೆ ತಂದಾಗ ದೇಶದ ಏಳಿಗೆ ಸಾಧ್ಯ ಎಂದರು. ಅಂಬೇಡ್ಕರ್ ಜಯಂತಿ ಸಮಾರಂಭವನ್ನು ಶಾಸಕ ಜೆ.ನರಸಿಂಹಸ್ವಾಮಿ ಉದ್ಘಾಟಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಆಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಶ್ವತ್ಥನಾರಾಯಣಕುಮಾರ್, ಉಪಾಧ್ಯಕ್ಷೆ  ಎಸ್.ಸುಮಾಮಂಜುನಾಥ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎನ್.ಹನುಮಂತೇಗೌಡ, ಎನ್.ಅರವಿಂದ, ಉಮಾಬಾಯಿ, ಕಲ್ಪನಾ ಆನಂದ್, ಬೆಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ, ತಹಸೀಲ್ದಾರ್ ಬಿ.ಸಂಪತ್‌ಕುಮಾರ್, ನಗರಸಭೆ ಪ್ರಭಾರ ಅಧ್ಯಕ್ಷ ಜಿ.ರಾಮಕೃಷ್ಣ, ದಲಿತ ಮುಖಂಡರಾದ ಜಿ.ಲಕ್ಷ್ಮೀಪತಿ, ಡಿ.ವಿ.ಅಶ್ವತ್ಥಪ್ಪ, ಆರ್.ರಾಮಲಿಂಗಯ್ಯ, ಸಿ.ಜಿ.ನಾಗೇಶ್, ಮುನಿರಾಜು, ಆಂಜಿನಮೂರ್ತಿ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಕೆ.ಎಂ.ಮುನಿರಾಮೇಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಸಿ.ನಾರಾಣಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಶಿವರಾಜ್ ಮುಂತಾದವರು ಭಾಗವಹಿಸಿದ್ದರು.ಅದ್ಧೂರಿ ಮೆರವಣಿಗೆ: ಸಮಾರಂಭಕ್ಕೂ ಮುನ್ನ ತಾಲ್ಲೂಕಿನ ವಿವಿಧ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ನೇತೃತ್ವದೊಂದಿಗೆ, ನಗರದ ಹಳೇ ಬಸ್ ನಿಲ್ದಾಣದ ಸಿದ್ದಲಿಂಗಯ್ಯ ವೃತ್ತದಿಂದ, ಡಾ.ಬಿ.ಆರ್.ಅಂಬೇಡ್ಕರ್‌ರವರ ವಿಶೇಷ ಅಲಂಕಾರದ ಭಾವಚಿತ್ರ ಹಾಗೂ ವಿವಿಧ ವೇಷ ಭೂಷಣಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಮಟೆ ವಾದ್ಯ, ಮಂಗಳ ವಾದ್ಯದೊಂದಿಗೆ ವಿವಿಧ ವೇಷ ಭೂಷಣಗಳ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು.ಮನವಿ: ತಾಲ್ಲೂಕಿನ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಶಾಸಕರಿಗೆ ಸಮಿತಿಯ ತಾಲ್ಲೂಕು ಸಂಚಾಲಕ ಎನ್.ರಾಜು, ಎನ್.ನಾಗೇಂದ್ರ ಮನವಿ ಪತ್ರಸಲ್ಲಿಸಿದರು.ಶಾಲೆಗಳಲ್ಲಿ ಅದ್ದೂರಿ ಆಚರಣೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ವಿವಿಧಡೆಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 120ನೇ ಜಯಂತಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರೊ.ಎಸ್.ಪಿ.ರಾಜಣ್ಣ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ತಾಲ್ಲೂಕಿನ ಮಾದಗಂಡನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಗುಂಡಮಗೆರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್ ದಿನಾಚರಣೆ ಅಂಗವಾಗಿ 2011-12ನೇ ಸಾಲಿನ ಶೈಕ್ಷಣಿಕ ಅವಧಿಗೆ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರಗಳನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ತಿಪ್ಪಾರೆಡ್ಡಿ ವಿತರಣೆ ಮಾಡಿದರು.

 

ಪುರಸಭೆಯಿಂದ....

ವಿಜಯಪುರ : ಹಿಂದೂ ಸಮಾಜದಲ್ಲಿನ ಅಸಮಾನತೆ ಅಳಿಸಿ, ಶೋಷಿತರನ್ನು ಸಮಾಜದ ಮುಖ್ಯವಾಹಿನಿಗೆ ತರಲುವಲ್ಲಿ ಅಂಬೇಡ್ಕರ್ ಅವರ ಕಾರ್ಯ ಅಮೋಘವಾದದ್ದು ಎಂದು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೀರಣ್ಣಗೌಡ ಅಭಿಪ್ರಾಯಪಟ್ಟರು. ಇಲ್ಲಿನ ಪುರಸಭಾ ಕಾರ್ಯಾಲಯದಲ್ಲಿ ನಡೆದ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಜಯಂತಿಯಲ್ಲಿ ಮಾತನಾಡಿದ ಅವರು,  ಕಳೆದ 20 ವರ್ಷಗಳಿಂದ ಪುರಸಭೆಯ ಅನುದಾನದಲ್ಲಿ 3 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಹಿಂದುಳಿದವರ ಏಳಿಗೆಗೆ ಬಳಸಿಕೊಳ್ಳಲಾಗಿದೆ. ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಬೇಕು. ಆಡಳಿತ ಚುಕ್ಕಾಣಿ ಹಿಡಿದವರು ಕಾನೂನು ಮುರಿಯುವುದು ಅವಮಾನಕರ ಎಂದರು.ಜಿಲ್ಲಾ ಸಮುದಾಯ ಅಭಿವೃದ್ಧಿ ತಜ್ಞ ಡಾ.ಕೆ.ನರಸಿಂಹಪ್ಪ ಅವರು ‘ಸೌಲಭ್ಯಗಳು ಮತ್ತು ಬಳಕೆ’ ಕುರಿತು ಉಪನ್ಯಾಸ ನೀಡಿದರು. ಪುರಸಭಾಧ್ಯಕ್ಷೆ ಎಂ.ಮಂಜುಳಾ ನಾರಾಯಣಸ್ವಾಮಿ ಅಧ್ಯಕ್ಷತೆವಹಿಸಿದ್ದರು. ಬಸವಕಲ್ಯಾಣ ಮಠದ ಮಹದೇವ ಸ್ವಾಮೀಜಿ ಅವರು ಸಾನಿಧ್ಯವಹಿಸಿದ್ದರು.  ಪುರಸಭೆ ಮಾಜಿ ಅಧ್ಯಕ್ಷ ಚಿನ್ನಯ್ಯ, ಮಾಜಿ ಉಪಾಧ್ಯಕ್ಷ ಎನ್.ನಾರಾಯಣಸ್ವಾಮಿ, ಸದಸ್ಯ ಟಿಲ್ಲರ್ ಎಂ.ಮಂಜುನಾಥ್, ಎಚ್.ಎಂ.ಕೃಷ್ಣಪ್ಪ, ಸಂಪತ್‌ಕುಮಾರ್, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು. ಎಂ.ವಿ.ನಾಯ್ಡು ಮತ್ತು ಲಕ್ಷ್ಮಿಪತಿ ತಂಡದವರಿಂದ ಗೀತೆಗಳ ಗಾಯನ ನಡೆಯಿತು. ಕೃಷ್ಣಪ್ಪ ಕ್ರಾಂತಿಗೀತೆ ಹಾಡಿದರು. ಈ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ಶಿಕ್ಷಣದ ಸಹಾಯಧನ ಚೆಕ್ ವಿತರಿಸಲಾಯಿತು.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ, ವೆಂಕಟಗಿರಿಕೋಟೆ ಮಂಜುನಾಥ ಪ್ರೌಢಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಸಮೀಪದ ನಾಗನಾಯ್ಕನಹಳ್ಳಿಯಲ್ಲಿ ಬೈರೇಶ್ವರಸ್ವಾಮಿ ಸದನದಲ್ಲಿ ಭಾರತ ಜನಜಾಗೃತಿಸೇನೆ ವತಿಯಿಂದ ಬುದ್ಧ, ಬಸವ ಮತ್ತು ಅಂಬೇಡ್ಕರ್ ಜಯಂತಿ ನಡೆಯಿತು. ಜಿಲ್ಲಾ ಬಿಜೆಪಿ ಎಸ್.ಸಿ.ಎಸ್.ಟಿ ಮೋರ್ಚಾ ಅಧ್ಯಕ್ಷ ಗುರಪ್ಪ, ರೈತ ಮೋರ್ಚಾ ಅಧ್ಯಕ್ಷ ಎಂ.ತಮ್ಮೇಗೌಡ, ತಿಮ್ಮೇಗೌಡ, ಸೇನೆ ರಾಷ್ಟ್ರೀಯ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಘಟಕದ ಅಧ್ಯಕ್ಷ ಸಿ.ಮುನಿಯಪ್ಪ, ಚನ್ನರಾಯಪಟ್ಟಣ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮಾದುಮುದ್ದಯ್ಯ, ನಾಗನಾಯ್ಕನಹಳ್ಳಿ ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.‘ಚಿಂತನೆ ಸೀಮಿತವಾಗದಿರಲಿ’

ಆನೇಕಲ್: ಅಂಬೇಡ್ಕರ್ ಅವರ ಚಿಂತನೆಗಳು, ತತ್ವಗಳು ಕೇವಲ ದಿನಾಚರಣೆಗೆ ಮಾತ್ರ ಸೀಮಿತವಾಗಬಾರದು ನಿರಂತರವಾಗಿರಬೇಕು ಎಂದು ಪತ್ರಕರ್ತ ಹಾಗೂ ಸಾಹಿತಿ ಶೂದ್ರ ಶ್ರೀನಿವಾಸ್ ನುಡಿದರು. ಅವರು ಪಟ್ಟಣದಲ್ಲಿ ಕರ್ನಾಟಕ ಜನಾಂದೋಲನ ಸಂಘಟನೆ ವತಿಯಿಂದ ಆಯೋಜಿಸಿದ್ದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 120ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಜನರಲ್ಲಿ ಸ್ವಾಭಿಮಾನವನ್ನು ಬೆಳಸಿದ ಹಾಗೂ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಆಲೋಚನೆ ಮಾಡುವ ಸಾಮರ್ಥ್ಯವನ್ನು ಬೆಳೆಸಿದ ಮಹಾನ್ ಚೇತನ ಡಾ.ಅಂಬೇಡ್ಕರ್ ಅವರು ಅವಮಾನಗಳನ್ನು ಅವಕಾಶಗಳನ್ನಾಗಿ ಮಾಡಿ ಕೊಂಡು ಛಲದಿಂದ ಮೇಲೆ ಬಂದು ಎಲ್ಲರ ಕಣ್ಮಣಿಯಾದ ಶೋಷಿತರ ದನಿಯಾದ ಬಗೆ ಐತಿಹಾಸಿಕವಾದುದು ಎಂದರು. ಪ್ರಗತಿಪರ ಚಿಂತಕ ಮಂಜುನಾಥ್‌ಅದ್ದೆ ಮಾತನಾಡಿ, ಅಂಬೇಡ್ಕರ್ ಅವರು ಮಹಿಳೆಯರ ವಿಮೋಚನೆಗಾಗಿ ಶ್ರಮಿಸಿದ ಮಹಾನ್ ಚಿಂತಕರು. ಭಾರತೀಯ ಇತಿಹಾಸದಲ್ಲಿ ಮಹಿಳೆಯರನ್ನು 2ನೇ ದರ್ಜೆಯ ನಾಗರೀಕರಾಗಿ ಗುರುತಿಸಲಾಗಿತ್ತು. ಆದರೆ ಮಹಿಳಾ ಸಮಾನತೆಗೆ ದನಿಯೆತ್ತಿದ ಮೊದಲ ವ್ಯಕ್ತಿ ಅಂಬೇಡ್ಕರ್ ಎಂದರು.ಅಂಬೇಡ್ಕರ್ ಅವರು ಕೇವಲ ಒಂದು ವರ್ಗ ಜಾತಿಗೆ ಸೀಮಿತವಾಗದೆ ಎಲ್ಲಾ ಶೋಷಿತರ ದನಿಯಾಗಿದ್ದರು. ಅಂಬೇಡ್ಕರ್ ಅವರು ಕೂಲಿಕಾರರ, ರೈತರ, ಬಡವರ, ಕಾರ್ಮಿಕರ ಸಮಸ್ಯೆಗಳನ್ನು ಖಚಿತವಾಗಿ ಗ್ರಹಿಸುವ ಸಾಮರ್ಥ್ಯ ಹೊಂದಿದ್ದರು. ಹಾಗಾಗಿ ಅವರು ತಮ್ಮ ಚಿಂತನೆಗಳನ್ನು ಸಂವಿಧಾನದಲ್ಲಿ ಅಳವಡಿಸಿದರು. ಕರ್ನಾಟಕ ಜನಾಂದೋಲನ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಮರಿಯಪ್ಪ, ರಾಜ್ಯ ಕಾರ್ಯದರ್ಶಿ ಆದೂರ್ ಪ್ರಕಾಶ್, ಜವಹಾರ್‌ಲಾಲ್‌ನೆಹರೂ ವಿಶ್ವ ವಿದ್ಯಾಲಯದ ಸಂಶೋಧಕ ಪ್ರೊ.ಶ್ರೀನಿವಾಸ್, ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಮಸ್ವಾಮಿ ಬೆಳತೂರು ವೆಂಕಟೇಶ್, ವಕೀಲರ ಸಂಘದ ಖಜಾಂಚಿ ವೈ.ಮಂಜುನಾಥ್, ಪುರಸಭಾ ಮಾಜಿ ಉಪಾಧ್ಯಕ್ಷ ಡಿ.ವೆಂಕಟೇಶ್, ಪುರಸಭಾ ಸದಸ್ಯ ಮರಿಯಪ್ಪ ಮತ್ತಿತರರು ಹಾಜರಿದ್ದರು.ಆನಂದಚಕ್ರವರ್ತಿ ನಿರೂಪಿಸಿದರು. ಹೊಂಪಲಘಟ್ಟ ರವಿ ಸ್ವಾಗತಿಸಿದರು. ವೆಂಕಟೇಶ್ ವಂದಿಸಿದರು.‘ಹೋರಾಟಕ್ಕೆ ಕೈಜೋಡಿಸಿ’

ಆನೇಕಲ್: ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಲು ಎಲ್ಲರೂ ಪಣ ತೊಡಬೇಕು. ಅಂಬೇಡ್ಕರ್ ಅವರ ಚಿಂತನೆಯ ಬೆಳಕಿನಲ್ಲಿ ಹೋರಾಟಗಳನ್ನು ರೂಪಿಸಬೇಕಾಗಿದೆ ಎಂದು ಪಿ.ವಿ.ಸಿ(ಎಸ್) ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಆನೇಕಲ್ ಕೃಷ್ಣಪ್ಪ ನುಡಿದರು. ಪಟ್ಟಣದ ಸಂಘಟನೆ ಕಚೇರಿಯಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಭಾರತ ದೇಶದಲ್ಲಿದ್ದ ಅಸ್ಪೃಶ್ಯತೆ, ಅಸಮಾನತೆಗಳ ವಿರುದ್ಧ ಹೋರಾಟಗಳನ್ನು ಮಾಡಿ ಜನರ ದನಿಯಾಗಿದ್ದ ಅಂಬೇಡ್ಕರ್ ಅವರು ಪಾವಡ ಪುರುಷ ಎಂದರು.ವೈದ್ಯ ವೈಲಾಯ, ಸಂಘಟನೆ ಮುಖಂಡರಾದ ಇಂಡ್ಲವಾಡಿ ಬಸವರಾಜು, ಆರ್.ವೆಂಕಟೇಶ್, ಎಸ್.ಬಾಬು, ಚಂದ್ರಾರೆಡ್ಡಿ, ಅರೇಹಳ್ಳಿ ಅಶ್ವಥ್ ಮಾದಪ್ಪ, ಆದೂರ್ ಲೋಕೇಶ್, ಕೊಪ್ಪ ರಾಮಾಂಜಿ, ರಾಮಸಾಗರ ಯಲ್ಲಪ್ಪ, ನೆಸೇನೂರು ಯಲ್ಲಪ್ಪ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry