ಶನಿವಾರ, ಫೆಬ್ರವರಿ 27, 2021
27 °C
ನಗರಾಭಿವೃದ್ಧಿ, ಪೌರಾಡಳಿತ ಇಲಾಖೆ ಯೋಜನೆಗಳ ಪ್ರಗತಿ ಪರಿಶೀಲನೆ

ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಹೊಣೆ

ಬೆಂಗಳೂರು: ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಯನ್ನು ಸ್ಥಳೀಯ ಸಂಸ್ಥೆಗಳು ಮೂರು ತಿಂಗಳ ಒಳಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ನಗರಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ನಿಗದಿತ ಅವಧಿಯಲ್ಲಿ ಕ್ರಿಯಾ ಯೋಜನೆ ಸಲ್ಲಿಸದಿದ್ದರೆ ಜಿಲ್ಲಾಧಿಕಾರಿಯೇ ಆ ಹೊಣೆ ನಿರ್ವಹಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದರು. ‘ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಕೆಲವೆಡೆ ಕಾಮಗಾರಿಗಳ ಪಟ್ಟಿ 9 ತಿಂಗಳು ಕಳೆದರೂ ಸಿದ್ಧಗೊಂಡಿಲ್ಲ’ ಎಂದರು.‘14ನೇ ಹಣಕಾಸು ಆಯೋಗದ ಅನುದಾನ ₹388 ಕೋಟಿಯಲ್ಲಿ 4,637 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ₹ 53 ಕೋಟಿ (ಶೇ 21) ವೆಚ್ಚದ ಪ್ರಗತಿ ಮಾತ್ರ ಕಾಣುತ್ತಿರುವ ಬಗ್ಗೆ  ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ’ ಎಂದು ಖಂಡ್ರೆ ವಿವರಿಸಿದರು.‘ಬಾಕಿ ಇರುವ ಕಾಮಗಾರಿಗಳನ್ನು 2017ರ ಮಾರ್ಚ್ ವೇಳೆಗೆ ಪೂರ್ಣಗೊಳಿಸಬೇಕು. ವಿಳಂಬವಾದರೆ ಜಿಲ್ಲಾಧಿಕಾರಿಗಳೇ ಹೊಣೆಗಾರರು ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.‘ಸ್ವಚ್ಛ ಭಾರತ ನಗರ ಯೋಜನೆಯಲ್ಲಿ 2,54,148 ಶೌಚಾಲಯ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದು, 2017 ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. 13ನೇ ಹಣಕಾಸು ಆಯೋಗದ ಅನುದಾನದಲ್ಲಿ ಕೈಗೆತ್ತಿಕೊಂಡಿರುವ ₹2 ಸಾವಿರ ಕೋಟಿ ವೆಚ್ಚದ ಯೋಜನೆಗಳನ್ನೂ ಇದೇ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು’ ಎಂದರು.ನಗರೋತ್ಥಾನ ಯೋಜನೆಯಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಕಡ್ಡಾಯವಾಗಿ ಅನುದಾನ ನಿಗದಿಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದರು.‘ಎಲ್ಲರಿಗೂ ಸೂರು’ ಯೋಜನೆಯಲ್ಲಿ ನಗರ ಪ್ರದೇಶಗಳಲ್ಲಿ 1.25 ಲಕ್ಷ ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಈಗಾಗಲೇ 80 ಸಾವಿರ ಫಲಾನುಭವಿಗಳನ್ನು ಗುರುತಿಸಲಾಗಿದೆ. 25 ಸಾವಿರ ಮನೆ  ಹಂಚಿಕೆ ಮಾಡಲಾಗಿದೆ. ಬಾಕಿ ಇರುವ 40 ಸಾವಿರ ಮನೆಗಳ ಹಂಚಿಕೆ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಲು ಆದೇಶಿಸಲಾಗಿದೆ ಎಂದರು.ಸಿಬ್ಬಂದಿ ಕೊರತೆ– ಅನುಷ್ಠಾನ ಕುಂಠಿತ: ಮಹಾನಗರಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ಯೋಜನೆಗಳ ಅನುಷ್ಠಾನ ಕುಂಠಿತಗೊಂಡಿದೆ. ಈ ಕಾರಣಕ್ಕೆ ಲೋಕೋಪಯೋಗಿ ಇಲಾಖೆಯ ನಿವೃತ್ತ ಎಂಜಿನಿಯರ್‌ಗಳು ಮತ್ತು ಯೋಜನಾ ನಿರ್ವಾಹಕ ಕನ್ಸಲ್ಟೆಂಟ್‌ಗಳನ್ನು ಬಳಸಿಕೊಳ್ಳುವಂತೆ ಸ್ಥಳೀಯ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.ನಗರಾಭಿವೃದ್ಧಿ ಇಲಾಖೆಯಲ್ಲಿ ಶೇ 60ರಷ್ಟು ಹುದ್ದೆಗಳು ಖಾಲಿ ಇವೆ. 10 ಮಹಾನಗರಗಳಲ್ಲಿ (ಬಿಬಿಎಂಪಿ ಹೊರತುಪಡಿಸಿ) ಮಂಜೂರಾದ 11,342 ಹುದ್ದೆಗಳ ಪೈಕಿ 5,757 ಹುದ್ದೆಗಳು ಖಾಲಿ ಇವೆ. ಸ್ಥಳೀಯ ಸಂಸ್ಥೆಗಳಿಗೆ ಮಂಜೂರಾದ 21,642 ಹುದ್ದೆಗಳಲ್ಲಿ 11,495 ಹುದ್ದೆ ಖಾಲಿ ಇವೆ. ಮಂಜೂರಾದ ಪ್ರಮುಖ 3,778 ಹುದ್ದೆಗಳಲ್ಲಿ 2,164 ಹುದ್ದೆಗಳು ಖಾಲಿ ಇವೆ ಎಂದು ಖಂಡ್ರೆ ಅಂಕಿಅಂಶ ನೀಡಿದರು.ಕೊಪ್ಪಳ ಪುರಸಭೆಗೆ ಮಂಜೂರಾಗಿರುವ ಎಲ್ಲ 17 ಎಂಜಿನಿಯರ್‌ ಹುದ್ದೆಗಳು ಖಾಲಿ ಇವೆ. ಹೀಗಾಗಿ 13ನೇ ಹಣಕಾಸು ಆಯೋಗದ ಅನುದಾನದಲ್ಲಿ (2014–15) ಕ್ರಿಯಾ ಯೋಜನೆ ಇನ್ನೂ ಸಿದ್ಧಪಡಿಸಲು ಸಾಧ್ಯ ಆಗಿಲ್ಲ. 3,620 ಹುದ್ದೆಗಳನ್ನು ಭರ್ತಿ ಮಾಡುವಂತೆ ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಖಂಡ್ರೆ ತಿಳಿಸಿದರು.ನಗರೋತ್ಥಾನ ಯೋಜನೆಯಡಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವ ಯೋಜನೆಗಳು ಮಂದಗತಿಯಲ್ಲಿ ನಡೆಯುತ್ತಿವೆ. ಬಳ್ಳಾರಿ, ಬೆಳಗಾವಿ, ವಿಜಯಪುರ, ಮೈಸೂರು ನಗರಪಾಲಿಕೆಗಳಲ್ಲಿ ಯೋಜನೆಗಳ ಅನುಷ್ಠಾನ ಅತ್ಯಂತ ಕಳಪೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.ಮುಖ್ಯಾಂಶಗಳು

* ಸ್ಥಳೀಯ ಸಂಸ್ಥೆಗಳಿಗೆ ಎಚ್ಚರಿಕೆಯ ಸುತ್ತೋಲೆ

* 14ನೇ ಹಣಕಾಸು ಆಯೋಗದ ಅನುದಾನ– ಶೇ 21ರಷ್ಟು ಪ್ರಗತಿ

* ನಿವೃತ್ತ ಎಂಜಿನಿಯರ್‌ಗಳ ನೇಮಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.