ಜಿಲ್ಲಾಧಿಕಾರಿಗಳ ಕೈಯಲ್ಲಿ ನಿವಾಸಿಗಳ ಭವಿಷ್ಯ
ಬೆಂಗಳೂರು: ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿಕೊಂಡಿರುವ ಆರೋಪ ಹೊತ್ತ ನಗರದ ಯಲಚೇನಹಳ್ಳಿ ಹಾಗೂ ಜರಗನಹಳ್ಳಿ ನಿವಾಸಿಗಳ ಭವಿಷ್ಯವನ್ನು ಸೋಮವಾರ ನಗರದ ವಿಶೇಷ ಜಿಲ್ಲಾಧಿಕಾರಿಗಳು ನಿರ್ಧರಿಸಲಿದ್ದಾರೆ. ಕಾರಣ, ಜಿಲ್ಲಾಧಿಕಾರಿಗಳ ಮುಂದೆ 18ರಂದು ಹಾಜರಾಗಿ ತಮ್ಮನ್ನು ತೆರವುಗೊಳಿಸದಂತೆ ಮನವಿ ಮಾಡಿಕೊಳ್ಳುವ ಅವಕಾಶವನ್ನು (ಹೈಕೋರ್ಟ್ಗೆ ಅರ್ಜಿ ಸಲ್ಲಿಸಿರುವವರಿಗೆ ಮಾತ್ರ) ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೀಡಿದ್ದಾರೆ. ಅವರ ಅಹವಾಲು ಆಲಿಸಿ ಕಾನೂನುಬದ್ಧವಾಗಿ ಸೂಕ್ತ ಆದೇಶ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ನ್ಯಾಯಮೂರ್ತಿಗಳು ನಿರ್ದೇಶಿಸಿದ್ದಾರೆ.
48 ಗಂಟೆಗಳ ಒಳಗೆ ಜಾಗ ತೆರವಿಗೆ ಜಿಲ್ಲಾಧಿಕಾರಿಗಳು ಇದೇ 5ರಂದು ನೀಡಿದ್ದ ನೋಟಿಸ್ಗೆ ತಡೆ ನೀಡುವಂತೆ ಕೋರಿ 50ಕ್ಕೂ ಅಧಿಕ ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. ಸುಮಾರು 29.27 ಎಕರೆ ಜಮೀನಿನ ವಿವಾದ ಇದು. ಈ ಜಾಗವನ್ನು 1986ರಲ್ಲಿ ಸರ್ಕಾರವು ಬ್ಯಾಂಕ್ ಅಧಿಕಾರಿಗಳ ಗೃಹ ನಿರ್ಮಾಣ ಸಹಕಾರ ಸಂಘಕ್ಕಾಗಿ ಸ್ವಾಧೀನಪಡಿಸಿಕೊಂಡಿತ್ತು. ಇದನ್ನು ಪ್ರಶ್ನಿಸಿ ಭೂಮಾಲೀಕರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಇತ್ಯರ್ಥಕ್ಕೆ ಇರುವಾಗಲೇ ಇದನ್ನು ಮಾಲೀಕರು ಮಾರಾಟ ಮಾಡಿದ್ದರು. ಇಲ್ಲಿ ಈಗ 2ಸಾವಿರ ಕುಟುಂಬಗಳು ನೆಲೆಸಿದ್ದು, ಪಾಲಿಕೆ ಅವರಿಂದ ಕಂದಾಯ ಕೂಡ ವಸೂಲಿ ಮಾಡುತ್ತಿದೆ. ಭೂಮಾಲೀಕರ ವಿರುದ್ಧವಾಗಿ ಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ಈಗ ನೆಲೆಸಿರುವವರ ತೆರವಿಗೆ ನೋಟಿಸ್ ನೀಡಲಾಗಿದೆ.
ಉದ್ಯಾನ ಜಾಗ ಉಳಿಸಿ
ಬನಶಂಕರಿ 3ನೇ ಹಂತದಲ್ಲಿರುವ (ವಾರ್ಡ್ ನಂ. 54) ಮೂರು ಎಕರೆ ಜಮೀನಿನ ಪೈಕಿ 35 ಗುಂಟೆಗಳನ್ನು ಹೊರತುಪಡಿಸಿ, ಉಳಿದ ಜಾಗವನ್ನು ಉದ್ಯಾನವಾಗಿ ಉಳಿಸಿಕೊಳ್ಳುವಂತೆ ಹೈಕೋರ್ಟ್ ಬುಧವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಿರ್ದೇಶಿಸಿದೆ. 35 ಗುಂಟೆ ಜಾಗದಲ್ಲಿ ಈಗಾಗಲೇ ಕೊಳೆಗೇರಿಗಳಿಗೆ ನಿರ್ಮಾಣ ಮಾಡಿರುವ ಗುಡಿಸಲುಗಳನ್ನು ತೆರವುಗೊಳಿಸಿ, ಅಲ್ಲಿ ಅವರಿಗೆ ನೈರ್ಮಲ್ಯದಿಂದ ಕೂಡಿದ ಮನೆ ನಿರ್ಮಾಣ ಮಾಡಿಕೊಡುವಂತೆ ಕೊಳಚೆ ನಿರ್ಮೂಲನಾ ಮಂಡಳಿಗೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
ಈ ಎಲ್ಲ ಕಾರ್ಯಗಳಿಗೆ ಒಂದು ವರ್ಷದ ಗಡುವನ್ನು ಸಂಬಂಧಿತ ಇಲಾಖೆಗಳಿಗೆ ಪೀಠ ನೀಡಿದೆ. ಉದ್ಯಾನದ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ ಆಗುತ್ತಿರುವುದಾಗಿ ದೂರಿ ಅಭಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿ, ಅರ್ಜಿಯನ್ನು ಇತ್ಯರ್ಥಗೊಳಿಸಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.