ಜಿಲ್ಲಾಧಿಕಾರಿಯಿಂದ ಕಲಿಯಬೇಕಿಲ್ಲ...:ಶಾಸಕ ನೇಮರಾಜ್

7

ಜಿಲ್ಲಾಧಿಕಾರಿಯಿಂದ ಕಲಿಯಬೇಕಿಲ್ಲ...:ಶಾಸಕ ನೇಮರಾಜ್

Published:
Updated:

ಬಳ್ಳಾರಿ: ಜಿಲ್ಲೆಯಲ್ಲಿ ಮರಳು (ಉಸುಕು) ದೊರಯುತ್ತಿಲ್ಲ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮರಳು ಸಿಗುತ್ತಿಲ್ಲ. ಜಿಲ್ಲಾಧಿಕಾರಿಯವರು ಹೊರಡಿಸಿರುವ ಕಟ್ಟುನಿಟ್ಟಿನ ಆದೇಶಗಳಿಂದಾಗಿ ಬಡಜನತೆ ತೀವ್ರ ತೊಂದರೆಗೆ ಒಳಗಾಗುವಂತಾಗಿದೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ನೇಮರಾಜ ನಾಯ್ಕ ನೇರವಾಗಿ ಆರೋಪಿಸಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ನಡೆದ ಬರಗಾಲ ಪರಿಸ್ಥಿತಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಈ ರೀತಿ ಆರೋಪಿಸಿದರು.ರಾಜಕಾರಣಿಗಳು ಜಿಲ್ಲಾಧಿಕಾರಿಯಿಂದ ಕಲಿಯಬೇಕಾಗಿಲ್ಲ. ಅಧಿಕಾರಿಗಳು ಎರಡು ಅಥವಾ ಮೂರು ವರ್ಷ ಜಿಲ್ಲೆಯಲ್ಲಿದ್ದು ಹೋಗುತ್ತಾರೆ. ಜನಪ್ರತಿನಿಧಿಗಳು ಜನತೆಗೆ ಉತ್ತರ ನೀಡಬೇಕಾಗುತ್ತದೆ. ಕಟ್ಟುನಿಟ್ಟಿನ ಆದೇಶ ಜಾರಿಮಾಡಿದರೆ ಜನರಿಗೆ ಮುಖ ತೋರಿಸುವುದು ಹೇಗೆ? ಎಂದು ಅವರು ಪ್ರಶ್ನಿಸಿದರು.`ಶಾಸಕರೇ ವಿಧಾನಸಭೆಯಲ್ಲಿ ರೂಪಿಸಿರುವ ಕಾನೂನನ್ನು ನಾನು ಜಾರಿ ಮಾಡಿದ್ದೇನೆ. ಕಾನೂನಿನ ಚೌಕಟ್ಟನ್ನು ಮೀರಿ ಯಾವುದೇ ಆದೇಶ ಹೊರಡಿಸಿಲ್ಲ~ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಶಾಸಕ ನೇಮರಾಜ ಅವರ ಪ್ರಶ್ನೆಗೆ ತಣ್ಣಗೆ ಉತ್ತರ ನೀಡಿದರು.ಕಾನೂನು ರೂಪಿಸುವುದು ಜನರನ್ನು ಶೋಷಿಸುವುದಕ್ಕೆ ಅಲ್ಲ. ಅಧಿಕಾರಿಗಳಿಗೆ ಕಡಿವಾಣ ಹಾಕುವುದಕ್ಕೆ ಎಂದು ಶಾಸಕ ನೇಮರಾಜ ನಾಯ್ಕ ತಕ್ಷಣ ಮತ್ತೆ ಕಿಡಿಕಾರಿದರು.ಜಿಲ್ಲೆಯಲ್ಲಿ ಮುರ‌್ರಂ ಅನ್ನು ಅಧಿಕೃತವಾಗಿ ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ಕಂದಾಯ ಭೂಮಿಯಿಂದ ಟೆಂಡರ್ ಮೂಲಕ ನೀಡಲಾಗುತ್ತದೆ. ಕೃಷಿ ಭೂಮಿಯಲ್ಲಿ ರೈತರೇ ಮುರ‌್ರಂ ಎತ್ತುವುದು ನಿಷಿದ್ಧ ಇದು ಕಾನೂನು ಎಂದು ಜಿಲ್ಲಾಧಿಕಾರಿ ಪ್ರತ್ಯುತ್ತರ ನೀಡಿದರು.ಈಗ ಈ ಕುರಿತ ಚರ್ಚೆಗಳು ಬೇಡ. ಸಭೆಯ ನಂತರ ಕೊಠಡಿಯಲ್ಲಿ ಕುಳಿತು ಈ ಕುರಿತು ಚರ್ಚಿಸೋಣ ಎಂದು ಸಚಿವ ಜಾರಕಿಹೊಳಿ, ಚರ್ಚೆಯನ್ನು ತಣ್ಣಗಾಗಿಸಿದರು.ಆದರೂ ಸುಮ್ಮನಾಗದ ಶಾಸಕ ನೇಮರಾಜ, ಕೆಲವು ವಿಷಯಗಳ ಚರ್ಚೆಯ ನಂತರ ಮತ್ತೆ ಮಾತಿಗಿಳಿದು, ಜಿಲ್ಲಾಧಿಕಾರಿಯವರು ಕಚೇರಿಯಲ್ಲಿ ಯಾವಾಗ ಇರುತ್ತಾರೆ ಎಂಬುದನ್ನು ಹೇಳಬೇಕು. ಅವರು ಪೊಲೀಸರ ಕೆಲಸವನ್ನೂ ಮಾಡುತ್ತಾರೆ. ಜವಾನನ ಕೆಲಸವನ್ನೂ ಮಾಡುತ್ತಾರೆ.ನಿರ್ಮಿತಿ ಕೇಂದ್ರಕ್ಕೆ ಸಂಬಂಧಿಸಿದ ಕಡತಗಳನ್ನು ತೀವ್ರವಾಗಿ ವಿಲೇವಾರಿ ಮಾಡುತ್ತಾರೆ. ಬೇರೆ ಇಲಾಖೆಗಳ ಕಡತಗಳು ತಿಂಗಳುಗಟ್ಟಲೇ ವಿಲೇವಾರಿ ಆಗುವುದಿಲ್ಲ. ಭೂಸೇನಾ ನಿಗಮಕ್ಕೆ ಕೆಲಸ ನೀಡಿ ಎಂದು ಕೇಳಿದರೂ ಕೊಡದೆ ನಿರ್ಮಿತಿ ಕೇಂದ್ರಕ್ಕೇ ಕೊಡುತ್ತಿದ್ದಾರೆ. ಈ ಕುರಿತು ಶಂಕೆ ಇದೆ ಎಂದು ದೂರಿದರು.`ನೀವು ಜಿಲ್ಲಾಧಿಕಾರಿ ಜತೆ ಜಗಳ ಮಾಡುವುದಕ್ಕೇ ಬಂದಿದ್ದೀರಾ?~ ಎಂದು ಸಚಿವ ಜಾರಕಿಹೊಳಿ ಖಾರವಾಗಿಯೇ ಪ್ರಶಿಸಿದಾಗ, `ಹೌದು ನಾನು ಜಗಳಾಡುವುದಕ್ಕೇ ಬಂದಿದ್ದೇನೆ~ ಎಂದು ಹೇಳಿದರು.`ಜಿಲ್ಲೆಯಲ್ಲಿ ಸಾರ್ವಜನಿಕ ಕಾಮಗಾರಿ ನಡೆಸುವ ಸರ್ಕಾರಿ ಸ್ವಾಮ್ಯದ ನಾಲ್ಕು ಸಂಸ್ಥೆಗಳಿವೆ. ಭೂಸೇನಾ ನಿಗಮಕ್ಕೆ ಕೆಲಸದ ಒತ್ತಡ ಹೆಚ್ಚೇ ಇರುವುದರಿಂದ ನಿಗದಿತ ಸಮಯದಲ್ಲಿ ಕೆಲಸ ಪೂರ್ಣಗೊಳ್ಳುತ್ತಿಲ್ಲ. ಹಾಗಾಗಿ ನಿರ್ಮಿತಿ ಕೇಂದ್ರಕ್ಕೆ ಕೆಲಸ ನೀಡಲಾಗಿದೆ. ಈ ನಾಲ್ಕು ಸಂಸ್ಥೆಗಳಲ್ಲಿ ಯಾರಿಗಾದರೂ ಕಾಮಗಾರಿ ಹಂಚಿಕೆ ಮಾಡುವ ಅಧಿಕಾರ ನನಗೆ ಇದೆ. ಆದರೆ, ಶಾಸಕರಿಗೆ ಶಂಕೆ, ಅನುಮಾನ, ದ್ವೇಷ ಯಾಕೆ ಇದೆ ಎಂಬುದು ಅರ್ಥವಾಗುತ್ತಿಲ್ಲ~ ಎಂದು ಬಿಸ್ವಾಸ್ ಸ್ಪಷ್ಟೀಕರಣ ನೀಡಿದರು.`ಈ ಚರ್ಚೆಯನ್ನು ನಂತರ ಮಾಡಿದರಾಯಿತು. ಈಗ ಬರ ಪರಿಸ್ಥಿತಿ ಕುರಿತು ಚರ್ಚಿಸೋಣ~ ಎಂದು ಚರ್ಚೆಯನ್ನು ಶಮನಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry