ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತಿಲ್ಲವೇ?

7

ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತಿಲ್ಲವೇ?

Published:
Updated:
ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತಿಲ್ಲವೇ?

ಚಿಕ್ಕಮಗಳೂರು: ಭೂಮಿ ಹಕ್ಕುದಾರಿಕೆ ವಿವಾ­ದದ ಪ್ರಕರಣವೊಂದರಲ್ಲಿ ಜಿಲ್ಲಾ­ಧಿಕಾರಿ ನ್ಯಾಯಾಲಯ ‘ಯಥಾ ಸ್ಥಿತಿ’ ಕಾಪಾಡಿಕೊಳ್ಳುವಂತೆ ನೀಡಿದ್ದ ಆದೇಶ ಜಿಲ್ಲಾ­ಧಿ­ಕಾರಿಗಳ ಕಣ್ಣೆದುರಿಗೆ ಉಲ್ಲಂ­ಘನೆಯಾಗಿದ್ದರೂ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಮೂಕ ಪ್ರೇಕ್ಷಕರಂತೆ ನಡೆದು­ಕೊಳ್ಳು­ತ್ತಿರುವ ಪ್ರಸಂಗಕ್ಕೆ ತಾಜಾ ನಿದರ್ಶನವೊಂದು ಇಲ್ಲಿದೆ.ಕೊಪ್ಪ ತಾಲ್ಲೂಕಿನ ಹುಲಿಗರಡಿ–ಗುಡ್ಡೆತೋಟದ ಗ್ರಾಮದಲ್ಲಿ ಖಾಸಗಿ ಕಂಪೆನಿ ಮತ್ತು ವ್ಯಕ್ತಿಯೊಬ್ಬರ ನಡುವೆ ಕಾಫಿ ತೋಟದ ಹಕ್ಕುದಾರಿಕೆ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತ್ತು. 2013ರ ಫೆಬ್ರುವರಿ 5ರಂದು ಜಿಲ್ಲಾ­ಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆದು, ‘ವಿವಾದಿತ ಭೂಮಿಗೆ ಸಂಬಂಧಿಸಿದ ಹಿಸ್ಸಾಪೋಡಿ ದುರಸ್ತಿ­ಗೊಳಿಸಿರುವ ನಡಾವಳಿ ಕಾನೂ­ನಿಗೆ ವಿರುದ್ಧವಾಗಿರುವುದಾಗಿ, ಸಕ್ಷಮ ಪ್ರಾಧಿಕಾರ ಅಥವಾ ನ್ಯಾಯಾ­ಲಯದಲ್ಲಿ ಸಾಬೀತಾಗುವವರೆಗೆ ಯಥಾ ರೀತಿ ಮುಂದುವರಿಸಬೇಕು. ಅಲ್ಲದೆ, ಮೊದಲಿದ್ದಂತೆ ಹಕ್ಕು-­ದಾಖಲೆಗಳಲ್ಲಿ ಹಕ್ಕುದಾರಿಕೆ ದಾಖಲು ಮಾಡುವಂತೆ’ ಜಿಲ್ಲಾಧಿಕಾರಿಗಳು ಕೊಪ್ಪ ತಹಶೀಲ್ದಾರ್‌ರಿಗೂ ನಿರ್ದೇಶನ ನೀಡಿದ್ದರು.ಆದರೆ, ಕಳೆದ ಡಿಸೆಂಬರ್‌ 25ರಂದು ವ್ಯಕ್ತಿ­ಯೊಬ್ಬರು, ಜಿಲ್ಲಾಧಿಕಾರಿಗಳ ಆದೇಶ ಇದ್ದಾಗ್ಯೂ ಕಂಪೆನಿಯ ಅನು­ಭವದ ಕಾಫಿ ತೋಟದ ಮೇಲೆ ಹಕ್ಕುದಾರಿಕೆ ಸ್ಥಾಪಿಸಲು ತಮ್ಮ ನೂರಾರು ಬೆಂಬಲಿಗರೊಂದಿಗೆ ಕಾಫಿ ತೋಟಕ್ಕೆ ಅಕ್ರಮವಾಗಿ ನುಸುಳಿ, ತಂತಿ ಬೇಲಿ ಅಳವಡಿಸಿ ಮತ್ತು ರಸ್ತೆ ನಿರ್ಮಿ­ಸಿದ ಘಟನೆ ನಡೆಯಿತು. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಈ ವ್ಯಕ್ತಿ ಜತೆಗೆ ಕೈಜೋಡಿಸಿ ಗುಂಪುಗೂಡಿದ ಪರಿಣಾಮ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಘಟನೆಗಳು ಸ್ಥಳದಲ್ಲಿ ನಡೆದವು. ಜಯಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿ ಯಂತ್ರ ವಶಪಡಿಸಿಕೊಂಡರು. ದೂರು–ಪ್ರತಿ ದೂರು ದಾಖಲಿಸಿಕೊಂಡರು. ಆದರೆ, ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಳವಡಿಸಿದ ತಂತಿ ಬೇಲಿ ಮತ್ತು ರಸ್ತೆ ತೆರವುಗೊಳಿಸಲು ಹಿಂಜರಿಕೆ ತೋರಿದರು.ಖಾಸಗಿ ವ್ಯಕ್ತಿ ಯಥಾಸ್ಥಿತಿ ಕಾಯ್ದು­ಕೊಳ್ಳದೆ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂ­ಘಿಸಿದ ಬಗ್ಗೆ ಈಗಿನ ಜಿಲ್ಲಾಧಿಕಾರಿ ಬಿ.ಎಸ್‌.ಶೇಖರಪ್ಪ ಅವರನ್ನು ಪ್ರಶ್ನಿಸಿದರೆ ‘ಭೂ ವಿವಾದದ ಪ್ರಕರಣ ಸಿವಿಲ್‌ ನ್ಯಾಯಾಲಯದಲ್ಲಿ ವಿಚಾ­ರಣೆಗೆ ಬಾಕಿ ಇದೆ. ಇಂತಹ ಸಂದ­ರ್ಭದಲ್ಲಿ ನಾವು ಮಧ್ಯ ಪ್ರವೇಶಿಸಲು ಆಗು­ವುದಿಲ್ಲ. ಆ ಪ್ರಕರಣಕ್ಕೆ ಸಂಬಂ­ಧಿಸಿದಂತೆ ಜಿಲ್ಲಾಧಿಕಾರಿ ನ್ಯಾಯಾಲಯ ನೀಡಿ­ರುವ ಆದೇಶ ಉಲ್ಲಂ­ಘನೆಯಾಗಿದ್ದರೆ ಅರ್ಜಿದಾರರು ಸಕ್ಷಮ ಪ್ರಾಧಿಕಾರದಲ್ಲಿ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದು ಸಬೂಬು ನೀಡುತ್ತಾರೆ.ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್‌ ಇಲಾಖೆ ನೀಡಿರುವ ವರದಿ ಬಗ್ಗೆ ಗಮನ ಸೆಳೆದರೆ, ‘ಇದು ಅತ್ಯಂತ ಕೆಟ್ಟ ಬೆಳವಣಿಗೆ. ನಾವು ನೀಡುವ ಆದೇಶ ಪಾಲನೆಯಾಗುವಂತೆ ನೋಡಿ­ಕೊಳ್ಳುವುದು ಅವರ ಕೆಲಸವಲ್ಲವೇ? ಆದೇಶ ಉಲ್ಲಂಘನೆಯಾಗಿರುವುದು ಕಂಡುಬಂದರೆ ಪೊಲೀಸ್‌ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅರ್ಜಿದಾರರು ದೂರು ನೀಡಿದರೆ, ಅವರಿಗೆ ರಕ್ಷಣೆ ಕೊಡಬೇಕಾದುದು ಅವರ ಕರ್ತವ್ಯವಲ್ಲವೇ?’ ಎನ್ನುತ್ತಾರೆ.ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಚೇತನ್‌ ಅವರ ಪ್ರತಿಕ್ರಿಯೆ ಕೇಳಿದಾಗ ‘ಖಾಸಗಿ ಕಂಪೆನಿ ಮತ್ತು ವ್ಯಕ್ತಿಯೊಬ್ಬರ ನಡುವಿನ ಭೂ ವಿವಾದದ ಬಗ್ಗೆ ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರಿಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘನೆಯಾಗಿರುವ ಬಗ್ಗೆ ಜಿಲ್ಲಾಧಿಕಾರಿಗಳೇ ಕ್ರಮ ತೆಗೆದುಕೊಳ್ಳಬೇಕು’ ಎನ್ನುತ್ತಾರೆ.ಜಿಲ್ಲಾಧಿಕಾರಿಗಳ ನ್ಯಾಯಾಲಯ ನೀಡಿದ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕಾದ ಜಿಲ್ಲಾಡಳಿತ ಹೀಗೆ ಜವಾಬ್ದಾರಿಯಿಂದ ನುಣಿಚಿಕೊಳ್ಳಲು ಯತ್ನಿಸಿದರೆ, ಅಧಿಕಾರಶಾಹಿ ವ್ಯವಸ್ಥೆ ಮೇಲೆ ಜನಸಾಮಾನ್ಯರು ಹೇಗೆ ನಂಬಿಕೆ ಇಟ್ಟುಕೊಳ್ಳುವುದು ಎನ್ನುವ ಪ್ರಶ್ನೆಯನ್ನು ಈ ಭೂ ವಿವಾದದ ಪ್ರಕರಣ ಹುಟ್ಟುಹಾಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry