ಜಿಲ್ಲಾಧಿಕಾರಿ ವಿರುದ್ಧ ಖಾಸಗಿ ದೂರು

7

ಜಿಲ್ಲಾಧಿಕಾರಿ ವಿರುದ್ಧ ಖಾಸಗಿ ದೂರು

Published:
Updated:

ಬೆಂಗಳೂರು: ಸ್ಥಿರಾಸ್ತಿಯೊಂದರ ಖಾತೆ ವರ್ಗಾವಣೆಗೆ ಸಂಬಂಧಿಸಿದ ಪ್ರಕ್ರಿಯೆಯಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಎಂ.ಕೆ.ಅಯ್ಯಪ್ಪ ಮತ್ತು ಇತರರ ವಿರುದ್ಧ ಎಂ.ದೀಪಕ್ ಎಂಬುವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಶನಿವಾರ ಖಾಸಗಿ ದೂರು ಸಲ್ಲಿಸಿದ್ದಾರೆ.ತಮ್ಮ ತಾಯಿ ಆರ್.ಯಶೋದಾ ಅವರು ತಾವರೆಕೆರೆ ಹೋಬಳಿಯ ಕುರುಬರಹಳ್ಳಿಯಲ್ಲಿ 1966ರಲ್ಲಿ ಎಂಟು ಎಕರೆ ಭೂಮಿ ಖರೀದಿಸಿದ್ದರು. ಆದರೆ, 1925ರಿಂದ 1935ರವರೆಗೆ ಈ ಭೂಮಿಯ ಒಡೆತನ ಹೊಂದಿದ್ದ ಮೊಯಿನುದ್ದೀನ್ ಅವರ ವಾರಸುದಾರರಿಗೆ ಈ ಆಸ್ತಿಯ ಖಾತೆಯನ್ನು ವರ್ಗಾವಣೆ ಮಾಡಿ ವಿಶೇಷ ತಹಶೀಲ್ದಾರ್ ಸದಾನಂದಪ್ಪ 2005ರಲ್ಲಿ ಆದೇಶ ಹೊರಡಿಸಿದ್ದರು.1965ರಲ್ಲಿ ನ್ಯಾಯಾಲಯ ನೀಡಿದ್ದ ಎರಡು ಆದೇಶಗಳನ್ನು ಆಧರಿಸಿ ಖಾತೆ ವರ್ಗಾವಣೆ ಮಾಡಿರುವುದಾಗಿ ವಿಶೇಷ ತಹಶೀಲ್ದಾರ್ ತಿಳಿಸಿದ್ದರು. ಆದರೆ, ಅಂತಹ ಯಾವುದೇ ಆದೇಶಗಳೂ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ 60 ದಿನಗಳೊಳಗೆ ವರದಿ ಸಲ್ಲಿಸುವಂತೆ 2007ರ ಮೇ ತಿಂಗಳಲ್ಲಿ ಆಗಿನ ರಾಜ್ಯ ಮಾಹಿತಿ ಆಯುಕ್ತರು ಆದೇಶ ಹೊರಡಿಸಿದ್ದರು. ವಿಭಾಗೀಯ ಆಯುಕ್ತರೂ ತನಿಖೆಗೆ ಆದೇಶಿಸಿದ್ದರು.

ಈ ಬಗ್ಗೆ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿದರೆ, ತನಿಖೆ ನಡೆಸಲು ಕ್ರಮ ಕೈಗೊಳ್ಳಲಿಲ್ಲ.ಕಡತ ಹುಡುಕುವುದು ಮತ್ತು ಮಾಹಿತಿ ಪಡೆಯುವುದರಲ್ಲೇ ಕಾಲಹರಣ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ದೂರನ್ನು ವಿಚಾರಣೆಗೆ ಸ್ವೀಕರಿಸುವ ಅಥವಾ ತಿರಸ್ಕರಿಸುವ ಕುರಿತು ನ್ಯಾಯಾಲಯ ಮೇ 21ರಂದು ಆದೇಶ ಪ್ರಕಟಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry