ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಚಿವ ದೇಶಪಾಂಡೆ ತಾಕೀತು

7

ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಚಿವ ದೇಶಪಾಂಡೆ ತಾಕೀತು

Published:
Updated:

ಶಿರಸಿ: ‘ಪರಿಶಿಷ್ಟ ಪಂಗಡ ಮತ್ತು ಇತರೇ ಪಾರಂಪರಿಕ ಅರಣ್ಯವಾಸಿಗಳ ಹಕ್ಕು ಮಾನ್ಯತಾ ಕಾಯ್ದೆ ಅಡಿಯಲ್ಲಿ ಅರ್ಜಿ ಸ್ವೀಕರಿಸುವ ಕಾರ್ಯ ಪೂರ್ಣಗೊಂಡಿದ್ದು, ಅಧಿಕಾರಿಗಳು, ಅರಣ್ಯ ಹಕ್ಕು ಸಮಿತಿಗಳು ಸಮರೋಪಾದಿಯಲ್ಲಿ ಮುಂದಿನ ಪ್ರಕ್ರಿಯೆ ನಡೆಸಬೇಕು. ಫೆ.15ರ ಒಳಗಾಗಿ ಅತಿಕ್ರಮಣದಾರರ ಹಕ್ಕುಪತ್ರ ವಿತರಣೆಗೆ ಸಿದ್ಧವಾಗಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಆದೇಶಿಸಿದರು.ಗುರುವಾರ ಇಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಅರ್ಜಿ ಸ್ವೀಕಾರ ಪ್ರಕ್ರಿಯೆಯ ನಂತರದ ಪ್ರಗತಿ ಪರಿಶೀಲಿಸಿದರು. ‘ಯಾವುದೇ ಅರ್ಜಿಯನ್ನು ತಿರಸ್ಕಾರ ಮಾಡುವಂತಿಲ್ಲ. ದಾಖಲೆಯ ಕೊರತೆ ಇದ್ದರೆ ಅರ್ಜಿದಾರನಿಗೆ ತಿಳಿಸಿ ಪಡೆದುಕೊಳ್ಳಬೇಕು. ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಿ. ದಾಂಡೇಲಿ ಭಾಗದಲ್ಲಿ ಕುಂಬ್ರಿ ಜಾಗಗಳು ಇದ್ದು, ಇವನ್ನು ಸಹ ಇದೇ ಕಾಯ್ದೆ ಅಡಿಯಲ್ಲಿ ಪರಿಗಣಿಸಿ ಹಕ್ಕುಪತ್ರ ನೀಡಲು ಕ್ರಮ ವಹಿಸಬೇಕು’ ಎಂದರು.‘ಜಿಲ್ಲೆಯಲ್ಲಿ 208 ಗ್ರಾಮ ಪಂಚಾಯ್ತಿಗಳಿಂದ ಒಟ್ಟು 72 ಸಾವಿರ ಹಾಗೂ ನಗರ ಪ್ರದೇಶಗಳಿಂದ 20,560, ಸರ್ಕಾರಿ ಆಸ್ತಿಗಳಿಗೆ ಸಂಬಂಧಿಸಿ 300 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸ್ವೀಕಾರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮುಂದಿನ ಹಂತದಲ್ಲಿ ಈಗಾಗಲೇ ರಚನೆಯಾಗಿರುವ ಗ್ರಾಮ ಅರಣ್ಯ ಹಕ್ಕು ಸಮಿತಿ ಹಾಗೂ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ’ ಎಂದರು.‘ಜಿಲ್ಲೆಯಲ್ಲಿ ಕೇವಲ 33 ಸರ್ವೇಯರ್‌ಗಳಿದ್ದು, ಹೆಚ್ಚುವರಿ ಸರ್ವೆಯರ್ ಅಗತ್ಯವಿದ್ದಲ್ಲಿ ಹೊರ ಜಿಲ್ಲೆಗಳಿಂದ ಕರೆತಂದು ಸರ್ವೆ ಕಾರ್ಯ ನಡೆಸಲಾಗುವುದು. ಸರ್ವೆ ನಡೆಸಲು 50 ಹೆಚ್ಚುವರಿ ಜಿಪಿಎಸ್‌ ಖರೀದಿಸಲಾಗುವುದು. ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಉಪವಿಭಾಗದ ಕಚೇರಿ ಇರುವಲ್ಲಿ ಉಪವಿಭಾಗಾಧಿಕಾರಿ, ಉಳಿದ ತಾಲ್ಲೂಕುಗಳಲ್ಲಿ ಎಸಿಎಫ್‌ಗಳಿಗೆ ಉಸ್ತುವಾರಿ ವಹಿಸಲಾಗಿದೆ. ಪ್ರತಿ ಸೋಮವಾರ ನೋಡಲ್‌ ಅಧಿಕಾರಿಗಳು ಕಡ್ಡಾಯವಾಗಿ ಪ್ರಗತಿ ಪರಿಶೀಲನೆ ಮಾಡಬೇಕು. ಅರಣ್ಯ ಹಕ್ಕು ಸಮಿತಿಗಳು ವಾರಕ್ಕೆ ಮೂರು ಬಾರಿ ಸೇರಿ ಚರ್ಚಿಸಬೇಕು’ ಎಂದು ದೇಶಪಾಂಡೆ ಆದೇಶಿಸಿದರು.‘ಸಂಬಂಧಿತ ಅಧಿಕಾರಿಗಳು ವಾರದಲ್ಲಿ ಮೂರು ದಿನವನ್ನು ಈ ಕೆಲಸಕ್ಕಾಗಿ ಮೀಸಲಿಡಬೇಕು. ಸ್ಪಷ್ಟ ಮಾರ್ಗಸೂಚಿ ರೂಪಿಸಿ ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಂದಾಯ ಸೇರಿದಂತೆ ಎಲ್ಲ ಸಂಬಂಧಿಸಿದ ಇಲಾಖೆಗಳಿಗೆ ತಲುಪಿಸಬೇಕು’ ಎಂದರು. ಜಿಲ್ಲಾಧಿಕಾರಿ ಇಮ್‌ಕೋಂಗ್ಲಾ ಜಮೀರ್‌ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿಸಿ ವ್ಯವಸ್ಥಿತ ಮಾದರಿ ರೂಪಿಸಲಾಗಿದೆ ಎಂದರು.‘ಯಲ್ಲಾಪುರ, ಮುಂಡಗೋಡ ತಾಲ್ಲೂಕುಗಳಲ್ಲಿ ಅನೇಕ ಅತಿಕ್ರಮಣದಾರರು ಕೇವಲ ಒಂದು ಬಿಳಿಹಾಳೆಯಲ್ಲಿ ಅರ್ಜಿ ನೀಡಿದ್ದು ಯಾವುದೇ ದಾಖಲೆ ನೀಡಿಲ್ಲ’ ಎಂದು ಉಪವಿಭಾಗಾಧಿಕಾರಿ ರಾಜು ಮೊಗವೀರ ಹೇಳಿದರು. ವಿಧಾನ ಪರಿಷತ್‌ ಸದಸ್ಯ ಶ್ರೀಕಾಂತ ಘೋಟ್ನೇಕರ, ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಶಾಂತಕುಮಾರ್ ಉಪಸ್ಥಿತರಿದ್ದರು.

‘ಡಂಗುರ ಹೊಡೆಸಿ ದಾಖಲೆ ನೀಡಲು ತಿಳಿಸಿ’

‘ಅರಣ್ಯವಾಸಿಗಳ ಹಕ್ಕು ಮಾನತ್ಯಾ ಕಾಯ್ದೆ ಅಡಿಯಲ್ಲಿ ಅರಣ್ಯ ಹಕ್ಕು ಪಡೆಯಲು ಅರ್ಜಿ ಸಲ್ಲಿಸಿರುವ ಅತಿಕ್ರಮಣದಾರರು ಅರ್ಜಿಯ ಜೊತೆಗೆ ದಾಖಲೆ ನೀಡದಿದ್ದಲ್ಲಿ ತಕ್ಷಣ ಎರಡು ದಾಖಲೆಗಳನ್ನು ಒದಗಿಸಬೇಕು. 13 ದಾಖಲೆಗಳಲ್ಲಿ ಕನಿಷ್ಠ ಎರಡು ದಾಖಲೆಯನ್ನಾದರೂ ಅತಿಕ್ರಮಣದಾರರು ನೀಡಬೇಕು. ಅರ್ಜಿಯನ್ನು ಮಾತ್ರ ಕೊಟ್ಟವರು ತುರ್ತಾಗಿ ದಾಖಲೆ ಪೂರೈಸಬೇಕು’ ಎಂದು ದೇಶಪಾಂಡೆ ವಿನಂತಿಸಿದರು. ‘ಹಳ್ಳಿಗಳಲ್ಲಿ ಡಂಗುರ ಹೊಡೆಸಿ ದಾಖಲೆ ನೀಡುವ ಕುರಿತಂತೆ ಜನರಲ್ಲಿ ಅರಿವು ಮೂಡಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry