ಜಿಲ್ಲಾ ಆರೋಗ್ಯಾಧಿಕಾರಿ ಕೆಂಡಾಮಂಡಲ

7
ಜಿ.ಪಂ. ಸಭೆಯಲ್ಲಿ ಪ್ರತಿಧ್ವನಿಸಿದ ಅಂಗವಿಕಲ ಪ್ರಮಾಣಪತ್ರ ವಿಷಯ

ಜಿಲ್ಲಾ ಆರೋಗ್ಯಾಧಿಕಾರಿ ಕೆಂಡಾಮಂಡಲ

Published:
Updated:
ಜಿಲ್ಲಾ ಆರೋಗ್ಯಾಧಿಕಾರಿ ಕೆಂಡಾಮಂಡಲ

ಕಾರವಾರ: ಕಳೆದ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿದ ತಾಲ್ಲೂಕಿನ ಬಳಕೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಣ್ಣಿಗೆ ಗ್ರಾಮದ, ಅಂಗವಿಕಲ ಮಂಜುನಾಥ ನಾಯ್ಕ ಅವರಿಗೆ ಅಂಗವಿಕಲ ಪ್ರಮಾಣಪತ್ರ ನೀಡುವ ವಿಷಯ ಬುಧವಾರ ನಡೆದ ಸಭೆಯಲ್ಲೂ ಪ್ರತಿಧ್ವನಿಸಿ ಕೋಲಾಹಲಕ್ಕೆ ಕಾರಣವಾಯಿತು.ಜಿ.ಪಂ.ಸಭಾಂಗಣದಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಜಾಲಿ ಜಿ.ಪಂ. ಕ್ಷೇತ್ರದ ಸದಸ್ಯ ಮಂಕಾಳು ವೈದ್ಯ ಮಾತನಾಡಿ, `ಕಳೆದ ಸಭೆಗೆ ಆಗಮಿಸಿದ್ದ ಅಂಗವಿಕಲ ಮಂಜುನಾಥ ನಾಯ್ಕ ಅವರಿಗೆ ಶೇ 75 ರಷ್ಟು ಅಂಗವೈಕಲ್ಯತೆ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳೇ ಹೇಳಿದ್ದರು.

ಮಾನವೀಯತೆ ಆಧಾರದ ಮೇಲೆ ಅವರಿಗೆ ಪ್ರಮಾಣಪತ್ರ ನೀಡಬೇಕು ಎಂದು ಜಿ.ಪಂ. ಕಾಯನಿರ್ವಹಣಾಧೀಕಾರಿಗಳು ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇಷ್ಟಿದ್ದರೂ ಅವರಿಗೆ ಶೇ 75 ರಷ್ಟು ಅಂಗವೈಕಲತೆ ಇದೆ ಎಂದು ಪ್ರಮಾಣಪತ್ರ ನೀಡಿಲ್ಲ. ಹಾಗಾದರೆ ಅಧಿಕಾರಿಗಳ ಆದೇಶಕ್ಕೆ ಬೆಲೆ ಇಲ್ಲವೇ' ಎಂದು ಪ್ರಶ್ನಿಸಿದರು.'ಜಿ.ಪಂ. ಸದಸ್ಯರು ಅಧಿಕಾರಿಗಳಿಗೆ ಕಿರಿಕಿರಿ ಕೊಡುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ನೌಕರರು ಸಂಘದವರು ಪತ್ರಿಕಾ ಹೇಳಿಕೆ ನೀಡಿ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಕ್ಷಮೆ ಕೇಳಲು ಮಾಡಿರುವ ತಪ್ಪಾದರೂ ಏನು, ಅದನ್ನು ಹೇಳಬೇಕು. ಹೇಳದಿದ್ದಲ್ಲಿ ನಾವು ಸಭೆಯಿಂದ ಹೊರಹೋಗುತ್ತೇವೆ. ಇಲ್ಲದಿದ್ದಲ್ಲಿ ಆರೋಗ್ಯಾಧಿಕಾರಿಗಳನ್ನು ಹೊರಗೆ ಕಳುಹಿಸಿ ಸಭೆ ನಡೆಸಬೇಕು' ಎಂದರು.ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ ಮಾತನಾಡಿ, `ಹೊನ್ನಾವರ ಆಸ್ಪತ್ರೆಯ ಡಾ.ದೀಪಕ ನಾಯ್ಕ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳು ಪ್ರಮಾಣಪತ್ರವನ್ನು ಪುನರ್ ಪರಿಶೀಲನೆ ಮಾಡಿ ಮೊದಲಿದ್ದ ಪ್ರಮಾಣ (ಶೇ 50ರಿಂದ 60)ವನ್ನೇ ದೃಢೀಕರಿಸಿ ಪ್ರಮಾಣಪತ್ರ ನೀಡಿದ್ದಾರೆ' ಎಂದರು.'ಅಂಗವಿಕಲತೆಯ ಪ್ರಮಾಣವನ್ನು ತಜ್ಞ ವೈದ್ಯರೇ ನಿರ್ಧರಿಸಬೇಕಾಗುತ್ತದೆ. ಮಾನವೀಯತೆಯ ಆಧಾರದ ಮೇಲೆ ಅವರಿಗೆ ಶೇ 75 ರಷ್ಟು ಅಂಗವಿಕಲತೆ ಇದೆ ಎಂದು ಪ್ರಮಾಣಪತ್ರ ಕೊಡಬಹುದು ಎಂದು ಹಿಂದಿನ ಸಭೆಯಲ್ಲಿ ಹೇಳಿದ್ದೇನೆ ಹೊರತು ನಿಖರವಾದ ಪ್ರಮಾಣವನ್ನು ಹೇಳಿರಲಿಲ್ಲ' ಎಂದು ಸಭೆಗೆ ಸ್ಪಷ್ಟಪಡಿಸಿದರು.ಸಭೆಗೆ ಆಗಮಿಸಿದ ಎಲುಬು ಮತ್ತು ಕೀಳು ತಜ್ಞ ಡಾ. ಸಂತೋಷ ಕುಮಾರ ಹಾಗೂ ಡಾ. ಸತೀಶ ಮಾತನಾಡಿ, ಅಂಗವಿಕಲತೆ ಪ್ರಮಾಣ ನಿರ್ಧರಿಸುವ ಕುರಿತು ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಹಾಗೂ ಕಾನೂನುಗಳನ್ನು ಸಭೆಯ ಗಮನಕ್ಕೆ ತಂದರು.ಇದರಿಂದ ತೃಪ್ತರಾಗದ ಸದಸ್ಯ ವೈದ್ಯ ಅವರು, `ಅಂಗವಿಕಲ ನಾಯ್ಕ ಅವರು ಮೊದಲು ಮಾಡಿದ ಪ್ರಮಾಣಪತ್ರದಲ್ಲಿ ಶೇ 50ರಷ್ಟು ಅಂಗವಿಕಲತೆ ಇದೆ. ಎರಡನೇ ಬಾರಿ ಮಾಡಿದ ಪ್ರಮಾಣಪತ್ರದಲ್ಲಿ ಶೇ 75ರಷ್ಟು ಅಂಗವಿಕಲತೆ ಇದೆ ಎಂದು ಪ್ರಮಾಣಪತ್ರ ನೀಡಿದ್ದಾರೆ ಎಂದು ದಾಖಲೆಗಳನ್ನು ಅಧ್ಯಕ್ಷರಿಗೆ ನೀಡಿ, ಇದು ಯಾರ ತಪ್ಪು, ಹೀಗೆ ಏಕೆ ಮಾಡಿದ್ದಾರೆ.

ಈದು ಕೇಳಿರುವುದು ಅಧಿಕಾರಿಗಳಿಗೆ ಕಿರಿಕಿರಿಯಾಗುವುದಾದರೆ ಸದಸ್ಯರು ಬಾಯಿಮುಚ್ಚಿಕೊಂಡಿರಬೇಕೇ' ಎಂದು ಪುನಃ ಪ್ರಶ್ನಿಸಿದರು.ಡಾ. ಅಶೋಕ ಮಾತನಾಡಿ, `ಪ್ರಮಾಣಪತ್ರ ನೀಡಿರುವುದಲ್ಲಿ ತಪ್ಪಿದ್ದರೆ ಅದನ್ನು ತಜ್ಞ ವೈದ್ಯರ ಮಂಡಳಿಯ ಸಭೆಯಲ್ಲಿಟ್ಟು ಪುನರ್‌ಪರಿಶೀಲನೆ ಮಾಡಲಾಗುವುದು. ನಾನು ಆಡಿರುವ ಮಾತು ಸದಸ್ಯರಿಗೆ ಕಿರಿಕಿರಿ ಎನಿಸಿದರೆ ಅದಕ್ಕೆ ಕ್ಷಮೆ ಕೇಳುತ್ತೇನೆ' ಎಂದರು.ಇದಕ್ಕೆ ಸದಸ್ಯರು ಒಪ್ಪದೇ ಇದ್ದಾಗ ಅರೋಗ್ಯಾಧಿಕಾರಿಗಳು ಕೆಂಡಾಮಂಡಲರಾದರು. ತೀವ್ರ ಆಕ್ರೋಶಗೊಂಡ ಅವರು, `ಪ್ರಮಾಣಪತ್ರವನ್ನು ಪುನರ್ ಪರಿಶೀಲಿಸಿ ಮಾನವೀಯತೆ ಆಧಾರದ ಮೇಲೆ ಅವರಿಗೆ ಪ್ರಮಾಣಪತ್ರ ಒದಗಿಸಲಾಗುವುದು ಎಂದು ಹೇಳುತ್ತಿದ್ದರೂ ಸದಸ್ಯರು ಕೇಳುತ್ತಿಲ್ಲ. ನನ್ನನ್ನು ಹೊರಗೆ ಕಳುಹಿಸಲೇಬೇಕು ಎಂದಿದ್ದರೆ ನೀವು ಹೇಳುವುದು ಬೇಡ ನಾನೇ ಹೋಗುತ್ತೇನೆ' ಎಂದು ಹೊರ ನಡೆಯಲು ಮುಂದಾದರು.ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಇತರೆ ಇಲಾಖೆಯ ಹಿರಿಯ ಅಧಿಕಾರಿಗಳು ಡಾ. ಅಶೋಕ ಕುಮಾರ ಅವರನ್ನು ಸಮಾಧಾನ ಮಾಡಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ನದಾನಯ್ಯ ಅವರೂ ಡಾ. ಕುಮಾರ ಅವರನ್ನು ಸಮಾಧಾನ ಪಡಿಸಿ ಸ್ವಸ್ಥಾನದಲ್ಲಿ ಆಸೀನರಾಗುವಂತೆ ಸೂಚನೆ ನೀಡಿದರು.ಬಳಿಕ ಡಾ. ಅನ್ನದಾನಯ್ಯ ಮಾತನಾಡಿ, ಮಂಜುನಾಥ ನಾಯ್ಕ ಅವರ ಅಂಗವಿಕಲ ಪ್ರಮಾಣಪತ್ರವನ್ನು ಪುನರ್‌ಪರಿಶೀಲನೆ ಮಾಡಬೇಕು. ಸರಿಯಾದ ಮಾನದಂಡಗಳನ್ನು ಬಳಸದೇ ಪ್ರಮಾಣಪತ್ರ ನೀಡಿದ ವೈದ್ಯರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳುಹಿಸಬಾರದು ಎಂದರು.ಜಿ.ಪಂ. ಅಧ್ಯಕ್ಷ ಕೃಷ್ಣ ಗೌಡಾ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಲಲಿತಾ ಪಟಗಾರ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸರಸ್ವತಿ ಶಂಕರ ಗೌಡ, ಅಲ್ಬರ್ಟ್ ಡಿಕೋಸ್ತಾ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry