ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ: ಸಚಿವರ ವಿಷಾದ

7

ಜಿಲ್ಲಾ ಆಸ್ಪತ್ರೆ ಅವ್ಯವಸ್ಥೆ: ಸಚಿವರ ವಿಷಾದ

Published:
Updated:

 


ಕಾರವಾರ: `ನೀವು ಮಾಡುವುದಕ್ಕೂಸಾರ್ವಜನಿಕರು ದೂರುವುದಕ್ಕೂ ಸರಿಯಾಗಿದೆ...' ಇದು ಆರೋಗ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರು ಇಲ್ಲಿಯ ಜಿಲ್ಲಾ ಆಸ್ಪತ್ರೆಯ ಅವ್ಯವಸ್ಥೆ ಕಂಡು ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ವೈದ್ಯರನ್ನು ಉದ್ದೇಶಿಸಿ ಹೇಳಿದ ಮಾತು.


 


ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಿರ್ಮಿಸಿರುವ ಕನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯ ಕಟ್ಟಡವನ್ನು ಗುರುವಾರ ಉದ್ಘಾಟಿಸಿದ ನಂತರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಸಾಮಾನ್ಯ ವಾರ್ಡ್, ತೀವ್ರ ನಿಗಾ ಘಟಕ, ರಕ್ತನಿಧಿ ಕೇಂದ್ರದ ಪರಿಶೀಲನೆ ನಡೆಸಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

 


ರಕ್ತನಿಧಿ ಕೇಂದ್ರಕ್ಕೆ ತೆರಳಿದ ಸಚಿವ ಲಿಂಬಾವಳಿ ಅವರು, ಕೇಂದ್ರದ ಮಾಹಿತಿ ಪಡೆದುಕೊಂಡರು. ರಕ್ತಸಂಗ್ರಹದ ಕುರಿತ ದಿನನಿತ್ಯದ ವಿವರಗಳನ್ನು ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡುತ್ತಿದ್ದೀರಾ ಎಂದು ಸಚಿವರು ಕೇಳಿದಾಗ ವೈದ್ಯರು ಗಲಿಬಿಲಿಗೊಂಡರು. ಕೇಂದ್ರದಲ್ಲಿ ಅಂತರ್ಜಾಲದ ಸಂಪರ್ಕವಿಲ್ಲದೇ ಇರುವ ವಿಷಯ ತಿಳಿದು ಆಶ್ಚರ್ಯ ವ್ಯಕ್ತಪಡಿಸಿದರು.

 


ತೀವ್ರ ನಿಗಾ ಘಟಕದ ಬಳಿ ಹೋದಾಗ ಸಚಿವರಿಗೆ ಆಶ್ಚರ್ಯ ಕಾದಿತ್ತು. ಐಸಿಯು ಕೋಣೆ ಬೀಗ ಹಾಕಿದ ಸ್ಥಿತಿಯಲ್ಲಿತ್ತು. ಈ ಬಗ್ಗೆ ಸಚಿವರು ಪ್ರಭಾರ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಲೀಂ ಅವರನ್ನು ಪ್ರಶ್ನಿಸಿದರು. ಉತ್ತರ ನೀಡಲು ಡಾ. ಸಲೀಂ ತಡಬಡಾಯಿಸಿದರು. ಇದರಿಂದ ಸಿಟ್ಟಿಗೆದ್ದ ಸಚಿವರು `ನಿಮಗೆ ಆಸಕ್ತಿ ಇಲ್ಲವೇ. ಐಸಿಯು ಘಟಕವೇ ಇಲ್ಲ ಎಂದಾದರೆ ರೋಗಿಗಳ ಸ್ಥಿತಿ ಏನಾಗಬೇಕು' ಎಂದು ಅಸಮಾಧಾನ ವ್ಯಕ್ತಪಡಿಸಿದರು.

 


ಸಾಮಾನ್ಯ ವಾರ್ಡ್‌ನಲ್ಲಿ ಶೌಚಾಲಯಕ್ಕೆ ಬೀಗ ಹಾಕಿರುವುದನ್ನು ಗಮನಿಸಿದ ಸಚಿವ ಲಿಂಬಾವಳಿ ಅವರು ಬೇಸರ ವ್ಯಕ್ತಪಡಿಸಿದರು. `ರೋಗಿಗಳು ಶೌಚಾಲಯಕ್ಕೆ ಹೋಗುವುದಾದರೆ ನಡೆದುಕೊಂಡು ಹೊರಗೆ ಹೋಗಬೇಕೆ. ಸ್ವಚ್ಛತೆ ನಿರ್ವಹಣೆ ಗುತ್ತಿಗೆ ಪಡೆದವರನ್ನು ಕರೆಯಿರಿ' ಎಂದು ಜೋರು ಧ್ವನಿಯಲ್ಲೇ ಹೇಳಿದರು.

 


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಜಿಲ್ಲಾ ಆಸ್ಪತ್ರೆಯ ಸ್ಥಿತಿ ಚಿಂತಾಜನಕವಾಗಿದೆ. ವೈದ್ಯರ ಮತ್ತು ಮೂಲಸೌಕರ್ಯಗಳ ಕೊರತೆ ಇದೆ. ಆಸ್ಪತ್ರೆಯ ಪರಿಸರ ತುಂಬಾ ಹೊಲಸಾಗಿದೆ. ಸ್ವಚ್ಛತೆ ವಿಷಯದಲ್ಲಿ ಯಾವ ಮಟ್ಟವನ್ನು ಕಾಪಾಡಿಕೊಳ್ಳಬೇಕಿತ್ತೋ ಅದು ಇಲ್ಲಿ ಕಂಡುಬರಲಿಲ್ಲ' ಎಂದರು.

 


ಸಣ್ಣಸಣ್ಣ ಆಸ್ಪತ್ರೆಯಲ್ಲಿ ಅಂತರ್ಜಾಲದ ಸಂಪರ್ಕವಲ್ಲದೆ ವೈಪೈ ಸೌಲಭ್ಯಗಳಿವೆ. ಇಂತಹ ಬೆಳವಣಿಗೆಗಳು ಆಗಿರುವಾಗ ಜಿಲ್ಲಾ ಆಸ್ಪತ್ರೆಯಲ್ಲಿ ಅಂತರ್ಜಾಲದ ಸೌಲಭ್ಯ ಇಲ್ಲದೇ ಇರುವುದಕ್ಕೆ ಲಿಂಬಾವಳಿ ವಿಷಾದ ವ್ಯಕ್ತಪಡಿಸಿದರು.

 


`ಆಸ್ಪತ್ರೆಯ ವಿಷಯದಲ್ಲಿ ನಿರ್ಲಕ್ಷ್ಯವಹಿಸಿರುವ ಬಗ್ಗೆ ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಕಾರಣಕೇಳಿ ನೋಟಿಸ್ ಜಾರಿ ಮಾಡುತ್ತೇನೆ. ಆಸ್ಪತ್ರೆ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಲು ಇದೇ 27ರಂದು ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು' ಎಂದರು.

 


`ಅಂಕೋಲಾ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದನ್ನು ಸ್ಥಳೀಯರು ಗಮನಕ್ಕೆ ತಂದಿದ್ದರು. ತಕ್ಷಣವೇ ಅಲ್ಲಿ ವೈದ್ಯರನ್ನು ನೇಮಿಸಲಾಗಿದೆ. ಆಸ್ಪತ್ರೆಯನ್ನು 100 ಬೆಡ್ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. ಇದಕ್ಕಾಗಿ ನಾಲ್ಕು ಕೋಟಿ ರೂಪಾಯಿ ಅನುದಾನ ಒದಗಿಸಲಾಗುವುದು' ಎಂದು ಸಚಿವರು ನುಡಿದರು.

 


ಮೀನುಗಾರಿಕೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್, ಜಿಲ್ಲಾಧಿಕಾರಿ ಇಮ್‌ಕೊಂಗ್ಲಾ ಜಮೀರ್, ನಗರಸಭೆ ಆಯುಕ್ತ ಡಾ. ಉದಯಕುಮಾರ ಶೆಟ್ಟಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ, ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಸಾದ ಕಾರವಾರಕ್, ನಗರ ಘಟಕದ ಅಧ್ಯಕ್ಷ ರಾಜೇಶ ನಾಯ್ಕ ಮತ್ತಿತರರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry