ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೆ ರೂ. 50 ಕೋಟಿ

7
ಹೆರಿಗೆ ವಿಭಾಗ; 100 ಹಾಸಿಗೆಗಳ ವಿಸ್ತರಣೆಗೆ ಕಟ್ಟಡ- ಸಚಿವ ಲಿಂಬಾವಳಿ ಭರವಸೆ

ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೆ ರೂ. 50 ಕೋಟಿ

Published:
Updated:
ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೆ ರೂ. 50 ಕೋಟಿ

ದಾವಣಗೆರೆ: ನಗರದಲ್ಲಿರುವ ಚಿಗಟೇರಿ ಜಿಲ್ಲಾ ಆಸ್ಪತ್ರೆಯನ್ನು ರೂ. 50 ಕೋಟಿ ವೆಚ್ಚದಲ್ಲಿ `ರೆಫರಲ್ ಆಸ್ಪತ್ರೆ' (ಅತ್ಯುತ್ತಮ ಸೌಲಭ್ಯಗಳುಳ್ಳ ಆಸ್ಪತ್ರೆ) ಮಾದರಿಯಲ್ಲಿ ಮೇಲ್ದರ್ಜೆಗೇರಿಸಲಾಗುವುದು ಎಂದು ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಪರಿಶೀಲಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿದ್ದ ಈ ಆಸ್ಪತ್ರೆಯನ್ನು 3 ತಿಂಗಳ ಹಿಂದೆ ಆರೋಗ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಇಲ್ಲಿ ಬಹಳಷ್ಟು ಸುಧಾರಣೆ ಆಗಬೇಕಿದೆ. 930 ಹಾಸಿಗೆಗಳ ಆಸ್ಪತ್ರೆ ಇದಾಗಿದ್ದು, ಕಟ್ಟಡ ಹಳೆಯದಾಗಿದೆ. ಹೀಗಾಗಿ, ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆ ಬಳಕೆದಾರರ ನಿಧಿಯಲ್ಲಿ ್ಙ 5 ಕೋಟಿ ಠೇವಣಿ ಇದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.ಹಣಕಾಸಿನ ಕೊರತೆ ಇಲ್ಲ

ಆರೋಗ್ಯ ಸುಧಾರಣಾ ಆಯೋಗದ ವತಿಯಿಂದ ಅಂದಾಜುಪಟ್ಟಿ ಸಿದ್ಧಪಡಿಸಿ, ಕಟ್ಟಡ ಅಭಿವೃದ್ಧಿಪಡಿಸಲಾಗುವುದು. ಹೃದಯ ರೋಗಿಗಳಿಗೆ ಹೆಚ್ಚಿನ ಚಿಕಿತ್ಸಾ ಸೌಲಭ್ಯದ ಅವಶ್ಯಕತೆ ಇದೆ. ಮಧ್ಯಕರ್ನಾಟಕದ ಮಹತ್ವದ ಆಸ್ಪತ್ರೆ ಇದಾಗಿರುವುದರಿಂದ, ಮಾದರಿ ಆಸ್ಪತ್ರೆಯಾಗಿ ರೂಪಗೊಳಿಸಲು ಕ್ರಮ ಕೈಗೊಳ್ಳಲಾಗುವುದು.ಉನ್ನತದರ್ಜೆಯ ಉಪಕರಣ ಹಾಗೂ ಸೌಲಭ್ಯ ಕಲ್ಪಿಸಲಾಗುವುದು. ಇಲಾಖೆಯಲ್ಲಿ ಹಣಕಾಸಿನ ಕೊರತೆ ಇಲ್ಲ. ಕೇಂದ್ರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಂ) ಹಾಗೂ ರಾಜ್ಯಸರ್ಕಾರದಲ್ಲಿ ಹಣ ಇದೆ. ಇದನ್ನು ಬಳಸಿ, ದಾವಣಗೆರೆಯನ್ನು ಪ್ರಮುಖ `ಆರೋಗ್ಯ ತಾಣ'ವನ್ನಾಗಿ ರೂಪಿಸಲಾಗುವುದು ಎಂದು ಮಾಹಿತಿ ನೀಡಿದರು.`108' ಸೇವೆ ಹಾಗೂ 24/7 ಆಸ್ಪತ್ರೆಗಳ ನಿರ್ಮಾಣದಿಂದಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಪ್ರಮಾಣ ಜಾಸ್ತಿಯಾಗಿದೆ. ಹೀಗಾಗಿ, ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆಗಳ ಹೆಚ್ಚುವರಿ ಕಟ್ಟಡದೊಂದಿಗೆ ಹೆರಿಗೆ ವಿಭಾಗ ವಿಸ್ತರಸಲಾಗುವುದು. ಪ್ರತ್ಯೇಕ ಕಟ್ಟಡ, ಸಿಬ್ಬಂದಿ ಹಾಗೂ ಉಪಕರಣ ಕಲ್ಪಿಸಲಾಗುವುದು. ಯಾವ್ಯಾವ ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಪ್ರಮಾಣ ಜಾಸ್ತಿ ಇದೆಯೋ ಅಲ್ಲೆಲ್ಲಾ ಹಾಸಿಗೆಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.ವಿವಿಧ ವಿಭಾಗಗಳ ಪರಿಶೀಲನೆ

ಆಸ್ಪತ್ರೆಯನ್ನು, `ವಾಜಪೇಯಿ ಆರೋಗ್ಯ ಶ್ರೀ' ಯೋಜನೆಗೆ ಜೋಡಿಸದೇ ಇರುವುದಕ್ಕೆ ಸಚಿವರು ಅಚ್ಚರಿ ವ್ಯಕ್ತಪಡಿಸಿದರು. ಪ್ರಸ್ತಾವ ಸಲ್ಲಿಸಿಯೇ ಇಲ್ಲ ಎಂಬ ಸಂಗತಿ ತಿಳಿದು ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗೆ ಸೂಚಿಸಿದರು.ಹೊರ ರೋಗಿಗಳ ವಿಭಾಗ, ತುರ್ತುಸೇವೆಗಳ ಘಟಕ, ಹೃದ್ರೋಗ ವಿಭಾಗ, ರಕ್ತನಿಧಿ ಸೇರಿದಂತೆ ವಿವಿಧ ಘಟಕಗಳಲ್ಲಿನ ವ್ಯವಸ್ಥೆಯನ್ನು ಸಚಿವರು ಪರಿಶೀಲಿಸಿದರು. ವಿಧಾನ ಪರಿಷತ್ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಆಸ್ಪತ್ರೆಯಲ್ಲಿನ ಬೇಡಿಕೆ ಗಮನಕ್ಕೆ ತಂದರು.ವೈದ್ಯಕೀಯ ಅಧೀಕ್ಷಕ ಡಾ.ಪರಶುರಾಮಪ್ಪ, ನಿವಾಸಿ ವೈದ್ಯ ಡಾ.ಜಿ. ಶರಣಪ್ಪ, ಡಿಎಚ್‌ಒ ಡಾ.ಸುಮಿತ್ರಾದೇವಿ ಹಾಗೂ ಅಧಿಕಾರಿಗಳು ಮಾಹಿತಿ ಒದಗಿಸಿದರು. ನಂತರ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವಹಾಗೂ ಸಕ್ಕರೆ ಖಾತೆ ಸಚಿವ ಎಸ್.ಎ. ರವೀಂದ್ರನಾಥ್, ಆಸ್ಪತ್ರೆ ಅಭಿವೃದ್ಧಿಪಡಿಸುವಂತೆ ಕೋರಿದರು.ಸಚಿವರ ಭೇಟಿ ಹಿನ್ನೆಲೆಯಲ್ಲಿ, ಆಸ್ಪತ್ರೆ ಪ್ರವೇಶದ್ವಾರದಲ್ಲಿನ ಪ್ರದೇಶ ಸೇರಿದಂತೆ ವಿವಿಧೆಡೆ ಕಸ ತೆಗೆಯಲಾಗಿತ್ತು;  ಡಿಡಿಟಿ ಪೌಡರ್ ಹಾಕಲಾಗಿತ್ತು!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry