ಜಿಲ್ಲಾ ಉತ್ಸವಕ್ಕೆ ಭರದ ಸಿದ್ಧತೆ

7

ಜಿಲ್ಲಾ ಉತ್ಸವಕ್ಕೆ ಭರದ ಸಿದ್ಧತೆ

Published:
Updated:

ಹಾವೇರಿ: ರಾಜ್ಯದ 91 ತಾಲ್ಲೂಕುಗಳಲ್ಲಿ ಬರಗಾಲ ಆವರಿಸಿರುವುದರಿಂದ ರಾಜ್ಯದಲ್ಲಿ ಜಿಲ್ಲಾ ಉತ್ಸವ ಸೇರಿದಂತೆ ಎಲ್ಲ ಪ್ರಮುಖ ಉತ್ಸವಗಳನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರಾಜ್ಯದ ಪ್ರಮುಖ ಉತ್ಸವಗಳಾದ ಹಂಪಿ ಉತ್ಸವ, ಬಾಗಲಕೋಟೆ ಜಿಲ್ಲೆಯ ಚಾಲುಕ್ಯ ಉತ್ಸವ, ವಿಜಾಪುರದ ನವರಸಪುರ ಉತ್ಸವ, ಗದುಗಿನ ಲಕ್ಕುಂಡಿ ಉತ್ಸವ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲಾ ಉತ್ಸವಗಳು ರದ್ದಾಗಿವೆ.ಆದರೆ, ಸರ್ಕಾರದ ಈ ಆದೇಶವನ್ನು ಧಿಕ್ಕರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಜಿಲ್ಲೆಗೆ 20 ಲಕ್ಷ ರೂಪಾಯಿ ಹಾಗೂ ದಾವಣಗೆರೆ ಜಿಲ್ಲಾ ಉತ್ಸವಕ್ಕೆ 30 ಲಕ್ಷ ರೂಪಾಯಿ ಅನುದಾನ ನೀಡುವ ಮೂಲಕ ಜಿಲ್ಲಾ ಉತ್ಸವಗಳಿಗೆ ಹಸಿರು ನಿಶಾನೆ ತೋರಿರುವುದು, ರಾಜ್ಯದ ಯಾವುದೇ ಜಿಲ್ಲೆಗಳಿಗೆ ಇಲ್ಲದ ವಿನಾಯಿತಿ ಈ ಎರಡು ಜಿಲ್ಲೆಗಳಿಗೇಕೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.ಬರದ ಬವಣೆ ಮಧ್ಯೆಯೂ ಹಾವೇರಿಯ 5ನೇ ಜಿಲ್ಲಾ ಉತ್ಸವ ಇದೇ 11 ರಿಂದ ಮೂರು ದಿನಗಳ ಕಾಲ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ನಡೆಯಲಿದೆ. ಕಳೆದ ವರ್ಷ ಕ್ಕಿಂತ ಈ ವರ್ಷ 10 ಲಕ್ಷ ರೂಪಾಯಿ ಹೆಚ್ಚು ಅನುದಾನ ಬಂದಿರುವುದರಿಂದ ಸಂಭ್ರಮದಿಂದ ಜಿಲ್ಲಾ ಉತ್ಸವ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ದಾವಣಗೆರೆ ಜಿಲ್ಲೆಯ ಯಾವುದೇ ತಾಲ್ಲೂಕು ಬರಪೀಡಿತ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಅದೇ ಕಾರಣಕ್ಕಾಗಿ ಆ ಜಿಲ್ಲೆಗೆ ಜಿಲ್ಲಾ ಉತ್ಸವ ನಡೆಸಲು ಅವಕಾಶ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತವೆ.ಆದರೆ, ಹಾವೇರಿ ಜಿಲ್ಲೆಯ ಎರಡು ತಾಲ್ಲೂಕುಗಳು ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿವೆ. ಬರದ ಛಾಯೆಯಿಂದ ಬಳಲಿರುವ ಪ್ರದೇಶಗಳಲ್ಲಿ ಸಮರ್ಪಕ ಬರ ನಿರ್ವಹಣೆ ಕಾಮಗಾರಿಗಳು ಆರಂಭವಾಗಿಲ್ಲ. ದನಗಳಿಗೆ ಮೇವಿನ ಕೊರತೆ ಹೆಚ್ಚಾಗಿದೆ. ಆದರೂ ಉತ್ಸವ ನಡೆಸಲು  ಅನುಮತಿ ನೀಡಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.ಸಿದ್ಧತೆ ಮಾಡಿದ್ದರಿಂದ ಅವಕಾಶ: ಜಿಲ್ಲಾ ಉತ್ಸವಕ್ಕೆ ಜಿಲ್ಲಾಡಳಿತವು ಆಮಂತ್ರಣ ಪತ್ರಿಕೆ ಮುದ್ರಣ ಮಾಡುವುದರಿಂದ ಹಿಡಿದು ಉತ್ಸವದ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರಿಂದ ಉತ್ಸವ ನಡೆಸಲು ಅವಕಾಶ ದೊರೆತಿದೆ ಎಂಬ ಉತ್ತರ ಜಿಲ್ಲಾಡಳಿತದಿಂದ ದೊರೆಯುತ್ತದೆ.ಉತ್ಸವಕ್ಕೆ ಕೇವಲ ಒಂಬತ್ತು ದಿನಗಳಿವೆ. ಗುರುವಾರ ತರಾತುರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ  ಉದಾಸಿ ಹಾಗೂ ಬ್ಯಾಡಗಿ ಶಾಸಕ ಸುರೇಶಗೌಡ್ರ ಪಾಟೀಲ ಅವರು, ಹಾನಗಲ್‌ನಲ್ಲಿ ಗುರುವಾರ ನಡೆದ   ಬೆಳಗಾವಿ ವಿಭಾಗ ಮಟ್ಟದ ಪ್ರಚಾರಾಂದೋಲನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಉತ್ಸವದ ಲಾಂಛನ ಬಿಡುಗಡೆ ಮಾಡಿದರು. ಆಗಲೂ ಸಹ ಉತ್ಸವದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ.ನಂತರ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, `ಆಮಂತ್ರಣ ಪತ್ರಿಕೆ, ಕಲಾವಿದರ ಆಯ್ಕೆ ಸೇರಿದಂತೆ ಉತ್ಸವದ ಪ್ರಚಾರಕ್ಕೆ ಬೇಕಾಗುವ ಎಲ್ಲ ಪರಿಕರಗಳ ಮುದ್ರಣವಾಗಿದ್ದರಿಂದಲೇ ಸರ್ಕಾರ ಜಿಲ್ಲಾ ಉತ್ಸವಕ್ಕೆ ಅನುಮತಿ ನೀಡಿದೆ~ ಎಂದು ಸ್ಪಷ್ಟಪಡಿಸಿದರು. `ಆದರೆ, ಗುರುವಾರ ಸಂಜೆವರೆಗೆ ಆಮಂತ್ರಣ ಪತ್ರಿಕೆ ಮುದ್ರಣ ವಾಗಿರಲಿಲ್ಲ.

 

ಯಾವುದೇ ಸಿದ್ಧತೆ ಆಗಿಲ್ಲದಿದ್ದರೂ ಎಲ್ಲ ಸಿದ್ಧತೆಗಳಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲಾ ಆಡಳಿತ ಅಧಿಕಾರಿಗಳು ಸುಳ್ಳು ಮಾಹಿತಿ ಕೊಟ್ಟಿರುವುದರ ಹಿಂದಿನ ರಹಸ್ಯ ಮಾತ್ರ ತಿಳಿಯುತ್ತಿಲ್ಲ~ ಎಂದು ಸಂಯುಕ್ತ ಜನತಾದಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಕೋರಿಶೆಟ್ಟರ ಆರೋಪಿಸಿದ್ದಾರೆ.

`ಒಂದಡೆ ಸಿಎಂ ಬರಪರಿಹಾರ ಕಾಮಗಾರಿ ಯನ್ನು ಸಮರೋಪಾದಿಯಲ್ಲಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರೆ,  ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾ ಉತ್ಸವ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

 

ಜಿಲ್ಲಾ ಮಟ್ಟದ ಒಬ್ಬೊಬ್ಬ ಅಧಿಕಾರಿಗೆ ಒಂದೊಂದು ಜವಾಬ್ದಾರಿ ನೀಡಿರುವು ದರಿಂದ ಬರ ಪರಿಹಾರ ಕಾಮಗಾರಿಗಳು ಕುಂಠಿತಗೊಳ್ಳುತ್ತವೆ ಎಂಬ ಆತಂಕವಿದೆ. ತಕ್ಷಣವೇ ಉತ್ಸವವನ್ನು ರದ್ದುಗೊಳಿಸಿ ಅದೇ ಹಣವನ್ನು ಬರ ಪರಿಹಾರ ಕಾಮಗಾರಿಗೆ ಬಳಕೆ ಮಾಡಿಕೊಳ್ಳಬೇಕು~ ಎಂದು ರೈತ ಮುಖಂಡ ಶಿವಾನಂದ ಗುರುಮಠ ಒತ್ತಾಯಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry