ಶುಕ್ರವಾರ, ಮೇ 20, 2022
19 °C

ಜಿಲ್ಲಾ ಉತ್ಸವಕ್ಕೆ ಸಂಭ್ರಮದ ತೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲೆಯ ಹಾನಗಲ್ಲ ಪಟ್ಟಣದಲ್ಲಿ ಕಳೆದ ಮೂರು ದಿನಗಳಿಂದ ನಡೆದ ನಾಲ್ಕನೇ ಜಿಲ್ಲಾ ಉತ್ಸವದ ಸಾಂಸ್ಕೃತಿಕ ಹಬ್ಬಕ್ಕೆ ಸೋಮವಾರ ಸಂಭ್ರಮದ ತೆರೆ ಬಿದ್ದಿತು.ನಾಲ್ಕು ಜಿಲ್ಲಾ ಉತ್ಸವಗಳಲ್ಲಿ ಎರಡನೇ ಬಾರಿ ಆತಿಥ್ಯವನ್ನು ಪಡೆದ ಹಾನಗಲ್ಲ ಉತ್ಸವದ ಯಶಸ್ವಿಗೆ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದರಿಂದ ಯಾವುದೇ ಗೊಂದಲ, ಗೊಜಲುಗಳಿಲ್ಲದೇ ವ್ಯವಸ್ಥಿತವಾಗಿ ನಡೆಯಿತು.ಉತ್ಸವದ ಕೊನೆಯ ದಿನ ವೇದಿಕೆ ಮುಂಭಾಗದಲ್ಲಿ ಬಣ್ಣ ಬಣ್ಣದ ಚಿತ್ತಾಕರ್ಷಗಳ ಪಟಾಕಿಗಳ ಸಿಡಿತ ಮೂರು ದಿನಗಳ ಉತ್ಸವಕ್ಕೆ ವಿಶೇಷ ಮೆರಗು ತಂದಿತು. ಆಕಾಶದತ್ತೆರಕೆ ಹಾರಿ ಸಿಡಿದು ವಿವಿಧ ಚಿತ್ತಾರಗಳನ್ನು ಮೂಡಿಸಿದ ಪಟಾಕಿಗಳು, ಹಾವೇರಿ ಜಿಲ್ಲಾ ಉತ್ಸವಕ್ಕೆ ಸಂಭ್ರಮದ ವಿದಾಯ ಎನ್ನುವ ಅಕ್ಷರ ರೂಪದ ಪಟಾಕಿ ವಿಶೇಷ ಗಮನ ಸೆಳೆದವು.

ಉತ್ಸವದಲ್ಲಿ ಹಾಕಲಾದ ಬೃಹತ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಜನಸಾಗರವೇ ಹರಿದು ಬಂದರೆ, ಗೋಷ್ಠಿಗಳು ಮಾತ್ರ ಜನರೇ ಇಲ್ಲದೇ ಬೀಕೋ ಎನ್ನುವ ವೇದಿಕೆಯಲ್ಲಿ ನಡೆದಿದ್ದು ಮಾತ್ರ ಜನರಲ್ಲಿ ಬೇಸರ ಮೂಡಿಸಿತು.ಮೂರು ದಿನಗಳ ಕಾಲ ರಾತ್ರಿ ಎರಡು ಗಂಟೆವರೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆದವು. ಖ್ಯಾತ ಕೊಳಲು ವಾದಕ ಪ್ರವೀಣ ಗೋಡ್ಖಿಂಡಿ, ಝೀ ಟಿ.ವಿ. ತಂಡದ ನೂರೊಂದು ನೆನಪು(ಹಳೆಯ ಚಲನಚಿತ್ರಗೀತೆಗಳ ಗಾಯನ), ಎಂ.ಡಿ.ಪಲ್ಲವಿ ಅವರ ಹಾಡುಗಾರಿಕೆ, ಓರಿಸ್ಸಾದ ಗೋಟಿಪುವ ನೃತ್ಯ, ಸಮೂಹ ಗೀತೆ, ಸಮೂಹ ನೃತ್ಯ ರೂಪಕಗಳು, ಸುಗಮ ಸಂಗೀತ, ಕೋಲಾಟಗಳು, ಶಹನಾಯಿ ವಾದನ, ಶಾಸ್ತ್ರೀಯ ನೃತ್ಯ, ವಾರ್ತಾ ಇಲಾಖೆ ಲೇಸರ್ ಶೋ, ನಾಟಕ ಪ್ರದರ್ಶನ, ಜಾನಪದ ಗೀತೆ, ನೃತ್ಯಗಳು ಜನಮನ ರಂಜಿಸುವಲ್ಲಿ ಯಶಸ್ವಿಯಾದವು.ಮಕ್ಕಳ ಕವಿಗೋಷ್ಠಿಯಲ್ಲಿ ಬಾಲಕವಿಗಳು ತಮ್ಮ ತೊದಲು ನುಡಿಯಲ್ಲಿಯೇ ಕವನ ವಾಚನ ಮಾಡಲು ಉತ್ಸುಕವಾಗಿದ್ದರು. ಆದರೆ, ಅವರ ನುಡಿಗಳನ್ನು ಕೇಳಲು ಕಿವಿಗಳ ಕೊರತೆ ಮಾತ್ರ ಎದ್ದು ಕಾಣುತ್ತಿತ್ತು. ಜನರ ನಿರಾಸಕ್ತಿ ಕಂಡ ಸಂಘಟಕರು, ನಂತರ ನಡೆದ ಯುವ ಸಂವಾದಗೋಷ್ಠಿಯಲ್ಲಿ ಹಾದಿ ತಪ್ಪುತ್ತಿರುವ ಯುವ ಜನತೆಯ ರಕ್ಷಣೆಯ ಕೂಗು ಕೇಳಿ ಬಂದರೆ, ಹಿರಿಯರ ಕವಿಗೋಷ್ಠಿ ಪ್ರಸ್ತುತ ರಾಜಕೀಯ ವ್ಯವಸ್ಥೆ, ಜಿಲ್ಲಾ ದರ್ಶನ ಗೋಷ್ಠಿಯಲ್ಲಿ ಜಿಲ್ಲೆಯ ಸಮಗ್ರ ಮಾಹಿತಿ, ಕೃಷಿ ಗೋಷ್ಠಿಯಲ್ಲಿ ರೈತರ ಇಂದಿನ ಪರಿಸ್ಥಿತಿ ಬಗ್ಗೆ ಗಂಭೀರ ಚಿಂತನೆ ನಡೆಸಲಾಯಿತು.ಇನ್ನು ಜನತಾ ಶಿಕ್ಷಣ ಸಹಕಾರಿ ಸಂಸ್ಥೆಯಲ್ಲಿ ನಡೆದ ನಾಟಕಗಳ ಪ್ರದರ್ಶನಗಳು ಕೇವಲ ಆಸಕ್ತ ಪ್ರೇಕ್ಷಕವರ್ಗವನ್ನು ಮಾತ್ರ ಸೆಳೆಯುವಲ್ಲಿ ಯಶಸ್ವಿಯಾಯಿತು. ಬಹುತೇಕ ಕಾರ್ಯಕ್ರಮಗಳು ಮುಖ್ಯ ವೇದಿಕೆಯಲ್ಲಿಯೇ ನಡೆದಿದ್ದರೆ, ಇನ್ನೊಂದು ಕಡೆ ಉತ್ಸವದ ಕಾರ್ಯಕ್ರಮಗಳು ನಡೆಯುತ್ತಿವೆ ಎಂಬುದು ಸಹ ಬಹುತೇಕರಿಗೆ ಗೊತ್ತಾಗಲೇ ಇಲ್ಲ. ಆದರೂ ಆಸಕ್ತರು ಮಾತ್ರ ಅಲ್ಲಿ ಸೇರಿದ್ದು ಕಂಡು ಬಂದಿತು. ಜಿಲ್ಲಾ ಉತ್ಸವದ ಅಂಗವಾಗಿ ನಡೆದ ರಾಷ್ಟ್ರಮಟ್ಟದ ಮಲ್ಲಕಂಬ ಸ್ಪರ್ಧೆ ಕೂಡಾ ಉತ್ಸವಕ್ಕೆ ಹೆಚ್ಚಿನ ಮೆರಗು ತಂದುಕೊಟ್ಟಿತು.

ಸಮಾರೋಪ ಸಮಾರಂಭದಲ್ಲಿ ಸಮ್ಮೇಳನದ ಯಶಸ್ವಿಗೆ ಶ್ರಮಿಸಿದ ಜಿಲ್ಲೆಯ ಜನತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಂ.ಉದಾಸಿ, ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ ಅಭಿನಂದನೆ ಸಲ್ಲಿಸಿದರು.ಆಕಸ್ಮಿಕ ಬೆಂಕಿ: ವಾರ್ತಾ ಇಲಾಖೆ ಮಳಿಗೆ ಭಸ್ಮ

ಜಿಲ್ಲಾ ಉತ್ಸವ ಮುಖ್ಯ ವೇದಿಕೆ ಪಕ್ಕದಲ್ಲಿ ವಸ್ತು ಪ್ರದರ್ಶನ ಹಾಗೂ ಮಾರಾಟಕ್ಕಾಗಿ ಹಾಕದಲಾದ ಮಳಿಗೆಗಳಲ್ಲಿ ಸೋಮವಾರ ಬೆಂಕಿ ಹೊತ್ತಿಕೊಂಡ ಪರಿಣಾಮ ವಾರ್ತಾ ಇಲಾಖೆ ಮಳಿಗೆ ಸಂಪೂರ್ಣ ಸುಟ್ಟು ಭಸ್ಮವಾಯಿತು. ಪಕ್ಕದಲ್ಲಿದ್ದ ಪುಸ್ತಕ ಮಳಿಗೆ ಹಾಗೂ ಪೊಲೀಸ್ ಚೌಕಿ ಮಳಿಗೆಗಳು ಕೂಡ ಹಾನಿಗೊಳಗಾದವು.ಮಧ್ಯಾಹ್ನ 2ರ ಸುಮಾರಿಗೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು, ವಾರ್ತಾ ಇಲಾಖೆ ಮಳಿಗೆಯಲ್ಲಿ ಹಾಕಲಾದ ಸರ್ಕಾರಿ ಯೋಜನೆಗಳ ಮಾಹಿತಿಯುಳ್ಳ ಫಲಕಗಳು ಸುಟ್ಟು ಹೋದವು. ಪಕ್ಕದ ಪುಸ್ತಕದ ಮಳಿಗೆಗೂ ಬೆಂಕಿ ವ್ಯಾಪಿಸಿತು. ತಕ್ಷಣವೇ ಸಾರ್ವಜನಿಕರು ಮಳಿಗೆಯಲ್ಲಿನ ಪುಸ್ತಕಗಳನ್ನು ಹೊರ ತೆಗೆದರಾದರೂ ಕೆಲ ಪುಸ್ತಕಗಳು ಸುಟ್ಟು ಹೋದವು.ಘಟನಾ ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವಲ್ಲದೇ, ಹೆಚ್ಚಿನ ಅನಾಹುತ ತಪ್ಪಿಸಿದರು. ಇದರಿಂದ ಕೆಲಕಾಲ ಉತ್ಸವದ ಸುತ್ತ ಗೊಂದಲಮಯ ವಾತಾವರಣ ಉಂಟಾಗಿತ್ತು.ಬೆಂಕಿ ಅನಾಹುತ ಸಂಭವಿಸಿ ಇನ್ನೂ ಒಂದು ಗಂಟೆಯೂ ಆಗಿರಲಿಲ್ಲ. ಮಳಿಗೆ ಬಳಿ ಹಾಕಿದ್ದ ನಾಮಫಲಕಗಳು ಗಾಳಿಯ ರಬಸಕ್ಕೆ ನೆಲಕ್ಕುರಳಿತು. ಅದೃಷ್ಟವಶಾತ್ ಅಲ್ಲಿಯೂ ಯಾರಿಗೂ ಯಾವ ಅನಾಹುತವಾಗಲಿಲ್ಲ ಎನ್ನುವಂದೇ ಸಮಾದಾನದ ಸಂಗತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.